ನಾಗರಿಕ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ,ಪೊಲೀಸ್ ಇಲಾಖೆಯಲ್ಲಿ ಅತ್ಯಂತ ಶ್ರದ್ಧೆ,ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ:ಐಜಿಪಿ ಎಂ.ನಂಜುಂಡಸ್ವಾಮಿ

0
107

ಬಳ್ಳಾರಿ,ಫೆ.26 ; ಪೊಲೀಸ್ ಇಲಾಖೆ ಬದುಕಿಗೆ ಬೇಕಾದ ಶಿಸ್ತು, ವಿನಯತೆ ಮತ್ತು ಕಾನೂನಿನ ಬಗ್ಗೆ ವಿಚಾರಗಳನ್ನು ತಿಳಿಸುತ್ತದೆ. ಅವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಎಂದು ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಎಂ.ನಂಜುಂಡಸ್ವಾಮಿ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಶುಕ್ರವಾರ ನಡೆದ ಬಳ್ಳಾರಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 15ನೇ ತಂಡದ ನಾಗರಿಕ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ತರಬೇತಿ ಶಾಲೆಯಿಂದ ನಿರ್ಗಮನವಾದ ಈ ದಿನ ನಿಮ್ಮ ಜೀವನ ಪೂರ್ತಿ ನೆನಪಿನÀಲ್ಲಿ ಇರುತ್ತದೆ;ಈ ದಿನ ನಿಮ್ಮ ತಂದೆ-ತಾಯಿ ಮತ್ತು ಪೋಷಕರಿಗೆ ಈ ಕ್ಷಣ ತುಂಬಾ ಖುಷಿ ಕೊಡುತ್ತದೆ. ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ. ಬದುಕಿಗೆ ಅವಶ್ಯಕ ಇರುವ ಮೂಲ ಅಂಶಗಳನ್ನು ತಿಳಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡುತ್ತದೆ ಅದನ್ನು ಕೊನೆಯವರೆಗೆ ನಿಮ್ಮ ಜೀವನದಲ್ಲಿ ರೂಢಿಸಿಕೊಂಡು ಹೋಗಿ. ಹೊಸ ಹೊಸ ವಿಚಾರ ಮತ್ತು ಕಾನೂನುಗಳನ್ನು ತಿಳಿದುಕೊಳ್ಳುವ ಮೂಲಕ ಅವುಗಳನ್ನು ನಿಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದ ಐಜಿಪಿ ನಂಜುಂಡಸ್ವಾಮಿ ಅವರು ಕಲಿಕೆಗೆ ಯಾವುದೇ ರೀತಿಯಲ್ಲಿ ಅಂತ್ಯವಿಲ್ಲ, ಜೀವನದ ಉದ್ದಕ್ಕೂ ಕಲಿಕಾ ಪ್ರಕ್ರಿಯೆ ನಿರಂತರವಾಗಿರುತ್ತದೆ. ನಿಮ್ಮ ಅಭ್ಯಾಸ ಯಾವಾಗಲೂ ನಡೆಯಲಿ ಎಂದರು.
ಎಲ್ಲರ ಬಳಿ ಸ್ಮಾರ್ಟ್ ಫೋನ್‍ಗಳಿವೆ ಅವುಗಳನ್ನು ಅನಗತ್ಯ ವಿಚಾರಗಳಿಗೆ ಬಳಸದೆ, ಅದರ ಮೂಲಕ ಎಲ್ಲಾ ರೀತಿಯ ಕಾನೂನು, ಸಂವಿಧಾನ ಮತ್ತು ಕರ್ತವ್ಯ ನಿರ್ವಹಿಸುವ ಬಗೆ ಕುರಿತು ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಿ. ಇತರೆ ಯಾವುದೇ ವಿಷಯಗಳಿಗೆ ಕಿವಿ ಕೊಡಬೇಡದೆ ನಿಮ್ಮ ನಿಮ್ಮ ಕೆಲಸ ಶ್ರದ್ಧೆಯಿಂದ ಮಾಡಿ ಎಂದು ಅವರು ಸಲಹೆ ನೀಡಿದರು.
ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಬಳ್ಳಾರಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಬಿ.ಎನ್.ಲಾವಣ್ಯ ಅವರು ಮಾತನಾಡಿ, ಯಾವುದೇ ಒಂದು ಕೆಲಸಕ್ಕೆ ಒಳ್ಳೆಯ ಆರಂಭ ಮುಖ್ಯ. ಜೀವನ ಪೂರ್ತಿ ಒಂದು ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಒಂದೊಳ್ಳೆಯ ತರಬೇತಿಯನ್ನು ನೀಡಲಾಗಿದೆ. ಎಲ್ಲಾ ಪ್ರಶಿಕ್ಷಣಾರ್ಥಿಗಳು ಆತ್ಮ ವಿಶ್ವಾಸದಿಂದ ತರಬೇತಿ ನಿರ್ವಹಿಸಿದ್ದಾರೆ. ಇಲ್ಲಿ ಪಡೆದ ತರಬೇತಿ ನಿಮ್ಮ ವೃತ್ತಿಯಲ್ಲಿ ನೆರವಾಗಲಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಪಡೆದ ತರಬೇತಿ ಕಾರ್ಯರೂಪಕ್ಕೆ ಬರಲಿ ಎಂದರು.
ಒಳ್ಳೆಯ ವೃತ್ತಿಯಿಂದ ಉತ್ತಮ ಕೌಶಲ್ಯ ಪಡೆದು, ಉತ್ತಮ ಕೌಶಲ್ಯದಿಂದ ಶಿಸ್ತನ್ನು ಕಲಿತು, ಶಿಸ್ತು ಮತ್ತು ದಕ್ಷತೆಯ ಮೂಲಕ ಎಲ್ಲರೂ ನಿಮ್ಮ ನಿಮ್ಮ ವೃತ್ತಿಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಳ್ಳಿ. ಪೊಲೀಸ್ ಇಲಾಖೆಯಲ್ಲಿ ಮಹತ್ವವಾದ ಸಾಧನೆಗಳನ್ನು ಮಾಡುವ ಮೂಲಕ ಇತಿಹಾಸವನ್ನು ಬರೆಯಿರಿ ಎಂದರು.
15 ನೇ ತಂಡದಲ್ಲಿ 58 ಜನ ಮಹಿಳಾ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ: 1994 ರಿಂದ ಜಿಲ್ಲೆಯಲ್ಲಿ ತರಬೇತಿ ಶಾಲೆ ಆರಂಭವಾಗಿದ್ದು, ನಾಗರೀಕರ ಪೊಲೀಸ್ ಪಡೆಯ 11 ತಂಡಗಳು, ಸಶಸ್ತ್ರ ಪೊಲೀಸ್ ಮೀಸಲು ಪಡೆಯ 2 ತಂಡಗಳು ಮತ್ತು ನಾಗರೀಕ ಮಹಿಳಾ ಪೊಲೀಸ್ ಪಡೆಯ 2 ತಂಡಗಳನ್ನು ಒಳಗೊಂಡಂತೆ ಇದುವರಗೆ 15 ತಂಡಗಳು ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿವೆ. 15 ನೇ ತಂಡದಲ್ಲಿ 58 ಜನ ಪ್ರಶಿಕ್ಷಣಾರ್ಥಿಗಳು ತರಬೇತಿಯನ್ನು ಪಡೆದಿದ್ದಾರೆ.

