ಜನಸ್ಪಂದನ ಸಭೆಯಲ್ಲಿ ಅರ್ಜಿಗಳ ಮಹಾಪೂರ,ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು : ಡಿಸಿ

0
92

ದಾವಣಗೆರೆ ಫೆ. 18:ಜನರ ಕೋರಿಕೆ ಮೇರೆಗೆ ಮತ್ತೆ ಜನಸ್ಪಂದನ ಸಭೆ ಆರಂಭಿಸಿದ್ದು ಜನರು ಅಧಿಕ ಸಂಖ್ಯೆಯಲ್ಲಿ ತಮ್ಮ ಸಮಸ್ಯೆಗಳ ಅರ್ಜಿಗಳನ್ನು ನೀಡಿರುತ್ತಾರೆ. ಈ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ನೀಡಲು ನಮ್ಮ ಅಧಿಕಾರಿಗಳ ತಂಡ ಪ್ರಾಮಾಣಿಕ ಪ್ರಯತ್ನ ಮಾಡುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಅಧಿಕಾರಿಗಳ ತಂಡ ಶ್ರದ್ದೆ ಮತ್ತು ಸಮರ್ಪಣೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಕೊರೊನಾ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲಾಗಿದೆ. ಪ್ರತಿದಿನ 3, 4 ಪ್ರಕರಣಗಳು ವರದಿಯಾಗುತ್ತಿವೆ. ಜನರ ಕೋರಿಕೆ ಮೇರೆಗೆ ಮತ್ತೆ ಜನಸ್ಪಂದನ ಸಭೆ ಆರಂಭಿಸಿದ್ದು, ನಮ್ಮ ತಂಡ ಹುರುಪು ಮತ್ತು ಹುಮ್ಮಸ್ಸಿನಿಂದ ಕರ್ತವ್ಯ ನಿರ್ವಹಿಸಲಿದೆ ಎಂದರು.
ನಾವಿರುವುದು ಜನರ ಕೆಲಸ ಮಾಡುವ ಸಲುವಾಗಿ. ಆದ ಕಾರಣ ಯಾರೂ ಕೂಡ ಯಾವ ಪರಿಸ್ಥತಿಯಲ್ಲೂ ಗೊಂದಲ, ಆಘಾತಕ್ಕೀಡಾಗಬಾರದು. ಅಧಿಕಾರಿಗಳು ಕೂಡ ತಮ್ಮ ಹಂತದಲ್ಲಿ ಬರುವ ಕೆಲಸವನ್ನು ಶೀಘ್ರವಾಗಿ ಮಾಡಬೇಕು. ನಮ್ಮ ಹಂತದಲ್ಲಿ ಬಗೆಹರಿಯದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಅಥವಾ ಕಾನೂನು ತಜ್ಞರ ಸಲಹೆ ಪಡೆದು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.
ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಮಲ್ಲಿಕಾರ್ಜುನ ಇಂಗಳೇಶ್ವರ, ನಿಟ್ಟುವಳ್ಳಿ ವಿಭಾಗದಲ್ಲಿ 5 ಸಾವಿರ ಅಡಿ ಖಾಲಿ ಜಾಗವು ಮಹಾನಗರ ಪಾಲಿಕೆಯ ಸದಸ್ಯ ಅಧಿಕಾರ ದುರುಪಯೋಗ ಮಾಡಿಕೊಂಡು ಖಾಲಿ ಜಾಗವನ್ನು ಕಬಳಿಸಿರುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲದ ಕಾರಣ ತಾವು ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಚೌಕಿಪೇಟೆ ಕನ್ಸರ್‍ವೆನ್ಸಿ ರಸ್ತೆಯನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿ ಬಿಲ್ಡಿಂಗ್ ಕಟ್ಟಿರುತ್ತಾರೆ. ಮಹಾನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಹೆಚ್ಚುವರಿ ಕಟ್ಟಡ ಕಟ್ಟುವ ಬಗ್ಗೆ ಅನುಮಾನಗಳಿರುತ್ತದೆ. ಇವರು ಕಟ್ಟಡ ಪರವಾನಗಿ ಪತ್ರ ಮತ್ತು ಸ್ವಾಧೀನ ಪ್ರಮಾಣ ಪತ್ರವನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು
ದಾವಣಗೆರೆ ತಹಶೀಲ್ದಾರ್ ಕಚೇರಿಯಲಿ ವೃದ್ಧಾಪ್ಯ ವೇತನ, ಅಂಗವಿಕಲ ಮತ್ತು ವಿಧವಾ ವೇತನ ಅರ್ಜಿಗಳನ್ನು ತೆಗೆದುಕೊಳ್ಳದೇ ವಾಪಸ್ ಕಳುಹಿಸುತ್ತಿದ್ದಾರೆ. ಹಾಗೂ ಪಿಂಚಣಿ ಅದಾಲತ್ ನಡೆಸದೇ ಎಷ್ಟೋ ತಿಂಗಳುಗಳಾಗಿವೆ. ಆದ್ದರಿಂದ ಜಿಲ್ಲಾಧಿಕಾರಿಗಳು ಪಿಂಚಣಿ ಅದಾಲತ್ ಮತ್ತು ವೇತನ ಅರ್ಜಿಗಳನ್ನು ಸ್ವೀಕರಿಸಲು ಆದೇಶ ನೀಡಬೇಕೆಂದು ಮನವಿ ಮಾಡದರು.
