ಪರೀಕ್ಷಾ ಶುಲ್ಕವನ್ನು ಕಟ್ಟುವಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗೆಹರಿಸಲು AIDSO ಕುಲಸಚಿವರಿಗೆ ಮನವಿ.

0
108

ಬಳ್ಳಾರಿ:ಆಗಸ್ಟ್:30; ಬಳ್ಳಾರಿಯಲ್ಲಿ ಇಂದು AIDSO ವಿದ್ಯಾರ್ಥಿ ಸಂಘಟನೆಯಿಂದ ವಿ.ಎಸ್.ಕೆ.ಯು.ಬಿ ವಿವಿಯ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಪರೀಕ್ಷಾ ಶುಲ್ಕವನ್ನು ಕಟ್ಟುವಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಮೌಲ್ಯಮಾಪನ ವಿಭಾಗದ ಕುಲಸಚಿವರಿಗೆ ಮನವಿ ಸಲ್ಲಿಸಲಾಯಿತು.

ಯು.ಜಿ.ಸಿ ನೀಡಿರುವ ಪರೀಕ್ಷಾ ಮಾರ್ಗಸೂಚಿಯನ್ನು ಬಳ್ಳಾರಿ ವಿ.ಎಸ್.ಕೆ.ವಿ.ವಿಯು ಅನುಷ್ಠಾನಕ್ಕೆ ತಂದದ್ದು ವಿದ್ಯಾರ್ಥಿ ಸಮುದಾಯಕ್ಕೆ ದೊಡ್ಡ ಹೊರೆಯನ್ನು ಇಳಿಸಿದಂತಾಗಿದೆ. ಪದವಿ 2 ಮತ್ತು 4ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಹಾಗೂ 2ನೇ ಸೆಮಿಸ್ಟರ್ ಸ್ನಾತಕೋತ್ತರ ಪರೀಕ್ಷೆಗಳನ್ನು ರದ್ದುಪಡಿಸಿರುವುದು ಸ್ವಾಗತಾರ್ಹ. ಆದರೆ ರದ್ದಾಗಿರುವ ಪರೀಕ್ಷೆಗಳಿಗೆ ಪರೀಕ್ಷಾ ಶುಲ್ಕವನ್ನು ಕಟ್ಟಬೇಕೆಂಬ ವಿವಿಯ ಆದೇಶವು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ.

