ಆರ್ಥಿಕ ಸ್ವಾವಲಂಬನೆಗೆ ತೋಟಗಾರಿಕೆ ಬೆಳೆ ಸಹಕಾರಿ: ಎಂ.ಆರ್.ದಿನೇಶ್

0
160

ಮಡಿಕೇರಿ ಫೆ.19 :-ಪ್ರತಿಯೊಬ್ಬ ಗ್ರಾಮೀಣ ಪ್ರದೇಶದ ಕೃಷಿಕರ ಆರ್ಥಿಕ ಸ್ವಾವಲಂಬನೆಗೆ ತೋಟಗಾರಿಕಾ ಚಟುವಟಿಕೆ ಸಹಕಾರಿ ಎಂದು ಬೆಂಗಳೂರಿನ ಹೆಸರುಘಟ್ಟ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಎಂ.ಆರ್.ದಿನೇಶ್ ಅವರು ಆಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಹೆಸರುಘಟ್ಟ ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆ ಹಾಗೂ ಚೆಟ್ಟಳ್ಳಿ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ವತಿಯಿಂದ ‘ಕ್ಷೇತ್ರ ಪ್ರಾತ್ಯಕ್ಷತೆ ಮತ್ತು ರೈತರೊಡನೆ ವಿಜ್ಞಾನಿಗಳ ಸಂವಾದ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತೋಟಗಾರಿಕೆ ಬೆಳೆಗಳಲ್ಲಿ ವೈವಿಧ್ಯತೆಯ ಪ್ರಯತ್ನ ಮಾಡುವುದರ ಜೊತೆಗೆ, ಫಸಲಿನ ಮೌಲ್ಯವರ್ಧನೆಗೆ ಒತ್ತು ನೀಡುವುದರಿಂದ ರೈತರ ಆದಾಯದಲ್ಲಿ ದ್ವಿಗುಣಗೊಳಿಸಲು ಸಾಧ್ಯವಿದೆ ಎಂದರು.
ತೋಟಗಾರಿಕೆ ಮೇಳದಲ್ಲಿ 45 ತರಕಾರಿ ತಳಿಗಳನ್ನು 25 ಬೆಳೆಗಳಲ್ಲಿ ಪ್ರದರ್ಶನದ ತಾಕುಗಳನ್ನು ಮಾಡಿದೆ. ಹಾಗೂ 10 ಔಷಧಿಯ ಸಸ್ಯಗಳ ತಾಕುಗಳು ಇವೆ. ಕೊಡಗಿನಲ್ಲಿ ಕಾಫಿ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದರೂ ಸಹ, ಬಿಡುವಿನ 3-4 ತಿಂಗಳ ಸಮಯದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆದು ಯಶಸ್ವಿಯಾಗುವುದು ಹೇಗೆ ಎಂಬುದರ ಬಗ್ಗೆ ಈ ಪ್ರದರ್ಶನ ಮಾಡಲಾಗಿದೆ ಎಂದರು.
ತೋಟಗಾರಿಕೆಯನ್ನು ಉಪಯೋಗಿಸಿಕೊಂಡು ಯುವಕರು ಮತ್ತು ರೈತರು ಯಾವ ರೀತಿಯಾಗಿ ಉದ್ಯಮಿಯಾಗಿ ಹೊರಹೊಮ್ಮಬಹುದು. ಜೊತೆಗೆ ಉದ್ಯಮವಾಗಿ ತೋಟಗಾರಿಕೆ ಬೆಳೆಗಳಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂದು ತಿಳಿಸಲು ತೋಟಗಾರಿಕಾ ‘ಕ್ಷೇತ್ರ ಪ್ರಾತ್ಯಕ್ಷತೆ ಮತ್ತು ರೈತರೊಡನೆ ವಿಜ್ಞಾನಿಗಳ ಸಂವಾದ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಎಂ.ಆರ್.ದಿನೇಶ್ ಅವರು ಹೇಳಿದರು.
