ಆರ್ ಕೆ ನಾರಾಯಣ್ ಈ ಮಹಾನ್ ಚೇತನಕ್ಕೆ ನಮ್ಮ ಅನಂತ ಗೌರವಗಳು

0
96

ಆರ್ ಕೆ ನಾರಾಯಣ್ ಅಂದರೆ ಅದೆಂತದ್ದೋ ಪ್ರೀತಿ. ನಮಗೆಲ್ಲಾ ಗೊತ್ತಿದ್ದೋ ಗೊತ್ತಿಲ್ಲದೆಯೋ ಇಂಗ್ಲಿಷ್ ಭಾಷೆಯ ಬಗ್ಗೆ ಅವ್ಯಕ್ತ-ಅಘೋಷಿತ ವ್ಯಾಮೋಹ ತುಂಬಿರುವುದು ಒಂದು ರೀತಿಯಲ್ಲಾದರೆ, ಮತ್ತೊಂದು ರೀತಿಯಲ್ಲಿ ಪುಟ್ಟ ಪುಟ್ಟ ವಾಕ್ಯಗಳಲ್ಲಿ ಕೆಲವೊಂದೇ ಪುಟಗಳಲ್ಲಿ ನಮ್ಮ ಭಾರತೀಯ ಮನಸ್ಸುಗಳಿಗೆ ತಮ್ಮನ್ನೇ ತಾವು ಕಂಡುಕೊಳ್ಳುವಂತಹ ಮೋಹಕ ಕತೆಗಳನ್ನು ನೀಡಿದವರು ನಾರಾಯಣ್. ನಾರಾಯಣ್ ಅವರ ಬರಹಗಳಲ್ಲಿನ ಸರಳತೆ, ಲಾಲಿತ್ಯ, ಹಾಸ್ಯ, ದಿನಂಪ್ರತಿ ನಾವು ಕಾಣುವ, ನಮ್ಮಲ್ಲೇ ಕಂಡುಕೊಳ್ಳುವ ವ್ಯಕ್ತಿ, ಗುಣ ಸ್ವರೂಪಗಳು ಓದುಗನಿಗೆ ಅಪ್ಯಾಯಮಾನವೆನಿಸುವಂತದ್ದು. ಆರ್ ಕೆ ನಾರಾಯಣ್ ಅವರ ಮಾಲ್ಗುಡಿಯಷ್ಟು ಪ್ರಖ್ಯಾತ ಕಥಾನಕವಾದ ಊರು ವಿಶ್ವದಲ್ಲಿ ಮತ್ತೊಂದಿಲ್ಲ. ಅದು ಕಾಲ್ಪನಿಕ ಎಂದು ಒಪ್ಪಿಕೊಳ್ಳಲು ಕೂಡಾ ನಮ್ಮ ಮನಸ್ಸು ತಯಾರಿಲ್ಲ. ಅದು ನಮ್ಮದೇ ಊರು, ನಾವೆಲ್ಲಾ ಅದರ ನಿವಾಸಿಗಳು ಎನ್ನುವಷ್ಟು ನಾವೆಲ್ಲಾ ಅದರಲ್ಲಿ ತೇಲಿ ಹೋದವರು.

ನಮ್ಮ ಆರ್. ಕೆ. ನಾರಾಯಣ್ ಅವರು ಕೂಡಾ ನಮ್ಮ ಕನ್ನಡ ಕಾದಂಬರಿಕಾರರಾದ ಡಾ. ಕೆ. ಶಿವರಾಮಕಾರಂತರಂತೆ ಅಕ್ಟೋಬರ್ 10ರಂದೇ ಜನಿಸಿದವರು. ಅವರಿಗಿಂತ ನಾಲ್ಕು ವರ್ಷ ಚಿಕ್ಕವರು. ಅಂದರೆ ಆರ್ ಕೆ. ನಾರಾಯಣರು ಜನಿಸಿದ್ದು ಅಕ್ಟೋಬರ್ 10, 1906ರಲ್ಲಿ. ಕಾರಂತರ ಬರವಣಿಗೆಯ ಬಗ್ಗೆ ಆರ್. ಕೆ. ನಾರಾಯಣ್ ಅವರಿಗೆ ಬಹಳ ಗೌರವ.ಕಾರಂತರಿಗೆ ನೋಬಲ್ ಪ್ರಶಸ್ತಿ ಖಂಡಿತವಾಗಿಯೂ ಸಲ್ಲಬೇಕಿತ್ತು ಎಂದು ಅವರು ಒಮ್ಮೆ ಸಂದರ್ಶನದಲ್ಲಿ ಹೇಳಿದ್ದರು.

ರಾಶಿಪುರಂ ಕೃಷ್ಣಸ್ವಾಮಿ ನಾರಾಯಣ್ ಅವರು ಹುಟ್ಟಿದ್ದು ಮದ್ರಾಸಿನಲ್ಲಿ. ಅವರ ತಂದೆ ಹೈಸ್ಕೂಲ್ ಹೆಡ್ ಮಾಸ್ತರರಾಗಿದ್ದರು. ಅವರ ತಂದೆಗೆ ಆಗಾಗ ವರ್ಗವಾಗುತ್ತಿದ್ದುದರಿಂದ ನಾರಾಯಣ್ ಅವರು ಹೆಚ್ಚು ತಮ್ಮ ಅಜ್ಜಿಯ ಮಾರ್ಗದರ್ಶನದಲ್ಲಿ ಬೆಳೆದರು. ಮನೆಯಲ್ಲಿ ಇಂಗ್ಲಿಷ್ ವಾತಾವರಣ. ಇಂಗಿಷ್ ತಪ್ಪು ಉಚ್ಚಾರ ಮಾಡಿದರೆ ಮನೆಯಲ್ಲಿ ಹಿರಿಯರು ಗದರುತ್ತಿದ್ದರು ಎಂದು ನಾರಾಯಣರ ತಮ್ಮ ಆರ್ ಕೆ. ಲಕ್ಷ್ಮಣ್ ಒಂದೆಡೆ ಉಲ್ಲೇಖಿಸಿದ್ದಾರೆ. ಹನ್ನೆರಡು ವರ್ಷದ ನಾರಾಯಣ್ ಸ್ವಾತಂತ್ರ್ಯ ಚಳುವಳಿಯ ಮೆರವಣಿಗೆಯೊಂದರಲ್ಲಿ ಭಾಗವಹಿಸಿದಾಗ ಅವರ ಚಿಕ್ಕಪ್ಪ “ನಾವು ಸರ್ಕಾರದ ವಿರುದ್ಧ ನಡೆದುಕೊಳ್ಳುವುದು ಒಳ್ಳೆಯತನವಲ್ಲ, ನಾವು ರಾಜಕೀಯದಿಂದ ದೂರವಿರುವ ಗೌರವಸ್ಥ ಕುಟುಂಬದವರು” ಎಂಬ ಭಾಷಣ ನೀಡಿದ್ದರಂತೆ.

