ಕಳೆದ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆಯೋಜನೆಯ ಅನುಭವ ಆಧರಿಸಿ ಪ್ರಸಕ್ತ ಸಾಲಿನ ಪರೀಕ್ಷೆಗೆ ಮಕ್ಕಳನ್ನು ಅಣಿಗೊಳಿಸಿ- ಸಚಿವ ಎಸ್. ಸುರೇಶ್‍ಕುಮಾರ್

0
58

ಧಾರವಾಡ ಏ.06: ಕಳೆದ 2019-20ನೇ ಸಾಲಿನಲ್ಲಿ ಕೊರೊನಾದ ಪ್ರಾರಂಭಿಕ ಘಟ್ಟದಲ್ಲಿ ಯಶಸ್ವಿಯಾಗಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಆಯೋಜಿಸಿದ್ದೇವೆ. ಅಲ್ಲಿನ ಸಾಮಥ್ರ್ಯ, ದೌರ್ಬಲ್ಯಗಳನ್ನು (SWOT – Strength Weakness Opportunity Theory)
ಆಧರಿಸಿ ಪ್ರಸಕ್ತ ಸಾಲಿನ 2020-21 ರ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಆಯೋಜಿಸಬೇಕು. 1 ರಿಂದ 9ನೇ ತರಗತಿವರೆಗಿನ ಪರೀಕ್ಷೆಗಳನ್ನು ನಡೆಸುವ ಕುರಿತು ಒಂದು ವಾರದೊಳಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ, ಸಕಾಲ ಹಾಗೂ ಕಾರ್ಮಿಕ ಸಚಿವರಾದ ಎಸ್. ಸುರೇಶಕುಮಾರ್ ಹೇಳಿದರು.

ಧಾರವಾಡದ ಡಯಟ್ ಸಭಾಂಗಣದಲ್ಲಿ ಇಂದು ಬೆಳಗಾವಿ ವಿಭಾಗದ ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಶಿರಸಿ, ಗದಗ ಮತ್ತು ಹಾವೇರಿ ಶೈಕ್ಷಣಿಕ ಜಿಲ್ಲೆಗಳ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷಾ ಪೂರ್ವಸಿದ್ಧತಾ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ವರ್ಷ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿ ಇತಿಹಾಸ ಸೃಷ್ಟಿ ಮಾಡಿದ ಕೀರ್ತಿಯು ಇಲಾಖೆಯ ಸಮಸ್ತ ತಂಡಕ್ಕೆ ಸಲ್ಲುತ್ತದೆ. ಶಿಕ್ಷಣ ಇಲಾಖೆಯೊಂದಿಗೆ ಸಾರಿಗೆ, ಕಂದಾಯ, ಆರೋಗ್ಯ ಇಲಾಖೆಗಳು ಕೈಜೋಡಿಸಿ ಈ ಯಶಸ್ಸಿಗೆ ಕಾರಣವಾಗಿದ್ದವು. ಕೇಂದ್ರ ಲೋಕಸೇವಾ ಆಯೋಗವು ತನ್ನ ಪರೀಕ್ಷೆಗಳನ್ನು ಆಯೋಜಿಸುವ ಸಂದರ್ಭದಲ್ಲಿ ಕರ್ನಾಟಕದ ಪರೀಕ್ಷೆಗಳನ್ನು ಮಾದರಿಯಾಗಿ ಪರಿಗಣಿಸುವಂತೆ ಸೂಚಿಸಿತ್ತು ಇದು ಹೆಮ್ಮೆಯ ಸಂಗತಿಯಾಗಿದೆ. ಶಿಕ್ಷಣ ಇಲಾಖೆಯ ಹಾಗೂ ರಾಜ್ಯದ ಗೌರವ ಹೆಚ್ಚಿಸಿದೆ. ಕಳೆದ ವರ್ಷ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ತರಗತಿಗಳಲ್ಲಿ ನೇರವಾಗಿ ಪಾಠಗಳನ್ನು