ಬರ ಪರಿಹಾರ; 36944 ರೈತರಿಗೆ ರೂ.7.26 ಕೋಟಿ ಪಾವತಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾಹಿತಿ

0
58

ಬಳ್ಳಾರಿ,ಫೆ.14:ಕಳೆದ 2023-24ರ ಖಾರಿಫ್ ಅವಧಿಯಲ್ಲಿ ಬರದಿಂದಾಗಿ ಬೆಳೆ ನಷ್ಟ ಅನುಭವಿಸಿದ ಜಿಲ್ಲೆಯ 36944 ರೈತರಿಗೆ ರಾಜ್ಯ ಸರ್ಕಾರವು ರೂ.2000 ದಂತೆ ಮೊದಲ ಬ್ಯಾಚ್‍ನ ಬರ ಪರಿಹಾರ ಹಣ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿರುವ ರೈತರನ್ನು ಏಳು ಬ್ಯಾಚ್‍ಗಳಲ್ಲಿ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಮೊದಲ ಬ್ಯಾಚ್‍ನ 36944 ರೈತರಿಗೆ ಒಟ್ಟು 7,26,91,598 ರೂ. ಬರ ಪರಿಹಾರ ಹಣ ಜಮೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಹಣ ಜಮೆಯಾಗಲಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಐದು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಮಳೆಯಾಶ್ರಿತ 29636.02 ಹೆಕ್ಟೇರ್ ಪ್ರದೇಶದಲ್ಲಿ ಮತ್ತು 11254.58 ಹೆಕ್ಟೇರ್ ನೀರಾವರಿ ಆಶ್ರಿತ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಪ್ರೂಟ್ಸ್ ತಂತ್ರಾಂಶದಿಂದ ಪಡೆದ ಬೆಳೆ ನಷ್ಟ ಮಾಹಿತಿ ಆಧಾರದಲ್ಲಿ ಕಂದಾಯ ಇಲಾಖೆಯ ಪರಿಹಾರ ತಂತ್ರಾಂಶ ಮೂಲಕ ಬರ ಪರಿಹಾರ ನೀಡಲಾಗಿದೆ ಎಂದರು.

ತಾಲ್ಲೂಕುವಾರು ಬರಪರಿಹಾರ ಮಾಹಿತಿ:
ಸಿರುಗುಪ್ಪ ತಾಲ್ಲೂಕಿನಲ್ಲಿ 21660 ಫಲಾನುಭವಿಗಳಿಗೆ ರೂ.2000 ದಂತೆ ರೂ.4.28 ಕೋಟಿ ಪಾವತಿಯಾಗಿದೆ. ಬಳ್ಳಾರಿ ತಾಲ್ಲೂಕಿನಲ್ಲಿ 2682 ಫಲಾನುಭವಿಗಳಿಗೆ 52.38 ಲಕ್ಷ ರೂ., ಸಂಡೂರು ತಾಲ್ಲೂಕಿನ 11779 ಮಂದಿಗೆ ರೂ.2.30 ಕೋಟಿ, ಕುರುಗೋಡು ತಾಲ್ಲೂಕಿನಲ್ಲಿ 383 ಫಲಾನುಭವಿಗಳಿಗೆ ರೂ.7.30 ಲಕ್ಷ ಮತ್ತು ಕಂಪ್ಲಿ ತಾಲ್ಲೂಕಿನ 440 ಮಂದಿಗೆ 8.34 ಲಕ್ಷ ಪರಿಹಾರ ಹಣ ಜಮೆಯಾಗಿದೆ.
ಕೇಂದ್ರದಿಂದ ಎನ್‍ಡಿಆರ್‍ಎಫ್ ಅಡಿ ಬರ ಪರಿಹಾರ ಬರಬೇಕಾಗಿದ್ದು, ರಾಜ್ಯ ಸರ್ಕಾರವೇ ಪ್ರತಿ ಹೆಕ್ಟೇರ್‍ಗೆ ರೂ.2000 ಬಿಡುಗಡೆ ಮಾಡಿದೆ. ಕೇಂದ್ರದಿಂದ ಹಣ ಬಂದ ನಂತರ ಇನ್ನಷ್ಟು ಬರ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಬರ ಪರಿಹಾರ ಪಡೆದವರ ಮಾಹಿತಿ, ನಾಡಕಚೇರಿಗಳು ಹಾಗೂ ಆಯಾ ಗ್ರಾಮ ಪಂಚಾಯಿತಿಯ ಮಾಹಿತಿ ಫಲಕಗಳಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರು ಉಲ್ಬಣಗೊಳ್ಳದಂತೆ ಜಿಲ್ಲಾಡಳಿತ ಅಗತ್ಯ ಕ್ರಮ:
ಸಂಭವನೀಯ ಸಮಸ್ಯಾತ್ಮಕ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಕಂಡುಬರುವ ಹಳ್ಳಿಗಳಲ್ಲಿ ಈಗಾಗಲೇ ಬಾಡಿಗೆ ಬೋರ್‍ವೆಲ್‍ಗಳ ಮೂಲಕ ನೀರು ಪೂರೈಕೆ ಮಾಡಲು ಕ್ರಮ ವಹಿಸಲಾಗಿದೆ. ಜಿಲ್ಲೆಯ ಜಾನುವಾರುಗಳಿಗೆ 24 ವಾರಕ್ಕೆ ಆಗುವಷ್ಟು ಮೇವಿನ ಲಭ್ಯತೆ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಜಾತ್ರೆ, ಹಬ್ಬ ಆರಂಭವಾಗಲಿದ್ದು, ಆಯಾ ವ್ಯಾಪ್ತಿಯ ಗ್ರಾಮಗಳ ಕೆರೆಗಳಲ್ಲಿ ಕುಡಿಯುವ ನೀರನ್ನು ಮಿತವಾಗಿ ಬಳಸಬೇಕು ಎಂದು ಹೇಳಿದರು.
ಬರುವ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆಯನ್ನು ಮುಂಚೂಣಿಯಲ್ಲಿರಿಸಲು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಜಿಪಂ ವತಿಯಿಂದ ‘ಪ್ರತಿಬಿಂಬ’ ಮತ್ತು ಕೆಕೆಆರ್‍ಡಿಬಿ ವತಿಯಿಂದ ‘ಕಲಿಕಾ ಆಸರೆ’ ಕಾರ್ಯಕ್ರಮದಡಿ 6 ವಿಷಯಗಳುಳ್ಳ ಪುಸ್ತಕಗಳನ್ನು ವಿತರಿಸಲಾಗಿದೆ. ಎರಡು ಬಾರಿ ಪೂರ್ವ ಸಿದ್ಧತಾ ಪರೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶ್ ಸೇರಿದಂತೆ ಮತ್ತೀತರರು ಇದ್ದರು.

LEAVE A REPLY

Please enter your comment!
Please enter your name here