ತಮ್ಮ ತಂದೆಯವರಿಗೆ ಮೈಸೂರಿನ ಮಹಾರಾಜಾ ಕಾಲೇಜಿಯೇಟ್ ಹೈಸ್ಕೂಲಿಗೆ ವರ್ಗವಾದಾಗ ನಾರಾಯಣ್ ಅವರು ಕೂಡಾ ಅದೇ ಸ್ಕೂಲಿನಲ್ಲಿ ದಾಖಲಾದರು. ಶಾಲೆಯಲ್ಲಿದ್ದ ಬೃಹತ್ ಗ್ರಂಥಾಲಯ ಮತ್ತು ತಮ್ಮ ತಂದೆಯವರ ಬಹು ಪುಸ್ತಕ ಸಂಗ್ರಹಗಳು ನಾರಾಯಣ್ ಅವರ ಓದುವ ಆಸಕ್ತಿಗೆ ಪೋಷಣೆ ಒದಗಿಸಿದವು. ಹೈಸ್ಕೂಲು ಮುಗಿಸಿದ ನಂತರ ಪದವಿ ಪ್ರವೇಶ ಪರೀಕ್ಷೆಯಲ್ಲಿ ಡುಮ್ಕಿ ಹೊಡೆದ ನಾರಾಯಣ್ ಒಂದು ವರ್ಷ ಮನೆಯಲ್ಲಿ ಓದು ಬರಹಗಳಲ್ಲಿ ಕಾಲ ಕಳೆದರು. ಬಿ.ಎ. ಪದವಿಯನ್ನು ಎಲ್ಲರೂ ಮೂರು ವರ್ಷಕ್ಕೆ ಮುಗಿಸಿದರೆ ನಾರಾಯಣ್ ಅವರು ತೆಗೆದುಕೊಂಡದ್ದು ನಾಲ್ಕುವರ್ಷ! ಗೆಳೆಯನೊಬ್ಬ ಪ್ರೇರೇಪಿಸಿದ,, “ನೋಡು ನಿನ್ನ ಬರವಣಿಗೆಯ ಹವ್ಯಾಸಕ್ಕೆಲ್ಲಾ ಎಂ.ಎ ಓದಿದರೆ ಸಹಾಯಕ ಎಂದು”. ಈ ಮಧ್ಯೆ ಒಂದು ಶಾಲೆಯಲ್ಲಿ ಅಧ್ಯಾಪಕರಾದರು. ಅಲ್ಲಿದ್ದದ್ದು ಕೆಲವೇ ದಿನ. “ಡ್ರಿಲ್ ಮಾಸ್ಟರ್ ಬಂದಿಲ್ಲ. ಅವರ ಬದಲು ನೀನೇ ಕ್ಲಾಸ್ ತೊಗೋ” ಎಂದು ಸ್ಕೂಲಿನ ಮುಖ್ಯಾಪಾಧ್ಯಾಯರು ನೀಡಿದ ಅಣತಿಗೆ ಕುಪಿತರಾಗಿ ಆ ಹುದ್ದೆಯಿಂದಲೇ ಹೊರಬಂದರು. ಈ ಅನುಭವದಿಂದ ಅವರು, ತಮಗೆ ಬರೆಯುವುದು ಬಿಟ್ಟು ಬೇರೆ ಉದ್ಯೋಗ ಸರಿಹೊಂದುವುದಿಲ್ಲ ಎಂಬ ಅಭಿಪ್ರಾಯ ಬೇರೂರಿತು.

ನಾರಾಯಣ್ ಅವರು ಮೊದಲು ಬರೆದ ಪುಸ್ತಕ “Development of Maritime Laws of 17th-Century England”. ಅದಾದ ನಂತರದಲ್ಲಿ ಕೆಲವೊಂದು ಇಂಗ್ಲಿಷ್ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕಗಳಲ್ಲಿ ಲೇಖನಗಳನ್ನು ಬರೆಯತೊಡಗಿದರು. ಮೊದಲ ವರ್ಷದ ಅವರ ಗಳಿಕೆ “ಒಂಭತ್ತು ರೂಪಾಯಿ ಮತ್ತು ಹನ್ನೆರಡು ಆಣೆ”. ಆದಾಯ ಕಡಿಮೆ ಇದ್ದರೂ ನಾರಾಯಣ್ ಅವರ ಈ ಕೆಲಸವನ್ನು ಮನೆಯವರು ಗೌರವಯುತವೆಂದು ಒಪ್ಪಿದ್ದರು.

1930ರಲ್ಲಿ ನಾರಾಯಣ್ ಅವರು “Swami and Friends” ಕಥೆಯನ್ನು ಬರೆದರು. ಈ ಕಥೆಯಲ್ಲಿಯೇ ನಾರಾಯಣ್ ಮೊದಲ ಬಾರಿಗೆ ‘ಮಾಲ್ಗುಡಿ’ಯನ್ನು ಸೃಷ್ಟಿಸಿದ್ದು. ಆ ಕಥೆಯನ್ನು ಅವರ ಚಿಕ್ಕಪ್ಪ ಲೇವಡಿ ಮಾಡಿದರೆ, ಯಾವುದೇ ಪ್ರಕಾಶಕರೂ ಬಳಿ ಸುಳಿಯಲಿಲ್ಲ.

