ನೂಲ್ವಿ ಗ್ರಾಮದಲ್ಲಿ ಜರುಗಿದ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ

0
113

ಧಾರವಾಡ: ನ.02: ಭಾರತ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಯೋಜನೆಯಡಿಯಲ್ಲಿ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಅ.31 ರಂದು ಧಾರವಾಡ ಕೆಸಿಸಿ ಬ್ಯಾಂಕಿನಿಂದ ಕಾರ್ಯಕ್ರಮವನ್ನು ಜರುಗಿಸಲಾಯಿತು.

ಸಾಕ್ಷತರಾ ಕಾರ್ಯಕ್ರಮದಲ್ಲಿ ನಬಾರ್ಡ್ ಡಿಡಿಎಂ ಮಯೂರ ಕಾಂಬಳೆ, ಲೀಡ್ ಬ್ಯಾಂಕ್ ಎಲ್‍ಡಿಎಂ ಪ್ರಭುದೇವ ಸಭೆಯನ್ನುದ್ದೇಶಿಸಿ ಮಾತನಾಡಿ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಅನುಕೂಲವಾಗುವ ಕೆಸಿಸಿ ಮತ್ತು ಇತರ ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಸರ್ಕಾರಿ ಪ್ರಾಯೋಜಿತ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಕಿಸಾನ್ ಕ್ರೇಡಿಟ್ ಕಾರ್ಡ್ ವಿತರಣೆಯಲ್ಲಿ ಕೆಸಿಸಿ ಬ್ಯಾಂಕ್ ಸಾಧನೆ : ರೈತಾಪಿ ವರ್ಗ ಹಾಗೂ ಕೃಷಿ ವಲಯದ ಸಮಗ್ರ ಅಭಿವೃಧ್ಧಿಯ ಉದ್ದೇಶದೊಂದಿಗೆ ಪ್ರಾರಂಭಿಕ ಹಂತದಲ್ಲಿ 41 ವ್ಯಕ್ತಿ ಶೇರುದಾರರು ಹಾಗೂ 71 ಸಹಕಾರ ಸಂಘಗಳ ಸದಸ್ಯರು ಕೂಡಿ ಸಂಗ್ರಹಿಸಿದ ರೂ.30,000/-ಗಳ ದುಡಿಯುವ ಬಂಡವಾಳದೊಂದಿಗೆ ಆಗಿನ ಮುಂಬೈ ಪ್ರಾಂತ್ಯದ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡು ನವೆಂಬರ್ 23, 1916 ರಂದು ದಿವಂಗತ ದಿವಾನ್ ಬಹದ್ದೂರ ಶಾಂತವೀರಪ್ಪ ಮೆಣಸಿನಕಾಯಿ ಹಾಗೂ ದಿವಂಗತ ರಾವಬಹದ್ದೂರ ಅರಟಾಳ ರುದ್ರಗೌಡರು ನೇತ್ರತ್ವದಲ್ಲಿ ಸಹಕಾರ ತತ್ವದಡಿ ಧಾರವಾಡ ಕೆಸಿಸಿ ಬ್ಯಾಂಕ್ ಸ್ಥಾಪಿಸಲ್ಪಟ್ಟಿತು.

ಪ್ರಸ್ತುತ ಬ್ಯಾಂಕು ಅವಿಭಜಿತ ಧಾರವಾಡ ಜಿಲ್ಲೆಯ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಕಾರ್ಯವ್ಯಾಪ್ತಿ ಒಳಗೊಂಡಿದ್ದು, ಒಟ್ಟು 550 ಪ್ರಾ.ಕೃ.ಪ.ಸ.ಸಂಘಗಳು, ತಾಲೂಕಾ ಮಟ್ಟದಲ್ಲಿ 18 ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳು, 38 ಪಟ್ಟಣ ಸಹಕಾರಿ ಬ್ಯಾಂಕುಗಳು ಹಾಗೂ ಇತರೆ ಸಹಕಾರಿ ಸಂಘಗಳು ಸೇರಿದಂತೆ ಒಟ್ಟು 1,573 ಸದಸ್ಯರ ಸದಸ್ಯತ್ವವನ್ನು ಹೊಂದಿರುತ್ತದೆ.

ಕೆಸಿಸಿ ಬ್ಯಾಂಕು ಪ್ರಾಥಮಿಕವಾಗಿ ತನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಕೃಷಿ ಸಾಲ ವಿತರಣೆಗೆ ತೊಡಗಿಕೊಂಡಿದ್ದು, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಮೊದಲು ಸನ್ 1998ರಲ್ಲಿ ಪರಿಚಯಿಸಲಾಯಿತು.

ಕೆ.ಸಿ.ಸಿ. ಬ್ಯಾಂಕು ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಕಾರ್ಯವ್ಯಾಪ್ತಿಯಲ್ಲಿನ ಲಕ್ಷಾಂತರ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅವಶ್ಯವಾದ ಸಾಲ ಸೌಲಭ್ಯಗಳನ್ನು ಒದಗಿಸುತ್ತಲಿದೆ. ರೈತರ ಜೀವನಾಡಿ ಎಂದೇ ಖ್ಯಾತಿ ಪಡೆದಿರುವ ಕೆ.ಸಿ.ಸಿ. ಬ್ಯಾಂಕು ರೈತರಿಗೆ ಬೆಳೆಸಾಲ, ಮಾಧ್ಯಮಿಕ ಕೃಷಿ ಸಾಲ ಮತ್ತಿತರ ಕೃಷಿ ಉದ್ದೇಶಿತ ಚಟುವಟಿಕೆಗಳಿಗೆ 550 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಸಕಾಲದಲ್ಲಿ ಸರ್ಕಾರದ ಯೋಜನೆಯನುಸಾರ ಶೂನ್ಯ ಬಡ್ಡಿದರದಲ್ಲಿ 83,085 ರೈತ ಸದಸ್ಯರಿಗೆ ರೂ.318.67 ಕೋಟಿ ಬೆಳೆಸಾಲ ಮತ್ತು ಶೇ.3 ರ ಬಡ್ಡೀದರದಲ್ಲಿ 532 ಸದಸ್ಯರಿಗೆ ರೂ.19.90 ಕೋಟಿ ಮಾಧ್ಯಮಿಕ ಕೃಷಿ ಸಾಲ ಸೌಲಭ್ಯಗಳನ್ನು ವಿತರಿಸಿದೆ. ಇದರಿಂದಾಗಿ ರೈತರು ಬೀಜಗಳು, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಹಾಗೂ ಕೃಷಿ ಉಪಕರಣಗಳನ್ನು ಸುಲಭವಾಗಿ ಖರೀದಿಸಲು ಅನುಕೂಲವಾಗುತ್ತದೆ. ಮತ್ತು ರೈತರು ಸಕಾಲದಲ್ಲಿ ಸಾಲವನ್ನು ಮರುಪಾವತಿಸಿದಲ್ಲಿ ಬಡ್ಡಿಯು ರಿಯಾಯಿತಿಯೊಂದಿಗೆ ಮರಳಿ ಬರುತ್ತದೆ.

LEAVE A REPLY

Please enter your comment!
Please enter your name here