ಬಳ್ಳಾರಿಯಲ್ಲಿ ಗುಲಾಬಿ ಆಂದೋಲನಕ್ಕೆ ಚಾಲನೆ,ತಂಬಾಕು ಸೇವನೆ ಕೈಬಿಡಿ;ಆರೋಗ್ಯವಂತ ಸಮಾಜ ನಿರ್ಮಿಸಿ: ನ್ಯಾ.ಅರ್ಜುನ್ ಮಲ್ಲೂರ್

0
129

ಬಳ್ಳಾರಿ, ಜ.05 : ಯುವಕರಲ್ಲಿ ತಂಬಾಕು ಸೇವನೆಯು ಹೆಚ್ಚಾಗಿದ್ದು, ಇದರಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ವಹಿಸಬೇಕಿದೆ. ತಂಬಾಕು ಸೇವನೆಯಿಂದ ಕೇವಲ ಒಬ್ಬ ವ್ಯಕ್ತಿಗೆ ಹಾನಿಯಾಗುವುದಿಲ್ಲ ಬದಲಾಗಿ ಇಡೀ ಸಮುದಾಯಕ್ಕೆ ಪರಿಣಾಮ ಬೀರುತ್ತದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅರ್ಜುನ್.ಎಸ್.ಮಲ್ಲೂರು ಅವರು ತಂಬಾಕು ಸೇವನೆ ಕೈಬಿಟ್ಟು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಅವರು ಮನವಿ ಮಾಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ,ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲಾ ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗುಲಾಬಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ಕೈ ಜೋಡಿಸಿ, ತಂಬಾಕು ಸೇವಿಸುವವರ ಮತ್ತು ಮಾರಾಟ ಮಾಡುವವರ ಮನ ಪರಿವರ್ತನೆ ಮಾಡುವಲ್ಲಿ ಕಾರ್ಯಪ್ರವೃತ್ತರಾಗುವಂತೆ ಸಲಹೆ ನೀಡಿದ ನ್ಯಾ.ಮಲ್ಲೂರ್ ಅವರು ತಂಬಾಕು ವ್ಯಸನಿಗಳ ಮನ ಬದಲಿಸುವಲ್ಲಿ ಈ ಜಾಥಾ ಸಹಕಾರಿಯಾಗಲಿದೆ ಎಂದರು.
ಕರ್ನಾಟಕದಲ್ಲಿ ತಂಬಾಕು ಸೇವಿಸುತ್ತಿರುವವರ ಪ್ರಮಾಣ ಶೇ.22.8 ಇದ್ದು ಒಟ್ಟು ಪುರುಷರಲ್ಲಿ ಶೇ.35ರಷ್ಟು ಹಾಗೂ ಮಹಿಳೆಯರಲ್ಲಿ ಶೇ.10.3ರಷ್ಟು ಜನ ತಂಬಾಕು ಸೇವಿಸುತ್ತಿದ್ದಾರೆ ಎಂದು ವಿವರಿಸಿದ ಅವರು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉಪಯೋಗ ಮಾಡುವ ಶೇ.23.9ರಷ್ಟು ಜನರು ವಿವಿಧ ರೀತಿಯ ದುಷ್ಪರಿಣಾಮಗಳಿಗೆ ಬಲಿಯಾಗುತ್ತಿದ್ದಾರೆ ಎಂದರು.
ಇಂದು ಗುಲಾಬಿ ಹೂ ಪಡೆಯುವ ಪ್ರತಿಯೊಬ್ಬರು ತಂಬಾಕು ಸೇವಿಸುವುದಿಲ್ಲ ಹಾಗೂ ತಂಬಾಕು ಮಾರಾಟ ಮಾಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಿದ್ದಲ್ಲಿ ಈ ಆಂದೋಲನ ಉದ್ದೇಶ ಸಾರ್ಥಕವಾಗುತ್ತವೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಹೆಚ್.ಎಲ್.ಜನಾರ್ಧನ ಅವರು ಮಾತನಾಡಿ, ತಂಬಾಕು ನಿಯಂತ್ರಣ ಕೋಟ್ಟಾ 2003 ರಡಿಯಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದವರಿಗೆ ಸೆಕ್ಷನ್-04 ರಡಿಯಲ್ಲಿ ದಂಡಗಳನ್ನು ವಿಧಿಸಲಾಗುತ್ತ್ತಿದೆ ಎಂದರು.
