ಆಜಾದಿ ಕಾ ಅಮೃತ ಮಹೋತ್ಸವ; ಪಾರಂಪರಿಕ ನಡಿಗೆ ಯಶಸ್ವಿ

0
101

ಧಾರವಾಡ. ಆ.13: ಸ್ವಾತಂತ್ರ್ಯದ 75ನೇ ವರ್ಷಾಚರಣೆ ಆಜಾದಿ ಕಾ ಅಮೃತ ಮಹೋತ್ಸವ ಸಪ್ತಾಹದ ಅಂಗವಾಗಿ ಜಿಲ್ಲಾಡಳಿತ, ಪುರಾತ್ವತ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನಗರದ ಐತಿಹಾಸಿಕ ಮಹತ್ವದ ಸ್ಥಳಗಳಿಗೆ ಭೇಟಿ ನೀಡುವ ಪಾರಂಪರಿಕ ನಡಿಗೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಸ್ವಾತಂತ್ರ್ಯ ಪೂರ್ವ 1944 ರಲ್ಲಿ ತ್ರಿವರ್ಣ ಧ್ವಜ ಹಾರಿಸಿ ವಿದ್ಯಾರ್ಥಿಗಳು ಸ್ವದೇಶಿ ಖಾದಿ ಬಟ್ಟೆ ಧರಿಸಿ ಹೋರಾಟ ನಡೆಸಿದ ಚಾರಿತ್ರಿಕ ಹಿನ್ನೆಲೆಯುಳ್ಳ ಪ್ರತಿಷ್ಠಿತ ಕರ್ನಾಟಕ ಕಾಲೇಜು ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿ, ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶದೆಲ್ಲೆಡೆ ನಡೆದ ಸ್ವಾತಂತ್ರ್ಯ ಹೋರಾಟ ಚಳುವಳಿಗಳನ್ನು ಸ್ಮರಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಧಾರವಾಡದಲ್ಲಿ ಜಿಲ್ಲಾಡಳಿತ ವಿವಿಧ ಇಲಾಖೆ ಸಹಯೋಗದಲ್ಲಿ ಆಗಸ್ಟ್ 9 ರಿಂದ 15 ರ ವರೆಗೆ ಸಪ್ತಾಹ ಕಾರ್ಯಕ್ರಮದ ಮೂಲಕ ವೈವಿಧ್ಯಮಯ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಕೇರಿ ಮಾತನಾಡಿ, ರಾಷ್ಟ್ರೀಯ ಚಳುವಳಿಯಲ್ಲಿ ಧಾರವಾಡದ ನೆಲ ಪ್ರಮುಖ ಪಾತ್ರ ವಹಿಸಿದೆ. ಇಲ್ಲಿ ಅನೇಕ ಪಾರಂಪರಿಕ ಕಟ್ಟಡಗಳಿವೆ. ಅವುಗಳಿಗೆ ಭೇಟಿ ನೀಡಿ ಇತಿಹಾಸವನ್ನು ತಿಳಿಯುವ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಆರ್.ಎಮ್.ಷಡಕ್ಷರಯ್ಯ ಮಾತನಾಡಿ, ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಠಿಸಲಾರರು. ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ಆಧುನಿಕ ಭಾರತದ ಇತಿಹಾಸ, ಸ್ವಾತಂತ್ರ್ಯ ಚಳುವಳಿಯ ವಿವಿಧ ತೊರೆಗಳನ್ನು ಅರಿಯುವ ಪ್ರಯತ್ನ ನಾವು ಮಾಡಬೇಕು ಎಂದರು.