ಸ್ಮಾರ್ಟ್‍ಸಿಟಿಯವರು ಕುಂದುವಾಡ ಕೆರೆ ಅಭಿವೃದ್ಧಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರ ಅಭಿಪ್ರಾಯವನ್ನು ತೆಗೆದುಕೊಳ್ಳದೇ ಕೆರೆ ಅಭಿವೃದ್ಧಿಯಲ್ಲಿ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡು ಪಕ್ಷಿಗಳು, ಜಲಚರಗಳನ್ನು ಅಭಿವೃದ್ಧಿಯ ಹೆಸರಲ್ಲಿ ನಾಶಮಾಡಿರುತ್ತಾರೆ. ಹಾಗೂ ಹಣ ಲೂಟಿ ಮಾಡುವ ಹುನ್ನನಾರದಿಂದ ಟೆಂಡರ್ ಕರೆದಿರುತ್ತಾರೆ ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳ ಟೆಂಡರ್ ರದ್ದು ಪಡಿಸಿ ಸರ್ಕಾರದ ಹಣ ಉಳಿಸಿ ಹಾಗೂ ಕುಂದುವಾಡ ಕೆರೆಯಲ್ಲಿ ಯತಾಸ್ಥಿತಿ ಕಾಪಾಡಬೇಕೆಂದು ಸಾಮಾಜಿಕ ಅವರು ಮನವಿ ಮಾಡದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಅರ್ಜಿಗಳನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು. ಹಾಗೂ ತಹಶೀಲ್ದಾರರು ತಮ್ಮ ಕಚೇರಿ ಆವರಣಕ್ಕೂ ಬಂದು ಅರ್ಜಿದಾರರನ್ನು ವಿಚಾರಿಸಿಕೊಳ್ಳಬೇಕು. ಸೌಲಭ್ಯಗಳ ಅರ್ಜಿ ಸ್ವೀಕರಿಸಿ ಶೀಘ್ರ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಹರೀಶ್ ಹಳ್ಳಿ ಮನವಿ ಸಲ್ಲಿಸಿ, ರಾಜಾಕಾಲುವೆ ಮತ್ತು ನೈಸರ್ಗಿಕ ಹಳ್ಳವನ್ನು ಕೆಲವರು ನಿವೇಶನ ಮಾಡಿಕೊಂಡಿದ್ದಾರೆ, ಇದು ತಿಳಿದೂ ಪಾಲಿಕೆಯವರು ಡೋರ್ ಸಂಖ್ಯೆ ನೀಡಿದ್ದು, ಇವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಹೊನ್ನಾಳಿ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ಸರ್ವೇ ನಂ.79 ಕ್ಕೆ ಸಂಬಂಧಿಸಿದ ಭೂಮಿ ವಿವಾದದ ಕುರಿತ ಅರ್ಜಿ ಸಲ್ಲಿಸಿದ ಅರ್ಜಿದಾರರು ತಮ್ಮ ಜಮೀನಿಗೆ ಸಂಬಂಧಿಸಿದಂತೆ ನ್ಯಾಯ ಒದಿಗಸಬೇಕು ಎಂದು ಮನವಿ ಮಾಡಿದರು. ಜೊತೆಗೆ ಹೊನ್ನಾಳಿ ಮಾಜಿ ಶಾಸಕರಾದ ಶಾಂತನಗೌಡರು, ಈ ಜಮೀನು ವಿವಾದದ ಕುರಿತು ಎರಡೂ ಪಕ್ಷಗಾರರನ್ನು ತಹಶೀಲ್ದಾರ್ ಮತ್ತು ಎಸಿ ಸಮ್ಮುಖದಲ್ಲಿ ಕರೆಯಿಸಿ ವಾಸ್ತವಾಂಶ ತಿಳಿದು ಆ ಜಮೀನು ವಾಸ್ತವವಾಗಿ ಯಾರಿಗೆ ಸೇರಬೇಕೋ ಅವರಿಗೆ ಮಾಡಿಕೊಡುವಂತೆ ಕೋರಿದರು.
