ಬಳ್ಳಾರಿಯಲ್ಲಿ ಶ್ರೀ ಸಂತ ಸೇವಲಾಲರ ಜಯಂತಿ ಆಚರಣೆ,ಶ್ರೀ ಸಂತಸೇವಲಾಲರ ಆದರ್ಶ ಇಂದಿಗೂ ಪ್ರಸ್ತುತ

0
73

ಬಳ್ಳಾರಿ,ಫೆ.15 ; ಸಮಾಜದ ಅಭಿವೃದ್ದಿಗೆ ಮತ್ತು ಸಮ ಸಮಾಜದ ನಿರ್ಮಾಣಕ್ಕೆ ಶ್ರೀ ಸಂತ ಸೇವಲಾಲರು ತಮ್ಮದೇ ಆದ ಹಾದಿಯಲ್ಲಿ ಕಾರ್ಯ ನಿರ್ವಹಿಸಿದವರು. ಅವರ ಜೀವನ ವಿಧಾನ, ಅವರು ಬದುಕಿದ ರೀತಿ ಇಂದಿನ ಯುವಕರಿಗೆ ಮಾರ್ಗದರ್ಶನವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ ಕೆ.ರಂಗಣ್ಞನವರ್ ಅವರು ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಸಂತ ಸೇವಲಾಲ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಸಂತ ಸೇವಲಾಲರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಶ್ರೀ ಸಂತ ಸೇವಲಾಲರು ಬದುಕಿದ ರೀತಿ, ಅವರ ಆದರ್ಶಗಳು ಇಂದಿಗೂ ಪ್ರಸ್ತುತ. ಸಮಾಜಕ್ಕೆ ಅವರು ನೀಡಿದ ಕೊಡಿಗೆ ಅದ್ಬುತ. ಅತ್ಯಂತ ಹಿಂದುಳಿದ ಸಮುದಾಯವನ್ನು ಸಮಾಜದ ಮುನ್ನಲೆಗೆ ತರುವಲ್ಲಿ ಅವರು ನಿರ್ವಹಿಸಿದ ಪಾತ್ರ ಅತ್ಯಮೂಲ್ಯವಾದದ್ದು. ಕೊವಿಡ್ ಹಿನ್ನಲೆಯಲ್ಲಿ ಈ ಬಾರಿ ಸರಳವಾಗಿ ಮತ್ತು ಸಂಕೇತಿಕವಾಗಿ ಜಯಂತಿಯನ್ನು ಆಚರಿಸಲಾಗುತ್ತದೆ. ಮುಂದಿನ ವರ್ಷ ತುಂಬಾ ಅದ್ದೂರಿಯಾಗಿ ಜಯಂತಿಯನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಡಾ.ರವಿ ಚವ್ಹಾಣ ಅವರು ಮಾತನಾಡಿ, 16-17ನೇ ಶತಮಾನದ ಮಹಾ ಪುರುಷರಲ್ಲಿ ಸಂತ ಸೇವಲಾಲರು ಒಬ್ಬರು. ಅಂದಿನ ಕಾಲದ ಅಸಮಾನತೆಯ ವಿರುದ್ಧ ಧ್ವನಿ ಎತ್ತಿದವರು, ಸಮುದಾಯದ ಶ್ರೇಯಸ್ಸಿಗಾಗಿ ದುಡಿದ ಮಹಾನ್ ಸಂತ ಸೇವಲಾಲರು. ಸಮಾಜದ ಅಭಿವೃದ್ಧಿಗೆ ಅವರ ನೀಡಿದ ಕೊಡುಗೆಯನ್ನು ಇಂದಿನ ಯುವ ಜನತೆಗೆ ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಸಂತರ ಜಯಂತಿಯನ್ನು ಆಚರಿಸಲಾಗುತ್ತದೆ ಎಂದರು.
ಶಿಕ್ಷಣ, ಸಂಸ್ಕಾರದ ಬಗ್ಗೆ ಸಮಾಜಕ್ಕೆ ಹೇಳಿಕೊಟ್ಟವರು ಸಂತ ಸೇವಲಾಲರು, ಅವರ ಜೀವನ ಚರಿತ್ರೆ ಇಂದಿನ ಯುವಕರಿಗೆ ಮಾದರಿ. ಈ ನಿಟ್ಟಿನಲ್ಲಿ ಯುವಕರ ಅವರ ಬದುಕಿನ ಬಗ್ಗೆ ಅರಿತುಕೊಳ್ಳುವ ಮೂಲಕ ತಮ್ಮ ಜೀವನದಲ್ಲಿ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಮುನ್ನಡೆದರೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು ಎಂದರು.
ಈ ಸಮಯದಲ್ಲಿ ಅಖಿಲ ಕರ್ನಾಟಕ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷರಾದ ಎಸ್.ಚಂದ್ರನಾಯ್ಕ್, ಗೋರ್‍ಸೇನಾ ಅಧ್ಯಕ್ಷರಾದ ಗೋಪಿ ನಾಯ್ಕ್, ಸಮುದಾಯದ ಮುಖಂಡರಾದ ಸಕ್ರು ನಾಯ್ಕ್ , ರಾಮು ನಾಯ್ಕ್, ಲತಾಬಾಯಿ, ಗೋವಿಂದ ನಾಯ್ಕ್ ಹಾಗೂ ಸಮುದಾಯದ ಮುಖಂಡರು ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here