ಬೆಳೆಗಾರರು ಮೊದಲು ತಮ್ಮ ಪ್ರದೇಶದ ಹವಾಗುಣ ಅರಿತುಕೊಳ್ಳಬೇಕು ಬಳಿಕ ಸೂಕ್ತ ತೋಟಗಾರಿಕಾ ಬೆಳೆಗಳನ್ನು ಆಯ್ಕೆ ಮಾಡಿಕೊಂಡು ನೈಸರ್ಗಿಕ ಕೃಷಿಗೆ ಆದ್ಯತೆ ನೀಡಬೇಕು ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ನಿರ್ದೇಶಕರು ನುಡಿದರು.
ಮೊದಲಿನ ದಿನಗಳಲ್ಲಿ ಕಿತ್ತಳೆಯಿಂದಲೂ ಆದಾಯ ಬರುತ್ತಿತ್ತು. ಆದರೆ ಹಲವಾರು ಕಾರಣಗಳಿಂದ ಕಿತ್ತಳೆ ಕೊಡಗಿನ ತೋಟಗಳಿಂದ ಮಾಯವಾಗುತ್ತಿದೆ. ಪರಿಸರ ಸ್ನೇಹಿ ಕೃಷಿ ವಿಧಾನ ಅಳವಡಿಸಿಕೊಂಡರೆ ಆದಾಯ ಹೆಚ್ಚಳದ ಜೊತೆಗೆ ಉತ್ತಮ ಇಳುವರಿಯೂ ಸಿಗಲಿದೆ ಎಂದು ಅವರು ಸಲಹೆ ಮಾಡಿದರು.
ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವ ವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಪ್ರೊ.ಪಿ.ಜಿ ಚೆಂಗಪ್ಪ ಅವರು ಮಾತನಾಡಿ ರೈತರು ಮಾರುಕಟ್ಟೆಗೆ ಹೊಂದಿಕೊಳ್ಳುವ ಬೆಳೆ ಬೆಳೆಯುವ ಕಡೆ ಹೆಚ್ಚಿನ ಒತ್ತು ನೀಡಬೇಕು. ಕೃಷಿ ಬಗ್ಗೆ ತಿಳಿದುಕೊಳ್ಳದೇ ಕೃಷಿ ಮಾಡುತ್ತೇನೆ ಎಂದರೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಸಣ್ಣ ಮತ್ತು ಅತಿ ಸಣ್ಣ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಅವರು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು. ಬೆಳೆಗಳನ್ನು ಬೆಳೆಯಲು ಹೇಗೆ ಶ್ರಮ ವಹಿಸುತ್ತೇವೆ ಅದೇ ರೀತಿಯಲ್ಲಿ ಬೆಳೆಗಳನ್ನು ಮಾರಾಟ ಮಾಡುವುದರ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಅವರು ಸಲಹೆ ಮಾಡಿದರು.
ಇತ್ತೀಚಿನ ವರ್ಷಗಳಲ್ಲಿ ಹಣ್ಣುಗಳ ಬಳಕೆ ಮಾಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದು, ರೈತರಿಗೆ ಮಾರುಕಟ್ಟೆಯ ತಂತ್ರಗಾರಿಕೆ ಗೊತ್ತಿಲ್ಲದೇ ಸೋಲಾಗುತ್ತಿದೆ ಎಂದರು.
ಸುಂಟಿಕೊಪ್ಪ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷರಾದ ಬೋಸ್ ಮಂದಣ್ಣ ಅವರು ಮಾತನಾಡಿ ಚೆಟ್ಟಳ್ಳಿ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ವಿವಿಧ ರೀತಿಯ ಹಣ್ಣಿನ ಹಾಗೂ ತರಕಾರಿ ತಳಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಲಾಂಗಾನ್, ಅರ್ಕಾ ಸುಕೋಮಲ್(ತಿಂಗಳ ಹುರುಳಿ), ಅರ್ಕಾ ಮುತ್ತು(ಕಲ್ಲಂಗಡಿ), ಲಿಚ್ಚಿ, ಪಟ್ಟಿಪಾನ್(ವಿದೇಶಿ ಕುಂಬಳಕಾಯಿ), ಅರ್ಕಾ ಚಂದನ್(ಸಿಹಿ ಕುಂಬಳ), ಅರ್ಕಾ ಸೂರ್ಯಮುಖಿ(ಸಿಹಿ ಕುಂಬಳ), ಅರ್ಕಾ ಸಿರಿ(ಕರ್ಬೂಜ), ಅರ್ಕಾ ಮಂಗಳ(ಮೀಟರ್ ಅಲಸಂದೆ), ಅರ್ಕಾ ಹರ್ಷಿತ್(ಬದನೆಕಾಯಿ), ಅರ್ಕಾ ಕೇಶವ್(ಬದನೆಕಾಯಿ) ಮತ್ತಿತರ ಬೆಳೆಗಳು ತೋಟಗಾರಿಕಾ ಮೇಳದಲ್ಲಿ ಆಕರ್ಷಿಣಿಯವಾಗಿದ್ದವು.
