ವರದಿಯ ಇಂಪ್ಯಾಕ್ಟ್ : ಸಮಸ್ಯೆಗೆ ಸ್ಪಂದಿಸಿ ಸ್ವತಃ ಸ್ವಚ್ಛತೆಗೆ ಮುಂದಾದ ಪಪಂ ಮುಖ್ಯಾಧಿಕಾರಿ

0
162

ಕೊಟ್ಟೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹ್ಯಾಳ್ಯಾ ರಸ್ತೆಯಲ್ಲಿ ವಾಸಿಸುತ್ತಿರುವ ದಲಿತರ ಕಾಲೋನಿಗಳಲ್ಲಿ ಚರಂಡಿ ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚಾಗಿರುವ ವರದಿಗೆ ಸ್ಪಂದಿಸಿದ ಪಟ್ಟಣದ ಮುಖ್ಯಾಧಿಕಾರಿಗಳು ಗುರುವಾರ ತಾವೇ ಸ್ವಚ್ಛತೆಗೆ ಇಳಿದರು.
ಅಲ್ಲಲ್ಲಿ ಬಿದ್ದಿದ್ದ ಕಸದ ರಾಶಿಗಳನ್ನು ತಮ್ಮ ಸ್ವಚ್ಛತಾ ಸಿಬ್ಬಂದಿಗಳೊಂದಿಗೆ ದಲಿತ ಕಾಲೋನಿಗೆ ಹಾಜರಾಗಿ ವಿಲೇವಾರಿ ಮಾಡಿ, ತುಂಬಿಹೋಗಿದ್ದ ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವ ಕ್ರಮ ಕೈಗೊಂಡು, ಬ್ಲೀಚಿಂಗ್ ಪೌಡರ್ ಸಿಂಪಡಿಸಿದರು.

ಹಗರಿಬೊಮ್ಮನಹಳ್ಳಿ ರಸ್ತೆಯ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು. ಈ ಕಾಮಗಾರಿ ಕಳಪೆಯಾಗಿ ನಡೆಯುತ್ತಿರುವುದನ್ನು ನೋಡಿಯೂ ನೋಡದಂತೆ ಸಂಬಂಧಿಸಿದ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಈ ಕಾಮಗಾರಿಯಿಂದ ದಲಿತರ ಕಾಲೋನಿಗಳಲ್ಲಿರುವ ಮನೆಗಳಿಗೆ ಚರಂಡಿ ನೀರು ನುಗ್ಗುವ ಸಂಭವವಿದ್ದರೂ ಸಹ ಲೋಕೋಪಯೋಗಿ ಇಲಾಖೆ ಕಳಪೆ ಕಾಮಗಾರಿ ಕಂಡರೂ ಕಾಣದಂತೆ ಮೂಕ ಪ್ರೇಕ್ಷಕರಾಗಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ದಲಿತರ ಬಗ್ಗೆ ಇವರಿಗಿರುವ ಕಾಳಜಿಯ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ. ದಲಿತ ಮುಖಂಡರಾದ ಅಜ್ಜಪ್ಪ, ಚಂದ್ರಶೇಖರ್ ಇತರೆ ದಲಿತ ಮುಖಂಡರು ಹಾಜರಿದ್ದರು.

■ನಮ್ಮ ಕಾಲೋನಿಗಳ ಹತ್ತಿರವೇ ಲೋಕೋಪಯೋಗಿ ಇಲಾಖೆಯಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಕಳಪೆಯಾಗಿದೆ. ಈ ಕಳಪೆ ಕಾಮಗಾರಿಯಿಂದ ಮುಂದೆ ನಮ್ಮ ಮನೆಗಳಿಗೆ ಚರಂಡಿ ನೀರು ನುಗ್ಗುವ ಸಂಭವವಿದೆ. ಮೇಲಾಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕು.
–ಅಮರೇಶ್, ದಲಿತ ಮುಖಂಡ

LEAVE A REPLY

Please enter your comment!
Please enter your name here