ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಬಳ್ಳಾರಿಯ ಮಂಜಮ್ಮ ಜೋಗತಿ ಅವರಿಗೆ ನಮ್ಮ ಮನೆಯಲ್ಲಿ ಸನ್ಮಾನಿಸಿದ ಅವಿಸ್ಮರಣೀಯ ಕ್ಷಣ..

0
191

ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ನಮ್ಮ ಬಳ್ಳಾರಿಯ ಮಂಜಮ್ಮ ಜೋಗತಿ ಅವರನ್ನು ನನ್ನ ಮನೆಗೆ ಕರೆಯಿಸಿ, ನನ್ನ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ಅರುಣಾ ಜೊತೆಗೂಡಿ ಸನ್ಮಾನಿಸಿ, ಅಭಿನಂದಿಸಿರುವ ಅವಕಾಶ ದೊರಕಿರುವುದು ನಿಜಕ್ಕೂ ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ.

ವಿಜಯನಗರ ಸಾಮ್ರಾಜ್ಯದ ಗತವೈಭವದ ಸಡಗರ ಸಂಭ್ರಮವನ್ನು ಕಂಡ ಬಳ್ಳಾರಿ ಸೀಮೆ ಅನೇಕ ಮಹಾನ್ ಕಲಾವಿದರುಗಳನ್ನು, ಸಾಹಿತಿಗಳನ್ನು, ಬರಹಗಾರರನ್ನು ಕಂಡ ಪುಣ್ಯ ಭೂಮಿ. ನಮ್ಮ ಕಾಳವ್ವ ಜೋಗತಿ, ತೊಗಲುಗೊಂಬೆ ಆಟದ ಬೆಳಗಲ್ ವೀರಣ್ಣ, ಬಳ್ಳಾರಿಯ ರಾಘವ, ಜೋಳದ ರಾಶಿ ದೊಡ್ಡನಗೌಡರು ಇಂದು ನಮ್ಮ ಮಂಜಮ್ಮ ಜೋಗತಿ ಸೇರಿದಂತೆ ಹೀಗೆ ಹಲವಾರು ಜನ ಕಲಾವಿದರಿಗೆ ಜನ್ಮ ನೀಡಿದ ಪುಣ್ಯ ಭೂಮಿ ನಮ್ಮ ಬಳ್ಳಾರಿ ಜಿಲ್ಲೆ. ಇಂದು ನಮ್ಮ ಬಳ್ಳಾರಿಯ ಖ್ಯಾತ ಕಲಾವಿದೆ ಮಂಜಮ್ಮ ಜೋಗತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಇಡೀ ನಮ್ಮ ಬಳ್ಳಾರಿ ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಅತ್ಯಂತ ತುಂಬು ಹೃದಯದಿಂದ ಮತ್ತು ಸಂತೋಷದಿಂದ ಸಮಸ್ತ ನನ್ನ ಬಳ್ಳಾರಿ ಜಿಲ್ಲೆಯ ಜನತೆ ಪರವಾಗಿ ಮಂಜಮ್ಮ ಜೋಗತಿ ಅವರನ್ನು ಸನ್ಮಾನಿಸಿದೆವು.

ಸನ್ಮಾನವನ್ನು ಸ್ವೀಕರಿಸಿದ ನಂತರ ನಮ್ಮ ಬಗ್ಗೆ ನೆನಪಿಸಿಕೊಂಡು, ಮಾತನಾಡಿದ ಮಂಜಮ್ಮ ಅವರು ತಮಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸುವ ಸಮಯದಲ್ಲಿ ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಿರಿ ಅದಕ್ಕೆ ತಾವೆ ಸಹಕರಿಸಿರುವಿರಿ ಎಂದು ಹೇಳಿದ ಮಂಜಮ್ಮ ಅವರು ನನ್ನ ಕಷ್ಟಗಳನ್ನು ನೆನೆದು ಮಾತನಾಡುವ ಸಮಯದಲ್ಲಿ ಭಾವುಕರಾದರು. ಅವರು ಭಾವುಕರಾಗಿರುವುದನ್ನು ಕಂಡು ನಾನು ಕೊಂಚ ಸಮಯ ವಿಚಲಿತನಾದೆ. ಭಾವನೆಗಳಿಗೆ, ಸಂಬಂದಗಳಿಗೆ, ಪ್ರೀತಿ ವಿಶ್ವಾಸಗಳಿಗೆ ಇರುವ ಮಮಕಾರವೇ ಅಂತಹದ್ದು ಎಂಬುದು ನನ್ನ ಭಾವನೆ. ಸನ್ಮಾನ ಸ್ವೀಕರಿಸಿದ ನಂತರ, ಮಂಜಮ್ಮ ಜೋಗತಿ ಅವರು ನನ್ನ ಹಾಗೂ ನನ್ನ ಧರ್ಮಪತ್ನಿ ಲಕ್ಷ್ಮೀ ಅರುಣಾ ಅವರ ದೃಷ್ಟಿ ತೆಗೆದು ನಮ್ಮನ್ನು ಆಶೀರ್ವದಿಸಿದರು.

ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ನಮ್ಮ ಬಳ್ಳಾರಿಯ ಮಂಜಮ್ಮ ಜೋಗತಿ ನೂರುಕಾಲ ಬಾಳಿ ಬದುಕಲಿ, ಅವರ ಕಲೆ ದೇಶಾದ್ಯಂತಹ ಪ್ರಸಿದ್ಧಿಯನ್ನು ಪಡೆಯಲಿ, ಮಂಜಮ್ಮ ಜೋಗತಿ ಅವರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ ಎಲ್ಲರಿಗೂ ನನ್ನ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಗಾಲಿ ಜನಾರ್ಧನ ರೆಡ್ಡಿ.

LEAVE A REPLY

Please enter your comment!
Please enter your name here