1933ರಲ್ಲಿ ಅಕ್ಕನ ಮನೆಗೆ ಹೋಗಿದ್ದಾಗ ಹದಿನೈದು ವರ್ಷದ ರಾಜಂ ಎಂಬ ನೆರೆಮನೆಯ ಹುಡುಗಿಯಲ್ಲಿ ಪ್ರೇಮ ಉಂಟಾಗಿ ಹಣಕಾಸು, ಜಾತಕ ಇತ್ಯಾದಿ ಹಲವಾರು ಅಡ್ಡತಡೆಗಳು ಇದ್ದಾಗ್ಯೂ ಆ ಹುಡುಗಿಯ ಮನೆಯವರನ್ನು ಒಪ್ಪಿಸಿ ಆಕೆಯ ಕೈ ಹಿಡಿದರು. ಮದುವೆಯಾದ ನಂತರದಲ್ಲಿ ಮದ್ರಾಸಿನ ‘The Justice’ ಎಂಬ ಬ್ರಾಹ್ಮಣೇತರರ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದ ಪತ್ರಿಕೆಯ ವರದಿಗಾರರಾದರು. ಅಯ್ಯರ್ ಮನೆತನದ ಹುಡುಗನೊಬ್ಬ ಈ ಕಾಯಕಕ್ಕೆ ಬಂದಿದ್ದು ಪತ್ರಿಕೆಯ ಆಡಳಿತವರ್ಗದವರಿಗೆ ಕೋಡುಮೂಡಿಸಿತ್ತು. ಈ ಕಾಯಕದಲ್ಲಿದ್ದ ಹಲವಾರು ಸಂಪರ್ಕಗಳು ನಾರಾಯಣ್ ಅವರ ನೆರವಿಗೆ ಬಂದವು.

ನಾರಾಯಣ್ ಅವರು ಆಕ್ಸ್ಫರ್ಡ್ ನಲ್ಲಿದ್ದ ತಮ್ಮ ಗೆಳೆಯರೊಬ್ಬರಿಗೆ ‘ಸ್ವಾಮಿ ಅಂಡ್ ಫ್ರೆಂಡ್ಸ್’ ಕಥೆಯ ಹಸ್ತಪ್ರತಿಯನ್ನು ಕಳುಹಿಸಿಕೊಟ್ಟಿದ್ದರು. ಆ ಗೆಳೆಯರು ಆ ಕತೆಯನ್ನು ಗ್ರಹಾಂ ಗ್ರೀನ್ ಅವರಿಗೆ ತೋರಿಸಿದಾಗ, ಗ್ರಹಾಂ ಗ್ರೀನರು ತಮ್ಮ ಪ್ರಕಾಶಕರಿಗೆ ಈ ಕೃತಿಯನ್ನು ಶಿಫಾರಸ್ಸು ಮಾಡಿದರು. ಹೀಗಾಗಿ ಈ ಕೃತಿ 1935ರಲ್ಲಿ ಬೆಳಕು ಕಂಡಿತು. ಗ್ರಹಾಂ ಗ್ರೀನ್ ಮತ್ತು ನಾರಾಯಣ್ ಅವರ ಸ್ನೇಹ ಮುಂದೆ ನಿರಂತರವಾಗಿ ಮುಂದುವರೆಯಿತು. ‘ಸ್ವಾಮಿ ಅಂಡ್ ಫ್ರೆಂಡ್ಸ್’ ಕೃತಿಯು ನಾರಾಯಣ್ ಅವರ ಬಾಲ್ಯದ ಹಲವಾರು ಅನುಭವಗಳನ್ನು ಸೂಕ್ಷ್ಮವಾಗಿ ದಾಖಲಿಸಿತ್ತು. ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಕರಿಂದ ಒದಗುವ ಬೆತ್ತ ಸ್ಪರ್ಶದ ಶಿಕ್ಷೆ, ಅದರಿಂದ ಉಂಟಾಗುವ ಕೀಳರಿಮೆ ಮುಂತಾದ ಚಿಂತನೆಗಳು ಇಲ್ಲಿ ಕಾಣಬರುತ್ತವೆ. 1937ರಲ್ಲಿ ಮೂಡಿ ಬಂದ ‘The Bachelors Degree’ ಕೃತಿಯಲ್ಲಿ ನಾರಾಯಣ್ ತಮ್ಮ ಕಾಲೇಜಿನ ದಿನಗಳ ನೆರಳನ್ನು ಮೂಡಿಸಿದ್ದರು. ಜೊತೆಗೆ ಮದುವೆಯ ವಿಚಾರದಲ್ಲಿ ಜಾತಕ ನೋಡುವಿಕೆ, ಅವು ವಧು-ವರರ ಮೇಲೆ ಬೀರುವ ತಲ್ಲಣಗಳಂತಹ ಕ್ಷಣಗಳನ್ನೂ ಈ ಕಥೆ ದಾಖಲಿಸಿದೆ. 1938ರ ‘The Dark Room’ ಕೃತಿ ಮನೆಯಲ್ಲಿನ ಹೊಂದಾಣಿಕೆಯ ಕಷ್ಟಗಳನ್ನು ಹೇಳುತ್ತದೆ. ಮನೆಯೊಡತಿಯು ಕೈಹಿಡಿದ ಗಂಡನ ವಿಚಿತ್ರ ನಡವಳಿಕೆಗಳ ಜೊತೆಗೆ ಏಗಬೇಕಾದ ಸೂಕ್ಷ್ಮತೆಗಳ ಛಾಯೆ ಇಲ್ಲಿ ವ್ಯಾಪಿಸಿದೆ.

