ಸಾರ್ವಜನಿಕರ ಅಹವಾಲು, ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಜಿಲ್ಲಾಡಳಿತದ ಸ್ಪಂದನೆ; ನಾಗರಿಕ ಸೌಲಭ್ಯಗಳ ವಿತರಣೆಗೆ ಆದ್ಯತೆ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

0
29

ಅಣ್ಣಿಗೇರಿ: ಅ.20: ಸಾರ್ವಜನಿಕರ ಸಮಸ್ಯೆ, ಅಹವಾಲುಗಳನ್ನು ಕಾಲಮಿತಿಯಲ್ಲಿ ಮತ್ತು ಸಾಧ್ಯವಾದಷ್ಟು ಸ್ಥಳಿಯವಾಗಿ ಪರಿಹರಿಸಲು ಅನಕೂಲವಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದಲ್ಲಿ ಹಾಗೂ ಜಿಲ್ಲಾಧಿಕಾರಿಗಳು ತಾಲೂಕು ಮಟ್ಟದಲ್ಲಿ ಜನತಾ ದರ್ಶನ ನಡೆಸಲು ಸರಕಾರ ನಿರ್ದೇಶನ ನೀಡಿದ್ದು, ಅದರಂತೆ ಅಣ್ಣಿಗೇರಿ ತಾಲೂಕು ಮಟ್ಟದ ಜನತಾದರ್ಶನ ನಡೆಸಲಾಗುತ್ತಿದೆ, ಎಲ್ಲ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಲಾಗುವುದು ಮತ್ತು ಸರಕಾರದ ಹಂತದಲ್ಲಿ ಆಗಬೇಕಾದ ಕಾರ್ಯಾದೇಶಗಳಿಗಾಗಿ ಸರಕಾರಕ್ಕೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.

ಅವರು ಇಂದು (ಅ.20) ಬೆಳಿಗ್ಗೆ ಅಣ್ಣಿಗೇರಿ ಪಟ್ಟಣದ ಆದಿಕವಿ ಪಂಪ ಸ್ಮಾರಕ ಭವನದಲ್ಲಿ ಜಿಲ್ಲಾಡಳಿತ, ಅಣ್ಣಿಗೇರಿ ತಾಲೂಕಾಡಳಿತ, ತಾಲೂಕು ಪಂಚಾಯತ ಹಾಗೂ ಪುರಸಭೆ ಸಹಯೋಗದೊಂದಿಗೆ ಆಯೋಜಿಸಿದ್ದ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಜನತಾ ದರ್ಶನದಲ್ಲಿ ಸಾರ್ವಜನಿಕರ ವೈಯಕ್ತಿಕ ಹಾಗೂ ಸಾಮುದಾಯಿಕ ಸಮಸ್ಯೆ, ಅಹವಾಲುಗಳನ್ನು ಸ್ವೀಕರಿಸಲಾಗುತ್ತದೆ. ಜನತಾ ದರ್ಶನದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲಿದ್ದಾರೆ. ಅಹವಾಲು, ಸಮಸ್ಯೆಗಳು ಸರಕಾರದ ನೀತಿ, ನಿಯಮಗಳಿಗೆ ಸಂಬಂಧಿಸಿದ್ದರೆ, ಅವುಗಳನ್ನು ಸೂಕ್ತ ಶಿಫಾರಸ್ಸಿನೊಂದಿಗೆ ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಜಿಲ್ಲಾಡಳಿತ ನಿರಂತರವಾಗಿ ಸಾರ್ವಜನಿಕರ ಅಹವಾಲು, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಪರಿಹರಿಸಲು ಕ್ರಮವಹಿಸುತ್ತಿದೆ. ಜಿಲ್ಲೆಯ ಎಲ್ಲ ತಹಸೀಲ್ದಾರರು ಪ್ರತಿ ದಿನ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಕ್ರಮವಹಿಸುತ್ತಿದ್ದಾರೆ. ಜಿಲ್ಲಾಡಳಿತದಿಂದ ಸಾರ್ವಜನಿಕರ ಆಶಯಗಳಿಗೆ ತಕ್ಷಣ ಪ್ರತಿಕ್ರಿಯಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಸಾರ್ವಜನಿಕರಿಗೆ ತೊಂದರೆ ಆಗುವಂತೆ ವರ್ತಿಸುವ ವ್ಯಕ್ತಿಗಳು, ಅಕ್ರಮ ಮದ್ಯ ಮಾರಾಟಗಾರರು, ಸರಕಾರಿ ಭೂ ಒತ್ತುವರಿದಾರರು ಮತ್ತು ಸರಕಾರಿ ಸೌಲಭ್ಯ ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಲ್ಲ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಮೂಲಭೂತವಾಗಿ ತಮ್ಮ ಇಲಾಖೆಯಿಂದ ನೀಡಬೇಕಾದ ಸೇವೆ, ಸೌಲಭ್ಯಗಳನ್ನು ದೊರಕಿಸಬೇಕು. ಇವುಗಳ ನೀಡುವಿಕೆಯಲ್ಲಿನ ವಿಫಲತೆ, ವಿಳಂಬಗಳು ಸಾರ್ವಜನಿಕರಿಗೆ ಸಮಸ್ಯೆಯಾಗಿ ರೂಪುಗೊಳ್ಳುತ್ತವೆ. ಆದ್ದರಿಂದ ತಮ್ಮ ಇಲಾಖೆ ಸೇವೆ, ಕರ್ತವ್ಯಗಳನ್ನು ಸಕಾಲಕ್ಕೆ ನಿಯಮಾನುಸಾರ ವಿಳಂಬವಿಲ್ಲದೆ ನೀಡಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಅಧಿಕಾರಿಗಳಿಗೆ ತಿಳಿಸಿದರು.

