ಕಿಚ್ಚ ಸುದೀಪ್ ಅವರೇ ನಿಮಗೆ ಕುವೆಂಪು ಅವರ ವಿಶ್ವ ಮಾನವ ಸಂದೇಶ ತಿಳಿಯಲಿಲ್ಲವೇ ? 

0
647

ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿಯಲ್ಲಿ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಪ್ರತಿಯೊಬ್ಬರೂ ಗೆಲ್ಲಲಿಕ್ಕಾಗಿ  ತಂತ್ರ  ಮೇಲೆ ಪ್ರತಿ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಇತ್ತೀಚಿನ ರಾಜಕೀಯ ವಿದ್ಯಾಮಾನಗಳ ಬೆಳವಣಿಗೆಗಳಲ್ಲಿ   ಕ್ಷಣಕ್ಕೊಂದು ರೋಚಕ  ತಿರುವು ಪಡೆದುಕೊಳ್ಳುತ್ತಿರುವುದನ್ನು ಗಮನಿಸುತ್ತಿದ್ದೇವೆ. ಸಿನಿಮಾ ಕ್ಷೇತ್ರದ  ಕಲಾವಿದರನ್ನು ರಾಜಕೀಯ ಕ್ಷೇತ್ರಕ್ಕೆ  ಸೆಳೆದು ತನ್ನ ಮತಬ್ಯಾಂಕ್ ಗಾಗಿ ಬಳಸಿಕೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಒಂದು ಟ್ರೆಂಡ್ ಆಗಿ ಉಳಿದಿದೆ.‌
 
ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದ ಇತಿಹಾಸದಲ್ಲಿ ಹೆಸರು ಮಾಡಿ ರಾಜಕೀಯ ವಲಯದಲ್ಲಿ ತನ್ನದೇ ನೆಲೆಯಲ್ಲಿ ಛಾಪು ಮೂಡಿಸಿರುವುದು ಇದೆ. ಅಂತಹವರ ಪೈಕಿ   ಕೆಲವರನ್ನು ಮಾತ್ರ ಕಾಣಬಹುದು. ಆಂಧ್ರಪ್ರದೇಶದ ಎನ್ ಟಿ ಆರ್ ಹಾಗೂ ತಮಿಳುನಾಡಿನ ಜಯಲಲಿತ ಅವರನ್ನು  ನೋಡಬಹದು. ಕಲಾ ಕ್ಷೇತ್ರದ ಸಿನಿಮಾ  ನೆಲೆಯಲ್ಲಿ ಡಾ. ರಾಜಕುಮಾರ ಅವರು  ಕರ್ನಾಟಕವನ್ನು ಸಾಂಸ್ಕೃತಿಕವಾಗಿ ಕಟ್ಟಿ  ಬೆಳಸಿದ್ದಾರೆ. 

ಡಾ.ರಾಜಕುಮಾರ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡ್ತಿವಿ ಅಂತಹ ಹೇಳಿದರು. ಆದರೂ ಅವರು ರಾಜಕೀಯ ಕ್ಷೇತ್ರದಿಂದ ದೂರ ಸರಿದರು.  ಜನರ ಮನಸಲ್ಲಿ  ಹಚ್ಚಳೆಯದೇ ಏಕೈಕ ಕಲಾವಿದರಾಗಿ ಉಳಿದರು. ಅಧಿಕಾರದಿಂದ ದೂರ ಉಳಿದು ಕಲೆ ಮೂಲಕ ಪ್ರತಿಯೊಂದು ಸಮುದಾಯ ಮತ್ತು ಕುಟುಂಬದ ಜನತೆಯ ಪ್ರೀತಿಗೆ ಕಾರಣವಾಗಿ ವಿಶ್ವಾಸವನ್ನು ಗಳಿಸಿದ್ದರು. ಡಾ. ವಿಷ್ಣುವರ್ಧನ ಹಾಗೂ ಶ್ರೀ ಅಂಬರೇಶ್ ಅವರು ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಸರನ್ನು ಗಳಿಸಿದವರು. ವಿಷ್ಣುವರ್ಧನ್ ಅವರು ಜನರ ಮನಸ್ಸಲ್ಲಿ ಕಲಾವಿದರಾಗಿ ದೊಡ್ಡತನವನ್ನು ಮೆರೆದರು. ಜನರಿಂದ ಅಂಬರೇಶ್ ಅವರು ಹೆಚ್ಚು ಟೀಕೆಗೆ ಒಳಪಟ್ಟರು.  ಕರ್ನಾಟಕದ ಮಟ್ಟಿಗೆ ಹೇಳುವುದಾದರೇ ಸಿನಿಮಾ  ಕ್ಷೇತ್ರದಲ್ಲಿ ಹೆಸರು ಗಳಿಸಿದ ಕಲಾವಿದರು ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದೂ ತುಂಬಾ ವಿರಳ. 