1937ರಲ್ಲಿ ತಮ್ಮ ತಂದೆಯವರು ನಿಧನರಾದಾಗ ಯಾವುದೇ ಆದಾಯವಿಲ್ಲದಿದ್ದ ನಾರಾಯಣ್ ಮೈಸೂರು ರಾಜ್ಯದ ಕಮಿಷನ್ ಅನ್ನು ಒಪ್ಪಿಕೊಂಡರು. 1939ರಲ್ಲಿ ನಾರಾಯಣ್, ತಮ್ಮ ಪತ್ನಿ ರಾಜಂ ಅವರು ನಿಧನರಾದಾಗ ಶೋಕತಪ್ತರಾಗಿ ಬರವಣಿಗೆಯಿಂದ ಕೆಲಕಾಲ ವಿಮುಖಗೊಂಡಿದ್ದರು. ತಮ್ಮ ಮೂರು ವರ್ಷದ ಮಗಳ ಭವಿಷ್ಯದ ಬಗ್ಗೆ ಕೂಡಾ ಅವರಿಗೆ ಚಿಂತೆ ಆವರಿಸಿತ್ತು. ಈ ಎಲ್ಲ ಚಿಂತನೆಗಳು 1945ರಲ್ಲಿ ಪ್ರಕಾಶನಗೊಂಡ ‘The English Teacher’ ಕಥೆಯಲ್ಲಿ ಕಾಣಸಿಗುತ್ತವೆ. ಈ ಮಧ್ಯೆ 1942ರ ವರ್ಷದಲ್ಲಿ ಅವರ ಪ್ರಸಿದ್ಧ ಕೃತಿ ‘Malgudi Days’ ಪ್ರಕಟಗೊಂಡಿತ್ತು.