ಸಸಿಗೆ ನೀರೆರೆಯುವ ಮೂಲಕ ಜನತಾ ದರ್ಶನ ಉದ್ಘಾಟಿಸಿದ ಶಾಸಕ ಎನ್.ಎಚ್.ಕೋನರಡ್ಡಿ ಅವರು ಮಾತನಾಡಿ, ಸರಕಾರವು ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಸಕ್ರಿಯಗೊಳಿಸಲು ಮತ್ತು ಅಧಿಕಾರಿಗಳು ಜನರಿಗೆ ಜವಾಬ್ದಾರರಾಗಲು ಜನತಾ ದರ್ಶನ ಆರಂಭಿಸಲು ಸೂಚನೆ ನೀಡಿದೆ. ತಾವು ಪ್ರತಿ ವಾರದ ನಿಗದಿತ ಎರಡು ದಿನ ನವಲಗುಂದ ಮತ್ತು ಅಣ್ಣಿಗೇರಿ ತಾಲೂಕಿನಲ್ಲಿ ಖುದ್ದಾಗಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಪರಿಹಾರ ಸೂಚಿಸುತ್ತಿದ್ದೇನೆ ಎಂದರು.

ಜಿಲ್ಲಾಧಿಕಾರಿಗಳ ಈ ಜನತಾ ದರ್ಶನ ಕಾರ್ಯಕ್ರಮ ಜನಸಾಮಾನ್ಯರಿಗೆ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ವೇದಿಕೆ ಮಾಡಿಕೊಟ್ಟಿದೆ. ತಮ್ಮ ಹಾಗೂ ಸಮಾಜದ ಸಮಸ್ಯೆಗಳನ್ನು ಸಲ್ಲಿಸಬಹುದು ಎಂದು ಹೇಳಿದರು.