ಮಧ್ಯ ಕರ್ನಾಟಕದ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಗಳಾದ ಜಗಳೂರು, ಮೊಳಕಾಲ್ಮೂರು, ಸಂಡೂರು ಪ್ರದೇಶಗಳಿಗೆ ಕಿಚ್ಚ ಸುದೀಪ್ ಅವರು ಪ್ರಚಾರಕ್ಕೆ ದುಮುಕಿರುವ  ಸುದ್ದಿಯನ್ನು ತಿಳಿದೆನು. ಅವರು ಪ್ರಚಾರಕ್ಕೆ ಬರುವ ಮುಂಚೆ ಈ ನೆಲದ ಇತಿಹಾಸ ಮತ್ತು ವರ್ತಮಾನದ ಬದಲಾದ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳಬೇಕು.‌ ಅಧಿಕಾರ ವಿಚಾರ ಬಂದಾಗ ವಾಲ್ಮೀಕಿ ಸಮುದಾಯ ಕಿಚ್ಚ ಸುದೀಪ್ ಅವರಿಗೆ ನೆನಪಾಗಿದೆ. ಕಂಪಿಲ ಸಾಮ್ರಾಜ್ಯದ ಪ್ರಸಿದ್ಧ ದೊರೆ ಕುಮಾರ ರಾಮ ಅವರು ಜಾತಿ ಮತ್ತು ಧರ್ಮ ಮೀರಿ ತಿನ್ನುವ ಅನ್ನಕ್ಕಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸಿ ಜನರ ಹಸಿವು ನೀಗಿಸಿ ಪ್ರತಿ ಮನೆ  ಮನಗಳಲ್ಲಿ ಅಚ್ಚುಮೆಚ್ಚಿನ ರಾಜರಾಗಿ ಉಳಿದರು.‌ ಹಟ್ಟಿ ತಿಪ್ಪೇಶ ಹಾಗೂ ಶ್ರೀ ಗುರು ಕೊಟ್ಟೂರೇಶ್ವರ ಅವರು ಕೆರೆ ಕಟ್ಟೆಗಳನ್ನು ಕಟ್ಟಿಸಿ ಜನರನ್ನು ನಾಗರೀಕರನ್ನಾಗಿ ಬಾಳುವಂತೆ ನೋಡಿಕೊಂಡರು. ಮಾಡಿದಷ್ಟು ನೀಡು ಬಿಕ್ಷೆ ಎಂಬ ತತ್ವದಂತೆ ಪ್ರತಿಯೊಬ್ಬರು ಕಾಯಕ ಜೀವಿಗಳಾಗಬೇಕು ಎಂಬುದಾಗಿ ತಿಳಿಸಿಕೊಟ್ಟು ಇಲ್ಲಿನ ಜನರಿಗೆ ಒಬ್ಬ ಸಂತನಾಗಿ ಉಳಿದರು. ಅಕ್ಕರಾಯಮ್ಮ ಬಯಲು ಸೀಮೆಯ ದಡ್ಲು ಮಾರಮ್ಮ – ಮುತ್ತಿಗಾರು ಮಾರಮ್ಮ ಹಾಗೂ ಗೌರಸಮುದ್ರ ಮಾರಮ್ಮ ನಾಗಿ ಉಳಿದರು. ಯರಮಂಚಿ ನಾಯಕ ಕುಲ ಇಲ್ಲದವರಿಗೆ ಕುಲ ನೀಡಿ ದೇವರನ್ನು ಸೃಷ್ಟಿ ಕೊಟ್ಟು ಸಾಮಾಜಿಕ ನ್ಯಾಯ ನೀತಿಯನ್ನು ಎತ್ತಿ ಇಡಿದರು. ಅಶೋಕನ ಕಾಲಕ್ಕೆ ಮಧ್ಯ ಕರ್ನಾಟಕ ಬುದ್ಧನ ಚಿಂತನೆಗೆ ಒಳಪಟ್ಟು ಶಾಂತಿ ಸಾಮರಸ್ಯಕ್ಕೆ ಹೆಸರು ಆದ ಪುಣ್ಯ ಭೂಮಿ ಇದು. 1968 ರಲ್ಲಿ ಶ್ರೀಮತಿ ಇಂದಿರಾಗಾಂಧಿ ಅವರು ಚಿಕ್ಕ ಜೋಗಿಹಳ್ಳಿ ಗ್ರಾಮಕ್ಕೆ ಬೇಟಿ ನೀಡಿದ ಉದಾಹರಣೆಗಳಿವೆ‌‌. ಇಲ್ಲಿನ ಜನರು ಬರಗಾಲಕ್ಕೆ ಒಳಪಟ್ಟ ಸಂದರ್ಭದಲ್ಲಿ ಕೆಂಪು ಜೋಳ ಕೊಟ್ಟು ಹಸಿವನ್ನು ನೀಗಿಸಿದ ನೆನಪುಗಳು ಹಾಗೇ ಉಳಿದಿವೆ.‌ ವಿಜಯನಗರ ಸಾಮ್ರಾಜ್ಯದ ಅಂಗವಾಗಿ 1565 ರಲ್ಲಿ ರಕ್ಕಸಗಿ ತಂಗಡಗಿ ಪ್ರದೇಶದಲ್ಲಿ ತಾಳಿಕೋಟೆ ಕದನ ನಡೆಯುತ್ತದೆ. ಆ ಕದನದಲ್ಲಿ ಅನೇಕ ತಳ ಸಮುದಾಯಗಳ ಸೈನಿಕರು ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಅವರನ್ನು ನಂಬಿಕೊಂಡು ಬಂದ ಮಹಿಳೆಯರು ಅತಂತ್ರರಾಗಿ ಉಳಿಯುತ್ತಾರೆ‌. ಅವರಲ್ಲಿ ತುಂಗಭದ್ರಾ ನದಿ ದಂಡೆಯ ತೀರದಲ್ಲಿ ಅಸಂಖ್ಯಾತ ಮಹಿಳೆಯರು ದೇವದಾಸಿ ಹೆಸರಲ್ಲಿ ನೆಲೆ ನಿಂತಿದ್ದಾರೆ. ಅವರ ಜೀವನದ ಸ್ಥಿತಿ ಮುಂದೆ ಏನಾಯಿತು ಎಂಬುದರ ಅರಿವು ಆದರೂ ನಿಮಗೆ ಇದೆಯಾ ? ಹೋಗಲಿ ಮೀಸಲು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೀರಿ ಅಲ್ವಾ. ಮೀಸಲು ಕ್ಷೇತ್ರಕ್ಕೆ ನೀವು ಕೊಟ್ಟ ಕೊಡುಗೆಗಳೇನು ?  ಇಲ್ಲಿನ ಕಾರ್ಮಿಕರು, ರೈತರು, ಬಡವರು , ಮಹಿಳೆಯರು, ಯುವಕರ ಕಷ್ಟ ನೋವುಗಳು ನಿಮಗೆ ಏನಾದರೂ ಗೊತ್ತಿದೆಯಾ ? ಗೊತ್ತಿದ್ದರೇ ಎಷ್ಟು ಜನರ ಪರವಾಗಿ ನಿಂತಿರಿ ? ಮೈಸೂರು ಮಹಾರಾಜರು , ಹೈದರಾಬಾದ್  ಸರಕಾರ ಹಾಗೂ ಮದ್ರಾಸ್ ಸರಕಾರ ಸೇರಿ ತುಂಗಭದ್ರಾ ನದಿಯನ್ನು ನಿರ್ಮಿಸಿ ಅಸಂಖ್ಯಾತ ಜನರನ್ನು ಬಡತನ ಮತ್ತು ಹಸಿವುನಿಂದ ಮೇಲಕ್ಕೆ ಎತ್ತುವ ಕೆಲಸ ಮಾಡಿದರು. ಆ ಮೂಲಕ ಈ ಭಾಗದಲ್ಲಿ ಎಷ್ಟೋ ಜನರು ರೈತರಾದರು. 

