ಹೆಚ್ಚುತ್ತಿರುವ ತಾಪಮಾನ;ಮುಂಜಾಗ್ರತೆ ವಹಿಸಿ ಕುಡಿಯುವ ನೀರಿನ ಸಮಸ್ಯೆ:ಸಮಸ್ಯಾತ್ಮಕ ಹಳ್ಳಿಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಿ: ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ

0
104

ಬಳ್ಳಾರಿ,ಮಾ.08 ಪ್ರಸ್ತುತ ಬೇಸಿಗೆ ಸಂದರ್ಭದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 118 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದು ಎಂದು ಅಂದಾಜಿಸಲಾಗಿದ್ದು, ಕೂಡಲೇ ಅಧಿಕಾರಿಗಳು ಈ ಸಮಸ್ಯಾತ್ಮಕ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಳ್ಳಾರಿ-06, ಹೊಸಪೇಟೆ-15, ಸಂಡೂರು-21, ಸಿರಗುಪ್ಪ-16, ಹರಪನಹಳ್ಳಿ-37, ಕೂಡ್ಲಿಗಿ-23 ಹಳ್ಳಿಗಳು ಸೇರಿದಂತೆ ಒಟ್ಟು 118 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ; ಸದರಿ ಗ್ರಾಮಗಳಿಗೆ ಖುದ್ದಾಗಿ ಪರಿಶೀಲಿಸಿ ಎಂದು ಸೂಚಿಸಿದ ಡಿಸಿ ಮಾಲಪಾಟಿ ಅವರು ಜಿಲ್ಲೆಯಲ್ಲಿ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ನೀರಿನ ಸಮಸ್ಯೆ ಉದ್ಭವಿಸಿದ್ರೇ ತಕ್ಷಣ ನೀರಿನ ಸರಬರಾಜಿಗೆ ಕ್ರಮ, ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆ ಸೇರಿದಂತೆ ವಿವಿಧ ರೀತಿಯ ಸಿದ್ಧತಾ ಕ್ರಮಗಳನ್ನು ಕೂಡಲೇ ಕೈಗೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾರ್ಯನಿರ್ವಾಹಕ ಎಂಜನಿಯರ್ ಅವರಿಗೆ ಸೂಚಿಸಿದರು.
ಕಳೆದ ವರ್ಷ ಎಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿತ್ತು;ಎಷ್ಟು ಖಾಸಗಿ ಬೋರವೆಲ್‍ಗಳನ್ನು ಬಾಡಿಗೆ ಪಡೆದುಕೊಳ್ಳಲಾಗಿತ್ತು ಮತ್ತು ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಲಾಗಿತ್ತು ಎಂಬುದನ್ನು ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿ ಪ್ರಭು ಅವರು ಸಭೆಗೆ ವಿವರಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಡಿಯುಡಿಸಿ ಯೋಜನಾ ನಿರ್ದೇಶಕ ರಮೇಶ ಅವರು ಸಭೆಗೆ ವಿವರಿಸಿದರು.
*ಮೇವಿನ ಕೊರತೆ ಸದ್ಯಕ್ಕಿಲ್ಲ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಬೇಸಿಗೆ ಸಂದರ್ಭದಲ್ಲಿ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಮಾಲಪಾಟಿ ಅವರು ಪಶುಸಂಗೋಪನಾ ಇಲಾಖೆ ಅಧಿಕಾರಿ ಪರಮೇಶ್ವರ ನಾಯಕ್ ಅವರಿಗೆ ಸೂಚಿಸಿದರು.
ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಪರಮೇಶ್ವರ ನಾಯಕ್ ಅವರು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಂದು ವಾರಕ್ಕೆ ಜಾನುವಾರುಗಳಿಗೆ 26599 ಟನ್ ಮೇವು ಬೇಕಾಗುತ್ತದೆ. ನಮ್ಮ ಜಿಲ್ಲೆಯಲ್ಲಿ ಈಗಾಗಲೇ 14,86.040 ಟನ್ ಮೇವು ಸಂಗ್ರಹ ಇದೆ. ಲಭ್ಯವಿರುವ ಮೇವು ಇನ್ನೂ 56 ವಾರಗಳ ಕಾಲ ಸಾಕಾಗುತ್ತದೆ. ನಮ್ಮಲ್ಲಿ ಯಾವುದೇ ರೀತಿಯ ಮೇವಿನ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
*ತಾಪಮಾನ ಹೆಚ್ಚಳ;ಮುಂಜಾಗ್ರತಾ ಕ್ರಮಗಳು ಕೈಗೊಳ್ಳಿ: ಜಿಲ್ಲೆಯಲ್ಲಿ ದಿನೇದಿನೇ ತಾಪಮಾನ ಹೆಚ್ಚಳವಾಗುತ್ತಿದ್ದು,ಹೆಚ್ಚುತ್ತಿರುವ ಬಿಸಿಗಾಳಿಯಿಂದಾಗಿ ಆಗುವ ಪರಿಣಾಮಗಳನ್ನು ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ನಿಯಮಾನುಸಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಡಿಸಿ ಮಾಲಪಾಟಿ ಅವರು ಸೂಚನೆ ನೀಡಿದರು.
ರಾಜ್ಯದಲ್ಲಿ ಗರಿಷ್ಠ ತಾಪಮಾನವಿರುವ ಜಿಲ್ಲೆಗಳಲ್ಲಿ ಬಳ್ಳಾರಿಯೂ ಒಂದು; ಈ ತಾಪಮಾನದಿಂದ ದೀರ್ಘಕಾಲದ ಶಾಖದ ಸೆಳೆತ ಅಥವಾ ಶಾಖದ ಬಳಲುವಿಕೆಯಿಂದಾಗಿ ದೈಹಿಕ ಚಟುವಟಿಕೆಗಳ ಬಳಲಿಕೆಯೊಂದಿಗೆ ಹೀಟ್‍ಸ್ಟ್ರೋಕ್ ಸಾಧ್ಯವಾಗುವುದು ಸೇರಿದಂತೆ ವಿವಿಧ ರೀತಿಯ ಅನಾರೋಗ್ಯ ಸಂಬಂಧಿತ ಲಕ್ಷಣಗಳು ಕಂಡುಬರುತ್ತವೆ; ಅಂತ ಸಂದರ್ಭದಲ್ಲಿ ವಹಿಸಬೇಕಾದ ಕ್ರಮಗಳು ಮತ್ತು ಚಿಕಿತ್ಸೆ ಸೇರಿದಂತೆ ಇನ್ನೀತರ ಅಗತ್ಯ ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಐಇಸಿ ಚಟುವಟಿಕೆಗಳ ಮೂಲಕ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಕೋವಿಡ್ ಕಾರಣದಿಂದ ಇತ್ತೀಚೆಗಷ್ಟೇ ಶಾಲೆಗಳು ಆರಂಭವಾಗಿದ್ದು,ತಾಪಮಾನದಿಂದ ಮಕ್ಕಳು ಬಳಲಬಾರದು ಎಂಬ ಸದುದ್ದೇಶದಿಂದ ಶಾಲೆಗಳ ವೇಳಾಪಟ್ಟಿ ಬದಲಿಸುವಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರ ಮತ್ತು ಗ್ರಾಮೀಣ ಪ್ರದೇಶದ ವಿವಿಧೆಡೆ ನೀರಿನ ಅರವಟಿಗೆಗಳ ಸ್ಥಾಪನೆಗೆ ಎನ್‍ಜಿಒಗಳಿಗೆ ಅಗತ್ಯ ಸಹಕಾರ ನೀಡುವಿಕೆ, ಆಸ್ಪತ್ರೆಗಳಲ್ಲಿ ಓಆರ್‍ಎಸ್,ದ್ರವಗಳು ಮತ್ತು ಇತರ ಔಷಧಿಗಳು ಸೂಕ್ತ ಸಂಗ್ರಹಣೆಯಿಟ್ಟುಕೊಳ್ಳಿ. ಬೇಸಿಗೆಯಲ್ಲಿ ಸ್ವಚ್ಛ ಕುಡಿಯುವ ನೀರು ಸರಬರಾಜು ಮಾಡಿ ಎಂದು ಡಿಸಿ ಮಾಲಪಾಟಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯ ತುರ್ತು ಕಾರ್ಯಕೇಂದ್ರದಿಂದ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದಿಂದ ಸ್ವೀಕರಿಸಲಾಗುಚವ ಎಲ್ಲ ಶಾಖ ತರಂಗದ ಎಚ್ಚರಿಕೆಗಳನ್ನು ಸಾರ್ವಜನಿಕರಿಗೆ ಮಾಧ್ಯಮಗಳ ಮೂಲಕ ತಲುಪುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲು ವಾರ್ತಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಮಿಕರಿಗೆ ಗರಿಷ್ಠ ತಾಪಮಾನ ಪ್ರಭಾವವನ್ನು ತಪ್ಪಿಸಲು ಹೊಂದಿಕೊಳ್ಳುವ ಕೆಲಸದ ಸಮಯವನ್ನು ನಿಗದಿಪಡಿಸಲು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಡಿಸಿ ಮಾಲಪಾಟಿ ಅವರು ನಿರ್ದೇಶನ ನೀಡಿದರು.