ಅರ್ಜಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಎಸಿ ಮತ್ತು ತಹಶೀಲ್ದಾರರು ಜಂಟಿಯಾಗಿ ಸ್ಥಳ ಪರಿಶೀಲಿಸಲು ಹಾಗೂ ಎರಡೂ ಪಕ್ಷಗಾರರೊಂದಿಗೆ ಚರ್ಚಿಸಲು ಸೂಚನೆ ನೀಡಿದ್ದೇನೆ ಎಂದರು.
ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಬೆಳಕೇರಿ, ಸ್ಮಾರ್ಟ್‍ಸಿಟಿ ಲಿಮಿಟೆಡ್ ವತಿಯಿಂದ ನಗರದಲ್ಲಿ ಫೇಸ್-1 ಕಾಮಗಾರಿಯಲ್ಲಿ ಸಾಕಷ್ಟು ಅಕ್ರಮ ನಡೆಸಲಾಗಿದೆ. ಕಡಿಮೆ ಬೆಲೆಯ ಗಿಡಗಳನ್ನು ಹೆಚ್ಚಿನ ಬೆಲೆಗೆ ಟೆಂಡರ್ ಮೂಲಕ ಖರೀದಿಸಿ ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗಿವೆ. ಟೆಂಡರ್‍ದಾರರು ಲಕ್ಷಾಂತರ ರೂಗಳನ್ನು ವ್ಯಯಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ತನಿಖೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.
ಮುಸ್ಟೂರು ಗ್ರಾಮದಲ್ಲಿ ಅಂಗನವಾಡಿ ಕಟ್ಟಡಕ್ಕೆ ಸೇರಿದ ಜಾಗದಲ್ಲಿ ಮಲ್ಲಪ್ಪ ಮತ್ತು ಪ್ರದೀಪ ಎಂಬುವವರು ಮನೆದೇವರ ದೇವಸ್ಥಾನ ಕಟ್ಟಿದ್ದು, ದೇವಸ್ಥಾನ ತೆರವುಗೊಳಿಸಬೇಕೆಂದು ನಿಂಗಪ್ಪ ಮನವಿ ನೀಡಿದರು.
ಕಗತ್ತೂರಿಗೆ ಬಸ್ ವ್ಯವಸ್ಥೆಗೆ ಮನವಿ ಸಲ್ಲಿಸಲಾಗಿತ್ತು. ಈವರೆಗೆ ವ್ಯವಸ್ಥೆಯಾಗಿಲ್ಲ. ಪ್ರಸ್ತುತ ಬರುತ್ತಿರುವ ಕೆಎಸ್‍ಆರ್‍ಟಿಸಿ ಬಸ್‍ಗಳು ಸರ್ಕಾರಿ ರಜಾದಿನಗಳಂದು ಬರುವುದಿಲ್ಲ. ಇದರಿಂದ ತುಂಬಾ ತೊಂದರೆಯಾಗುತ್ತಿದ್ದು ಹೆಚ್ಚುವರಿ ಬಸ್ ಸೇರಿದಂತೆ ರಜೆ ದಿನಗಳಂದು ಬಸ್ ಬಿಡಬೇಕು, ಜೊತೆಗೆ ಪರ್ಮಿಟ್ ಇದ್ದರೂ ಓಡದ ಖಾಸಗಿ ಬಸ್‍ಗಳ ಪರ್ಮಿಟ್ ರದ್ದುಪಡಿಸಿ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಮಾಡಬೇಕೆಂದು ಕೋರಿದರು.
