ವಿಶ್ವ ಕ್ಯಾನ್ಸರ್ ದಿನಾಚರಣೆ: ಕ್ಯಾನ್ಸರ್ ಬಗ್ಗೆ ಭಯ ಬೇಡ, ಜಾಗೃತಿ ವಹಿಸಿ ಮನೆ ಮನೆಗೆ ತೆರಳಿ ಕ್ಯಾನ್ಸರ್ ಪರೀಕ್ಷೆ: ಜಿಪಂ ಸಿಇಒ ಕೆ.ಆರ್.ನಂದಿನಿ

0
82

ಬಳ್ಳಾರಿ,ಫೆ.04 : ಮಹಿಳೆಯರಲ್ಲಿ ಸ್ತನ ಮತ್ತು ಗರ್ಭ ಖಂಡದ ಕ್ಯಾನ್ಸರ್‍ನ ಗುಣಲಕ್ಷಣಗಳನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆದುಕೊಂಡರೆ ಗುಣಮುಖರಾಗಬಹುದು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರತಿ ಮನೆ ಮನೆಗೆ ತೆರಳಿ ಪ್ರಾಥಮಿಕ ಹಂತದ ಕ್ಯಾನ್ಸರ್ ಪರೀಕ್ಷೆಯನ್ನು ಮಾಡಲಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಅರ್.ನಂದಿನಿ ಅವರು ತಿಳಿಸಿದರು.
ಕ್ಯಾನ್ಸರ್ ದಿನಾಚರಣೆ ನಿಮಿತ್ತ ನಗರದ ಬಂಡಿಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ/ಅಸಾಂಕ್ರಾಮಿಕ ರೋಗಗಳ ಘಟಕದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆಯರಲ್ಲಿ ಗರ್ಭ ಖಂಡ ಮತ್ತು ಸ್ತನ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು. ಈ ಕ್ಯಾನ್ಸರ್ ಅನ್ನು ಪತ್ತೆ ಹಚ್ಚುವ ಕೆಲಸ ತೀವ್ರಗತಿಯಲ್ಲಿ ನಡೆಯಬೇಕು’ ಎಂದರು.
ಕ್ಯಾನ್ಸರ್ ಬಗ್ಗೆ ಮಹಿಳೆಯರಲ್ಲಿ ಹೆಚ್ಚಿನ ಅಳುಕು, ಭಯ ಮತ್ತು ಅರಿವಿನ ಕೊರತೆಯಿದೆ ಇದನ್ನು ಹೋಗಲಾಡಿಸಿದರೆ ಕ್ಯಾನ್ಸರ್ ಮುಕ್ತವಾಗಲು ಸಾಧ್ಯ. ಎಲ್ಲಾ ಕಾರ್ಯಗಳು ಸರಿಯಾದ ರೀತಿಯಲ್ಲಿ ನಡೆದರೆ ಮುಂದಿನ ನಾಲ್ಕೈದು ವರ್ಷಗಳಲ್ಲಿ ಕ್ಯಾನ್ಸರ್ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ನಮ್ಮ ಜಿಲ್ಲೆ ಹೆಸರಾಗಲಿದೆ. ‘ಜಿಲ್ಲಾ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ಮ್ಯಾಮೋಗ್ರಫಿ ಘಟಕಕ್ಕೆ ಒಂದೂವರೆ ತಿಂಗಳ ಹಿಂದೆ ಭೇಟಿ ನೀಡಿದ ಸಂದರ್ಭದಲ್ಲಿ ಮಹಿಳಾ ಕೇಂದ್ರಿತವಾಗಿ ಕ್ಯಾನ್ಸರ್ ದಿನಾಚರಣೆಯನ್ನು ಹಮ್ಮಿಕೊಳ್ಳುವ ಆಶಯ ಮೂಡಿತು’ ಎಂದು ತಿಳಿಸಿದರು.