ತರಬೇತಿಯ ಪ್ರಮುಖ ವಿಷಯಗಳು; ತರಬೇತಿಯ ಅವಧಿಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಅಪರಾಧದ ಸ್ಥಳ ಪರಿಶೀಲನೆ, ಸೈಬರ್ ಅಪರಾಧ ತಡೆಗಟ್ಟುವಿಕೆ, ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಕಾಯ್ದೆ, ಸಂಚಾರಿ ವ್ಯವಸ್ಥೆಯ ಬಗ್ಗೆ ತಿಳಿಸುವುದರ ಜೊತೆಗೆ ಜಿಲ್ಲಾ ಪೊಲೀಸ್ ಇಲಾಖೆಯ ವಿವಿಧ ಕೆಲಸಗಳ ಕಾರ್ಯನಿರ್ವಹಣೆ ನ್ಯಾಯಾಲಯ, ಜಿಲ್ಲಾ ಕಾರಾಗೃಹ, ಜಿಲ್ಲಾಸ್ಪತ್ರೆ ಮತ್ತು ಬಳ್ಳಾರಿ ಜಿಲ್ಲೆಯ ಐತಿಹಾಸಿಕ ತಾಣಗಳ ಬಗ್ಗೆ ಪರಿಚಯ ಮಾಡಲಾಗಿದ್ದು, ಭದ್ರತಾ ವ್ಯವಸ್ಥೆ, ಯೋಗ ಮತ್ತು ಕರಾಟೆಯ ಕುರಿತು ತರಬೇತಿ ನೀಡಲಾಗಿದೆ ಎಂದು ಎಎಸ್ಪಿ ಲಾವಣ್ಯ ಅವರು ಹೇಳಿದರು.

ತರಬೇತಿಯಲ್ಲಿ ಹೆಚ್ಚಿನ ಅಂಕ ಪಡೆದ ಪ್ರಶಿಕ್ಷಣಾರ್ಥಿಗಳ ವಿವರ:
ತರಬೇತಿಯಲ್ಲಿ ಹೆಚ್ಚಿನ ಅಂಕ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ವಿಜಯಪುರ ಜಿಲ್ಲೆಯ ಸಾವಿತ್ರಿ, ಬೆಳಗಾವಿ ಜಿಲ್ಲೆಯ ಶಿವಲೀಲಾ ಬಿರಾದಾರ, ಸಾಂವಕ್ಕಾ ಗದಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೋಜಾ ಎಂ., ಚಿಕ್ಕ ಬಳ್ಳಾಪುರ ಜಿಲ್ಲೆಯ ಸುಮಾ ಕೆ., ಬೆಳಗಾವಿಯ ಅಕ್ಷತಾ ಬಾಡದವರ, ಚಿಕ್ಕಬಳ್ಳಾಪುರ ಜಿಲ್ಲೆಯ ಪೂಜಾ ಮಂಡಲ್, ತುಮಕೂರು ಜಿಲ್ಲೆಯ ಬಿಂದುಶ್ರೀ ಕೆ. ಮತ್ತು ಡಿಜಿ ಮತ್ತು ಐಜಿಪಿ ಪ್ರಶಸ್ತಿಯನ್ನು ಪಡೆದ ವಿಜಯಪುರ ಜಿಲ್ಲೆಯ ಸಾವಿತ್ರಿ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರು ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here