ಹೊಳೆಮಾದಾಪುರ ಗ್ರಾಮಸ್ಥರು, ಶಾಲೆಗೆಂದು ಮೀಸಲಿಡಲಾದ ಸರ್ಕಾರಿ ಜಮೀನನ್ನು ಕೆಲವರು ಖಾಸಗಿ ಕಟ್ಟಡ ಕಟ್ಟಲು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಈ ಭೂಮಿಯನ್ನು ಖಾಸಗಿಗೆ ಬಿಡದೇ ಸರ್ಕಾರಿ ಜಾಗ ಎಂದು ಇ ಸ್ವತ್ತು ಮಾಡಬೇಕು. ಜೊತೆ ಶಾಲೆಗೆ ಮೀಸಲಿಡಬೇಕೆಂದು ಮನವಿ ಮಾಡಿದರು.
ಚನ್ನಗಿರಿ ತಾಲ್ಲೂಕು ಹರ್ಷಿಣಘಟ್ಟ ಗ್ರಾಮದ ಸÀರ್ವೆ ನಂ.27 ರಲ್ಲಿ 17 ಎಕರೆಯನ್ನು ಭದ್ರ ಮುಖ್ಯ ನಾಲೆಗೆ ಹಸ್ತಾಂತರಿಸಲಾಗಿದ್ದು, ಅದರ ವಿಸ್ತೀರ್ಣ ಹೊರತುಪಡಿಸಿ ಉಳಿದ ಭೂಮಿಗೆ ನಕಲಿ ದಾಖಲೆಯನ್ನು ಸೃಷ್ಟಿಸಿ ಬಸವರಾಜಪರದ ಗ್ರಾಮದ ಹಲವರು ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಹುನ್ನಾರ ನಡೆಸಿದ್ದಾರೆ. ಈ ಹಿಂದಿನ ಜನಸ್ಪಂದನ ಸಭೆಯಲ್ಲಿ ಕ್ರಮವಹಿಸುವಂತೆ ಭರವಸೆ ನೀಡಿದ್ದು ಯಾವುದೇ ಕ್ರಮವಹಿಸಿಲ್ಲ. ತಕ್ಷಣವೇ ಒತ್ತುವರಿಯಾಗಿರುವ ಭಾಗಗಳನ್ನು ತೆರವುಗೊಳಿಸಿ ಪ್ರಕರಣ ದಾಖಲಿಸಬೇಕೆಂದು ಪರಿಸರ ಪ್ರೇಮಿ ಬಿ.ಯು.ವೀರಾಚಾರಿ ತುರ್ಚುಘಟ್ಟ ಇವರು ಮನವಿ ಮಾಡಿ, ತಾವು ಆಚರಿಸುವ ವನಮಹೋತ್ಸವಕ್ಕೆ ಆಗಮಿಸುವಂತೆ ಹೂವಿನ ಗಿಡ ನೀಡಿ ಆಹ್ವಾನಿಸಿದರು.
ಪವನ್‍ರಾಜ್ ಪವಾರ್, ಶಿರಮಗೊಂಡನಹಳ್ಳಿ ಮೂಲ ಸರ್ವೇ ನಂ. 56 ಪ್ರಸ್ತುತ ರಿಸರ್ವೇ ನಂ.133 ರಲ್ಲಿ ಸರ್ಕಾರಿ ಭೂಮಿ ಎಂದು ಪಹಣಿಯಲ್ಲಿದ್ದು, ಈ ಜಾಗವನ್ನು ಅಬಕಾರಿ ಅಧಿಕಾರಿಗಳು ಮದ್ಯದಂಗಡಿ ನಡೆಸಲು ಪರವಾನಗಿ ನೀಡಿದ್ದು, ಇದರಲ್ಲಿ ನಾಲ್ಕು ಎಕರೆ ಜಾಗ ಸರ್ಕಾರದ್ದಾಗಿದ್ದು ಇದನ್ನು ತೆರವುಗೊಳಿಸಬೇಕೆಂದು ಮನವಿ ಸಲ್ಲಿಸಿದರು.
