ರಾಷ್ಟ್ರೀಯ ಸ್ವಯಂ ಪ್ರೇರಿತಾ ರಕ್ತದಾನ ದಿನ ಆಚರಣೆ, ರಕ್ತದಾನ ಮಾಡಿ ಇತರರಿಗೆ ಪ್ರೇರಣೆಯಾಗಿ: ಡಾ.ಬಸರೆಡ್ಡಿ

0
91

ಬಳ್ಳಾರಿ,ಅ.08: ರಕ್ತದಾನ ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದದ್ದು, ರಕ್ತ ನೀಡುವ ಮೂಲಕ ಇತರರಿಗೆ ಪ್ರೇರಣೆಯಾಗಿ, ರಕ್ತದಾನ ಬಗ್ಗೆ ಸಾರ್ವಜನಿಕರಲ್ಲಿರುವ ಅಳುಕು, ಅಪನಂಬಿಕೆ ದೂರ ಮಾಡಿ ಅರಿವು ಮೂಡಿಸಿ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಅವರು ಹೇಳಿದರು.
ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಏಡ್ಸ್‍ಪ್ರಿವೆನ್‍ಷನ್ ಸೊಸೈಟಿ, ರಾಜ್ಯ ರಕ್ತ ಚಾಲನ ಪರಿಷತ್, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲೆಯ ರಕ್ತ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಸ್ವಯಂ ಪ್ರೇರಿತಾ ರಕ್ತದಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಇತರರ ಪ್ರಾಣ ಉಳಿಸುವ ಕೆಲಸ ಮಾಡಿ. ಹೆರಿಗೆಯ ಸಮಯದಲ್ಲಿ ರಕ್ತ ನೀಡಿದರೆ, ತಾಯಿ-ಮಗುವಿನ ಜೊತೆಗೆ ಇಡೀ ಕುಟುಂಬದ ಕಷ್ಟ ದೂರ ಮಾಡಿದಂತೆ. ತುರ್ತು ಸಮಯಕ್ಕೆ ನೀವು ನೀಡಿದ ರಕ್ತ ನೆರವಾಗಲಿದೆ ಎಂದರು.
ಜಿಲ್ಲಾಸ್ಪತ್ರೆಯಲ್ಲಿ ಒಂದು ರಕ್ತನಿಧಿ ಕೇಂದ್ರ ಶುರು ಮಾಡಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿದ್ದು, ಸದ್ಯ ಕೋವಿಡ್ ಕಾರಣದಿಂದಾಗಿ ಈ ಕಾರ್ಯ ಹಿಂದಕ್ಕೆ ಸರಿದಿದೆ. ಆದಷ್ಟು ಬೇಗ ಜಿಲ್ಲಾಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಶುರು ಮಾಡಲಾಗುವುದು. ಇದರಿಂದ ತುಂಬಾ ಜನರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಎಲ್ಲಾ ಕಡೆ ಸ್ವಯಂ ಪ್ರೇರಿತಾ ರಕ್ತದಾನ ಶಿಬಿರ ನಡೆಸಿ, ರಕ್ತಸಂಗ್ರಹಿಸುವ ಕಾರ್ಯ ಹೀಗೆ ನಿರಂತರವಾಗಿ ಸಾಗಲಿ. ಹಲವರಿಗೆ ನಿಮ್ಮ ಸಂಸ್ಥೆಗಳಿಂದ ರಕ್ತ ನೀಡಿ ಜೀವ ಉಳಿಸಲು ಮುಂದಾಗಿ ಎಂದು ಹೇಳಿದ ಅವರು ಕೋವಿಡ್ ಮಧ್ಯೆಯೂ ರಕ್ತ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ ಅವರು ಮಾತನಾಡಿ ರಕ್ತ ಸಂಗ್ರಹಣೆ ಕಾರ್ಯ ಅತ್ಯಂತ ಮಹತ್ವದ್ದು, ರಕ್ತದ ಪೂರೈಕೆಗೆ ಮೊದಲಿಗಿಂತ ಈಗ ಜಾಸ್ತಿಯೇ ಬೇಡಿಕೆಯಿದೆ. ರಕ್ತ ಸಂಗ್ರಹಣೆ ಕಾರ್ಯ ಒಂದು ದಿನಕ್ಕೆ ಸೀಮಿತವಾಗದಿರಲಿ ಎಂದರು.
ಜಿಲ್ಲೆಯಲ್ಲಿ ಹೆರಿಗೆಗಾಗಿ ನೊಂದಣಿಯಾಗುವ ಶೆ.50ರಷ್ಟು ಮಹಿಳೆಯರಲ್ಲಿ ರಕ್ತದ ಅಭಾವವಿರುತ್ತದೆ. ಆ ಗರ್ಭಿಣಿ ಹೆಣ್ಣು ಮಕ್ಕಳಿಗೆ ತುರ್ತು ಸಂದರ್ಭದಲ್ಲಿ ರಕ್ತ ಪೂರೈಸುವುದು ಕಷ್ಟವಾಗುತ್ತಿದೆ. ರಕ್ತ ಸಂಗ್ರಹಸಿದಷ್ಟು ಬೇಗ ಪೂರೈಸಲು ಸಹಾಯಕವಾಗಲಿದ್ದು, ಜಿಲ್ಲೆಯ ಅಧಿಕಾರಿಗಳು, ಸಂಸ್ಥೆಗಳು ಈ ನಿಟ್ಟಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರಕ್ತಸಂಗ್ರಹಣೆಯಲ್ಲಿ ಕಾರ್ಯಪ್ರವೃತ್ತರಾಗಿ ಎಂದರು.
ನಮ್ಮ ಜಿಲ್ಲೆಗೆ 30 ಸಾವಿರ ಯುನಿಟ್ ರಕ್ತ ಬೇಕಾಗಿದ್ದು, ಕೋವಿಡ್ ಕಾರಣದಿಂದಾಗಿ ರಕ್ತ ಸಂಗ್ರಹ ಕಾರ್ಯ ಹಿಂದೆ ಬಿದ್ದಿದೆ. ಜನರ ಲಕ್ಷ್ಯವನ್ನು ರಕ್ತದಾನದತ್ತ ಸೆಳೆದು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವಂತೆ ಪ್ರೇರಿಪಿಸಿ, ಯುವಜನರಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸಿ ಎಂದು ಅವರು ತಿಳಿಸಿದರು.
ಈ ಸಮಯದಲ್ಲಿ 100 ಕ್ಕಿಂತ ರಕ್ತದ ಚೀಲ ಸಂಗ್ರಹಿಸಿದ 15 ಸಂಸ್ಥೆಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಮೋಹನ್ ಕುಮಾರಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನೆ, ಹಿರಿಯ ವೈದ್ಯಾಧಿಕಾರಿಗಳಾದ ದಿನೇಶ್ ಗುಡಿ, ಉದಯ್ ಕುಮಾರ್ ಮತ್ತು ಜಿಲ್ಲಾಸ್ಪತ್ರೆಯ ಸಿಬ್ಬಂದಿ ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here