ರಾಜಕೀಯ ಅಂದರೇ ಧರ್ಮ, ಜಾತಿ ಮತ್ತು ಕೋಮು ಅಂತಹ ನೋಡಲಾಗುತ್ತದೆ. ಆದರೆ ಮನುಷ್ಯರ ಸಮಗ್ರ ಅಭಿವೃದ್ಧಿಯಿಂದ ನೋಡುತ್ತಿಲ್ಲ. ಜಾತ್ಯಾತೀತಾವಾಗಿ ಉಳಿದ ಭಾರತವನ್ನು ಬಿಜೆಪಿ ಪಕ್ಷ   ವರ್ಣ ಪದ್ಧತಿ ನೆಲೆಯಲ್ಲಿ ನೋಡುತ್ತಿರುವುದು ಅತ್ಯಂತ ನೋವಿನ ಸಂಗತಿ. ಅಂತಹ ಕೋಮುವಾದಿ ಪಕ್ಷಕ್ಕೆ ನೀವು ಬೆಂಬಲ ವ್ಯಕ್ತಪಡಿಸುತ್ತಿರುವುದು ಇನ್ನಿತರ ಪಕ್ಷದ ಅಭಿಮಾನಿಗಳಿಗೆ ನೋವು ತರಿಸುವ ಕೆಲಸವನ್ನು ಮಾಡುತ್ತೀರಿ.‌

