ಕೊಟ್ಟೂರು ಪಟ್ಟಣದಲ್ಲಿ 900 ಸಸಿಗಳನ್ನು ನೆಡುವ ಯೋಜನೆ.

0
405

ವಿಜಯನಗರ:29: ಕೊಟ್ಟೂರು ಪಟ್ಟಣವನ್ನು ಸಂಪೂರ್ಣ ಹಸಿರನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾಕಾರಿಗಳು ಕೂಡಲೇ 900 ಸಸಿಗಳನ್ನು ನೆಟ್ಟು ಪೋಷಿಸುವಂತೆ ಆದೇಶಿಸಿರುವ ಹಿನ್ನಲೆಯಲ್ಲಿ ಕೊಟ್ಟೂರು ಪಟ್ಟಣ ಪಂಚಾಯಿತಿ ಆಡಳಿತ ಈ ಸಂಬಂಧ ಶುಕ್ರವಾರ ಹಸಿರು ಹೊನಲು ತಂಡದವರು ಮತ್ತಿತರ ಸಾಮಾಜಿಕ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಪಟ್ಟಣದಲ್ಲಿ ಸಸಿ ನೆಡಲು ಸ್ಥಳೀಯ ಆಡಳಿತದೊಂದಿಗೆ ಸಹಕರಿಸಬೇಕೆಂದು ಪ.ಪಂ.ಮುಖ್ಯಾಕಾರಿ ಎ.ನಸುರುಲ್ಲಾ ಹೇಳಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಅರಣ್ಯ ಇಲಾಖೆಯವರು 900 ಸಸಿಗಳನ್ನು ನೀಡಲಿದ್ದು ಈ ಸಸಿಗಳನ್ನು ಪ.ಜಾ. ರುದ್ರಭೂಮಿ ಪ್ರದೇಶ, ಕೂಡ್ಲಿಗಿ ರಸ್ತೆಯ ಸ್ವಾಗತ ಕಾಮಾನ್‌ನಿಂದ ಪೆಟ್ರೋಲ್ ಬಂಕ್‌ವರೆಗೂ, ಇಟ್ಟಿಗಿ ರಸ್ತೆಯ ಹಳೆಯ ರೈಲ್ವೆ ನಿಲ್ದಾಣ ರಸ್ತೆ, ವೀರಶೈವ ರುದ್ರಭೂಮಿ, ಜೋಳದಕೂಡ್ಲಿಗಿ ರಸ್ತೆ, ಮತ್ತಿತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಡಲು ಯೋಜನೆ ರೂಪಿಸಿದ್ದೇವೆ. ಇದಕ್ಕೆ ಪೂರಕವಾಗಿ ಪಟ್ಟಣದಲ್ಲಿನ ಹಸಿರು ಹೊನಲು ತಂಡದವರು ಯಾವ ಸ್ಥಳದಲ್ಲಿ ಸಸಿ ನೆಡಲು ಅವಕಾಶವಿದೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕೆಂದು ಕೋರಿದರು.
ಪಟ್ಟಣದಲ್ಲಿನ ಪ್ರತಿ ಅಂಗಡಿಗಳವರು ಅದರಲ್ಲೂ ಕಿರಾಣಿ, ಬಟ್ಟೆ ಅಂಗಡಿ ಮತ್ತು ಕಮರ್ಷಿಯಲ್ ಕಾಂಪ್ಲೇಕ್ಸ್ ಹೊಂದಿರುವವರು ತಮ್ಮ ಪ್ರದೇಶ ಅಂದರೆ ಅಂಗಡಿ ಮತ್ತಿತರ ಮುಗ್ಗಟ್ಟುಗಳ ಮುಂದೆ ಕುಂಡಲಗಳಲ್ಲಿ ಸಸಿಗಳನ್ನು ಬೆಳೆಸಲು ಮುಂದಾಗಬೇಕು ಈಗಾದಾಗ ಮಾತ್ರ ಇಡೀ ಪಟ್ಟಣ ಹಸಿರು ವಲಯವಾಗಿ ಮಾರ್ಪಾಡುಗೊಳ್ಳಲಿದ್ದು ಇದಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಅವರು ಕರೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಹಸಿರು ಹೊನಲು ತಂಡದ ಕಾರ್ಯದರ್ಶಿ ಗುರುರಾಜ್, ಪತ್ತಿಕೊಂಡ ಚೇತನ್, ಯಲ್ಲಪ್ಪ, ಮಾತನಾಡಿ ಹಸಿರು ಹೊನಲು ತಂಡದಿಂದ ಕೊಟ್ಟೂರು ಪಟ್ಟಣದ ಪ್ರತಿ ಪ್ರದೇಶದಲ್ಲಿ ಸಸಿ ನೆಡಲು ವಿವಿಧ ಬಗೆಯ ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಇದೀಗ ಪ.ಪ.ಆಡಳಿತ 900 ಸಸಿಗಳನ್ನು ನೆಡಲು ನಮಗೆ ನಿರ್ವಹಿಸಿದರೆ ಅವುಗಳನ್ನು ಪಟ್ಟಣದ ವಿವಿಧ ಬಡಾವಣೆಗಳಲ್ಲಿನ ಪಾರ್ಕ್ ಮತ್ತಿತರ ಪ್ರದೇಶಗಳಲ್ಲಿ ನೆಟ್ಟು ಪೋಷಿಸುತ್ತೇವೆ ಎಂದರು. ಅಲ್ಲದೇ ಸಸಿಗಳನ್ನು ನೆಡುವ ಸಂಬಂಧದ ಸಾಮಾಗ್ರಿಗಳನ್ನು ಶೇಖರಿಸಿಟ್ಟುಕೊಳ್ಳಲು ಹಸಿರು ಹೊನಲು ತಂಡಕ್ಕೆ ಪಟ್ಟಣ ಪಂಚಾಯಿತಿ ಆಡಳಿತ ಕೊಠಡಿಯನ್ನು ನೀಡಬೇಕೆಂದು ಮನವಿ ಸಲ್ಲಿಸಿದರು.
ಸಸಿ ನೆಡಲು ಬೇಕಾದಷ್ಟು ಪ್ರಮಾಣದ ನೀರು ದೊರಕಲು ಪಟ್ಟಣ ಪಂಚಾಯಿತಿ ಆಡಳಿತ ಬೋರ್‌ವೆಲ್‌ಗಳನ್ನು ಬಳಸಿಕೊಳ್ಳಬೇಕು. ಒಂದೊಮ್ಮೆ ಹಸಿರು ಹೊನಲು ತಂಡಕ್ಕೆ ಬೋರ್‌ವೆಲ್‌ಗಳನ್ನು ನೀಡಿದರೆ ಅಸಂಖ್ಯಾತ ರೀತಿಯಲ್ಲಿ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಸಸಿಗಳನ್ನು ನೆಡಲು ಮುಂದಾಗುತ್ತೇವೆ ಎಂದರು.

ಸಭೆಯಲ್ಲಿ ಹಸಿರು ಹೊನಲು ತಂಡದ ಯಲ್ಲಪ್ಪ, ಜಡಿಯಪ್ಪ, ಚೇತನ್, ಪ್ರಸನ್ನ ಪತ್ತಿಕೊಂಡ, ಗುರುರಾಜ್, ಚಂದ್ರು, ಅಜೇಯ ಮತ್ತಿತರರು ಪಟ್ಟಣ ಪಂಚಾಯಿತಿಯ ಬಸವರಾಜ್, ಕೇಶವ್, ಪರುಸಪ್ಪ ಮತ್ತಿತರರು ಪಾಲ್ಗೊಂಡಿದ್ದರು. ಚಂದ್ರಶೇಖರ್ ಸ್ವಾಗತಿಸಿ ನಿರೂಪಿಸಿದರು.

ವರದಿ: ಶಿವರಾಜ್ ಗಡ್ಡಿ

LEAVE A REPLY

Please enter your comment!
Please enter your name here