ನವಲಗುಂದ ಮತಕ್ಷೇತ್ರ ವ್ಯಾಪ್ತಿಯ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕುಗಳು ಬರಪೀಡಿತವೆಂದು ರಾಜ್ಯ ಸರಕಾರವು ಈಗಾಗಲೇ ಘೋಷಿಸಿದೆ. ಬರ ಪರಿಹಾರ ಕಾಮಗಾರಿಗಳು ಆರಂಭವಾಗುತ್ತಿವೆ. ಜಿಲ್ಲಾ ಪಂಚಾಯತದಿಂದ ಕ್ಷೇತ್ರದ ಪ್ರತಿ ತಾಲೂಕಿಗೆ ಎರಡು ಕೋಟಿ ರೂ.ಗಳ ಅನುದಾನ ಬಂದಿದ್ದು, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಾಸಕ ಎನ್.ಎಚ್.ಕೊನರಡ್ಡಿ ತಿಳಿಸಿದರು.

ಜಿಲ್ಲಾಡಳಿತ ಜಾಗೂ ಜಿಲ್ಲಾಧಿಕಾರಿಗಳ ಸಹಕಾರದಿಂದ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಅಣ್ಣಿಗೇರಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಗೀರದಾರ, ಅಣ್ಣಿಗೇರಿ ಪುರಸಭೆ ಅಧ್ಯಕ್ಷರಾದ ಮೆಹಬೂಬಿ ನವಲಗುಂದ, ಉಪಾಧ್ಯಕ್ಷರಾದ ಜಯಲಕ್ಷ್ಮಿ ಜಕರೆಡ್ಡಿ, ಅಣ್ಣಿಗೇರಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಮೃತ ಮೀಸಿ, ಜನತಾ ದರ್ಶನ ನೋಡಲ್ ಅಧಿಕಾರಿ ಆರ್.ಎಂ.ಕಂಟೆಪ್ಪಗೌಡರ, ಆರಕ್ಷಕ ವೃತ್ತ ನಿರೀಕ್ಷಕರಾದ ರವಿಕುಮಾರ್ ಕಪ್ಪತ್ತನವರ, ಆರಕ್ಷಕ ಉಪನಿರೀಕ್ಷಕರಾದ ಸಿದ್ಧಾರೂಢ ಆಲದಕಟ್ಟಿ, ಪುರಸಭೆ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ ಇದ್ದರು.

ಕಾರ್ಯಕ್ರಮದಲ್ಲಿ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕರಾದ ಮನೋಹರ ದ್ಯಾಬೇರಿ, ಡಾ.ಸಂತೋಷ ಕರೇಭರಮಣ್ಣವರ, ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕ ಮಹಮ್ಮದ ಅಲಿ ಅಲ್ಲಾಪುರ, ಕೃಷಿ ಇಲಾಖೆಯ ಶ್ರೀನಾಥ್ ಚಿಮ್ಮಲಗಿ, ಪಿಆರ್ ಇಡಿ ಎಇಇ ಎಂ.ಜಿ.ಸಿಂದೆ, ವಿವಿಧ ಇಲಾಖೆ ಅಧಿಕಾರಿಗಳಾದ ಮರಿಬಸಪ್ಪ ಸಜ್ಜನ, ಮಂಜುನಾಥ ಎಸ್, ದಯಾನಂದ ಒಡೆಯರ, ಪ್ರದೀಪ ಚಾಲುಕ್ಯ, ಕಿರಣಕುಮಾರ ಕರತಂಗಿ, ರಾಘವೇಂದ್ರ ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶಿಕ್ಷಕರಾದ ಡಿ.ಆರ್.ಕಬ್ಬೂರ ಪ್ರಾರ್ಥಿಸಿದರು.
ಅಣ್ಣಿಗೇರಿ ತಹಸೀಲ್ದಾರರಾದ ಶಿವಾನಂದ ಹೆಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಎ.ಎ.ಹುಬ್ಬಳ್ಳಿ ಹಾಗೂ ಎ‌.ಎಂ.ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು. ವೈ.ಜಿ.ಗದ್ದಿಗೌಡರ ವಂದಿಸಿದರು.

LEAVE A REPLY

Please enter your comment!
Please enter your name here