ಇದೇ ಸಂದರ್ಭದಲ್ಲಿ ಮಾಡಹಾಗಲ ಬೆಳೆದು ಯಶಸ್ಸು ಸಾಧಿಸಿರುವುದರಿಂದ ಶಿವಮೊಗ್ಗ ಜಿಲ್ಲೆಯ ಶಂಕರ ಮೂರ್ತಿ, ಪಿರಿಯಾಪಟ್ಟಣ ತಾಲ್ಲೂಕಿನ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.
ಬೆಂಗಳೂರಿನ ಐ.ಸಿ.ಎ-ಐ.ಐ.ಹೆಚ್.ಆರ್. ಹಣ್ಣಿನ ಬೆಳೆಗಳ ವಿಭಜನೆಯ ಮುಖ್ಯಸ್ಥರಾದ ಡಾ.ರೆಜು ಎಂ. ಕುರಿಯನ್, ಐ.ಐ.ಎಚ್. ಆರ್. ತರಕಾರಿ ಬೆಳೆಗಳ ವಿಭಜನೆಯ ಮುಖ್ಯಸ್ಥರಾದ ಡಾ.ಕೆ.ಮಾದವಿ ರೆಡ್ಡಿ, ಪ್ರಧಾನ ವಿಜ್ಞಾನಿಗಳು ಮತ್ತು ನೋಡಲ್ ಅಧಿಕಾರಿಗಳಾದ ಡಾ. ಟಿ.ಎಸ್.ಅಘೋರ, ಪಿ.ಹೆಚ್.ಟಿ ಮತ್ತು ಎ.ಇ ವಿಭಾಗದ ಮುಖ್ಯಸ್ಥರಾದ ಡಾ. ಸಿ.ಕೆ.ನಾರಾಯಣ ಇವರು ರೈತರಿಗೆ ಬೆಳೆಗಳಿಗೆ ಸಂಬಂಧಿಸಿದಂತೆ ಅನೇಕ ಮಾಹಿತಿಗಳನ್ನು ನೀಡಿದರು.
ವಿಜ್ಞಾನಿಗಳಾದ ಡಾ.ಪ್ರಸನ್ನ ಕುಮಾರ್, ಚೆಟ್ಟಳ್ಳಿಯ ಕೇಂದ್ರ ತೋಟಗಾರಿಕಾ ಪ್ರಯೋಗ ಕೇಂದ್ರದ ವಿಜ್ಞಾನಿಗಳಾದ ಡಾ.ಎಂ ಸೆಂದಿಲ್ ಕುಮಾರ್, ಡಾ.ವಿ.ವೆಂಕಟರಾವನಪ್ಪ, ಡಾ.ಕೆ.ವಿ.ವಿರೇಂದ್ರ ಕುಮಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬನಾ ಎಂ ಶೇಕ್, ಉಪ ನಿರ್ದೇಶಕರಾದ ರಾಜು, ಶಶಿಧರ್ ಇತರರು ಇದ್ದರು. ಗೋಣಿಕೊಪ್ಪಲಿನ ಕೊಡಗು ವಿಜ್ಞಾನ ಕೇಂದ್ರ ಮತ್ತು ಚೆಟ್ಟಳ್ಳಿಯ ಕೇಂದ್ರ ತೋಟಗಾರಿಕಾ ಪ್ರಯೋಗ ಕೇಂದ್ರದ ಮುಖ್ಯಸ್ಥರಾದ ಡಾ. ಸಾಜು ಜಾರ್ಜ್ ಅವರು ಸ್ವಾಗತಿಸಿದರು.

LEAVE A REPLY

Please enter your comment!
Please enter your name here