ನಾನು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾತ್ರಿಕೆಹಟ್ಟಿ ಗ್ರಾಮದವನು.  ನಮ್ಮ ಊರು ಕುಗ್ರಾಮ.  ಬಸ್ಸಿನ ವ್ಯವಸ್ಥೆ ಕಾಣದ ಊರು. ಆಧುನಿಕತೆಯ ಗಂಧ ಗಾಳಿಗೆ ತೆರದುಕೊಳ್ಳದ ಊರು. ಅನಕ್ಷರತೆ ಮತ್ತು ಬಡತನ ತಾಂಡವಾಡುತ್ತದೆ. ನಾನು ಒಬ್ಬ ವಾಲ್ಮೀಕಿ ಸಮುದಾಯದ ಯುವಕ. ಆದರೆ ಜಾತಿ ಬಗ್ಗೆ ಹೇಳುತ್ತಿಲ್ಲ. ನಿಮ್ಮ ಗಮನಕ್ಕಾಗಿ ಮಾಹಿತಿಯನ್ನು ಹಂಚಿಕೊಳ್ಳುವೆ. ಆದರೂ ನಾನು ಬಾಲ್ಯದಲ್ಲಿ  ಮಾನ್ಯ ಕಲಾವಿದರಾದ  ಕಿಚ್ಚ ಸುದೀಪ್ ಅವರ ಸಿನಿಮಾಗಳಾದ ಕನ್ನಡದ ‘ ಹುಚ್ಚ ‘ ಮತ್ತು ತೆಲುಗಿನ ‘ ಈಗ ‘ ಸಿನಿಮಾಗಳನ್ನು ನೋಡಿ ಅವರ  ಅಭಿಮಾನಿಯಾಗಿ ಉಳಿದಿರುವೆ.  ಸುದೀಪ್ ಅವರು  ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿ ತಮ್ಮದೇ ಆದ ನೆಲೆಯಲ್ಲಿ ದಾನ ಧರ್ಮಗಳನ್ನು ಮಾಡಿ ಸಮಾಜದಿಂದ ಪಡೆದದ್ದನ್ನು ಮತ್ತೆ ಮರಳಿ ಸಮಾಜಕ್ಕೆ ಕೊಡುವಂತದ್ದೂ ಅವರು ಮಾನವ ಸಮಾಜ ಮೇಲೆ ಇಟ್ಟಿರುವ ಕಳಾ ಕಳಿ  ಎಂದೂ ನಾನು ಭಾವಿಸಿಕೊಂಡಿದ್ದೇನೆ.‌