ಕರ್ನಾಟಕ ದಲಿತ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಬಸವರಾಜ್, ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ. ಅಂಬೇಡ್ಕರ್ ವೃತ್ತದಲ್ಲಿ ಕಂಚಿನ ಪ್ರತಿಮೆ ಸ್ಥಾಪಿಸಬೇಕು. ತುರ್ತಾಗಿ ಕಾಮಗಾರಿ ಪ್ರಾರಂಭಿಸಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ದಾವಣಗೆರೆ ಜಿಲ್ಲೆ ಹಾಗೂ ನಗರದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ರಾಜಾರೋಷವಾಗಿ ನಡೆಯುತ್ತಿದೆ. ಕಸದ ರಾಶಿ ಜೊತೆ 50% ಪ್ಲಾಸ್ಟಿಕ್ ಸೇರಿ ಚರಂಡಿಗಳು ಕಟ್ಟುತ್ತಿವೆ ಜಿಲ್ಲೆಯಾದ್ಯಂತ ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಗಿರೀಶ್ ಎಸ್.ದೇವರಮನೆ ಇವರು ಮನವಿ ಮಾಡಿದರು.
ಕನ್ನಡ ಪರ ಸಂಘಟನೆಯ ಒಕ್ಕೂಟದ ಕಾರ್ಯದರ್ಶಿ ಗೋಪಾಲಗೌಡ ನಗರದಲ್ಲಿ ಹಲವೆಡೆ ಬೈಕ್‍ಗಳ ಸೈಲೆನ್ಸರ್‍ಗಳನ್ನು ಬದಲಾವಣೆ ಮಾಡಿ ಶಬ್ಧ ಬರುವಂತಹ ಸೈಲೆನ್ಸರ್‍ಗಳನ್ನು ಅಳವಡಿಸಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡುತ್ತಿದ್ದಾರೆ. ಹೃದಯ ಸಂಬಂಧಿತ ಖಾಯಿಲೆಯಿದ್ದವರಿಗೆ ಹಾಗೂ ವಯೋವೃದ್ಧರಿಗೆ ತುಂಬಾ ಅಘಾತಕಾರಿಯಾಗಿದೆ. ಇಂತಹ ಬೈಕ್‍ಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಉದ್ಯೋಗಿನಿ ಯೋಜನೆಯಡಿ ಸಾಲ ನೀಡುವಂತೆ ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿಯ ಸೀಮಾ ಕೌಸರ್, ಅಲ್ಪಸಂಖ್ಯಾತರ ನಿಗಮದಿಂದ ಹೈನುಗಾರಿಕೆ ಯೋಜನೆಯಡಿ ಸಹಾಯಧನ ಮಂಜೂರು ಮಾಡುವಂತೆ ದಾವಣಗೆರೆ ಮುಬೀನಾ, ಕೆರೆಬಿಳಚಿ ಮತ್ತು ದಾವಣಗೆರೆ ನಗರವಾಸಿಗಳು ಆಶ್ರಯ ಮನೆಗಳಿಗೆ ಮನವಿ ಮಾಡಿದರು. ಇ ಸ್ವತ್ತು, ಪೆನ್ಶನ್, ಮನೆ ಕಟ್ಟಲು ಸಹಾಯಧನ, ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಹಾಯಧನ ಒದಗಿಸುವಂತೆ, ಆತ್ಮನಿರ್ಭರ ಯೋಜನೆಯಡಿ ಬೀದಿ ಬದಿ ವ್ಯಾಪಾರಕ್ಕೆ ಸಾಲ ನೀಡುವಂತೆ ಅರ್ಜಿದಾರರು ಮನವಿ ಮಾಡಿದರು. ಐಗೂರು ಗ್ರಾಮ ಪಂಚಾಯ್ತಿಯಲ್ಲಿ ಮಹಿಳೆಯಾಗಿರುವ ತಮಗೆ ಗ್ರಾಮ ಸಹಾಯಕರ ಹುದ್ದೆ ನೀಡಲು ಬರುವುದಿಲ್ಲ ಎಂದು ಹೇಳುತ್ತಿದ್ದು, ಕೆಲಸ ಕೊಡಿಸುವಂತೆ ಮಹಿಳೆಯೋರ್ವರು ಮನವಿ ಮಾಡಿದರು.