ಹೊರಾಂಗಣದಲ್ಲಿ ಕೆಲಸ ಮಾಡುವ ಕಟ್ಟಡ ನಿರ್ಮಾಣ ಕಾರ್ಮಿಕರು,ಕಾರಖಾನೆ ಕಾರ್ಮಿಕರು ಮತ್ತು ಉದ್ಯೋಗಿಗಳಿಗೆ ತಾಪಮಾನದಿಂದಾಗುವ ಪರಿಣಾಮದ ನಿರ್ವಹಣೆ,ಪ್ರಥಮ ಚಿಕಿತ್ಸೆ ಮತ್ತು ನಿರ್ಜಲೀಕರಣ ಆಗದಂತೆ ಉಳಿಯುವುದು ಹೇಗೆ ಎಂಬುದರ ಕುರಿತು ಜಾಗೃತಿ ಮೂಡಿಸಿ ಎಂದರು.
*ಬೇಸಿಗೆಯಲ್ಲಿ ಈ ಕ್ರಮಗಳನ್ನು ಅನುಸರಿಸಿ: ಬೇಸಿಗೆಯಲ್ಲಿ ಸಾರ್ವಜನಿಕರು ಬಿಸಿಲಿನಲಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು,ಟೋಪಿ ಅಥವಾ ಛತ್ರಿ ಬಳಸಿ, ಮನೆಯಲ್ಲಿ ಆದಷ್ಟು ಫ್ಯಾನ್ ಬಳಸಿ, ಹಗುರವಾದ,ತಿಳಿಬಣ್ಣದ,ಸಡಿಲವಾದ ಮತ್ತು ರಂಧ್ರವುಳ್ಳ ಹತ್ತಿ ಬಟ್ಟೆಗಳನ್ನು ಧರಿಸಿ, ಮನೆಯಲ್ಲಿ ತಯಾರಿಸಿದ ಲಸ್ಸಿ,ಶರಬತ್ತ,ನಿಂಬೆ ನೀರು, ಮಜ್ಜಿಗೆಗಳನ್ನು ಬಳಸಿ ಮತ್ತು ಮಧ್ಯದಲ್ಲಿ ವಿಶ್ರಾಂತಿ ಪಡೆಯಿರಿ,ಒಆರ್‍ಎಸ್ ಬಳಸಿ, ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್,ಚಹಾ,ಕಾಫಿ ಮತ್ತು ಹಾನಿಕಾರಕ ತಂಪು ಪಾನಿಯಗಳನ್ನು ಸೇವಿಸಬೇಡಿ ಮತ್ತು ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಹೊರಗೆ ಕೆಲಸ ಮಾಡುವುದನ್ನು ತಪ್ಪಿಸಿ ಎಂದು ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜನಾರ್ಧನ್ ಅವರು ಸಭೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಬಳ್ಳಾರಿ ಜಿಪಂ ಸಿಇಒ ಕೆ.ಆರ್.ನಂದಿನಿ, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here