ಕಿಚ್ಚ ಸುದೀಪ್ ಅವರು ರಾಜಕೀಯ ಕ್ಷೇತ್ರಕ್ಕೆ ಬರುತ್ತಿರುವ ಸುದ್ದಿಯನ್ನು ಮಾಧ್ಯಮ ಮೂಲಕ ಕೇಳಲ್ಪಟ್ಟಿದೆ.  ಸಿನಿಮಾ ಕ್ಷೇತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಹೆಸರು ಇದೆ. ದೇಶದ ಉದ್ದಕ್ಕೂ ಅವರಿಗೆ ಕೋಟಿ ಗಟ್ಟಲೇ ಅಭಿಮಾನಗಳು ಇದ್ದಾರೆ. ಸುದೀಪ್ ಅವರನ್ನು ನಾನು ಒಬ್ಬ ಕಲಾವಿದರನ್ನಾಗಿ ನೋಡುತ್ತೇನೆ. ಸುದೀಪ್ ಸಿನಿಮಾ ಕ್ಷೇತ್ರದಲ್ಲಿ  ಬೆಳದದ್ದು ಅಲ್ಲಾ. ಸ್ವತಃ  ಜನರೇ ಕೈ ಇಡಿದು ಸುದೀಪ್ ಅವರನ್ನು ಬೆಳಸಿರುವುದನ್ನು ನಾವು ಮರೆಯಬಾರದು.  ಹಾಗಾಗಿ ಕಿಚ್ಚ ಸುದೀಪ್ ಅವರು ಪಕ್ಷ ತೀತವಾಗಿ ಮಾಧರಿಯಾಗಿ ಸಮಾಜಕ್ಕೆ ಸಂದೇಶಗಳನ್ನು ನೀಡಬೇಕು ವಿನಃ ಒಂದು ರಾಜಕೀಯ ಪಕ್ಷ, ಧರ್ಮ, ಜಾತಿ , ಸಂಘ ಸಂಸ್ಥೆಗಳಿಗೆ ಸೀಮಿತವಾಗಬಾರದು. ಕುವೆಂಪು ಅವರ ವಿಶ್ವ ಮಾನವ ಸಂದೇಶ ರೀತಿ ಅವರ ವ್ಯಕ್ತಿತ್ವ ಇರಬೇಕಾಗಿತ್ತು.  ದುರಂತವೆಂದರೇ , ಕಿಚ್ಚ ಸುದೀಪ್ ಅವರು ಕೋಮುವಾದಿ ಪಕ್ಷಕ್ಕೆ ಸೀಮಿತವಾಗಿರುವಂತದ್ದನ್ನು ನೋಡಿ ಮುಂದಿನ ದಿನಗಳಲ್ಲಿ  ಜನರೇ ಅವರನ್ನು ತಿರಸ್ಕರಿಸುವುದು ದೂರವಿಲ್ಲ. ಈ ಅರಿವನ್ನು ಇಟ್ಟುಕೊಂಡು ಎಲ್ಲವರವನಾಗಿ  ಉಳಿಯಬೇಕು.
 
ಕಲಾವಿದರು ಎಲ್ಲಾ ಪಕ್ಷದಲ್ಲೂ ಇದ್ದಾರೆ. ಮುಖ್ಯವಾಗಿ ಕಿಚ್ಚ ಸುದೀಪ್ ಅವರ ಅಸಂಖ್ಯಾತ ಅಭಿಮಾನಿಗಳು ಎಲ್ಲಾ  ಪಕ್ಷದಲ್ಲೂ ಇದ್ದಾರೆ. ಕಿಚ್ಚ ಸುದೀಪ್ ಅವರು ಜನರ ಇಚ್ಛಾಶಕ್ತಿ ಕಾಪಾಡಬೇಕು. ಸುದೀಪ್ ಅವರು ಬಿಜೆಪಿ ಪರ ಬಂದರೇ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಬೇಜಾರು ಆಗುತ್ತಾರೆ. ಸುದೀಪ್ ಅವರು ರಾಜಕೀಯ ಕ್ಷೇತ್ರಕ್ಕೆ ಬಂದರೆ ಕಲೆಯನ್ನು ಹಾಗೂ ಅವರನ್ನು ಬೆಳಸಿದ ಅಸಂಖ್ಯಾತ ಕಲಾವಿದರನ್ನು ಕಳೆದುಕೊಳ್ಳುತ್ತಾರೆ.

