ಜೀವ ವೈವಿಧ್ಯ ರಕ್ಷಿಸಲು ನಿಷೇಧಿತ ಕೀಟನಾಶಕಗಳ ಮಾರಾಟ ತಡೆಗೆ ಕ್ರಮ- ಅನಂತ ಹೆಗಡೆ ಆಶೀಸರ

0
87

ದಾವಣಗೆರೆ. ಜ.05 : ಜೈವಿಕ ಸಂಪನ್ಮೂಲ ರಕ್ಷಿಸುವ ನಿಟ್ಟಿನಲ್ಲಿ ಈಗಾಗಲೆ ಸರ್ಕಾರ ನಿಷೇಧಿಸಿರುವ ಕೀಟನಾಶಕಗಳ ಮಾರಾಟವನ್ನು ತಡೆಗಟ್ಟುವ ಕಾರ್ಯವನ್ನು ಕೃಷಿ ಇಲಾಖೆ ಅಧಿಕಾರಿಗಳು ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ಹೇಳಿದರು
ಜೈವಿಕ ಸಂಪನ್ಮೂಲ ರಕ್ಷಿಸುವ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಏರ್ಪಡಿಸಲಾದ ಸಮಾಲೋಚನಾ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಈ ನಾಡಿನ ಸಮಸ್ತ ಜೀವಸಂಕುಲಗಳನ್ನು ರಕ್ಷಿಸುವುದು, ಎಲ್ಲ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಿ, ಅವುಗಳ ಸಂಯಮಶೀಲ ಬಳಕೆಯ ವಿಧಾನಗಳನ್ನು ಜಾರಿಗೆ ತರುವಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಜವಾಬ್ದಾರಿ ಮಹತ್ವದ್ದಾಗಿದೆ. ಪರಿಸರಕ್ಕೆ ಹಾಗೂ ಜೀವ ಸಂಕುಲಕ್ಕೆ ಮಾರಕವಾಗಿರುವ ಹಲವು ಬಗೆಯ ಕೀಟನಾಶಕಗಳ ಬಳಕೆ ಮತ್ತು ಮಾರಾಟವನ್ನು ಸರ್ಕಾರ ನಿಷೇಧಿಸಿದೆ. ಆದರೆ ಬಹಳಷ್ಟು ಗೊಬ್ಬರದ ಅಂಗಡಿಗಳಲ್ಲಿ ಇವು ಇನ್ನೂ ಮಾರಾಟವಾಗುತ್ತಿರುವ ಸಾಧ್ಯತೆಗಳಿವೆ. ಇದರಿಂದಾಗಿ ಪರಿಸರಕ್ಕೆ ಹಾನಿಯಾಗುವುದರ ಜೊತೆಗೆ ಭೂಮಿ, ಜಲಚರ ಹಾಗೂ ಇತರೆ ಜೀವ ಸಂಕುಲವೂ ಕೂಡ ಸಂಕಷ್ಟಕ್ಕೆ ಸಿಲುಕಿದೆ. ನಿಷೇಧಿತ ಕೀಟನಾಶಕ ಮಾರಾಟ ತಡೆಗೆ ಕೃಷಿ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

ಅರಣ್ಯ ಉಳಿಸಿ, ಒತ್ತುವರಿ ತಡೆಗಟ್ಟಿ :-
ಜಿಲ್ಲೆಯಲ್ಲಿ ಕೊಂಡಜ್ಜಿ, ಕೋಮಾರನಹಳ್ಳಿ ಸೇರಿದಂತೆ ಹಲವು ಕಡೆ ಕಲ್ಲು, ಗುಡ್ಡಗಳ ಸಹಿತವಾದ ಅರಣ್ಯ, ಕುರುಚಲು ಅರಣ್ಯವೂ ಇದೆ. ವನ್ಯ ಜೀವಿಗಳು, ಉಪಯುಕ್ತ ಗಿಡಮೂಲಿಕೆಗಳ ಪ್ರಬೇಧಗಳು ಜಿಲ್ಲೆಯಲ್ಲಿವೆ. ಜಿಲ್ಲೆಯಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಗೆ ಸೇರಿದ ಸುಮಾರು 3 ಸಾವಿರ ಹೆಕ್ಟೇರ್‍ನಷ್ಟು ಭೂಮಿಯನ್ನು ಗುರುತಿಸಲಾಗಿದ್ದು, ಈ ಭಾಗದಲ್ಲಿ ಇವೆಲ್ಲವನ್ನೂ ಸಂರಕ್ಷಿಸಿಕೊಳ್ಳುವುದರ ಜೊತೆಗೆ, ಯಾವುದೇ ಕಾರಣಕ್ಕೂ ಒತ್ತುವರಿಯಾಗದಂತೆ, ಅರಣ್ಯ ನಾಶವಾಗದಂತೆ ಸಾರ್ವಜನಿಕರು, ಅರಣ್ಯ ಇಲಾಖೆಯವರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದರು. ಜಿಲ್ಲೆಯ ಶಾಂತಿ ಸಾಗರದಂತಹ ದೊಡ್ಡ ಕೆರೆ ಪ್ರದೇಶದಲ್ಲಿ ಒತ್ತುವರಿಯಾಗಿರುವ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಶಾಂತಿಸಾಗರ ಕೆರೆ ಪ್ರದೇಶ ಒತ್ತುವರಿ ಅತ್ಯಂತ ಗಂಭೀರ ವಿಷಯವಾಗಿದ್ದು, ಜಿಲ್ಲಾಡಳಿತ ಒತ್ತುವರಿ ತೆರವುಗೊಳಿಸಲು ನಿಯಮಾನುಸಾರ ಆದ್ಯತೆ ನೀಡಿ ಕ್ರಮ ಕೈಗೊಳ್ಳಬೇಕಿದೆ. ಶಾಂತಿಸಾಗರ, ಕೊಂಡಜ್ಜಿ ಮುಂತಾದ ಕೆರೆಗಳಲ್ಲಿ ಅಪರೂಪದ ಹಾಗೂ ವೈವಿಧ್ಯಮಯ ಪಕ್ಷಿ ಸಂಕುಲಗಳು ಇವೆ. ಹೀಗಾಗಿ ಇಂತಹವುಗಳನ್ನು ಗುರುತಿಸಿ, ಅವುಗಳನ್ನು ಪಕ್ಷಿಧಾಮ ಎಂದು ಘೋಷಿಸಲು ಮಂಡಳಿಯು ಕ್ರಮ ವಹಿಸಲಿದೆ. ಅಲ್ಲದೆ ವಿನಾಶದ ಅಂಚಿನಲ್ಲಿರುವ ಅಪರೂಪದ ಔಷಧೀಯ ಸಸ್ಯಗಳನ್ನು ಗುರುತಿಸಿ, ಅವುಗಳ ರಕ್ಷಣೆಗೂ ಕ್ರಮ ಕೈಗೊಳ್ಳಲಾಗುವುದು. ಈ ದಿಸೆಯಲ್ಲಿ ಜಿಲ್ಲಾವಾರು ಮಾಹಿತಿಯನ್ನು ಪಡೆದು, ವರದಿ ತಯಾರಿಸಲು ಯೋಜಿಸಲಾಗಿದೆ. ಮಲೆನಾಡು ಪ್ರದೇಶದಲ್ಲಿ ಅಕೇಶಿಯಾ ನಂತಹ ಏಕಜಾತಿ ನೆಡುತೋಪುಗಳನ್ನು ಬೆಳೆಸುವುದರಿಂದ ಜೀವ ವೈವಿಧ್ಯ ಅಸ್ತಿತ್ವಕ್ಕೆ ಧಕ್ಕೆಯಾಗಲಿದ್ದು, ಸ್ಥಾನೀಯ ಜಾತಿ ಗಿಡಗಳನ್ನು ಬೆಳೆಸುವಂತಾಗಲು ಜೀವ ವೈವಿಧ್ಯ ಮಂಡಳಿ ಪ್ರಯತ್ನ ನಡೆಸಲಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಂಡು, ಸುಸ್ಥಿರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಅನಂತ ಹೆಗಡೆ ಆಶೀಸರ ಹೇಳಿದರು.