ಆಲಿಸಿದ್ದರು. ಈ ಬಾರಿ ಮಕ್ಕಳಿಗೆ ಕೇವಲ ಆನ್‍ಲೈನ್ ಪಾಠಗಳನ್ನು ನೀಡಲಾಗಿದೆ. ಕಳೆದ ಜನವರಿ 9 ರಿಂದ ನೇರವಾದ ತರಗತಿಗಳು ನಡೆಯುತ್ತಿವೆ. ಇನ್ನು 75 ದಿನಗಳು ಪರೀಕ್ಷೆಗೆ ಬಾಕಿ ಇವೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ, ಸಾಮಥ್ರ್ಯ ಹೆಚ್ಚಿಸುವ ಕಾರ್ಯಗಳು ದೊಡ್ಡ ಪ್ರಮಾಣದಲ್ಲಿ ನಡೆಯಬೇಕು. ಪರೀಕ್ಷೆ ಆಯೋಜನೆ ಕುರಿತು ಕಳೆದ ವರ್ಷ ನೀಡಿದ ಮಾರ್ಗಸೂಚಿಗಳನ್ನು ಅಲ್ಪಪ್ರಮಾಣದಲ್ಲಿ ಪರಿಷ್ಕರಿಸಿ ನೀಡಲಾಗುವುದು. ಅವುಗಳನ್ನು ಎಲ್ಲ ಜಿಲ್ಲೆಗಳ ಡಿಡಿಪಿಐ, ಡಿಡಿಪಿಯು ಹಾಗೂ ಬಿಇಓ ಗಳು ಕಾರ್ಯಗತಗೊಳಿಸಬೇಕು. ಉಳಿದ ಇಲಾಖೆಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರೇತರ ಅಭಿವೃದ್ಧಿ ಸಂಸ್ಥೆಗಳ ಸಹಕಾರ ಪಡೆಯಬೇಕು. ನಾಳೆಯಿಂದ ಸಾರಿಗೆ ನೌಕರರ ಮುಷ್ಕರವೂ ನಡೆಯಲಿರುವುದರಿಂದ ವಿದ್ಯಾರ್ಥಿಗಳ ಹಾಜರಾತಿಗೆ ತೊಂದರೆಯಾಗದಂತೆ ಪರ್ಯಾಯ ಕ್ರಮಗಳನ್ನು ಸ್ಥಳೀಯ ಜಿಲ್ಲಾಡಳಿತ ಸಂಪರ್ಕಿಸಿ ಕಂಡುಕೊಳ್ಳಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ, ಪ್ರೌಢಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುವಲ್ಲಿ ಮುಖ್ಯೋಪಾಧ್ಯಾಯರ ಪಾತ್ರ ಪ್ರಮುಖವಾಗಿದೆ. ಮುಖ್ಯೋಪಾಧ್ಯಾಯರು ಹಾಗೂ ಸಹಶಿಕ್ಷಕರ ನಡುವೆ ಉತ್ತಮ ಸಂಬಂಧ ಇರಬೇಕು. ಶಿಕ್ಷಕರ ವಿಷಯವಾರು ದಿನಚರಿಗಳನ್ನು ಪ್ರತಿನಿತ್ಯ ಪರಿಶೀಲಿಸಿ ಈ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಮುಖ್ಯೋಪಾಧ್ಯಾಯರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಈಗ ಪುನ: ಏಪ್ರಿಲ್ 20 ರ ವರೆಗೆ 6 ರಿಂದ 9ನೇ ತರಗತಿಗಳಿಗೆ ವಿನಾಯಿತಿ ನೀಡಿರುವುದರಿಂದ ಈ ಅವಧಿಯಲ್ಲಿ ಶಿಕ್ಷಕರಿಗೆ ಆನ್‍ಲೈನ್ ತರಬೇತಿ ನೀಡಿ ಸಾಮಥ್ರ್ಯ ಹೆಚ್ಚಳಕ್ಕೆ ಒತ್ತು ನೀಡಬೇಕು. ಕ್ಲಸ್ಟರ್‍ವಾರು ತರಬೇತಿಗಳನ್ನು ಯೋಜಿಸಬೇಕು. ಕಲಿಕೆ ಮತ್ತು ಮೌಲ್ಯಮಾಪನ ನಿರಂತರವಾಗಿರಬೇಕು. ಶಿಕ್ಷಕರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು. ಶಿಕ್ಷಕರ ಗೌರವವು ಅವರ ಸಾಮಥ್ರ್ಯ ಹಾಗೂ ಗುಣಮಟ್ಟ ಆಧರಿಸಿದೆ ಎಂದರು.

