ಈದ್ಗಾ ಮೈದಾನದಲ್ಲಿ ಪ್ರಾರ್ಥನೆಗೆ ಅವಕಾಶವಿಲ್ಲ ; ಮಸೀದಿಗಳಲ್ಲಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಡ್ಡಾಯ : ಎಸ್‍ಪಿ ವರ್ತಿಕಾ ಕಟಿಯಾರ

0
236

ಧಾರವಾಡ ಜುಲೈ 29: ಬರುವ ಆಗಸ್ಟ್ 1 ರಂದು ಬಕ್ರೀದ್ ಹಬ್ಬವಿದ್ದು, ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಸರ್ಕಾರದ ಆದೇಶದಂತೆ ಮಸೀದಿಗಳಲ್ಲಿ ಪ್ರತಿಯೊಬ್ಬರು ಪ್ರಾರ್ಥನೆಗೆ ಬರುವಾಗ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು. ಮತ್ತು ಪರಸ್ಪರ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಹೇಳಿದರು.

ಅವರು ಇಂದು ಬೆಳಿಗ್ಗೆ ಪೊಲೀಸ್ ಹೆಡ್‍ಕ್ವಾರ್ಟಸ್‍ನ ದುರ್ಗಾದೇವಿ ದೇವಸ್ಥಾನ ಸಮುದಾಯ ಭವನದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೊರೊನಾ ವೈರಸ್ ಎಲ್ಲೆಡೆ ಹರಡುತ್ತಿದೆ. ಪೊಲೀಸ್ ಇಲಾಖೆ ಸಿಬ್ಬಂದಿ ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಲಾಖೆಯ ಇಬ್ಬರು ಪಿಎಸ್‍ಐ ಹಾಗೂ 15 ಜನ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸಾರ್ವಜನಿಕರ ರಕ್ಷಣೆಗಾಗಿ ಸದಾ ಶ್ರಮಿಸುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗೂ ಕೊರೊನಾ ಬರುತ್ತಿರುವುದು ಚಿಂತೆಗೀಡು ಮಾಡಿದೆ ಎಂದು ಅವರು ಹೇಳಿದರು.

ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಪರಸ್ಪರ ಸೌಹಾರ್ದತೆಯಿಂದ ವರ್ತಿಸಬೇಕು. ಸರ್ಕಾರ ನೀಡಿರುವ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದರು.

ಸರ್ಕಾರದ ಆದೇಶದಂತೆ ಈದ್ಗಾ ಮೈದಾನದಲ್ಲಿ ಪ್ರಾರ್ಥನೆಗೆ ಅವಕಾಶವಿಲ್ಲ. ಆಯಾ ಮಸೀದಿಗಳ ಮುಖ್ಯಸ್ಥರು ಸ್ಯಾನಿಟೈಸರ್, ಮ್ಯಾಟ್, ಮಾಸ್ಕ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಮಸೀದಿಯ ಮೈಕ್‍ಗಳ ಮೂಲಕ ಪ್ರಚುರ ಪಡಿಸಬೇಕು.

ಹೆಚ್ಚು ಜನ ಸೇರುವ ಸಾಧ್ಯತೆ ಇದ್ದಲ್ಲಿ, ಪ್ರತಿ ಬ್ಯಾಚ್‍ಗೆ ಗರಿಷ್ಠ 50 ಜನರು ಪ್ರಾರ್ಥನೆ ಸಲ್ಲಿಸುವಂತೆ ಅವಕಾಶ ಮಾಡಿಕೊಂಡು, ಮುಂಚಿತವಾಗಿ ಎಲ್ಲರಿಗೂ ತಿಳಿಸಬೇಕು. ತಂಡಗಳನ್ನು ಮಾಡಿ ಕನಿಷ್ಠ 6 ಫೀಟ್ ಅಂತರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸುವಂತೆ ತಿಳುವಳಿಕೆ ನೀಡಬೇಕೆಂದು ಎಸ್‍ಪಿ ಹೇಳಿದರು.