ವಿ.ಎಸ್.ಕೆ.ವಿ.ವಿಯಲ್ಲಿ ಓದುವ ಬಹುತೇಕ ವಿದ್ಯಾರ್ಥಿಗಳು ಸುತ್ತಮುತ್ತಲಿನ ಗ್ರಾಮಗಳ, ಜಿಲ್ಲೆಗಳ ಬಡ ಕೂಲಿ ಕಾರ್ಮಿಕರು ಹಾಗೂ ರೈತರ ಮಕ್ಕಳು. ಈಗಿನ ಕೊರೋನ ಪರಿಸ್ಥಿತಿಯಿಂದಾಗಿ ಹಲವು ರೀತಿಯ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕವನ್ನು ಸರ್ಕಾರವೇ ಭರಿಸಬೇಕು. ವಿವಿಯ ಸುತ್ತೋಲೆಯಲ್ಲಿ ವಿನಾಯಿತಿ ಶುಲ್ಕ ಕಟ್ಟಲು ಅರ್ಹ ವಿದ್ಯಾರ್ಥಿಗಳು ಕೇವಲ 150 ರೂ.ಗಳನ್ನು ಮಾತ್ರ ಕಟ್ಟಬೇಕೆಂದು ಸ್ಪಷ್ಟವಾಗಿದೆ. ಆದರೆ ವಿವಿಯ ಅಂತರ್ಜಾಲ ತಾಣದಲ್ಲಿ ಬಹುತೇಕ ವಿದ್ಯಾರ್ಥಿಗಳಿಗೆ 1150 ರೂ.ಗಳನ್ನು ಕಟ್ಟುವ ಚಲನ್ ಸೃಜನೆಯಾಗುತ್ತಿದೆ. ಮೊದಲೇ ಆತಂಕದಲ್ಲಿರುವ ವಿದ್ಯಾರ್ಥಿಗಳಿಗೆ ಇಷ್ಟೊಂದು ದೊಡ್ಡ ಮೊತ್ತವನ್ನು ಪರೀಕ್ಷಾ ಶುಲ್ಕವಾಗಿ ಕಟ್ಟಬೇಕೆಂಬುದು ಆಘಾತವಾಗಿದೆ. ಆದ್ದರಿಂದ ವಿವಿಯ ಅಂತರ್ಜಾಲ ತಾಣದಲ್ಲಿ ಆಗಿರುವ ತಾಂತ್ರಿಕ ತೊಂದರೆಗಳನ್ನು ಈ ಕೂಡಲೇ ಪರಿಹರಿಸಬೇಕೆಂದು ಎಐಡಿಎಸ್‌ಓ ಸಂಘಟನಾಕಾರರು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಪ್ರೋ. ಶಶಿಕಾಂತ್ ಎಸ್ ಉಡಿಕೇರಿ ರವರು “ವಿನಾಯಿತಿ ಶುಲ್ಕ ಪಾವತಿಸಬೇಕಾದ ವಿದ್ಯಾರ್ಥಿಗಳು ಕೇವಲ 150 ರೂ.ಗಳನ್ನು ಮಾತ್ರ ಕಟ್ಟಬೇಕು. ಅದಕ್ಕಿಂತ ಹೆಚ್ಚಿನ ಶುಲ್ಕವನ್ನು ಪಾವತಿಸಕೂಡದು. ವಿವಿಯ ಅಂತರ್ಜಾಲ ತಾಣದಲ್ಲಾಗಿರುವ ಗೊಂದಲಗಳನ್ನು ಈ ಕೂಡಲೇ ಪರಿಹರಿಸಲಾಗುವುದು ಮತ್ತು ವಿನಾಯಿತಿ ಶುಲ್ಕ ಪಾವತಿಸಬೇಕಾದ ವಿದ್ಯಾರ್ಥಿಗಳಿಗೆ ಸಂಪೂರ್ಣ ಶುಲ್ಕ ಕಟ್ಟುವ ಚಲನ್ ಸೃಜನೆಯಾದಲ್ಲಿ ವಿದ್ಯಾರ್ಥಿಗಳು ಸದರಿ ಕಾಲೇಜುಗಳಲ್ಲಿ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಿ ನವೀಕರಣ(update) ಮಾಡಬೇಕು. ಈಗಾಗಲೇ ಹೆಚ್ಚುವರಿ ಶುಲ್ಕ ಪಾವತಿಸಿದ ಯಾವುದೇ ವಿದ್ಯಾರ್ಥಿ ಅರ್ಜಿ ಸಲ್ಲಿಸಿದರೆ ಹೆಚ್ಚುವರಿ ಶುಲ್ಕವನ್ನು ಮರುಪಾವತಿ ಮಾಡಲಾಗುವುದು” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ AIDSO ಜಿಲ್ಲಾಧ್ಯಕ್ಷರಾದ ಗುರಳ್ಳಿ ರಾಜ, ಜಿಲ್ಲಾ ಕಾರ್ಯದರ್ಶಿಗಳಾದ ರವಿಕಿರಣ್.ಜೆ.ಪಿ, ಜಿಲ್ಲಾ ಸೆಕ್ರೆಟರಿಯಟ್ ಸದಸ್ಯರಾದ ಎಮ್.ಶಾಂತಿ, ಅನುಪಮ, ನಿಹಾರಿಕ ಹಾಗೂ ಇನ್ನಿತರೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬೇಡಿಕೆಗಳು :

◆ರದ್ದಾಗಿರುವ ಪರೀಕ್ಷೆಗಳ ಪರೀಕ್ಷಾ ಶುಲ್ಕವನ್ನು ಕಟ್ಟಿಸಿಕೊಳ್ಳಬೇಡಿ.

◆ವಿನಾಯಿತಿ ಶುಲ್ಕ ಪಾವತಿಸಬೇಕಾದ ವಿದ್ಯಾರ್ಥಿಗಳಿಂದ ಸಂಪೂರ್ಣ ಶುಲ್ಕ ಪಡೆಯಬೇಡಿ.

◆ಈಗಾಗಲೇ ಹೆಚ್ಚಿನ ಶುಲ್ಕ ಪಾವತಿಸಿರುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಮೊತ್ತವನ್ನು ಮರುಪಾವತಿಸಿ.

ವರದಿ:-ಮಹೇಶ್

LEAVE A REPLY

Please enter your comment!
Please enter your name here