ವಿವಿಧ ಇಲಾಖೆಗಳ ಸಹಕಾರದಿಂದ ಅಂಗಡಿ ಮುಂಗಟ್ಟುಗಳಿಗೆ ನಿರಂತರವಾಗಿ ಅನಿರಿಕ್ಷಿತ ಭೇಟಿ ನೀಡುವಿಕೆ ಹಾಗೂ ದಾಳಿ ನಡೆಸಲಾಗುತ್ತಿದೆ.ಸಾರ್ವಜನಿಕರು ತಂಬಾಕು ಉತ್ಪನ್ನಗಳಲ್ಲಿ ಕಾನ್ಸರ್‍ಕಾರಕ ರಾಸಾಯನಿಕಗಳಿಂದ ಮಾರಣಾಂತಿಕ ಕಾಯಿಲೆಗಳು ಉಂಟಾಗುತ್ತವೆ. ತಂಬಾಕು ಸೇವನೆಯನ್ನು ನಿಲ್ಲಿಸುವ ಮೂಲಕ ಸಮಾಜದ ಒಳಿತಿಗೆ ನೆರವಾಗಿ ಎಂದು ಹೇಳಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಮಾತನಾಡಿ, ತಂಬಾಕು ಸೇವನೆ ಜೀವಕ್ಕೆ ತುಂಬಾ ಹಾನಿಕಾರಕ, ಇತ್ತೀಚಿನ ಯುವಕರು ತಂಬಾಕು ಸೇವಿಸುವುದು ಹೆಚ್ಚಾಗುತ್ತಿದೆ ಅದನ್ನು ನಿಲ್ಲಿಸುವುದು ಉತ್ತಮ. ಜಿಲ್ಲಾ ಆಸ್ಪತ್ರೆಯ ರೂಮ್ ನಂ.43 ರಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ ತಂಬಾಕು ಸೇವನೆ ಮಾಡುವ ವ್ಯಕ್ತಿಗಳಿಗೆ ಉಚಿತವಾಗಿ ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸಾರ್ವಜನಿಕರಿಗೆ, ಕೈಗಾರಿಕಾ ಪ್ರದೇಶಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ತಂಬಾಕಿನಿಂದ ಉಂಟಾಗುವ ಹಾನಿಗಳ ಕುರಿತು ನಿರಂತರವಾಗಿ ಜಾಗೃತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ನ್ಯಾ.ಅರ್ಜುನ್ ಮಲ್ಲೂರ್,ಡಿಎಚ್‍ಒ ಡಾ.ಜನಾರ್ಧನ್ ಸೇರಿದಂತೆ ಅನೇಕರು ಕೆ.ಸಿ.ರೋಡ್, ಮೀನಾಕ್ಷಿ ವೃತ್ತ, ತಹಶೀಲ್ದಾರ ಕಛೇರಿ ಮುಂಭಾಗ, ರಾಯಲ್ ವೃತ್ತ, ಕೊರ್ಟ್ ಮುಂಭಾಗ, ಕೂಲ್ ಕಾರ್ನರ್ ಸೇರಿದಂತೆ ವಿವಿಧೆಡೆ ತಂಬಾಕು ಉತ್ಪನ್ನ ಮಾರಾಟಗಾರ ಹಾಗೂ ಸೇವನೆ ಮಾಡುವವರಿಗೆ ಗುಲಾಬಿ ಹೂ ಗಳನ್ನು ನೀಡಿ ತಂಬಾಕು ಸೇವನೆ ಮಾಡದಂತೆ ಮನ ಪರಿವರ್ತನೆಗಾಗಿ ಕೋರಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಬಸರೆಡ್ಡಿ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಗುರುನಾಥ ಚವ್ಹಾಣ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾ ಆಧಿಕಾರಿಗಳಾದ ಡಾ. ರಾಜಶೇಖರ್ ರೆಡ್ಡಿ, ಜಿಲ್ಲಾ ಆರ್.ಸಿ.ಹೆಚ್ ಅನಿಲಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ. ಇಂದ್ರಾಣಿ, ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಮೋಹನ್ ಕುಮಾರಿ, ಜಿಲ್ಲಾ ಕಾರ್ಮಿಕರ ವಿಭಾಗ-2 ಅಧಿಕಾರಿಗಳಾದ ಚಂದ್ರಶೇಖರ ಐಲಿ, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ ಜಿಲ್ಲಾ ಯೋಜನಾಧಿಕಾರಿಗಳಾದ ಎ.ಮೌನೇಶ ಹಾಗೂ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ, ಎನ್.ಸಿ.ಡಿ ಘಟಕದ ಜಿಲ್ಲಾ ಸಂಯೋಜಕರಾದ ಡಾ. ಜಬೀನ್, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here