ಇರ್ಷಾದ್ ಅಹ್ಮದ್ ಇವರು ಬ್ಯಾಂಕ್‍ನಲ್ಲಿ ರೂ.25 ಲಕ್ಷ ಸಾಲ ಪಡೆದಿದ್ದು, ಸಾಲ ಮರುಪಾವತಿ ಮಾಡದೇ ಇರುವುದಕ್ಕಾಗಿ ಬ್ಯಾಂಕ್ ಆಫ್ ಬರೋಡಾದವರು ಮನೆ ಜಪ್ತಿ ಮಾಡುತ್ತಿದ್ದಾರೆ. ಇನ್ನು ಮೂರು ತಿಂಗಳು ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು. ಅರ್ಜಿಗಳನ್ನು ಸ್ವೀಕರಿಸಿದ ಡಿಸಿ ಪರಿಶೀಲಿಸಿ ಕ್ರಮ ವಹಿಸುವುದಾಗಿ ತಿಳಿಸಿದರು.
ನ್ಯಾಯ ಒದಗಿಸುವಂತೆ ಅಳಲು :ಹರಪನಹಳ್ಳಿ ತಾಲ್ಲೂಕಿನ ಯಡೇಹಳ್ಳಿಯ ನೇತ್ರಾವತಿ ಗಂಡ ಷಣ್ಮುಖಪ್ಪ ಇವರು ತಮ್ಮ ಗಂಡನ ಹೆಸರಿನಲ್ಲಿದ್ದ 2 ಎಕರೆ 5 ಗುಂಟೆ ಜಮೀನನ್ನು ಕುಮಾರ ಎಂಬುವವರು 4 ಲಕ್ಷ ಹಣಕ್ಕೆ ಹಣಗುತ್ತಿಗೆ ಮಾಡಿಕೊಂಡು, ಈಗ ಮೋಸದಿಂದ ತಮ್ಮ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದಾರೆ. ಮನೆಯಲ್ಲಿ ಅನೇಕ ಸಮಸ್ಯೆಗಳಿದ್ದು ಈ ವಿಚಾರವಾಗಿ ತುಂಬಾ ನೊಂದು ನಿಮ್ಮ ಮುಂದೆ ಬಂದಿದ್ದೇವೆ. ನ್ಯಾಯಕ್ಕಾಗಿ ವಿಧಾನಸೌಧದವರೆಗೆ ಹಲವಾರು ಬಾರಿ ಓಡಾಡಿದ್ದೇವೆ. ನಾವು ಬಳ್ಳಾರಿ ಜಿಲ್ಲೆಗೆ ಸೇರಿದ್ದರೂ ತಾವು ನ್ಯಾಯ ಒದಗಿಸುತ್ತೇರೆಂದು ಕೆಲವರು ಹೇಳಿದ ಕಾರಣ ವಿಶ್ವಾಸವಿಟ್ಟು ಬಂದಿದ್ದೇವೆ. ಜನ, ಹಣ ಬಲವಿಲ್ಲದ ನಮಗೆ ನೀವೇ ದಾರಿ ಎಂದು ಮನವಿ ಮಾಡಿದರು.
ಮಾಯೊಕೊಂಡ ಹೋಬಳಿಯ ಶಂಕರನಹಳ್ಳಿಯ ಗ್ರಾಮಸ್ಥರೋರ್ವರು ತಮ್ಮ ದರಕಾಸ್ತು ಜಮೀನು ಪೋಡಿಯಾಗಿಲ್ಲ. ಪೋಡಿ ಮಾಡಿಕೊಡಬೇಕೆಂದು ಮನವಿ ಮಾಡಿದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ತಾಲ್ಲೂಕುವಾರು ತಹಶೀಲ್ದಾರರು ಡ್ರೈವ್ ಮಾಡಬೇಕೆಂದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ತಾವು ಈ ಪ್ರಕರಣದ ಕುರಿತು ಪರಿಶೀಲಿಸಿ ಸಂಬಂಧಿಸಿದವರನ್ನು ಕರೆಯಿಸಿ ಮಾತನಾಡಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಕೆಎಸ್‍ಆರ್‍ಟಿಸಿ ಬಸ್ ಬಿಡಲು ಸೂಚನೆ : ಚನ್ನಗಿರಿ ತಾಲ್ಲೂಕಿನ ಕಾಲೇಜು ವಿದ್ಯಾರ್ಥಿಗಳು ತ್ಯಾವಣಿಗೆಯಿಂದ ಬೆಳಿಗ್ಗೆ 7.45 ಕ್ಕೆ, ದಾವಣಗೆರೆಯಿಂದ ಬೆಳಿಗ್ಗೆ 5.30ಕ್ಕೆ, ಕೆರೆಬಿಳಚಿಯಿಂದ ಬೆಳಿಗ್ಗೆ 8ಕ್ಕೆ ಹಾಗೂ ದಾವಣಗೆರೆಯಿಂದ ಸಂಜೆ 6ಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿಕಡಬೇಕೆಂದು ಮನವಿ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳು ಕಾಲೇಜಿಗೆ ಓಡಾಡಲು ಬಸ್ ಇಲ್ಲದೇ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದಲೇ ಈ ಮಾರ್ಗವಾಗಿ ಬಸ್ ಬಿಡುವಂತೆ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಕರಿಗೆ ಸೂಚನೆ ನೀಡಿದರು.
