ನ.01 ರಂದು ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆ, ನಾಡ ಹಬ್ಬದ ಅಂಗವಾಗಿ ಕನ್ನಡ ತಾಯಿ ಭುವನೇಶ್ವರಿಯ ಸರಳ ಮೆರವಣಿಗೆ- ಮಹಾಂತೇಶ್ ಬೀಳಗಿ

0
114

ದಾವಣಗೆರೆ ಅ. 22: ಕನ್ನಡ ರಾಜ್ಯೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯೂ ನ. 01 ರಂದು ಸರಳ ಹಾಗೂ ಸಂಭ್ರಮದಿಂದ ಆಚರಿಸಲಾಗುವುದು. ಇದು ನಾಡ ಹಬ್ಬವಾಗಿರುವುದರಿಂದ ಕನಿಷ್ಟ ಕಲಾ ತಂಡದೊಂದಿಗೆ ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆಯನ್ನು ಕೂಡ ಸರಳವಾಗಿ ನೆರವೇರಿಸಲಾಗುವುದು. ಎಲ್ಲ ಕನ್ನಡಪರ ಸಂಘಟನೆಗಳು, ಕನ್ನಡಾಭಿಮಾನಿಗಳು ಕಾರ್ಯಕ್ರಮದ ಯಶಸ್ವಿಯಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ರಾಜ್ಯೋತ್ಸವ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯೋತ್ಸವ ಆಚರಣೆ ನಿಮಿತ್ತ ಅಂದು ಬೆಳಿಗ್ಗೆ 8-30 ಗಂಟೆಗೆ ಸರ್ಕಾರಿ ಪ್ರೌಢಶಾಲಾ ಮೈದಾನದಿಂದ ಕನ್ನಡತಾಯಿ ಭುವನೇಶ್ವರಿ ದೇವಿಯ ಮೆರವಣಿಗೆ ಪ್ರಾರಂಭವಾಗಲಿದೆ. ಮೆರವಣಿಗೆಯು ನಗರದ ಸರ್ಕಾರಿ ಪ್ರೌಢಶಾಲಾ ಮೈದಾನದಿಂದ ಹೊರಟು ಮಹಾನಗರ ಪಾಲಿಕೆ ಮುಂಭಾಗ, ಗಾಂಧಿವೃತ್ತ, ಅಶೋಕ ರಸ್ತೆ, ಜಯದೇವ ಸರ್ಕಲ್, ವಿದ್ಯಾರ್ಥಿ ಭವನದ ಮೂಲಕ ಜಿಲ್ಲಾ ಕ್ರೀಡಾಂಗಣವನ್ನು ತಲುಪುವಂತೆ ವ್ಯವಸ್ಥೆ ಮಾಡಲಾಗುವುದು. ಇದು ನಾಡಹಬ್ಬವಾಗಿರುವುದರಿಂದ ಈ ಸಂದರ್ಭದಲ್ಲಿ ಕನಿಷ್ಟ ಕಲಾ ತಂಡಗಳೊಂದಿಗೆ ಸರಳ ಮೆರವಣಿಗೆಗೆ ಅವಕಾಶ ಒದಗಿಸಲಾಗುವುದು.ಉಳಿದಂತೆ ಜಿಲ್ಲಾಡಳಿತದಿಂದ ಜರುಗಿಸಲಾಗುವ ಯಾವುದೇ ಜಯಂತಿಗಳ ಆಚರಣೆ ಸಂದರ್ಭದಲ್ಲಿ ಮೆರವಣಿಗೆಗೆ ಅವಕಾಶ ನೀಡಲಾಗುವುದಿಲ್ಲ. ಆದರೆ ರಾಜ್ಯೋತ್ಸವ ಆಚರಣೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳ ಕುರಿತಂತೆ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಯನ್ನು ಕೂಡ ಪರಿಗಣಿಸಿ ನಿರ್ಧರಿಸಲಾಗುವುದು. ಈ ಹಿಂದೆಯೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಎಫ್‍ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದರು. ಮೆರವಣಿಗೆಯಲ್ಲಿ ಭಾಗವಹಿಸುವವರು ತಪ್ಪದೇ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಬೇಕು, ಅಲ್ಲದೆ ಕನಿಷ್ಟ ಒಂದು ಡೋಸ್ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು. ಮೆರವಣಿಗೆಯಲ್ಲಿ ಗರಿಷ್ಟ 400 ಜನರು ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು. ಇದನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ರಿತ್ಯಾ ಕ್ರಮ ಜರುಗಿಸಲಾಗುವುದು. ಎಲ್ಲ ಕನ್ನಡಪರ ಸಂಘಟನೆಯವರು ತಪ್ಪದೆ ಮೆರವಣಿಗೆಯಲ್ಲಿ ಹಾಗೂ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ರಾಜ್ಯೋತ್ಸವ ಅಂಗವಾಗಿ ಅಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾರಂಭ ಜರುಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ಈ ಸಂದರ್ಭದಲ್ಲಿ ಗರಿಷ್ಠ 06 ತಂಡಗಳು ಮಾತ್ರ ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿವೆ. ಕನ್ನಡ ರಾಜ್ಯೋತ್ಸವದಂದು ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಪ್ರಮುಖ ಕಟ್ಟಡಗಳು ಹಾಗೂ ಸಂಘ- ಸಂಸ್ಥೆಗಳ ಕಛೇರಿಗಳಿಗೆ ಮತ್ತು ಖಾಸಗಿ ಅಂಗಡಿ ಮಳಿಗೆಗಳು, ಹೋಟೆಲ್‍ಗಳು ಕೆಂಪು, ಹಳದಿ ವಿದ್ಯುತ್ ದ್ವೀಪಗಳಿಂದ ಅಲಂಕರಿಸಬೇಕು. ರಾಜ್ಯೋತ್ಸವದ ಅಂಗವಾಗಿ ನವೆಂಬರ್ ತಿಂಗಳಲ್ಲಿ ಜಿಲ್ಲೆಯ ಎಲ್ಲ ಚಲನಚಿತ್ರಮಂದಿರಗಳಲ್ಲಿ ಕನ್ನಡ ಭಾಷೆಯ ಚಲನಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಚಲನಚಿತ್ರಮಂದಿರಗಳಿಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಉಳಿದಂತೆ ರಾಜ್ಯೋತ್ಸವವನ್ನು ಅಚ್ಚುಕಟ್ಟಾಗಿ ಆಚರಿಸುವುದಕ್ಕೆ ಸಂಬಂಧಿಸಿದಂತೆ ದೀಪಾಲಂಕಾರ, ಭುವನೇಶ್ವರಿ ಮೆರವಣಿಗೆ, ಧ್ವಜಾರೋಹಣ, ಆಹ್ವಾನ ಪತ್ರಿಕೆ ಮುದ್ರಣ ಮತ್ತು ವಿತರಣೆ, ಕ್ರೀಡಾಂಗಣ ಸಿದ್ಧತೆ, ಕಲಾತಂಡಗಳ ಆಯ್ಕೆ, ವೇದಿಕೆ ವ್ಯವಸ್ಥೆ, ಸಿಹಿ ಹಂಚಿಕೆ ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸಲು ವಿವಿಧ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.

ಸಾಧಕರಿಗೆ ಸನ್ಮಾನ : ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ ಸಾಹಿತ್ಯ, ಸಂಗೀತ, ಕಲೆ, ನಾಟಕ, ಶಿಕ್ಷಣ, ಪತ್ರಿಕೋದ್ಯಮ, ಕೃಷಿ, ಕ್ರೀಡೆ, ಸಮಾಜಸೇವೆ, ರಂಗಭೂಮಿ, ಛಾಯಾಗ್ರಹಣ, ವೈದ್ಯಕೀಯ, ಮುದ್ರಣ, ಪರಿಸರ, ನೃತ್ಯ, ಜಾನಪದ, ಕನ್ನಡಪರ ಹೋರಾಟ, ನವೋದ್ಯಮ, ಸಂಕೀರ್ಣ, ವಾದ್ಯ, ಮಹಿಳಾ ಮತ್ತು ಮಕ್ಕಳ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ, ಸನ್ಮಾನ ಮಾಡಲಾಗುವುದು. ಇದಕ್ಕಾಗಿ ಜಿಪಂ ಸಿಇಒ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಇದೇ ಸಂದರ್ಭದಲ್ಲಿ ರಚಿಸಲಾಯಿತು. ಸಮಿತಿಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಅಲ್ಲದೆ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳನ್ನೂ ಕೂಡ ಸಮಿತಿಯಲ್ಲಿ ಸೇರ್ಪಡೆಗೊಳಿಸಲಾಯಿತು. ಸಮಿತಿಯು ಸಭೆ ಕೈಗೊಂಡು, ನೀಡುವ ಸನ್ಮಾನಕ್ಕೆ ಅರ್ಹರಾದವರ ಪಟ್ಟಿಯನ್ನು ಪೊಲೀಸ್ ಇಲಾಖೆಗೆ ಕಳುಹಿಸಿ, ಅವರಿಂದ ಅಪರಾಧ ಹಿನ್ನೆಲೆಗೆ ಸಂಬಂಧಿಸಿದ ವರದಿ ಪಡೆದ ಬಳಿಕವೇ ಸನ್ಮಾನಕ್ಕೆ ಆಯ್ಕೆಯಾದವರ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣದ ಜೊತೆಗೆ ಕನ್ನಡ ಧ್ವಜಾರೋಹಣವನ್ನೂ ಕೂಡ ನೆರವೇರಿಸಬೇಕು, ಈ ಮೂಲಕ ರಾಜ್ಯೋತ್ಸವ ಆಚರಣೆಗೆ, ಕನ್ನಡಪ್ರೇಮಿಗಳ ಭಾವನೆಗಳಿಗೆ ಸ್ಪಂದಿಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ತಮ್ಮ ಭಾವನೆ, ಅಬಿಲಾಷೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಈ ದಿಸೆಯಲ್ಲಿ ಸರ್ಕಾರ ನೀಡುವ ಆದೇಶವನ್ನು ಪಾಲಿಸಲಾಗುವುದು ಎಂದು ಹೇಳಿದರು.
