ಸಾಕ್ಷ್ಯಾಧಾರಗಳ ಸಹಾಯದಿಂದ ಅಪರಾಧಿಗೆ ಶಿಕ್ಷೆ ವಿಧಿಸಲು ಸಾಧ್ಯವಾಗುತ್ತದೆ. 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗಂಗಾಧರ ಸಿ.ಎಂ

0
87

ಧಾರವಾಡ.ಫೆ.18: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಗುವಿನ ಹೇಳಿಕೆಗಳ ದಾಖಲೆ ಕ್ರೋಢಿಕರಿಸುವುದು, ಸರಿಯಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವುದು ಪೊಲೀಸ್ ಇಲಾಖೆಯ ಕಾರ್ಯವಾಗಿದ್ದು, ಆಗ ಮಾತ್ರ ಒಬ್ಬ ಅಪರಾಧಿಗೆ ಶಿಕ್ಷೆ ಕೊಡಲು ಸಾಧ್ಯವಾಗುತ್ತದೆ ಎಂದು 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗಂಗಾಧರ ಸಿ.ಎಮ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಇತ್ತೀಚೆಗೆ (ಫೆ.17ರಂದು) ಸಿವಿಲ್ ನ್ಯಾಯಾಲಯಗಳ ಆವರಣದ ಎ.ಡಿ.ಆರ್ ಕಟ್ಟಡದಲ್ಲಿ, ಪೊಲೀಸ್ ಆಯುಕ್ತರ ಅಧೀನದಲ್ಲಿ ಬರುವ ಎಲ್ಲಾ ಪೊಲೀಸ್ ಠಾಣೆಗಳ ವಿಶೇಷ ಮಕ್ಕಳ ಪೊಲೀಸ ಘಟಕದ ಅಧಿಕಾರಿಗಳಿಗೆ ಬಾಲನ್ಯಾಯ ಕಾಯ್ದೆ, ಪೋಕ್ಸೊ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮಕ್ಕಳ ಮಾರಾಟ ತಡೆ ಕಾಯ್ದೆ ಮತ್ತು ದತ್ತು ಮಾರ್ಗಸೂಚಿಯ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖಾ ಸಮಯದಲ್ಲಿ ಕಂಡು ಬರುವ ನ್ಯೂನ್ಯತೆಗಳ ಬಗ್ಗೆ ಸರ್ವೋಚ್ಛ ನ್ಯಾಯಾಲಯವು ಮೇಲ್ವಿಚಾರಣೆ ನಡೆಸುತ್ತಿದೆ. ಪೊಲೀಸ್ ಇಲಾಖೆಯ ಸಹಕಾರವು ಅತೀ ಮುಖ್ಯವಾಗಿದ್ದು, ನಿಜವಾದ ಅಪರಾಧಿಗಳಿಗೆ ಶಿಕ್ಷೆ ಆಗುವಂತೆ ಎಲ್ಲರೂ ಪ್ರಯತ್ನಿಸಬೇಕೆಂದು ಅವರು ಹೇಳಿದರು.
ಧಾರವಾಡ 4ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಬಾಲನ್ಯಾಯ ಮಂಡಳಿ ಅಧ್ಯಕ್ಷ ನಿತೀನ್ ಯಶವಂತರಾವ್ ಮಾತನಾಡಿ, ಮಕ್ಕಳನ್ನು ಪ್ರೀತಿಯಿಂದ ಆಪ್ತಸಮಾಲೋಚನೆಗೆ ಒಳಪಡಿಸಬೇಕು. ಅಂದಾಗ ಮಾತ್ರ ನಾವು ಮಗುವಿಗೆ ನ್ಯಾಯ ಕೊಡಿಸಲು ಸಾಧ್ಯವಾಗುತ್ತದೆ ಎಂದರು.