‘ದೈಹಿಕವಾಗಿ ಸ್ವಪರಿಶೀಲನೆ ಮಾಡಿಕೊಳ್ಳುವ ಮೂಲಕ ಆಶಾ ಕಾರ್ಯಕರ್ತೆಯರ ಸಲಹೆ ಪಡೆದು ಸ್ತನ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಬಹುದು. ನಂತರ ವೈದ್ಯರ ಸಲಹೆ ಪಡೆಯಬಹುದು’. ಪ್ರತಿ ನೂರು ಮಹಿಳೆಯರ ಪೈಕಿ ಕನಿಷ್ಠ ಇಬ್ಬರಲ್ಲೂ ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಇನ್ನೂ ನಿರಾಶಾದಾಯಕ ಪರಿಸ್ಥಿತಿ ಇದೆ. ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ಇ-ಸಂಜೀವಿನಿ ಕಾರ್ಯಕ್ರಮದ ಅಡಿ ದೂರವಾಣಿಯಲ್ಲೆ ಅತಿ ಹೆಚ್ಚು ಮಂದಿಗೆ ಆರೋಗ್ಯ ಸಲಹೆ ನೀಡಿದ ಸಾಧನೆಯನ್ನು ಜಿಲ್ಲೆ ಮಾಡಿದೆ. ಕ್ಯಾನ್ಸರ್ ತಪಾಸಣೆ ವಿಷಯದಲ್ಲೂ ಈ ಸಾಧನೆ ಆಗಬೇಕಾಗಿದೆ. ಆರು ತಿಂಗಳಲ್ಲಿ ಎಲ್ಲ ಮಹಿಳೆಯರ ಆರೋಗ್ಯ ಸಮೀಕ್ಷೆ ಪೂರ್ಣಗೊಳಿಸಬೇಕು. ತುರ್ತು ಚಿಕಿತ್ಸೆ ಅಗತ್ಯವಿರುವವರನ್ನು ಗುರುತಿಸಿ ಚಿಕಿತ್ಸೆ ಆರಂಭಿಸಬೇಕು ಎಂದರು.
ಕ್ಯಾನ್ಸರ್ ಗೆದ್ದು ಬಂದವರ ಕುರಿತ ಅನುಭವ ಕಥನವನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಸಾರ ಮಾಡಬೇಕಾಗಿದೆ. ಆ ಮೂಲಕ ಮಹಿಳೆಯರಲ್ಲಿ ವಿಶ್ವಾಸ ಮೂಡಿಸಬೇಕು. ಪುರುಷರಲ್ಲಿ ಕಂಡು ಬರುವ ಮೂತ್ರಕೋಶದ ಕ್ಯಾನ್ಸರ್ ಬಗ್ಗೆಯೂ ಹೆಚ್ಚಿನ ಜಾಗೃತಿ ಮೂಡಬೇಕಾಗಿದೆ. ವೃತ್ತಿ ಸಂಬಂಧಿತವಾದ ಇಂಥ ಕ್ಯಾನ್ಸರ್ ಗಳ ಬಗ್ಗೆ ಜನ ಹೆಚ್ಚು ಮಾತಾಡಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಮಾತನಾಡಿ, ಕ್ಯಾನ್ಸರ್ ತಡೆಯುವ ನಿಟ್ಟಿನಲ್ಲಿ ಪ್ರತಿ ತಿಂಗಳು ಎರಡು ಮತ್ತು ನಾಲ್ಕನೇ ಬುಧವಾರ ನಿಮ್ಮ ಬಳಿ ಬಂದು ಕ್ಯಾನ್ಸರ್ ಪರೀಕ್ಷೆ ಮಾಡಲಾಗುತ್ತದೆ ಅವರಿಗೆ ಸಹಕಾರ ನೀಡಿ ಎಂದರು.
ಕ್ಯಾನ್ಸರ್ ಬಂದರೆ ವಾಸಿಯಾಗುವುದಿಲ್ಲ, ಯಾವುದೇ ಚಿಕಿತ್ಸೆ ಸಿಗುವುದಿಲ್ಲ ಎನ್ನುವ ಭಯ ಬೇಡ. ಎಲ್ಲಾ ರೀತಿಯ ಕ್ಯಾನ್ಸರ್‍ಗೆ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ಒಂದು ರೋಗವನ್ನು ಆದಷ್ಟು ಬೇಗ ಕಂಡ ಹಿಡಿದು ಅದಕ್ಕೆ ಸರಿಯಾದ ಚಿಕಿತ್ಸೆ ನೀಡಿದರೆ ಯಾವ ರೋಗವು ಸಹ ಜನರನ್ನು ಹೆಚ್ಚಿನ ದಿನ ಕಾಡುವುದಿಲ್ಲ. ಪ್ರತಿಯೊಬ್ಬರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಿರಿ, ಕ್ಯಾನ್ಸರ್ ಮುಕ್ತವಾಗಿ ಮುನ್ನಡೆಯುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಎಂದು ಅವರು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ,ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಡಾ.ಪೂರ್ಣಿಮಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಮತ್ತು ಆಸ್ಪತ್ರೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here