ನಡಿಗೆ ಮೂಲಕ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜಿನ ಪಾರಂಪರಿಕ ಕಟ್ಟಡಕ್ಕೆ ಭೇಟಿ ನೀಡಲಾಯಿತು. ಡಯಟನ್ ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ಸದರ್ನ್ ಮರಾಠ ಪ್ರದೇಶದ ಆಳ್ವಿಕೆಗೆ ಒಳಪಟ್ಟಿದ್ದ ಧಾರವಾಡ ಭಾಗದಲ್ಲಿ ಮರಾಠಿ ಭಾಷೆಯ ದಟ್ಟ ಪ್ರಭಾವವಿತ್ತು. ಈ ಪ್ರದೇಶ ಮರಾಠಿ ಭಾಷಿಕ ಜನರಿಗೆ ಸೇರಿದ್ದಲ್ಲ ಇದು ಅಪ್ಪಟ ಕನ್ನಡದ ಭೂಮಿ ಎಂದು ಪ್ರತಿಪಾದಿಸಿದ ಧಾರವಾಡದ ಡೆಪ್ಯೂಟಿ ಚೆನ್ನಬಸಪ್ಪನವರು ಅಂದಿನ ಬ್ರಿಟಿಷ್ ಸರ್ಕಾರದ ಮುಂಬೈ ಪ್ರಾಂತ್ಯದಲ್ಲಿದ್ದ ಕನ್ನಡ ನಾಡಿನ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟ, ಗದಗ, ಹಾವೇರಿ ಹಾಗೂ ಕಾರವಾರ ಮೊದಲಾದ ಪ್ರದೇಶಗಳು ಕನ್ನಡ ಭಾಷಿಕರ ನೆಲೆಗಳಾಗಿವೆ ಎಂದು ಗುರುತಿಸಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟರು. ಇಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಸ್ಥಾಪಿಸಬೇಕೆಂದು ನಿರಂತರವಾಗಿ ಪತ್ರಮುಖೇನ ಒತ್ತಡ ಹೇರಿದ ಪರಿಣಾಮವಾಗಿ ಧಾರವಾಡದಲ್ಲಿ 1870 ರ ದಶಕದಲ್ಲಿ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜ ಪ್ರಾರಂಭವಾಯಿತು. 1912-13 ರ ಸಮಯದಲ್ಲಿ ಈ ಆವರಣದಲ್ಲಿ ನಿರ್ಮಾಣಗೊಂಡ ಇತರ ಕಟ್ಟಡಗಳ ಕುರಿತು ವಿವರಿಸಿದರು. ಡೆಪ್ಯೂಟಿ ಚೆನ್ನಬಸಪ್ಪನವರು ಪ್ರಾರಂಭಿಸಿದ “ಮಠ” ಪತ್ರಿಕೆಯ ಮುಂದುವರಿಕೆಯಾಗಿರುವ ಇಂದಿನ “ಜೀವನ ಶಿಕ್ಷಣ” ಮಾಸ ಪತ್ರಿಕೆ ಪ್ರತಿಗಳನ್ನು ಗಣ್ಯರಿಗೆ ನೀಡಿದರು.

1902 ರಲ್ಲಿ ಇಂಗ್ಲೆಂಡಿನ ರಾಜಧಾನಿ ಲಂಡನ್‍ನಲ್ಲಿ ದೊರೆ 7ನೇ ಎಡ್ವರ್ಡ್‍ನ ಪಟ್ಟಾಭಿಷೇಕದ ನೆನಪಿಗೆ 1903 ಜನವರಿ 01 ರಂದು ರೊದ್ದ ಶ್ರೀನಿವಾಸರಾಯರ ನೇತೃತ್ವದಲ್ಲಿ ನೆಟ್ಟ ಕಾಲೇಜು ರಸ್ತೆಯಲ್ಲಿರುವ ಅರಳಿ ಮರ ವೀಕ್ಷಿಸಲಾಯಿತು.
1921ರ ಅಸಹಾರ ಚಳುವಳಿ ಸಂದರ್ಭ ಸೇಂದಿ ಅಂಗಡಿಯೊಂದರ ಮುಂದೆ ಶಾಂತಿಯುತವಾಗಿ ಪಿಕೆಟಿಂಗ್ ನಡೆಸುತ್ತಿದ್ದ ಧಾರವಾಡದ ಮಲ್ಲಿಕಸಾಬ್, ಮರ್ದಾನಸಾಬ ಹಾಗೂ ಅಬ್ದುಲ್ ಗಫಾರ್ ಚೌಥಾಯಿ ಎಂಬ ಮೂವರು ಹೋರಾಟಗಾರರನ್ನು ಅಂದಿನ ಬ್ರಿಟಿಷ್ ಕಲೆಕ್ಟರ್ ಪೆಂಟರ್ ಅವರ ನಿರ್ದಯ ನಡೆಯಿಂದ ಗುಂಡಿಗೆ ಬಲಿಯಾಗಿ ಹುತಾತ್ಮರಾದ ಜಕಣಿಬಾವಿ ಹತ್ತಿರದ ಸ್ಥಳದಲ್ಲಿ ನಿರ್ಮಿಸಿರುವ ಸ್ಮಾರಕದ ಕುರಿತು ಉದಯ ಯಂಡಿಗೇರಿ ವಿವರಿಸಿದರು.
ಸ್ವಾತಂತ್ರ್ಯ ಚಳುವಳಿ ಹಾಗೂ ಕರ್ನಾಟಕ ಏಕೀಕರಣ ಸಾಧನೆಗಾಗಿ 1890ರಲ್ಲಿ ಸ್ಥಾಪನೆಯಾದ ಕನ್ನಡ ನಾಡಿನ ಅತ್ಯಂತ ಹಿರಿಯ ಸಂಸ್ಥೆ ಕರ್ನಾಟಕ ವಿದ್ಯಾವರ್ಧಕ ಸಂಘ, ಚಾಮರಾಜ ಭವನ ಕುರಿತು ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ, ಸದಾನಂದ ಶಿವಳ್ಳಿ ಹಾಗೂ ಶಂಕರ ಹಲಗತ್ತಿ ವಿವರಿಸಿದರು.