ರಾಜ್ಯ ವಕೀಲರ ಪರಿಷತ್ ಸದಸ್ಯ ವಿ.ಡಿ. ಕಾಮರೆಡ್ಡಿ ಮಾತನಾಡಿ, ಪೊಲೀಸ್ ಅಧಿಕಾರಿಗಳು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಸರಿಯಾದ ತನಿಖೆ ನಡೆಸಿ ಚಾರ್ಜಶೀಟ್ ಸಲ್ಲಿಸಿದಾಗ ಮಾತ್ರ ನಿಜವಾದ ಅಪರಾಧಿಗೆ ಶಿಕ್ಷೆ ವಿಧಿಸಿ, ಮಗುವನ್ನು ರಕ್ಷಿಸಬಹುದು ಎಂದು ಹೇಳಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ ಮಾತನಾಡಿ, ಯಾವುದೇ ಮಗುವಿಗೆ ಪಾಲನೆ, ಪೋಷಣೆಯ ಅವಶ್ಯಕತೆ ಇದ್ದಲ್ಲಿ, ಆ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಕಡ್ಡಾಯವಾಗಿ ಹಾಜರುಪಡಿಸಬೇಕು. ಅಂತಹ ಮಗುವಿಗೆ ನ್ಯಾಯ ಹಾಗೂ ರಕ್ಷಣೆ ಕೊಡಿಸುವಲ್ಲಿ ಪೊಲೀಸ್ ಅಧಿಕಾರಿಗಳ ಸಹಕಾರ ಅತೀ ಅವಶ್ಯ ಎಂದು ತಿಳಿಸಿದರು.
ರಾಜ್ಯ ವಕೀಲರ ಪರಿಷತ್ ಸದಸ್ಯ ಆನಂದ ಮಗದುಮ್ ಮಾತನಾಡಿ, ಬಾಲನ್ಯಾಯ ಕಾಯ್ದೆ, ಪೋಕ್ಸೊ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮಕ್ಕಳ ಮಾರಾಟ ತಡೆ ಕಾಯ್ದೆ ಮತ್ತು ದತ್ತು ಮಾರ್ಗಸೂಚಿಯ ಕುರಿತು ಕಾರ್ಯಾಗಾರವು ಪೊಲೀಸ್ ಇಲಾಖೆಗೆ ಅತೀ ಮುಖ್ಯವಾಗಿದ್ದು, ಇಲಾಖೆಯ ಅಧಿಕಾರಿಗಳು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಶೆಟ್ಟರ ಮಾತನಾಡಿ, ಬಾಲನ್ಯಾಯ ಕಾಯ್ದೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗಳ ಕುರಿತು ಹೆಚ್ಚಿನ ತಿಳುವಳಿಕೆ ಪಡೆದು ವಿವಿಧ ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳನ್ನು, ರಕ್ಷಿಸಿ ಅವರಿಗೆ ಪುನರ್ವಸತಿ ನೀಡುವ ಕಾರ್ಯದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಪೊಲೀಸ್ ಇಲಾಖೆ ಸಹಾಯ, ಸಹಕಾರ ನೀಡಬೇಕೆಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್.ಚಿನ್ನಣ್ಣನವರ ಅವರು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಲ್ಲಿ ಸಂತ್ರಸ್ತರ ಪರಿಹಾರ ನಿಧಿ ಕುರಿತು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನೂರಜಹಾನ್ ಕಿಲ್ಲೇದಾರ ಅವರು ಪೋಕ್ಸೊ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆಗಳ ಕುರಿತು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಪ್ರಕಾಶ ಕೊಡ್ಲಿವಾಡ ಅವರು ಬಾಲನ್ಯಾಯ ಕಾಯ್ದೆ, ಮಕ್ಕಳ ಮಾರಾಟ ತಡೆ ಕಾಯ್ದೆ ಮತ್ತು ದತ್ತು ಮಾರ್ಗಸೂಚಿಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಾಗಾರದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಗೋಡಸೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿ.ಎ.ಪಾಟೀಲ, ಮಕ್ಕಳ ಕಲ್ಯಾಣ ಸಮಿತಿ ಮತ್ತು ಬಾಲನ್ಯಾಯ ಮಂಡಳಿ ಸದಸ್ಯರು, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಪಾಲ್ಗೋಂಡಿದ್ದರು. ಮಹಮ್ಮದ ಅಲಿ ತಹಶೀಲ್ದಾರ ಕಾರ್ಯಕ್ರಮ ನಿರೂಪಿಸಿದರು. ಕರೆಪ್ಪ ಕೌಜಲಗಿ ವಂದಿಸಿದರು.

LEAVE A REPLY

Please enter your comment!
Please enter your name here