ರಾಷ್ಟ್ರೀಯ ಉಪಶಮನ ಆರೈಕೆ (ಪ್ಯಾಲೆಟಿವ್ ಕೇರ್) ಕಾರ್ಯಕ್ರಮದಡಿ ಹಾಸಿಗೆ ಹಿಡಿದ ಹಿರಿಯ ನಾಗರಿಕರ ಸೇವೆಯನ್ನು ಮನೆಮಟ್ಟದಲ್ಲಿಯೇ ಪಡೆದುಕೊಳ್ಳಿ: ಡಾ. ವೈ.ರಮೇಶ್ ಬಾಬು

0
32

ಬಳ್ಳಾರಿ,ಜ.12: ಹಾಸಿಗೆ ಹಿಡಿದು ಆರೈಕೆಗಾಗಿ ಇನ್ನೊಬ್ಬರ ಸಹಾಯದ ಅಗತ್ಯತೆ ಇರುವ ಕುಟುಂಬದ ಹಿರಿಯ ಸದಸ್ಯರಿಗೆ ಮಾನಸಿಕವಾಗಿ ಬೆಂಬಲ ನೀಡುವ ಕಾರ್ಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸರ್ಕಾರದ ಮಾರ್ಗದರ್ಶನದ ಅಡಿಯಲ್ಲಿ ರಾಷ್ಟ್ರೀಯ ಉಪಶಮನ ಆರೈಕೆ (ಪ್ಯಾಲೆಟಿವ್ ಕೇರ್) ಕಾರ್ಯಕ್ರಮದ ಮೂಲಕ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೇವೆಯನ್ನು ನೀಡುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದು ಕುಟುಂಬದ ಹಿರಿಯ ಸದಸ್ಯರ ಆರೈಕೆಯ ಸಹಾಯ ಪಡೆಯಿರಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಧಿಕಾರಿ ಡಾ.ವೈ.ರಮೇಶ್ ಬಾಬು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಪೆಲೆಟಿವ್ ಕೇರ್ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ 97 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಸಮುದಾಯ ಆರೋಗ್ಯ ಅಧಿಕಾರಿ (ಸಿಹೆಚ್‍ಓ) ರವರ ಮೂಲಕ ಮನೆ ಭೇಟಿ ಮಾಡಲಿದ್ದಾರೆ.
ಹಾಸಿಗೆ ಹಿಡಿದ ಕುಟುಂಬದ ಹಿರಿಯ ಸದಸ್ಯರಿಗೆ ಸ್ಥಳದಲ್ಲಿಯೇ ರಕ್ತದೊತ್ತಡ ಪರೀಕ್ಷೆ, ಸಕ್ಕರೆ ಕಾಯಿಲೆ ಪರೀಕ್ಷೆ ಕೈಗೊಳ್ಳುವ ಮೂಲಕ ಅಗತ್ಯ ಇರುವ ಔಷಧೋಪಚಾರವನ್ನು ಮಾಡಲಾಗುವುದು ಮತ್ತು ಫಿಜಿಯೋಥೆರಫಿ ಅವಶ್ಯಕತೆ ಇರುವವರಿಗೆ ಕುಟುಂಬದ ಸದಸ್ಯರ ಸಮ್ಮತದೊಂದಿಗೆ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಎನ್.ಸಿ.ಡಿ ವಿಭಾಗದ ತಜ್ಞ ವೈದ್ಯ ಡಾ. ಫಣಿರಾಜ್ ಅವರಿಂದ ಸೇವೆಯನ್ನು ಸಹ ನೀಡಲಾಗುತ್ತಿದೆ.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಹಾಗೂ ಜಿಲ್ಲಾ ಎನ್.ಸಿ.ಡಿ ಕಾರ್ಯಕ್ರಮ ಸಂಯೋಜಕರಾದ ಡಾ.ಜಬೀನ್ ತಾಜ್ ಅವರ ಮೇಲ್ವಿಚಾರಣೆಯೊಂದಿಗೆ ಜಿಲ್ಲೆಯಲ್ಲಿ ಕಾರ್ಯಕ್ರಮದ ಅನುಷ್ಟಾನವನ್ನು ಪರಿಣಾಮಕಾರಿಯಾಗಿ ಮಾಡಲಾಗುತ್ತಿದ್ದು, ಕುಟುಂಬದ ಸದಸ್ಯರಲ್ಲಿ ದೀರ್ಘಾವಧಿ ಕಾಯಿಲೆಗಳಿಂದ ಹಾಗೂ ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವವರಿಗೆ ಮತ್ತು ಹಾಸಿಗೆ ಹಿಡಿದ ಮಾನಸಿಕ ರೋಗಿಗಳಿಗೂ ಸಹ ಆರೈಕೆ ಮಾಡಲಾಗುತ್ತಿದೆ.
ಸಾರ್ವಜನಿಕರು ಈ ದಿಶೆಯಲ್ಲಿ ಹತ್ತಿರದ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಿಹೆಚ್‍ಓ ಡಾ.ವೈ.ರಮೇಶ್ ಬಾಬು ಅವರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here