ಅ.28 ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

0
27

ಮಡಿಕೇರಿ ಅ.20:-ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅಕ್ಟೋಬರ್, 28 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ಆಯೋಜಿಸುವ ಸಂಬಂಧ ಪೂರ್ವಭಾವಿ ಸಭೆಯು ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮ ಆಯೋಜನೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ಮಾತನಾಡಿ ಸರ್ಕಾರದ ನಿರ್ದೇಶನದಂತೆ ಕಾರ್ಯಕ್ರಮ ಆಯೋಜಿಸಬೇಕು. ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಐಟಿಡಿಪಿ ಇಲಾಖಾ ಅಧಿಕಾರಿ ಸೂಚಿಸಿದರು.

ಮಹರ್ಷಿ ವಾಲ್ಮೀಕಿ ಕುರಿತು ಮಾತನಾಡುವ ಭಾಷಣಕಾರರನ್ನು ಕರೆಸುವುದು. ಎಸ್‍ಎಸ್‍ಎಲ್‍ಸಿ, ಪಿಯುಸಿ ಪದವಿಯಲ್ಲಿ ಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸುವುದು ಸೇರಿದಂತೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಅಗತ್ಯ ಕ್ರಮವಹಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಹೇಳಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಕುಡಿಯರ ಮುತ್ತಪ್ಪ ಅವರು ಪರಿಶಿಷ್ಟ ಪಂಗಡದಲ್ಲಿ ಹಲವು ಸಮಾಜಗಳಿದ್ದು, ವಾಲ್ಮೀಕಿ ಸಮಾಜದ ಜೊತೆ ಯರವ, ಕುಡಿಯ, ಮಲೆ ಕುಡಿಯ, ಸೋಲಿಗ, ಕಾಡುಕುರುಬ, ಜೇನುಕುರುಬ, ಬೆಟ್ಟ ಕುರುಬ ಹೀಗೆ ಹಲವು ಸಮಾಜಗಳಿದ್ದು, ಇತರ ಸಮಾಜದಲ್ಲಿ ದುಡಿದವರನ್ನು ಗುರುತಿಸಿ ಸನ್ಮಾನಿಸುವಂತಾಗಬೇಕು ಎಂದು ಸಲಹೆ ಮಾಡಿದರು.

ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಅಶೋಕ ಅವರು ಮಾತನಾಡಿ ಕುಶಾಲನಗರದಲ್ಲಿ 2014 ರಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲಾಗಿದೆ. ಆದರೆ ಈ ಭವನ ಸಾರ್ವಜನಿಕರ ಉಪಯೋಗಕ್ಕೆ ಬರುತ್ತಿಲ್ಲ. ವಾಲ್ಮೀಕಿ ಭವನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ, ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಅವರು ಸಭೆಯ ಗಮನಕ್ಕೆ ತಂದರು.

ಗಾಂಧಿ ಮಂಟಪದಿಂದ ಜನರಲ್ ತಿಮ್ಮಯ್ಯ ವೃತ್ತದ ಮಾರ್ಗ ಕಾವೇರಿ ಕಲಾಕ್ಷೇತ್ರದವರೆಗೆ ಮೆರವಣಿಗೆಗೆ ಅವಕಾಶ ಮಾಡಬೇಕು ಎಂದು ಅವರು ಕೋರಿದರು.

ಆದಿವಾಸಿ ಪ್ರಮುಖರಾದ ಸುಬ್ರಮಣಿ ಅವರು ಮಾತನಾಡಿ ಆದಿವಾಸಿಗಳಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು. ಇಂದಿಗೂ ಸಹ ಹಾಡಿಯಲ್ಲಿ ವಾಸಿಸುವ ಆದಿವಾಸಿಗಳ ಬದುಕಿನ ಪರಿಸ್ಥಿತಿಯನ್ನು ಅವಲೋಕನ ಮಾಡಬೇಕು ಎಂದರು.

ಪ್ರಮುಖರಾದ ಗಂಗಾಧರ ಅವರು ಮಾತನಾಡಿ ಕಳೆದ ಬಾರಿ ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸುವಂತಾಗಬೇಕು. ಕಳೆದ ಬಾರಿ ಜಿಲ್ಲೆಗೆ ಮೂರನೇ ಸ್ಥಾನ ಪಡೆದ ವಿದ್ಯಾರ್ಥಿಯನ್ನು ಸನ್ಮಾನಕ್ಕೆ ಪರಿಗಣಿಸಿಲ್ಲ. ಮುಂದೆ ಈ ರೀತಿ ಆಗದಂತೆ ಗಮನಹರಿಸಬೇಕು ಎಂದು ಸಲಹೆ ಮಾಡಿದರು.

ಸಂಗೊಳ್ಳಿ ರಾಯಣ್ಣ ವೇದಿಕೆಯ ಜಿಲ್ಲಾಧ್ಯಕ್ಷರಾದ ಪ್ರಭಾಕರ ಅವರು ಮಾತನಾಡಿ ಪೋಷಕರು ಇಲ್ಲದ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವಂತಾಗಬೇಕು ಎಂದು ಸಲಹೆ ಮಾಡಿದರು.

ಪ್ರಮುಖರಾದ ಮುತ್ತಮ್ಮ ಅವರು ಮಾತನಾಡಿ ಗಿರಿಜನ ಆಶ್ರಮ ಶಾಲೆಗಳಲ್ಲಿ ಜೇನುಕುರುಬ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಗಿರಿಜನ ಆಶ್ರಮ ಶಾಲೆ ಹೆಸರು ಬದಲಿಗೆ ವಾಲ್ಮೀಕಿ ಆಶ್ರಮ ಶಾಲೆ ಎಂದು ಹೆಸರು ಬದಲಿಸುವುದು ಸರಿಯಲ್ಲ. ಈ ಹಿಂದಿನಂತೆಯೇ ಗಿರಿಜನ ಆಶ್ರಮ ಶಾಲೆ ಎಂದು ಇರಬೇಕು ಎಂದು ಅವರು ಸಲಹೆ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ಸರ್ಕಾರವು ಕಾಲ ಕಾಲಕ್ಕೆ ಹೊರಡಿಸುವ ನಿರ್ದೇಶನವನ್ನು ಪಾಲಿಸುವುದು ಅಧಿಕಾರಿಗಳ ಕೆಲಸವಾಗಿದೆ. ಈ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಅನಿಲ್ ರಾವ್ ಅವರು ಮಾತನಾಡಿ ಜಿಲ್ಲೆಯಲ್ಲಿ ಮೂರು ಲ್ಯಾಂಪ್ ಸೊಸೈಟಿ ಇದ್ದು, ಲ್ಯಾಂಪ್ ಸೊಸೈಟಿ ಅಧ್ಯಕ್ಷರು ಮತ್ತು ಸದಸ್ಯರನ್ನು ಆಹ್ವಾನಿಸುವಂತಾಗಬೇಕು ಎಂದು ಸಲಹೆ ಮಾಡಿದರು.
ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ ಅವರು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪುಟ್ಟರಾಜು, ಪೌರಾಯುಕ್ತರಾದ ವಿಜಯ್, ಶಿಕ್ಷಣಾಧಿಕಾರಿ ಮಹದೇವಸ್ವಾಮಿ, ಜಿ.ಪಂ.ಎಂಜಿನಿಯರ್ ಸುರೇಶ್ ಕುಮಾರ್, ಮುತ್ತುರಾಜು, ಇತರರು ಇದ್ದರು.

LEAVE A REPLY

Please enter your comment!
Please enter your name here