ಅರ್ಜಿಗಳ ಮಹಾಪೂರ : ಒಂದು ವರ್ಷಕ್ಕೂ ಅಧಿಕ ಸಮಯದಿದಂದ ಸ್ಥಗಿತಗೊಂಡಿದ್ದ ಜನಸ್ಪಂದನ ಸಭೆಯಿಂದಾಗಿ ಜನರು ಇಂದು ಪುನರಾರಂಭಗೊಂಡ ಜನಸ್ಪಂದನ ಸಭೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಅಹವಾಲು ಅರ್ಜಿಗಳನ್ನು ಸಲ್ಲಿಸಿದರು. ಅರ್ಜಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ತಮ್ಮ ತಮ್ಮ ಕಚೇರಿಗಳಲ್ಲಿ ಕೆಲಸ ಮಾಡಿಕೊಟ್ಟಲ್ಲಿ ಇಷ್ಟು ಅರ್ಜಿಗಳು ಜಿಲ್ಲಾಡಳಿತಕ್ಕೆ ಬರುವುದಿಲ್ಲ. ಆದ ಕಾರಣ ಇನ್ನು ಮುಂದೆ ಅಧಿಕಾರಿಗಳು ತಮ್ಮ ಹಂತದಲ್ಲಿ ಶೀಘ್ರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದರು.
ಗ್ರಾಮ ವಾಸ್ತವ್ಯ : ಸರ್ಕಾರದ ಆದೇಶದಂತೆ ಪ್ರತಿ 3ನೇ ಶನಿವಾರ ಗ್ರಾಮಗಳ ಆಯ್ಕೆ ಮಾಡಿ ಅಲ್ಲಿಯ ಜನರಿಂದ ಅಹವಾಲುಗಳನ್ನು ಸ್ವೀಕರಿಸಿ ಇತ್ಯರ್ಥಪಡಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಫೆ.20 ರಂದು ಹಮ್ಮಿಕೊಳ್ಳಲಾಗಿದೆ. ಡಿಸಿ, ಸಿಇಓ, ತಹಶೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸೇರಿದಂತೆ ಸ್ಥಳೀಯ ಅಧಿಕಾರಿಗಳೊಂದಿಗೆ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಜನರ ಸಮಸ್ಯೆಗಳನ್ನು ಆಲಿಸಿ ಇತ್ಯರ್ಥಪಡಿಸಲಾಗುವುದು.
ಫೆ.20 ರಂದು ಜಗಳೂರು ತಾಲ್ಲೂಕಿನ ಸೊಕ್ಕೆ ಹೋಬಳಿಯ ಅಗಸನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಸವನಕೋಟೆಯಲ್ಲಿ ಮತ್ತು ಮಧ್ಯಾಹ್ನದ ನಂತರ ಅಗಸನಹಳ್ಳಿಯಲ್ಲಿ ಗ್ರಾಮವಾಸ್ತವ್ಯ ಮಾಡಲಾಗುವುದು. ಸಂಜೆ 4 ಗಂಟೆಗೆ ಶಾಸಕರಾದ ಎಸ್.ವಿ.ರಾಮಚಂದ್ರ ಇವರು ಕೂಡ ಪಾಲ್ಗೊಳ್ಳುವರು. ಮತ್ತು ಅಂದು ವಿವಿಧ ತಾಲ್ಲೂಕುಗಳಲ್ಲಿ ಕೂಡ ತಹಶೀಲ್ದಾರರು ಮತ್ತು ಇತರೆ ಅಧಿಕಾರಿಗಳು ನಿಗದಿತ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡವರು ಎಂದರು.