ಸಭೆಯ ನಡುವೆಯೇ ಲಸಿಕೆ ನೀಡಿಕೆ : ಇದುವರೆಗೂ ಯಾರು ಕೋವಿಡ್ ನಿರೋಧಕ ಲಸಿಕೆಯ ಒಂದೂ ಡೋಸ್ ಪಡೆದಿಲ್ಲ ಎಂಬುದಾಗಿ ಜಿಲ್ಲಾಧಿಕಾರಿಗಳು, ರಾಜ್ಯೋತ್ಸವ ಕುರಿತ ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಂಡ ವಿವಿಧ ಕನ್ನಡಪರ ಸಂಘಟನೆಯವರಿಗೆ ಪ್ರಶ್ನಿಸಿದರು, ಸಭೆಯಲ್ಲಿ ಕೇವಲ ಒಬ್ಬರು ಮಾತ್ರ ಒಂದೂ ಡೋಸ್ ಪಡೆದಿಲ್ಲ ಎಂಬುದಾಗಿ ಹಾಗೂ ನಾಲ್ವರು ಎರಡನೆ ಡೋಸ್ ಪಡೆದಿಲ್ಲ ಎಂದು ಉತ್ತರಿಸಿದರು. ಜಿಲ್ಲಾಧಿಕಾರಿಗಳು ಕೂಡಲೆ ಡಿಹೆಚ್‍ಒ ಅವರಿಗೆ ಸೂಚಿಸಿ, ಸಭೆಯ ಅಂತ್ಯದಲ್ಲಿ ಸಂಬಂಧಪಟ್ಟವರಿಗೆ ಲಸಿಕೆ ಹಾಕಲು ವ್ಯವಸ್ಥೆ ಮಾಡಲು ಸೂಚಿಸಿದರು. ಅದರಂತೆ, ಸಭೆಯ ಅಂತ್ಯದಲ್ಲಿ, ಒಂದೂ ಡೋಸ್ ಪಡೆಯದವರಿಗೆ ಕೋವಿಡ್ ನಿರೋಧಕ ಕೋವಿಶೀಲ್ಡ್ ಲಸಿಕೆಯನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನೀಡಲಾಯಿತು. ಇನ್ನು ಮುಂದೆ ಜಿಲ್ಲಾಧಿಕಾರಿಗಳ ಕಚೇರಿಗೆ ಅಥವಾ ಇಂತಹ ಸಭೆಗಳಿಗೆ ಬರುವ ಮುನ್ನ ಸಂಬಂಧಪಟ್ಟ ವ್ಯಕ್ತಿಗಳು ಕನಿಷ್ಟ ಒಂದು ಡೋಸ್ ಆದರೂ ಲಸಿಕೆ ಪಡೆದಿರಲೇಬೇಕು. ಕನ್ನಡ ರಾಜ್ಯೋತ್ಸವ ಮೆರವಣಿಗೆ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರೂ ಕೂಡ ಕನಿಷ್ಟ ಒಂದು ಡೋಸ್ ಲಸಿಕೆ ಪಡೆದಿರಬೇಕು ಎಂದು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಯಲ್ಲಪ್ಪ, ಶಿವಕುಮಾರ್, ರಾಮೇಗೌಡ, ರವಿ, ಬಿ.ಎನ್. ಮಲ್ಲೇಶ್, ಮಂಜುನಾಥ ಕುರ್ಕಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here