ರಾಷ್ಟ್ರೀಯ ಚಳುವಳಿಯ ಚಟುವಟಿಕೆಗಳ ತಾಣವಾಗಿದ್ದ ಲಿಂಗಾಯತ ಟೌನ ಹಾಲ್‍ನ ಮಹತ್ವವನ್ನು ಪುರಾತತ್ವ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ.ವಾಸುದೇವ ವಿವರಿಸಿದರು.
ನಾಗರ ಪಂಚಮಿ ಉಂಡಿ ಹಾಗೂ ಸಿಹಿಪದಾರ್ಥಗಳೊಂದಿಗೆ ಉಪಹಾರ ಸೇವಿಸಿ ಪಾರಂಪರಿಕ ನಡಿಗೆ ಮುಕ್ತಾಯ ಮಾಡಿದ್ದು ವಿಶೇಷವಾಗಿತ್ತು.

ಜಿಲ್ಲಾ ವಾರ್ತಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಾದೇಶಿಕ ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಕಾರ್ಯಕ್ರಮ ನಿರ್ವಹಿಸಿದರು. ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ಉಪ ನಿರ್ದೇಶಕ ಡಾ.ಶೇಜೇಶ್ವರ ಆರ್. ವಂದಿಸಿದರು.

ಈ ಸಂದರ್ಭದಲ್ಲಿ ಪದವಿಪೂರ್ಣ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಿದಂಬರ, ಸಾರ್ವಜನಿಕ ಶಿಕ್ಷಣ ಇಲಾಖೆ ಅಭಿವೃದ್ಧಿ ವಿಭಾಗದ ಉಪನಿರ್ದೇಶಕಿ ಎನ್.ಕೆ.ಸಾವಕಾರ,ಡಾ.ವಿ.ಎಸ್.ಬಡಿಗೇರ್, ಡಾ.ಎಮ್.ವೈ.ಸಾವಂತ, ಡಾ.ಅರವಿಂದ ಯಾಳಗಿ, ಡಾ.ಸದಾಶಿವ ಮರ್ಜಿ, ಡಾ.ಮಾರುತಿ, ಡಾ.ಚಲವಾದಿ, ಡಾ.ಹನುಮಾಕ್ಷಿ ಗೋಗಿ, ಡಾ.ಮೇಲಕಾರ, ಡಾ.ಕಿವಡಣ್ಣವರ, ತೇಜಸ್ವಿನಿ, ಲಕ್ಷ್ಮಿ ಕ್ಷೀರಸಾಗರ, ಮಂಜುನಾಥ ದೊಡ್ಡಮನಿ ಸೇರಿದಂತೆ ವಿವಿಧ ಸಂಶೋಧನಾ ಹಾಗೂ ಪ್ರವಾಸೋದ್ಯಮ ವಿದ್ಯಾರ್ಥಿಗಳು ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here