ಪಾರ್ಕ್‍ಗಳ ಪುನಶ್ಚೇತನ :-
ಜಿಲ್ಲೆಯ ದಾವಣಗೆರೆ ನಗರಪಾಲಿಕೆ ಸೇರಿದಂತೆ ವಿವಿಧ ನಗರ, ಪಟ್ಟಣಗಳಲ್ಲಿ ಹಲವಾರು ಪಾರ್ಕ್‍ಗಳಿದ್ದು, ಇವು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಹೀಗಾಗಿ ಈ ಎಲ್ಲ ಪಾರ್ಕ್‍ಗಳನ್ನು ಪುನಶ್ಚೇತನಗೊಳಿಸುವುದು ಅಗತ್ಯವಾಗಿದೆ. ಪಾರ್ಕ್‍ಗಳಲ್ಲಿ ಹೆಚ್ಚಿನ ಗಿಡಮರಗಳನ್ನು ಬೆಳೆಸಿ, ರಕ್ಷಣೆ ಹಾಗೂ ಅಭಿವೃದ್ಧಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ನಗರ, ಪಟ್ಟಣಗಳಲ್ಲಿ ತ್ಯಾಜ್ಯ ವಿಲೇವಾರಿ ಸವಾಲಿನ ವಿಷಯವಾಗಿದ್ದು, ಅಡುಗೆ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆಗೆ ಅವಕಾಶವಿದೆ. ಹಾಸ್ಟೆಲ್‍ಗಳು, ಕಲ್ಯಾಣಮಂಟಪಗಳಲ್ಲಿ ಇಂತಹ ವಿಧಾನ ಅಳವಡಿಕೆಗೆ ಅವಕಾಶವಿದ್ದು, ಈ ಬಗ್ಗೆ ಸ್ಥಳಗಳನ್ನು ಗುರುತಿಸಿ, ಜಾರಿಗೊಳಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು.

ರಾಜ್ಯದ ಕೀಟ ಜೇನು :-
ಜೇನು ಕೃಷಿಗೆ ಹೇರಳ ಅವಕಾಶಗಳಿದ್ದು, ತೋಟಗಾರಿಕೆ ಇಲಾಖೆಯಿಂದ ಸಾಕಷ್ಟು ಯೋಜನೆಗಳಿವೆ. ಜೇನುತುಪ್ಪ ಉತ್ಪಾದನೆಯ ಜೊತೆಗೆ, ರೈತರಿಗೆ ಬೆಳೆಯಲ್ಲಿ ಇಳುವರಿ ಹೆಚ್ಚು ಪಡೆಯಲು ಜೇನುಕೃಷಿ ನೆರವಾಗಲಿದೆ. ಜೇನುಹುಳುವನ್ನು ರಾಜ್ಯದ ಕೀಟ ಎಂದು ಘೋಷಿಸಲು ವನ್ಯಜೀವ ವೈವಿಧ್ಯ ಮಂಡಳಿ ಪ್ರಸ್ತಾವನೆ ಸಿದ್ಧಪಡಿಸಿದ್ದು, ಸರ್ಕಾರಕ್ಕೆ ಸಲ್ಲಿಸಲು ಕ್ರಮ ವಹಿಸಲಾಗುವುದು ಎಂದು ಅನಂತಹೆಗಡೆ ಆಶಿಸರ್ ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here