ತಮ್ಮ ಪುಸ್ತಕಗಳಿಗೆ ದೊರೆತ ಯಶಸ್ಸಿನ ಹಿನ್ನಲೆಯಲ್ಲಿ ‘Indian Thought’ ಎಂಬ ಜರ್ನಲ್ ಒಂದನ್ನು ಕೂಡಾ ಮದ್ರಾಸಿನಲ್ಲಿ ನಾರಾಯಣ್ ಪ್ರಾರಂಭಿಸಿದ್ದರು. ಅದಕ್ಕೆ ಸಾಕಷ್ಟು ಚಂದಾದಾರರು ಇದ್ದಾಗ್ಯೂ ಅದರ ನಿರ್ವಹಣೆಗೆ ಉಂಟಾದ ತೊಂದರೆಗಳಿಂದಾಗಿ ಒಂದೇ ವರ್ಷದಲ್ಲಿ ಅದನ್ನು ನಿಲ್ಲಿಸಿಬಿಟ್ಟರು. ಮಹಾಯುದ್ಧದ ಸಂದರ್ಭದಲ್ಲಿ ಇಂಗ್ಲೆಂಡಿನ ಸಂಪರ್ಕ ಕಡಿದು ಹೋದ ಸಂದರ್ಭದಲ್ಲಿ ನಾರಾಯಣ್ ಅವರು, ‘The Indian Thought Publication’ ಎಂಬ ತಮ್ಮದೇ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಸಂಸ್ಥೆ ಇಂದೂ ಅಸ್ತಿತ್ವದಲ್ಲಿದ್ದು ನಾರಾಯಣ್ ಅವರ ಮೊಮ್ಮಗಳು ಇದನ್ನು ನಿರ್ವಹಿಸುತ್ತಿದ್ದಾರೆ. ನ್ಯೂಯಾರ್ಕ್ ಇಂದ ಮಾಸ್ಕೋವರೆಗೆ ಹಬ್ಬಿದ ಅವರ ಓದುಗರ ಸಂಖ್ಯೆ ಹೆಚ್ಚುತ್ತಿದ್ದಂತೆ ಮೈಸೂರಿನಲ್ಲಿ ಆರ್ ಕೆ ನಾರಾಯಣ್ ಅವರ ಬಂಗಲೆ ಕೂಡಾ ತಲೆ ಎತ್ತಿತ್ತು. ಅಂದಿನ ಕಾಲದಲ್ಲಿ ಅಪರೂಪವಾಗಿದ್ದ ಬೆಂಜ್ ಕಾರು ಅವರ ಮನೆ ಬಾಗಿಲನ್ನು ಕಾಯತೊಡಗಿತ್ತು.

ಐವತ್ತರ ದಶಕದಲ್ಲಿ Mr. Sampath ಮೂಡಿಸಿದ ನಂತರದಲ್ಲಿ ಬಂದ Financial Expert, Waiting for the Mahatma, The Guide ಮುಂತಾದ ಕೃತಿಗಳು ನಾರಾಯಣ್ ಅವರಿಗೆ ಅಪಾರವಾದ ಹೆಸರು ತಂದುಕೊಟ್ಟವು. Financial Expert ಕ್ರತಿಯಂತೂ ಮಾಸ್ಟರ್ ಪೀಸ್, ಈ ಕಾಲದ ಅತ್ಯಂತ ಸೃಜನಶೀಲ ಕಥಾನಕ ಮುಂತಾದ ಹೆಗ್ಗಳಿಕೆಗಳನ್ನು ಗಳಿಸಿತು. The Guide ಕೃತಿ ಅಪಾರ ಓದುಗರನ್ನು ಗಳಿಸಿದ್ದಲ್ಲದೆ ಕೆಂದ್ರ ಸಾಹಿತ್ಯ ಅಕಾಡೆಮಿಯ ಗೌರವವನ್ನೂ ಗಳಿಸಿತು.

ಎಪ್ಪತ್ತರ ದಶಕದಲ್ಲಿ ನಾರಾಯಣ್ ಅವರು The Man-Eater of Malgudi, Gods, Demons and Others, The Vendor of Sweets, A Horse and Two Goats, The Painter of Signs ಮುಂತಾದ ಕೃತಿಗಳನ್ನು ಬರೆದರು. ಕಂಬ ರಾಮಾಯಣವನ್ನು ಇಂಗ್ಲಿಷಿಗೆ ಅನುವಾದಿಸಿದರು. ಮಹಾಭಾರತವನ್ನು ಇಂಗ್ಲಿಷಿನಲ್ಲಿ ಬರೆದರು. ಕರ್ನಾಟಕ ಪ್ರವಾಸೋದ್ಯಮ ಇಲಾಖೆಗಾಗಿ ಬರೆದ ಕೃತಿ ಮುಂದೆ ‘The Emerald Route’ ಎಂಬ ಕೃತಿಯಾಗಿಯೂ ಮೂಡಿಬಂತು.

ಎಂಭತ್ತರ ದಶದಲ್ಲಿ A Tiger for Malgudi, Talkative Man, Under the Banyan Tree and Other Stories, A Writer’s Nightmare, The world of Nagaraj, ಮತ್ತು ಅವರ ಅಜ್ಜಿಯ ನೆನಪಿನಲ್ಲಿ Grandmother’s Tale ಮುಂತಾದ ಕಥೆಗಳನ್ನು ಬರೆದರು. ದಿ ಹಿಂದೂ, ಅಟ್ಲಾಂಟಿಕ್ ಮುಂತಾದ ಪತ್ರಿಕೆಗಳಲ್ಲಿ ವಿವಿಧ ವಿಷಯಗಳ ಕುರಿತಾಗಿ ಅವರ ನೂರಾರು ಅಂಕಣಗಳು ಪ್ರಕಟವಾಗತೊಡಗಿದವು.

