ಸಿ.ಹಯವದನರಾವ್ ಮಹಾನ್ ಇತಿಹಾಸ ತಜ್ಞ, ಗೆಜೆಟಿಯರ್, ಅರ್ಥಶಾಸ್ತ್ರಜ್ಞ ಮತ್ತು ಪ್ರಸಿದ್ಧ ವಿದ್ವಾಂಸರು.

0
69

ಕಾಂಚೀವರಂ ಹಯವದನ ರಾವ್‌ ಅವರು ಹೊಸೂರಿನಲ್ಲಿ 1865ರ ಜುಲೈ 10ರಂದು ಜನಿಸಿದರು. ತಂದೆ ರಾಜಾರಾವ್. ಇವರದ್ದು ಕನ್ನಡ ಮಾತೃಭಾಷೆಯ ಕುಟುಂಬ.

ಹಯವದನ ರಾವ್ ಅವರ ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ ನಡೆಯಿತು. ಹೈಸ್ಕೂಲಿಗೆ ಸೇರಿದ್ದು ಮದರಾಸಿನ ಹಿಂದೂ ಹೈಸ್ಕೂಲು. ಮದರಾಸಿನ ಪ್ರೆಸಿಡೆನ್ಸಿ ಮತ್ತು ಕ್ರಿಶ್ಚಿಯನ್ ಕಾಲೇಜಿನಿಂದ ಬಿ.ಎ. ಮತ್ತು ಬಿ.ಎಲ್. ಪದವಿ ಪಡೆದರು. ಪದವಿ ಪಡೆದ ನಂತರ ಮದರಾಸಿನ ವಸ್ತು ಸಂಗ್ರಹಾಲಯದಲ್ಲಿ ಕ್ಯೂರೇಟರಾಗಿ ಕೆಲಕಾಲ ಕಾರ್ಯನಿರ್ವಹಿಸಿದರು. ನಂತರ ‘ಮದರಾಸ್ ಟೈಮ್ಸ್’ ಪತ್ರಿಕೆಯ ಸಂಪಾದಕತ್ವ ವಹಿಸಿಕೊಂಡರು. ಅಲ್ಲಿಂದ ಅಲಹಾಬಾದಿಗೆ ತೆರಳಿ ‘ದಿ ಲೀಡರ್’ ಪತ್ರಿಕೆಯಲ್ಲಿ ಪ್ರಸಿದ್ದಿ ಪಡೆದರು.

ಸರ್. ಎಂ. ವಿಶ್ವೇಶ್ವರಯ್ಯನವರು ಹಯವದನ ರಾವ್ ಅವರನ್ನು ಮೈಸೂರಿಗೆ ಆಹ್ವಾನಿಸಿದಾಗ ‘ದಿ ಮೈಸೂರು ಎಕನಾಮಿಕಲ್ ಜರ್ನಲ್’ ಸಂಪಾದಕತ್ವ ವಹಿಸಿಕೊಂಡರು. ತಮ್ಮ ಜೀವಿತದ ಕೊನೆಯವರೆವಿಗೂ ಆ ಪತ್ರಿಕೆಯೊಡನೆ ಸಂಪರ್ಕ ಹೊಂದಿದ್ದರು. ಬಹುಭಾಷಾ ವಿದ್ವಾಂಸರಾಗಿದ್ದ ರಾಯರಿಗೆ ಇಂಗ್ಲಿಷ್, ಲ್ಯಾಟಿನ್, ಫ್ರೆಂಚ್, ಜರ್ಮನ್, ಸಂಸ್ಕೃತ, ಕನ್ನಡ, ತೆಲುಗು, ಮರಾಠಿ, ತಮಿಳು ಭಾಷೆಗಳಲ್ಲಿ ಪಾಂಡಿತ್ಯ-ಪರಿಶ್ರಮ ಇದ್ದವು. ಅನೇಕ ವರ್ಷಕಾಲ ಮೈಸೂರು ವಿಶ್ವವಿದ್ಯಾಲಯದಲ್ಲಿ ತೆಲುಗುಭಾಷೆಯ ಪರೀಕ್ಷಕರ ಜವಾಬ್ದಾರಿ ಸಹಾ ನಿರ್ವಹಿಸಿದರು.