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಪ್ರಾಣಿ ಸಾಗಾಣಿಕೆ ಕಂಡು ಬಂದಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ ಜಿಲ್ಲಾ ಕಂಟ್ರೋಲ್‍ರೂಂಗೆ ಕರೆ ಮಾಡಿ ತಿಳಿಸಬೇಕು. ಮತ್ತು ಯಾವುದೇ ವ್ಯಕ್ತಿ, ಗುಂಪು ಕಾನೂನು ಕೈಗೆತ್ತಿಕೊಂಡರೆ ಅವರ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳುವುದಾಗಿ ಎಸ್‍ಪಿ ಎಚ್ಚರಿಕೆ ನೀಡಿದರು.

ಬಕ್ರೀದ್ ಹಬ್ಬದ ದಿನ ಮಸೀದಿಗಳ ಮುಂದೆ ನಿಯಮಗಳ ಪಾಲನೆ ಹಾಗೂ ಪ್ರಾರ್ಥನೆಗೆ ಸುಗಮವಾಗುವಂತೆ ಪೊಲೀಸ್‍ರೊಂದಿಗೆ ಸ್ವಯಂ ಸೇವಕರು ಕೈ ಜೋಡಿಸಲಿ, ಈ ಹಿನ್ನೆಲೆಯಲ್ಲಿ ಆಯಾ ಮಸೀದಿ ಮುಖ್ಯಸ್ಥರು 5-6 ಜನ ಸ್ವಯಂ ಸೇವಕರನ್ನು ನೇಮಿಸಬೇಕೆಂದು ಎಸ್‍ಪಿ ತಿಳಿಸಿದರು.

ಸಭೆಯಲ್ಲಿ ಉಪ್ಪಿನಬೆಟಗೇರಿ, ಅಳ್ನಾವರ, ಅಣ್ನಿಗೇರಿ, ಕುಂದಗೋಳ, ಹೆಬ್ಬಳ್ಳಿ, ಅಂಜುಮನ್ ಸಂಸ್ಥೆಗಳ ಪ್ರತಿನಿಧಿಗಳು, ಕಿರೇಸೂರ, ಹೆಬಸೂರ, ರೈತಸಂಘ, ಪಶುಪತಿಹಾಳ ಗ್ರಾಮದೇವರ ಸಮಿತಿ, ಮಿಶ್ರಕೋಟಿ, ನಿಗದಿ, ನರೇಂದ್ರ, ಅಮ್ಮಿನಭಾವಿ ಸೇರಿದಂತೆ ವಿವಿಧ ಗ್ರಾಮಗಳ ಹಿಂದೂ ಹಾಗೂ ಮುಸ್ಲಿಂ ಮುಖಂಡರು ಭಾಗವಹಿಸಿ, ಮಾತನಾಡಿದರು.

ಧಾರವಾಡ ಜಿಲ್ಲೆಯ ಏಳು ತಾಲೂಕಿನ ಗ್ರಾಮ, ಹೋಬಳಿ ಹಾಗೂ ತಾಲೂಕಾ ಶಾಂತಿ ಸಭೆಯ ಸುಮಾರು 60 ಕ್ಕೂ ಹೆಚ್ಚು ಮುಖಂಡರು ಸಭೆಯಲ್ಲಿದ್ದರು.

ಡಿವೈಎಸ್‍ಪಿ ರವಿ ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಎಆರ್ ವಿಭಾಗದ ಡಿಎಸ್‍ಪಿ ಶಿವಾನಂದ ಸಿ.ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭೆಯಲ್ಲಿ ಸಿಪಿಐಗಳಾದ ಎಸ್.ಸಿ. ಪಾಟೀಲ, ವಿಜಯ ಬಿರಾದಾರ, ರಮೇಶ ಗೋಕಾಕ, ಬಸವರಾಜ ಕಲ್ಲಮ್ಮನವರ, ಪಿಎಸ್‍ಐಗಳಾದ ಮಹೇಂದ್ರಕುಮಾರ ನಾಯ್ಕ್, ಜೂಲಕಟ್ಟಿ, ಜಯಪಾಲ ಮತ್ತು ಮಂಜುಳಾ ಸೇರಿದಂತೆ ಎಲ್ಲ ಪೊಲೀಸ್ ಠಾಣೆಯ ಅಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here