ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಗೆ ಡಿಸೆಂಬರ್ 10 ರಂದು ಮತದಾನ; ಡಾ||ಆರ್.ಸೆಲ್ವಮಣಿ

0
93

ಕೋಲಾರ, ನವೆಂಬರ್ 12: ಕರ್ನಾಟಕ ವಿಧಾನ ಪರಿಷತ್‍ಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ 6 ತಾಲ್ಲೂಕುಗಳು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 6 ತಾಲ್ಲೂಕುಗಳನ್ನು ಒಳಗೊಂಡಿರುತ್ತದೆ. ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಯ ಮತದಾನವನ್ನು ಡಿಸೆಂಬರ್ 10 ರಂದು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಡಾ||ಆರ್.ಸೆಲ್ವಮಣಿ ಅವರು ತಿಳಿಸಿದರು.
ಇಂದು ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಕರ್ನಾಟಕ ವಿಧಾನ ಪರಷತ್ ನಂ.18ರ ಕೋಲಾರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ದ್ವೈವಾರ್ಷಿಕ ಚುನಾವಣೆ 2021 ರ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣೆಯ ಅಧಿಸೂಚನೆಯನ್ನು ನವೆಂಬರ್ 16 ರಂದು ಹೊರಡಿಸಲಾಗುವುದು. ನಾಮ ಪತ್ರಗಳನ್ನು ಸಲ್ಲಿಸಲು ನವೆಂಬರ್ 23 ಕೊನೆಯ ದಿನಾಂಕವಾಗಿದೆ. ನಾಮ ಪತ್ರಗಳ ಪರಿಶೀಲನೆಯನ್ನು ನವೆಂಬರ್ 24 ರಂದು ಮಾಡಲಾಗುವುದು. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ನವೆಂಬರ್ 26 ಕೊನೆಯ ದಿನಾಂಕವಾಗಿದೆ. ಮತದಾನವು ಡಿಸೆಂಬರ್ 10 ರಂದು ಬೆಳಿಗ್ಗೆ 8.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ನಡೆಯುತ್ತದೆ. ಮತಗಳ ಎಣಿಕೆಯನ್ನು ಡಿಸೆಂಬರ್ 14 ರಂದು ಮಾಡಲಾಗುವುದು ಹಾಗೂ ಡಿಸೆಂಬರ್ 16 ರಂದು ಚುನಾವಣೆ ಮುಕ್ತಾಯವಾಗುತ್ತದೆ ಎಂದು ಅವರು ತಿಳಿಸಿದರು.
ಕರ್ನಾಟಕ ವಿಧಾನ ಪರಿಷತ್‍ಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಮತದಾರರ ಪಟ್ಟಿಗಳನ್ನು ತಯಾರಿಸಲಾಗಿದೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ 5208 ಗ್ರಾಮ ಪಂಚಾಯ್ತಿ ಸದಸ್ಯರು, 372 ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು, ಇಬ್ಬರು ಲೋಕಸಭಾ ಸದಸ್ಯರು, 11 ವಿಧಾನಸಭಾ ಸದಸ್ಯರು ಮತ್ತು 5 ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು 5598 ವ್ಯಕ್ತಿಗಳು ಚುನಾವಣೆಯಲ್ಲಿ ಮತದಾರರಾಗಿದ್ದಾರೆ ಎಂದು ಅವರು ತಿಳಿಸಿದರು.
ಕೋಲಾರ ಜಿಲ್ಲೆಯ ವ್ಯಾಪ್ತಿಯಲ್ಲಿ 158 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿ 163 ಮತದಾನ ಕೇಂದ್ರಗಳನ್ನು ಒಳಗೊಂಡಿದೆ. ಪ್ರತಿ ತಾಲ್ಲೂಕಿನ ಗ್ರಾಮ ಪಂಚಾಯ್ತಿ ಕಛೇರಿಗಳು, ನಗರಸಭಾ, ಪುರಸಭಾ, ಪಟ್ಟಣ ಪಂಚಾಯ್ತಿ ಕಛೇರಿಗಳನ್ನು ಮತಗಟ್ಟೆಗಳನ್ನಾಗಿ ಮಾಡಲಾಗಿದೆ. ಮತ ಎಣಿಕಾ ಕೇಂದ್ರವನ್ನು ಕೋಲಾರದಲ್ಲಿ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಚುನಾವಣಾ ಸಂಬಂಧ ಜಿಲ್ಲೆಯಲ್ಲಿ ದೂರುಗಳನ್ನು ಸ್ವೀಕರಿಸಲು ಚುನಾವಣಾ ಶಾಖೆಯಲ್ಲಿ ದೂರು ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ದೂರವಾಣಿ ಸಂಖ್ಯೆ 243507 ರಲ್ಲಿ 24/7 ದೂರುಗಳನ್ನು ಸ್ವೀಕರಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅದೇ ರೀತಿ ತಾಲ್ಲೂಕು ಕಛೇರಿಗಳಲ್ಲಿಯೂ ಸಹ ದೂರು ನಿರ್ವಹಣಾ ಕೇಂದ್ರಗಳನ್ನು ಸ್ಥಾಪಿಸಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‍ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಾದ ಉಕೇಶ್ ಕುಮಾರ್, ಚುನಾವಣಾ ತಶೀಲ್ದಾರರಾದ ನಾಗವೇಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here