ಇತಿಹಾಸ ತತ್ತ್ವಗಳನ್ನರಗಿಸಿಕೊಂಡ ಹಯವದನ ರಾವ್ ಅವರು ಕರ್ನಾಟಕ ಇತಿಹಾಸ ರಚನೆಯಲ್ಲಿ ಮಹತ್ತರ ಪಾತ್ರ ವಹಿಸಿದರು. 1924ರಲ್ಲಿ ಅವರಿಗೆ, ಹಿಂದೆ ಬಿ. ಎಲ್. ರೈಸ್ ಅವರು ರೂಪಿಸಿದ್ದ ಮೈಸೂರು ಗೆಜೆಟಿಯರ್ಸ್‌ ಅನ್ನು ಪರಿಷ್ಕರಿಸುವ ಸಮಿತಿಯ ಪ್ರಮುಖ ಜವಾಬ್ಧಾರಿ ವಹಿಸಲಾಯಿತು. ಇವರು ಸಂಪಾದಿಸಿದ ಗೆಜೆಟಿಯರ್ಸ್‌ ಪ್ರಮಾಣ ಪೂರ್ವಕ ಗ್ರಂಥಗಳಾಗಿವೆ. ಏಳು ಸಂಪುಟಗಳಲ್ಲಿ ಮೈಸೂರು ಗೆಜೆಟಿಯರ್ಸ್‌ ಪ್ರಕಟಿಸಿದರು. ಮೈಸೂರು ರಾಜ ಒಡೆಯರ ವಂಶಕ್ಕೆ ಸೇರಿದ 3 ಸಂಪುಟಗಳ ‘ಹಿಸ್ಟರಿ ಆಫ್ ಮೈಸೂರು’ ರಚಿಸಿ ಪ್ರಕಟಿಸಿದರು. ಇದರಲ್ಲಿ ಒಡೆಯರ್ ಮನೆತನಗಳ 1399ರ ಅವಧಿಯಿಂದ 1799 ಅವಧಿಯ ಚರಿತ್ರಾರ್ಹ ಘಟನೆಗಳ ಬೃಹತ್ ವ್ಯಾಪ್ತಿಯಿದೆ. ಇದಲ್ಲದೆ New Indian tales: nineteen amusing and instructive tales; Indian Biographical Dictionary; Indian Caste System, a study; The Dasara in Mysore: Its Origin and Significance ಮುಂತಾದ ಅನೇಕ ಮಹತ್ವದ ಕೃತಿಗಳನ್ನೂ ರಚಿಸಿದರು.

ಹಯವದನ ರಾವ್ ಅವರು ಬೆಂಗಳೂರು ಪುರಸಭೆಯ ಚುನಾಯಿತ ಪ್ರತಿನಿಯಾಗಿ, ಮೈಸೂರು ನ್ಯಾಯ ವಿಧಾಯಕ ಸಭೆ ಸದಸ್ಯರಾಗಿ, ಮೈಸೂರು ವಿ.ವಿ.ದ ಅಕಾಡೆಮಿಕ್ ಕೌನ್ಸಿಲ್, ಸೆನೆಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು.

ಹಾಯವದನರಾವ್ ಅವರಿಗೆ 1911ರಲ್ಲಿ ಬ್ರಿಟಿಷ್ ಸರಕಾರದಿಂದ ‘ರಾವ್ ಸಾಹೇಬ್’, ಲಾರ್ಡ್ ಲಿನ್‌ಲಿತ್‌ಗೋ ನೀಡಿದ ‘ರಾವ್ ಬಹದ್ದೂರ್’, ನಾಲ್ವಡಿ ಕೃಷ್ಣರಾಜ ಒಡೆಯರು ನೀಡಿದ ‘ರಾಜ ಚರಿತ ವಿಶಾರದ’ ಮುಂತಾದ ಅನೇಕ ಗೌರವಗಳು ಸಂದಿದ್ದವು. ಅವರಿಗೆ ರಾಯಲ್ ಅಂಥ್ರೋಪಾಲಜಿಕಲ್ ಇನ್ಸ್ಟಿಟ್ಯೂಟ್ ಸದಸ್ಯತ್ವ, ಇಂಡಿಯನ್ ಹಿಸ್ಟಾರಿಕಲ್ ರೆಕಾರ್ಡ್ಸ್ ಕಮಿಷನ್ ಸದಸ್ಯತ್ವ ಮತ್ತು ರಾಯಲ್ ಸೊಸೈಟಿ ಆಫ್ ಎಕನಾಮಿಕ್ಸ್ ಫೆಲೋ ಗೌರವ ಸಹಾ ಸಂದಿತ್ತು.

ಹಯವದನ ರಾವ್ ಅವರು 1946ರ ಜನವರಿ 27ರಂದು ಬೆಂಗಳೂರಿನಲ್ಲಿ ನಿಧನರಾದರು.

ಕೃಪೆ:- ‘ಕನ್ನಡ ಸಂಪದ’

LEAVE A REPLY

Please enter your comment!
Please enter your name here