ಮಧ್ಯ ಕರ್ನಾಟಕದಲ್ಲಿ ಮಾನವ ಅಭಿವೃದ್ಧಿಯಿಂದ ಹಿಂದುಳಿದ ಪ್ರದೇಶಗಳಿವೆ. ಅರ್ಥಶಾಸ್ತ್ರಜ್ಞರಾದ ಡಾ.ಡಿ. ಎಂ.ನಂಜುಂಡಪ್ಪ ವರದಿ ಪ್ರಕಾರ ಕರ್ನಾಟಕದಲ್ಲಿ ಮೊಳಕಾಲ್ಮೂರು ಹಾಗೂ ಕೂಡ್ಲಿಗಿ ಪ್ರದೇಶಗಳು ಅಭಿವೃದ್ಧಿಯಿಂದ  ಹಿಂದುಳಿದ ಪ್ರದೇಶಗಳಲ್ಲಿ ಗುರುತಿಸಿರುವುದನ್ನು ಕಾಣಬಹುದು. ಈ ಭಾಗದ ನೆಲ, ಜನತೆ ಮತ್ತು ಪ್ರದೇಶ ನಿರಂತರವಾಗಿ ಬರಗಾಲಕ್ಕೆ ಒಳಪಟ್ಟಿರುವುದು ಇದೆ.  ಯುವಕರು ಬಡತನದಿಂದಾಗಿ  ಶಿಕ್ಷಣವನ್ನು  ಅರ್ಧಕ್ಕೆ ನಿಲ್ಲಿಸಿ ಬೆಂಗಳೂರು ಹಾಗೂ ಗೋವಾ ಪ್ರದೇಶಗಳಿಗೆ ದುಡಿಯಲು ವಲಸೆ ಹೋಗಿದ್ದಾರೆ. ಆ ಮೂಲಕ ಕೆಲ ಯುವಕರು ಭವಿಷ್ಯದ ದೃಷ್ಟಿಯಿಂದ ಮುನ್ನೆಡೆಯದೇ ನಗರೀಕರಣ ಮತ್ತು ಜಾಗತೀಕರಣದ ಪ್ರಭಾವಕ್ಕೆ ಒಳಪಟ್ಟು ಕೆಲ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಯುವಕರು ಹೆಚ್ಚಿನ ಪ್ರಮಾಣದಲ್ಲಿ ನಿರುದ್ಯೋಗಿಗಳಾಗಿದ್ದಾರೆ. ಮಳೆ ಇದ್ದರೇ ಮಾತ್ರ ಇಲ್ಲಿ ಜೀವನ ಅನ್ನುವ ಪರಿಸ್ಥಿತಿಗಳಿವೆ.  ವರ್ತಮಾನದಲ್ಲಿ  ರೈತರು ಚಿಕ್ಕಮಂಗಳೂರಿನ  ಕಾಫಿ ಎಸ್ಟೇಟ್ ಗಳಿಗೆ ಕೂಲಿಗಾಗಿ ದುಡಿಯಲು ವಲಸೆ ಹೋಗಿದ್ದಾರೆ. ಕಾರಣ ಇಲ್ಲಿ ಯಾವುದೇ ಉದ್ಯೋಗ ಸೃಷ್ಟಿ ಮಾಡುವ ಗುಡಿ ಕೈಗಾರಿಕೆಗಳು ಅಷ್ಟಾಗಿ ಕಂಡುಬರುವುದಿಲ್ಲ. ಒಂದು ಕಾಲಕ್ಕೆ ಸಿರಿಧಾನ್ಯ ಔಷಧಿಯಾಗಿ ಮಾರ್ಪಟ್ಟಿತು. ಗ್ರಾಮೀಣ ಜನರು ಆರೋಗ್ಯವಾಗಿ ಗಟ್ಟಿಯಾಗಿ ಇದ್ದರು.  ಅದೇ ಸಿರಿಧಾನ್ಯಗಳನ್ನು ಇಂದಿನ ಗ್ರಾಮೀಣ ಭಾಗದ ಜನತೆ  ತಿಂದು ಬದುಕುವ ಹಾಗೇ ಇಲ್ಲ. ಕಾರಣ ರೈತರು ಸಂಕಷ್ಟದಲ್ಲಿ ಇದ್ದಾರೆ. 