ಪರೀಕ್ಷೆಗಳ ಮೂಲಕ ಪ್ರತಿಭೆಗಳ ಅನಾವರಣ : ಪರೀಕ್ಷೆಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಓರೆಗೆ ಹಚ್ಚಲು ಅತ್ಯಗತ್ಯ. ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳಲ್ಲಿ ಬೆಂಗಳೂರಿನ ಕೊಳಚೆ ಪ್ರದೇಶವೊಂದರಲ್ಲಿ ನೆಲೆಸಿರುವ ಯಾದಗಿರಿ ಜಿಲ್ಲೆಯ ಕಟ್ಟಡ ಕಾರ್ಮಿಕ ಕುಟುಂಬವೊಂದರ ಮಹೇಶ್ ಎಂಬ ಬಡವಿದ್ಯಾರ್ಥಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ 625 ಕ್ಕೆ 616 ಅಂಕ ಗಳಿಸಿದ್ದರು. ಆತನ ಮನೆಗೆ ನಾನು ಭೇಟಿ ನೀಡಿದ ಬಳಿಕ ಪ್ರತಿಷ್ಠಿತ ಕಾಲೇಜು ಆತನ ಮುಂದಿನ ಎಲ್ಲ ಶೈಕ್ಷಣಿಕ ವೆಚ್ಚ ಭರಿಸಿ ಉಚಿತ ಶಿಕ್ಷಣ ನೀಡಲು ಮುಂದೆ ಬಂದು ಪ್ರವೇಶ ನೀಡಿದೆ. ಬಾಗಲಕೋಟ ಜಿಲ್ಲೆಯ ಸಾವಳಗಿ ಗ್ರಾಮದ ಸಂಜಯ ಬಿರಾದಾರ ಎನ್ನುವ ಬಡ ವಿದ್ಯಾರ್ಥಿ 625 ಕ್ಕೆ 618 ಅಂಕ ಗಳಿಸಿ ಉತ್ತೀರ್ಣನಾಗಿದ್ದ. ಆ ವಿದ್ಯಾರ್ಥಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಾಗ ಅದನ್ನು ಗುರುತಿಸಿ ಇನ್‍ಫೋಸಿಸ್ ಫೌಂಡೇಶನ್ನಿನ ಸುಧಾಮೂರ್ತಿ ಅವರು ರೂ.50,000/- ಗಳ ನೆರವು ನೀಡಿದರು. ಬಾಗಲಕೋಟ ಜಿಲ್ಲಾಧಿಕಾರಿಗಳು ಆ ವಿದ್ಯಾರ್ಥಿಯ ಪಾಲಕರಿಗೆ ಆಶ್ರಯ ಮನೆ ಮಂಜೂರು ಮಾಡಿಕೊಟ್ಟರು. ಒಂದು ವೇಳೆ ಪರೀಕ್ಷೆ ನಡೆಸದಿದ್ದರೆ ಇಂತಹ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಸಚಿವ ಎಸ್. ಸುರೇಶ್‍ಕುಮಾರ್ ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಬೆಳಗಾವಿ ಡಯಟ್ ಪ್ರಕಟಿಸಿರುವ ಶಿಕ್ಷಣ ಸಂಪದ ಕೃತಿ ಹಾಗೂ ಸಿಸ್ಲೆಪ್ ಲಾಂಛನ ಬಿಡುಗಡೆ ಮಾಡಿದರು. ವಿವಿಧ ಜಿಲ್ಲೆಗಳ ಡಿಡಿಪಿಐ, ಡಿಡಿಪಿಯು ಹಾಗೂ ಡಯಟ್ ಪ್ರಾಚಾರ್ಯರು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳಿಗೆ ಮಾಡಿಕೊಂಡಿರುವ ಸಿದ್ಧತೆಗಳ ವಿವರಗಳನ್ನು ಸಭೆಗೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕಿ ಮಮತಾ ನಾಯಕ್, ಸಿಸ್ಲೆಪ್ ನಿರ್ದೇಶಕ ಬಿ.ಎಸ್.ರಘುವೀರ್, ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ರಸಾದ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here