ನಾರಾಯಣ್ ಅವರು ಒಂದೊಂದು ಕೃತಿ ಬರೆದ ಸಂದರ್ಭದಲ್ಲೂ ವಿದೇಶಗಳ ಯಾತ್ರೆ ಕೈಗೊಂಡಿದ್ದರು. ಭಾರತೀಯ ಚಿಂತನೆಗಳ ಕುರಿತಾಗಿ ಅವರು ನೂರಾರು ಉಪನ್ಯಾಸಗಳನ್ನು ನೀಡಿದ್ದರು. ಎಂತದ್ದೇ ಪ್ರಯಾಣದ ಸಂದರ್ಭಗಳಲ್ಲೂ ದಿನಕ್ಕೆ 1500 ಪದಗಳಿಗೆ ಕಡಿಮೆ ಇಲ್ಲದ ಬರವಣಿಗೆಯ ಕಾಯಕವನ್ನು ತಪ್ಪದೆ ಮಾಡುತ್ತಿದ್ದರಂತೆ. ತಾವು ಬದುಕಿ ಬಾಳಿದ್ದ ಪರಿಸರದಲ್ಲಿ ಮಾರುಕಟ್ಟೆಗೆ ಹೋಗಿ ಅಲ್ಲಿನ ಜನರೊಡನೆ ಮಾತುಕತೆ ನಡೆಸುವುದು, ಅವರ ಬದುಕಿನ ರೀತಿಯನ್ನು ಗಮನಿಸುವುದು ಮುಂತಾದವು ನಾರಾಯಣ್ ಅವರ ನಿತ್ಯದ ದಿನಚರಿಯೇ ಆಗಿತ್ತು.

American Academy of Arts and Letters ಸಂಸ್ಥೆಯ ಗೌರವ, Royal Society of Literature ಸಂಸ್ಥೆಯ A C Benson ಪಾರಿತೋಷಕ, ಲೀಡ್ಸ್ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯಗಳ ಡಾಕ್ಟರೇಟ್, ಪದ್ಮಭೂಷಣ ಪ್ರಶಸ್ತಿ, ಗೈಡ್ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೈಡ್ ಸಿನಿಮಾದ ಕಥೆಗಾಗಿ ಫಿಲಂ ಫೇರ್ ಪ್ರಶಸ್ತಿ ಮುಂತಾದ ಅನೇಕ ಗೌರವಗಳನ್ನು ಆರ್ ಕೆ. ನಾರಾಯಣ್ ಸ್ವೀಕರಿಸಿದ್ದರು. ನೋಬಲ್ ಪಾರಿತೋಷಕಕ್ಕೆ ಸಹಾ ಆರ್ ಕೆ ನಾರಾಯಣ್ ಅವರ ಹೆಸರು ಹಲವು ಬಾರಿ ಸೂಚಿತವಾಗಿತ್ತು. ಅವರ ಕಥೆಗಳು ಚೈನೀಸ್ ಬಾಷೆಗೆ ಕೂಡಾ ಅನುವಾದಗೊಂಡವು.

