ಹೊಸಪೇಟೆಯಲ್ಲಿ ಸುಸಜ್ಜಿತ ಟ್ರಕ್ ಟರ್ಮಿನಲ್ ಶೀಘ್ರ ನಿರ್ಮಾಣ ಹೊಸಪೇಟೆ ಸೇರಿ 98 ನಗರಗಳಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ:ಡಿ.ಎಸ್.ವೀರಯ್ಯ

0
78

ಬಳ್ಳಾರಿ/ಹೊಸಪೇಟೆ,ಜ.29 : ಅಪಘಾತಗಳನ್ನು ತಪ್ಪಿಸುವ ಮತ್ತು ವಾಹನಗಳು ಒಂದು ಕಡೆ ಸೇರುವುದರಿಂದ ಆಗುವ ಟ್ರಾಫಿಕ್ ಸಮಸ್ಯೆಯು ಹೆಚ್ಚಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ರಾಜ್ಯದಲ್ಲಿ ಹೊಸಪೇಟೆ ಸೇರಿದಂತೆ 98 ನಗರಗಳಲ್ಲಿ ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಹೊಸಪೇಟೆ ಬಳಿ 38 ಎಕರೆ ಪ್ರದೇಶದಲ್ಲಿ ಶೀಘ್ರ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗುವುದು ಎಂದು ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ ಅಧ್ಯಕ್ಷರಾದ ಡಿ.ಎಸ್.ವೀರಯ್ಯ ಅವರು ತಿಳಿಸಿದರು.
ಹೊಸಪೇಟೆ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಟ್ರಕ್ ಟರ್ಮಿನಲ್ ಸ್ಥಳ ಪರಿಶೀಲನೆ ನಡೆಸಿದ ನಂತರ ಟ್ರಾನ್ಸ್‍ಪೋಟರ್ಸ್ ಮತ್ತು ಏಜೆಂಟ್ಸ್ ಅಸೋಸಿಯೇಷನ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಬ್ಯಾಂಕ್, ರೆಸ್ಟೋರೆಂಟ್, ಪೊಲೀಸ್ ಸ್ಟೇಷನ್, ಶೌಚಾಲಯ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒಳಗೊಂಡ ಒಂದು ಸುವ್ಯವಸ್ಥಿತವಾದ ಟ್ರಕ್ ಟರ್ಮಿನಲ್ ಅತಿ ಶೀಘ್ರದಲ್ಲಿ ಶುರುವಾಗಲಿದ್ದು, ಈಗಾಗಲೇ ಟರ್ಮಿನಲ್ ನಿರ್ಮಾಣಕ್ಕೆ ಭೂಮಿ ಖರೀದಿ ಮಾಡಿ, ಸ್ವಾಧೀನ ಪತ್ರ ಪಡೆದುಕೊಂಡಿದ್ದು ಆದಷ್ಟು ಬೇಗ ಕೆಲಸ ಆರಂಭವಾಗಲಿದೆ ಎಂದರು.
ಈಗಾಗಲೇ ಬೆಂಗಳೂರಿನ ಯಶವಂತಪುರ,ದಾಸನಪುರ ಬಳಿ ಒಂದು ಸುಸಜ್ಜಿತ ಟರ್ಮಿನಲ್ ನಿರ್ಮಾಣ ಮಾಡಿದ್ದೇವೆ. ಹೊಸಪೇಟೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟರ್ಮಿನಲ್‍ಗೆ ಸರ್ಕಾರ ಸಹಕಾರ ನೀಡಲಿದೆ ಎಂದರು.
ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಪುರುಷೋತ್ತಮ ಅವರು ಮಾತನಾಡಿ, ಹೊಸಪೇಟೆ ಒಂದು ಕೇಂದ್ರ ಸ್ಥಳವಾದ್ದರಿಂದ ಇಲ್ಲಿ ನಿರ್ಮಿಸಲು ಉದೇಶಿಸಿರುವ ಟರ್ಮಿನಲ್ ಮಹತ್ವ ಪಡೆದುಕೊಳ್ಳಲಿದೆ.ಈ ಪ್ರದೇಶದಲ್ಲಿ ಗಣಿ ಮತ್ತು ಸ್ಟೀಲ್ ಕಂಪನಿಗಳು ಹೆಚ್ಚಾಗಿದ್ದು, ಲಾರಿಗಳ ಓಡಾಟವು ಜಾಸ್ತಿಯಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್‍ನ ಕಾರ್ಯನಿರ್ವಾಹಕ ಎಂಜನಿಯರ್‍ಗಳು ಮತ್ತು ಸಹಾಯಕ ಎಂಜನಿಯರ್‍ಗಳು ಹಾಗೂ ಟ್ರಾನ್ಸ್‍ಪೋಟರ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here