ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಒ ನಂದಿನಿ ಸೂಚನೆ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬಳ್ಳಾರಿ ಅತ್ಯುತ್ತಮ ಸ್ಥಾನಕ್ಕೇರಿಸಲು ಶ್ರಮಿಸಿ

0
150

ಬಳ್ಳಾರಿ,ಫೆ.06 : ಜಿಲ್ಲೆಯ ಫಲಿತಾಂಶದ ಸುಧಾರಣೆಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ಈ ಬಾರಿಯ ಎಸ್ಸೆಸ್ಸೆಲ್ಸಿಯ ಫಲಿತಾಂಶದಲ್ಲಿ ಬಳ್ಳಾರಿ ಜಿಲ್ಲೆಯನ್ನು ರಾಜ್ಯದಲ್ಲಿಯೇ ಅತ್ಯುತ್ತಮ ಸ್ಥಾನಕ್ಕೇರಿಸಲು ಶಿಕ್ಷಕರು ಶ್ರಮಿಸಬೇಕು ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆಗೆ ಸಂಬಂಧಿಸಿದಂತೆ ನಗರದ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನೂ 100 ದಿನಗಳು ಉಳಿದಿದ್ದು, ಉಳಿದಿರುವ 100 ದಿನಗಳಲ್ಲಿ ಫಲಿತಾಂಶ ಸುಧಾರಣೆಗಾಗಿ ಶಾಲಾವಾರು ಮತ್ತು ತಾಲೂಕುವಾರು ಹಾಗೂ ಜಿಲ್ಲಾವಾರು ಕ್ರಿಯಾಯೋಜನೆಯನ್ನು ತಯಾರಿಸಬೇಕು ಮತ್ತು ಅದರಂತೆ ಕ್ರಮವಹಿಸುವುದರ ಮೂಲಕ ಜಿಲ್ಲೆಯ ಫಲಿತಾಂಶ ಅತ್ಯುತ್ತಮ ಸ್ಥಾನಕ್ಕೇರಲು ಶ್ರಮಿಸಬೇಕು ಎಂದರು.
‘ಬಳ್ಳಾರಿ ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆಯ ಹಣೆಬರಹವನ್ನು ಬದಲಾಯಿಸುವ ಶಕ್ತಿ ಜಿಲ್ಲೆಯ ಶಿಕ್ಷಕರಿಗೆ ಇದೆ’ ಎಂಬ ಘೋಷವಾಕ್ಯದ ಮೂಲಕ ಜಿಲ್ಲೆಯ ಫಲಿತಾಂಶವನ್ನು ರಾಜ್ಯದಲ್ಲಿ ಅತ್ಯುತ್ತಮ ಸ್ಥಾನಕ್ಕೇರಿಸಲು ನಿರಂತರ ಪ್ರಯತ್ನ ಮಾಡಬೇಕು ಸಭೆಯಲ್ಲಿ ಹಾಜರಿದ್ದ ಎಲ್ಲಾ ಅಧಿಕಾರಿಗಳಿಗೆ ಮತ್ತು ಮುಖ್ಯ ಶಿಕ್ಷಕರಿಗೆ ಕಿವಿ ಮಾತು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಚೇರಿಯ ಸಹ ನಿರ್ದೇಶಕ(ಪರೀಕ್ಷೆಗಳು) ಅಮಿತಾ ಯರಗೋಳಕರ್ ಅವರು ಸಭೆಯಲ್ಲಿ ಪ್ರತಿ 15 ದಿನಕ್ಕೊಮ್ಮೆ ಜಿಲ್ಲೆಗೆ ಸಂದರ್ಶನ ನೀಡಿ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಸಮಪರ್ಕ ಮಾರ್ಗದರ್ಶನವನ್ನು ನೀಡುತ್ತಿರುವುದಾಗಿ ಹಾಗೂ ಶಾಲೆಗಳಿಗೆ ಸಂದರ್ಶನ ನೀಡಿ ಕಲಿಕೆಯ ಗುಣಮಟ್ಟ ಪರಿಶೀಲಿಸಿ ಫಲಿತಾಂಶ ಸುಧಾರಣೆಗೆ ಕ್ರಮವಹಿಸುತ್ತಿರುವುದಾಗಿ ವಿವರಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಪ್ಪ ಅವರು ಮಾತನಾಡಿ, ಬಳ್ಳಾರಿ ಜಿಪಂ ಸಿಇಒ ಕೆ.ಆರ್.ನಂದಿನಿ ಅವರ ಸೂಚನೆ ಮೇರೆಗೆ ಫಲಿತಾಂಶ ಸುಧಾರಣೆಗೆ 100 ದಿನಗಳಲ್ಲಿ ವಿಷಯವಾರು ಶಿಕ್ಷಕರು, ಮುಖ್ಯ ಗುರುಗಳು, ಅಧಿಕಾರಿಗಳು ಕೈಗೊಳ್ಳಬಹುದಾದ ಅಗತ್ಯ ಕಾರ್ಯಗಳ ಕುರಿತು ಕ್ರಿಯಾಯೋಜನೆಯನ್ನು ಸಿದ್ದಪಡಿಸಿ ಫೆ.10ರೊಳಗೆ ಸಲ್ಲಿಸಲು ತಿಳಿಸಿದರು.
ಡಯಟ್ ಉಪನಿರ್ದೇಶಕ(ಅಭಿವೃದ್ಧಿ) ಅವರು ಫಲಿತಾಂಶ ಸುಧಾರಣೆಗೆ ಪೂರಕವಾಗಿ ತರಬೇತಿ ಕಾರ್ಯಗಳನ್ನು ನಡೆಸುತ್ತಿರುವುದಾಗಿ ಮತ್ತು ಶಾಲೆಗಳಿಗೆ ಸಂದರ್ಶನ ನೀಡಿ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರು.
ಸದರಿ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅಕ್ಷರ ದಾಸೋಹ ಅಧಿಕಾರಿಗಳು, ಬಿ.ಆರ್.ಸಿ ಗಳು, ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಮುಖ್ಯಶಿಕ್ಷಕರುಗಳು ಭಾಗವಹಿಸದ್ದರು.

LEAVE A REPLY

Please enter your comment!
Please enter your name here