ರಾಜ್ಯಸಭೆಗೆ ಗೌರವಾನ್ವಿತ ಸದಸ್ಯರಾಗಿ ನೇಮಕಗೊಂಡಿದ್ದ ಆರ್. ಕೆ. ನಾರಾಯಣ್ ಅವರು ಮಾಡಿದ ಪ್ರಮುಖ ಪ್ರತಿಪಾದನೆಗಳಲ್ಲಿ ಶಾಲಾ ಮಕ್ಕಳು ಭಾರಹೊರುವ ಬಗ್ಗೆ ಮಾಡಿದ ಕಾಳಜಿಯುತ ಮಾತುಗಳು, ಸರ್ಕಾರವನ್ನು ಅದಕ್ಕಾಗಿ ಯಶ್ಪಾಲ್ ನೇತ್ರತ್ವದ ತಜ್ಞರ ಸಮಿತಿಯನ್ನು ನಿಯಮಿಸಿ ಸೂಕ್ತಕ್ರಮಗಳನ್ನು ಕೈಗೊಳ್ಳಲು ಪ್ರೇರೇಪಿಸಿತ್ತು. ಮೈಸೂರಿನ ಬಗೆಗೆ ಅತ್ಯಂತ ಪ್ರೀತಿ ಹೊಂದಿದ್ದ ಆರ್ ಕೆ. ನಾರಾಯಣ್ ಅವರು ಕುಕ್ಕರ ಹಳ್ಳಿ ಕೆರೆಯನ್ನು ಸಂರಕ್ಷಿಸುವ ವಿಚಾರವಾಗಿ ಮಾಡಿದ ಒತ್ತಾಯಗಳು ಅದನ್ನು ಇಂದು ಕೂಡಾ ಇದ್ದುದರಲ್ಲಿ ಸಂರಕ್ಷಿಸಿರುವ ನಿಟ್ಟಿನಲ್ಲಿ ಫಲಪ್ರದವಾದ ಕಾರ್ಯವಾಗಿದೆ.

ನೇರವಾಗಿ ನಾರಾಯಣ್ ಅವರ ಪುಸ್ತಕಗಳನ್ನು ಓದಿದವರೇ ಅಲ್ಲದೆ, ಶಂಕರ್ ನಾಗ್ ಅವರು ದೂರದರ್ಶನ ಜಾಲದಲ್ಲಿ ಮೂಡಿಸಿದ ‘ಮಾಲ್ಗುಡಿ ಡೇಸ್’, ನಾಗಾಭರಣರು ಮೂಡಿಸಿದ ‘ಬ್ಯಾಂಕರ್ ಮಾರ್ಗಯ್ಯ’ ಮತ್ತು ದೇವಾನಂದರ ‘ಗೈಡ್’ ಮುಂತಾದವುಗಳ ಪ್ರಖ್ಯಾತಿಯಿಂದಲೂ ನಾರಾಯಣ್ ಈ ದೇಶದ ಜನರ ಮನೆಮಾತಾಗಿದ್ದರು. ನಾರಾಯಣ್ ಅವರ ಕೃತಿಗಳಲ್ಲಿ ಮೂಡಿಬರುತ್ತಿದ್ದ ಅವರ ಸಹೋದರ ಆರ್ ಕೆ. ಲಕ್ಷಣ್ ಅವರ ರೇಖಾಚಿತ್ರಗಳು ಅವರ ಕೃತಿಗಳಿಗೆ ಮತ್ತಷ್ಟು ನೈಜತೆಯ ಕಳೆಯನ್ನು ತುಂಬಿತುಳುಕಿಸುತ್ತಿದ್ದವು.

ಹೀಗೆ ಹಲವು ನಿಟ್ಟಿನಲ್ಲಿ ನಮ್ಮ ನಾಡಿನ ಪ್ರೀತಿಪಾತ್ರವಾದ ವ್ಯಕ್ತಿತ್ವ ಆರ್ ಕೆ. ನಾರಾಯಣ್ ಅವರದ್ದು.

ತೊಂಬತ್ತನಾಲ್ಕು ವರ್ಷ ಪೂರೈಸಿದ ನಾರಾಯಣ್ ಅವರು 2001ರ ವರ್ಷದಲ್ಲಿ ಈ ಲೋಕವನ್ನಗಲಿದರು. ಅವರ ನೆನಪು ಮತ್ತು ಅವರ ಅವಿಸ್ಮರಣೀಯ ಸೃಷ್ಟಿಯಾದ ಮಾಲ್ಗುಡಿಯಿಂದ ಅವರು ಜನಮಾನಸದಲ್ಲಿ ಚಿರಸ್ಮರಣೀಯರು. ಈ ಮಹಾನ್ ಚೇತನಕ್ಕೆ ನಮ್ಮ ಅನಂತ ಗೌರವಗಳು.

ಕೃಪೆ:- ‘ಕನ್ನಡ ಸಂಪದ’

LEAVE A REPLY

Please enter your comment!
Please enter your name here