ಯುವಶಕ್ತಿಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ – ಸೂಲೂರು ಎಂ.ಆಂಜಿನಪ್ಪ

0
190

ಕೋಲಾರ ನವೆಂಬರ್ 23
ಇಡೀ ವಿಶ್ವದಲ್ಲಿಯೇ ಯುವಶಕ್ತಿಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ ಎಂದು ಕೋಲಾರ ತಾಲ್ಲೂಕು ಪಂಚಾಯತಿ ಅಧ್ಯಕ್ಷರಾದ ಸೂಲೂರು ಎಂ ಆಂಜಿನಪ್ಪ ಅವರು ತಿಳಿಸಿದರು.
ಇಂದು ನೆಹರು ಯುವ ಕೇಂದ್ರ ಆವರಣದಲ್ಲಿ ನೆಹರು ಯುವ ಕೇಂದ್ರದ ಸಂಸ್ಥಾಪನಾ ದಿನದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೆಹರು ಯುವ ಕೇಂದ್ರವು ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಯುವಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಹಾಗೂ ಯುವಜನತೆ ತಮ್ಮ ಜೀವನೋಪಾಯ ರೂಢಿಸಿಕೊಳ್ಳುವಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿನ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನೀಡಬೇಕು ಹಾಗೂ ಹೋಬಳಿ ಮಟ್ಟದಲ್ಲಿ ಕ್ರೀಡಾ ಕೂಟಗಳನ್ನು ಏರ್ಪಡಿಸುವ ಮೂಲಕ ಕ್ರೀಡೆಗಳಲ್ಲಿ ಪೆÇ್ರೀತ್ಸಾಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ಮಾತನಾಡಿ, ಯುವಜನತೆಯು ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂದಿನ ಜಾಗತೀಕರಣದ ಯುಗದಲ್ಲಿ ಸಮಾಜದಲ್ಲಿ ಆಗುತ್ತಿರುವ ಹಲವಾರು ಬದಲಾವಣೆಗಳಿಗೆ ಯುವಜನತೆ ಹೊಂದಿಕೊಳ್ಳಬೇಕಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಈ ಸವಾಲುಗಳು ಉಲ್ಬಣಗೊಂಡಿವೆ ಹಾಗಾಗಿ ಈ ಪರಿಸ್ಥಿತಿಯಲ್ಲಿ ಮಾನಸಿಕ ಸಂತುಲನವನ್ನು ಸಹ ಕಾಪಾಡಿಕೊಳ್ಳಬೇಕಾಗಿದೆ ಎಂದರು.
ಯುವಜನರ ಭವಿಷ್ಯವನ್ನು ಸದೃಢಗೊಳಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ ಯುವಜನತೆಯಲ್ಲಿ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವಂತಹ ಕೆಲಸ ಮಾಡುತ್ತಿದೆ ಎಂದರು.

ಯುವಜನತೆಯು ಜಾಗತೀಕರಣ, ಉದಾರೀಕರಣದಂತಹ ಹಲವಾರು ಬದಲಾವಣೆಗಳನ್ನು ಕಂಡಿದ್ದಾರೆ. ಅವರ ಜೀವನವನ್ನು ಒಳ್ಳೆಯ ದಿಕ್ಕಿನಲ್ಲಿ ಕೊಂಡೊಯ್ಯಲು ಗ್ರಾಮೀಣ ಪ್ರದೇಶಗಳಲ್ಲಿ ಯುವ ಸಂಘಗಳ ಸಹಯೋಗದಲ್ಲಿ ಉತ್ತಮ ಮನೋಭಾವನೆಯನ್ನು ಬೆಳೆಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಜಿಲ್ಲಾ ಆಯುಕ್ತರಾದ ಕೆ.ವಿ.ಶಂಕರಪ್ಪ ಅವರು ಮಾತನಾಡಿ, ನೆಹರು ಯುವ ಕೇಂದ್ರದ ಸಂಸ್ಥಾಪನಾ ದಿನದ ಅಂಗವಾಗಿ ಇಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಎಲ್ಲಾ ದಾನಗಳಿಗಿಂತ ರಕ್ತದಾನವು ಶ್ರೇಷ್ಠದಾನವಾಗಿದೆ. ರಕ್ತದ ಕೊರತೆಯಿಂದ ಇಂದು ವಿವಿಧ ಖಾಯಿಲೆಗಳಿಗೆ ತುತ್ತಾಗಿ ಹಲವಾರು ಜನರು ಬಳಲುತ್ತಿದ್ದಾರೆ ಈ ನಿಟ್ಟಿನಲ್ಲಿ ಆರೋಗ್ಯವಂತ ಜನರು ರಕ್ತದಾನ ಮಾಡಬೇಕು ಎಂದರು.
ಪ್ರಕೃತಿ ನಮಗೆ ಎಲ್ಲವನ್ನೂ ಕೊಟ್ಟಿದೆ ಆದರೆ ನಾವು ಪ್ರಕೃತಿಯ ಋಣವನ್ನು ತೀರಿಸಬೇಕಿದೆ. ರಕ್ತದಾನ, ಸ್ವಚ್ಛತೆ, ಮಾಡುವ ಮೂಲಕ ನಮ್ಮ ಋಣವನ್ನು ತೀರಿಸಬಹುದಾಗಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಕಛೇರಿಯಲ್ಲಿ ರೋಟರಿ, ನಂದಿನಿ ಕೋಲಾರ ಇವರ ವತಿಯಿಂದ ರಕ್ತಬ್ಯಾಂಕ್ ಸ್ಥಾಪಿಸಲಾಗುವುದು ಜೀವದ ಉಳಿವಿಗಾಗಿ ರಕ್ತದಾನ ಮಾಡಿ ಎಂದರು.
ಇದೇ ಸಂದರ್ಭದಲ್ಲಿ ರಕ್ತದಾನ ಮಾಡಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ಕೋವಿಡ್-19 ನ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿಗಳಾದ ಸರಣ್ಯಾ, ಯಕ್ಷಗಾನ ಆಕಾಡೆಮಿ ಸದಸ್ಯರಾದ ಮುನಿರೆಡ್ಡಿ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ರಾಮಮೂರ್ತಿ, ಕಲಾವಿದ ಮತ್ತಿಕುಂಟೆ ಕೃಷ್ಣ, ಗುತ್ತಿಗೆದಾರರಾದ ಕೃಷ್ಣೇಗೌಡ, ಪ್ರವೀಣ್ ಕುಮಾರ್ ಸೇರಿದಂತೆ ಜಿಲ್ಲಾ ನರಸಿಂಹರಾಜ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here