ಸಕಾಲದಡಿ ಅರ್ಜಿ ಸ್ವೀಕರಿಸಿ : ಎಲ್ಲ ಇಲಾಖೆಗಳು ಸಕಾಲದಡಿ ಅರ್ಜಿ ಸ್ವೀಕರಿಸಬೇಕು. ಶಿಕ್ಷಣ ಇಲಾಖೆ, ಆರೋಗ್ಯ, ಆರ್‍ಡಿಪಿಆರ್, ಪಿಡಬ್ಲ್ಯುಡಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಕಾಲದಡಿಯಲ್ಲಿ ಅರ್ಜಿ ಸ್ವೀಕಾರ ಆಗುತ್ತಿಲ್ಲ. ಹಾಗೂ ಬಾಕಿ ಪ್ರಕರಣಗಳು ಇವೆ. ಇದನ್ನು ವಿಲೇ ಮಾಡಿ ಸಂಬಂಧಿಸಿದ ಎಲ್ಲ ಇಲಾಖೆಗಳು ಸಕಾಲದಡಿ ಅರ್ಜಿ ಸ್ವೀಕರಿಸಿ ವಿಲೇ ಮಾಡಬೇಕೆಂದರು.
ಕೋವಿಡ್ ಲಸಿಕೆ ತೆಗೆದುಕೊಳ್ಳಲು ಮನವಿ : ಕೋವಿಡ್ ಲಸಿಕೆಯಿಂದ ಯಾವುದೇ ತೊಂದರೆ ಇಲ್ಲ. ಅದಕ್ಕೆ ನಾನು, ಎಸ್‍ಪಿ ಇತರೆ ಅಧಿಕಾರಿಗಳೇ ಉದಾಹರಣೆ. ನಾವು ಲಸಿಕೆ ಪಡೆದಿದ್ದು, ಏನೂ ಅಡ್ಡ ಪರಿಣಾಮ ಆಗಿಲ್ಲ. ಆದರೆ ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್‍ಲೈನ್ ವರ್ಕರ್ಸ್ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಯಾರೂ ಹಿಂಜರಿಯದೇ ಲಸಿಕೆ ಪಡೆಯಬೇಕು. ಒಂದು ಪಕ್ಷ ಮುಂದೆ ಕೋವಿಡ್ ಬಂದಲ್ಲಿ ಈ ಹಿಂದೆ ಸರ್ಕಾರದಿಂದ ಕೋವಿಡ್ ರೋಗಿಗಳಿಗೆ ನೀಡಲಾಗುತ್ತಿದ್ದ ಸೌಲಭ್ಯಗಳು ಮುಂದೆ ಕಡಿತವಾಗಬಹುದು ಆದ ಕಾರಣ ಉಚಿತ ಕೋವಿಡ್ ಲಸಿಕೆಯ ಸೌಲಭ್ಯ ಪಡೆಯುವಂತೆ ಅವರು ಮನವಿ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ದೂಡಾ ಆಯುಕ್ತ ಬಿ.ಟಿ.ಕುಮಾರಸ್ವಾಮಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಡಿಹೆಚ್‍ಓ ಡಾ.ನಾಗರಾಜ್, ಸ್ಮಾರ್ಟ್‍ಸಿಟಿ ಎಂಡಿ ರವೀಂದ್ರ ಮಲ್ಲಾಪುರ, ಎಸ್‍ಎಲ್‍ಓ ರೇಷ್ಮಾ ಹಾನಗಲ್, ಎಸಿ ಪ್ರೊಬೇಷನರ್ ದುರ್ಗಾ ಶ್ರೀ, ತಹಶೀಲ್ದಾರ್ ಗಿರೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಡಿಡಿ ವಿಜಯಕುಮಾರ್, ಸಮಾಜ ಕಲ್ಯಾಣ ಇಲಾಖೆ ಡಿಡಿ ಕೌಸರ್ ರೇಷ್ಮಾ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here