ಸಪ್ತಪದಿ ಸರಳ ಸಾಮೂಹಿಕ ವಿವಾಹಗಳಿಗೆ ಅರ್ಜಿ ಅಹ್ವಾನ

0
119

ಬಳ್ಳಾರಿ,ಫೆ: ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪ್ರಮುಖ ದೇವಾಲಯಗಳಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, ಆಸಕ್ತ ವಧು-ವರರು ಸಾಮೂಹಿಕ ವಿವಾಹ ನಡೆಯುವ ಆಯಾ ದೇವಸ್ಥಾನದ ಕಾರ್ಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಪ್ತಪದಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದಲ್ಲಿ ವರನಿಗೆ ಪ್ರೋತ್ಸಾಹಧನ(ಹೂವಿನ ಹಾರ,ಪಂಚೆ,ಶರ್ಟ್ ಮತ್ತು ಶಲ್ಯಗೆ)ವರನ ಉಳಿತಾಯ ಖಾತೆಗೆ 5 ಸಾವಿರ ಜಮಾ ಮಾಡಿಸಲಾಗುವುದು, ವಧುವಿಗೆ ಪ್ರೋತ್ಸಾಹಧನ(ಹೂವಿನ ಹಾರ,ಧಾರೆ ಸೀರೆ ಮತ್ತು ರವಿಕೆ ಕಣಕ್ಕಾಗಿ)ವಧುವಿನ ಬ್ಯಾಂಕ್ ಉಳಿತಾಯ ಖಾತೆಗೆ 10 ಸಾವಿರ ಜಮಾ ಮಾಡಿಸಲಾಗುವುದು, ವಧುವಿಗೆ ಚಿನ್ನದ ತಾಳಿ,ಎರಡು ಗುಂಡು(ಅಂದಾಜು 8 ಗ್ರಾಂ ತೂಕ) ದೇವಸ್ಥಾನದ ವತಿಯಿಂದ (40 ಸಾವಿರ ರೂ.ಮೌಲ್ಯ) ಖರೀದಿಸಿ ನೀಡಲಾಗುವುದು.
ವಿವಾಹವಾದ ಜೋಡಿಗಳಿಗೆ ದೇವಸ್ಥಾನದ ವತಿಯಿಂದ ವಧು-ವರರಿಗೆ 55ಸಾವಿರದವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಆಸಕ್ತರು ಆಯಾ ದೇವಸ್ಥಾನದಲ್ಲಿ ವಿವಾಹ ನಡೆಯುವ 30 ದಿನಗಳ ಮುಂಚಿತವಾಗಿ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.
ಸಾಮೂಹಿಕ ವಿವಾಹಗಳು ನಡೆಯುವ ದೇವಸ್ಥಾನಗಳ ವಿವರ: ಹೂವಿನಹಡಗಲಿ ತಾಲೂಕಿನ ಶ್ರೀ ಮೈಲಾರ ಲಿಂಗಸ್ವಾಮಿ ದೇವಸ್ಥಾನ, ಕೊಟ್ಟೂರು ತಾಲೂಕಿನ ಶ್ರೀ ಗುರುಬಸವೇಶ್ವರಸ್ವಾಮಿ ದೇವಸ್ಥಾನ, ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಶ್ರೀ ಉತ್ಸವಾಂಬ ದೇವಸ್ಥನದಲ್ಲಿ ಏ.29, ಮೇ 30, ಜೂ.27, ಜುಲೈ 04 ರಂದು ಸಾಮೂಹಿಕ ವಿವಾಹ ನಡೆಯಲಿದೆ.
ಕುರುವತ್ತಿ ಕ್ಷೇತ್ರದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏ.25, ಮೇ 21, ಜೂ.17, ಜುಲೈ 01 ರಂದು ಸಾಮೂಹಿಕ ವಿವಾಹ ನಡೆಯಲಿದೆ. ಕುರುಗೋಡು ತಾಲೂಕಿನ ಶ್ರೀ ದೊಡ್ಡಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏ.22, ಮೇ 13, ಜೂ.13, ಜುಲೈ 07 ರಂದು ಸಾಮೂಹಿಕ ವಿವಾಹ ನಡೆಯಲಿದೆ. ಹೊಸಪೇಟೆ ತಾಲೂಕಿನ ಶ್ರೀ ವಿರುಪಾಕ್ಷೇಶ್ವರÀ ಸ್ವಾಮಿ ದೇವಸ್ಥಾನ ಹಂಪಿದಲ್ಲಿ ಏ.19, ಮೇ 09, ಜೂ.27, ಜುಲೈ 07 ರಂದು ಸಾಮೂಹಿಕ ವಿವಾಹ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಈ ಮಹತ್ವಾಕಾಂಕ್ಷಿ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here