ಶತಮಾನಗಳ ಕಾಲ ಗ್ರಾಮ ಸಮಾಜಗಳಲ್ಲಿ ಪಾರಂಪರಿಕವಾಗಿ ಬಂದ  ಕುಲಕಸುಬುಗಳನ್ನು ನಂಬಿ  ಬದುಕುವ ಸ್ಥಿತಿಯೂ ಇಲ್ಲ.  ಗ್ರಾಮೀಣ ಮಹಿಳೆಯರು ಆಧುಕತೆ ನಡುವೆ ಬಡತನದಲ್ಲಿದ್ದಾರೆ.  ವೈದ್ಯರ ಗಮನಕ್ಕೆ ಮಾಹಿತಿ ಇರುವಂತೆ  ಗ್ರಾಮೀಣ ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.‌ ಇನ್ನೂ ನಗರ ಸಮಾಜದ ಮಧ್ಯಮವರ್ಗ ಹಾಗೂ ಕಾರ್ಮಿಕರ ಸ್ಥಿತಿಗತಿ ಇನ್ನೂ ಶೋಚನೀಯವಾಗಿದೆ.‌ 

ಹೀಗಾಗಿ ಯುವಕರಾದ ನಾವುಗಳು ವರ್ತಮಾನದ  ತನ್ನ ನೆಲಗಟ್ಟಿನ ಸಮಸ್ಯೆ ಮತ್ತು ಸವಾಲುಗಳ ಕಡೆ ಗಮನ ಹರಿಸಬೇಕಾಗಿದೆ.‌ ಯಾವುದೇ ಕಲಾವಿದರ ಮಾತಿಗೆ ಕಿವಿಕೊಡದೇ ಮಧ್ಯ ಕರ್ನಾಟಕದ ನಾಳೆಯ ಭವಿಷ್ಯ ಮತ್ತು ಅಭಿವೃದ್ಧಿ ಕಡೆ ಗಮನ ಕೊಡಬೇಕು. ಪರದೆ ಮೇಲಿನ ನಾಯಕರನ್ನ ಮಾಧರಿಯನ್ನಾಗಿ ತೆಗಿದುಕೊಳ್ಳದೆ ಪರದೆ ಹಿಂದೇ ಕೆಲಸ ಮಾಡುವ ನಿಜವಾದ ನಾಯಕರ ಶ್ರಮ ಮತ್ತು ದುಡಿಮೆಯನ್ನು ಗುರುತಿಸಬೇಕಾಗಿದೆ. 

ಪ್ರಜಾಪ್ರಭುತ್ವ ಸಂವಿಧಾನದ ರಕ್ಷಣೆಗೆ ನಿಲ್ಲಬೇಕು. ಹಾಗೆಯೇ  ಕೋಮುವಿರೋಧಿಗಳನ್ನು ದೂರ ಸರಿಸಿ  ಅಭಿವೃದ್ಧಿಗೆ ಒತ್ತು ನೀಡಬೇಕು.   ಈ ನೆಲದ ಸಾಂಸ್ಕೃತಿಕತೆ ಅರಿತು ನಾಡು ಕಟ್ಟುವ ಪಕ್ಷಗಳು ಜನಸೇವೆಗೆ ನಿಲ್ಲುವ ಪಕ್ಷಗಳು ಆಡಳಿತದ ಚುಕ್ಕಾಣಿ ಹಿಡಿಯಬೇಕು. ಈ ನೆಲೆಯಲ್ಲಿ ಪ್ರತಿಯೊಬ್ಬರು ಚಿಂತಿಸಬೇಕಾಗಿದೆ. 

ಡಾ. ಸಿದ್ದೇಶ ಕಾತ್ರಿಕೆಹಟ್ಟಿ. ‌

LEAVE A REPLY

Please enter your comment!
Please enter your name here