ಶೀಘ್ರದಲ್ಲಿ ನೂತನ ಗಣಿ ನೀತಿ ಜಾರಿ : ಸಚಿವ ಮುರಗೇಶ ನಿರಾಣಿ

0
109

ಧಾರವಾಡ. ಮಾ.12: ರಾಜ್ಯದಲ್ಲಿ ಪರಿಸರ ಮತ್ತು ಉದ್ಯಮಸ್ನೇಹಿಯಾದ ನೂತನ ಗಣಿ ನೀತಿಯನ್ನು ರಾಜ್ಯ ಸರಕಾರದಿಂದ ರೂಪಿಸುತ್ತಿದ್ದು, ನೀತಿಯ ಕರಡು ಪ್ರತಿ ಪರಿಶೀಲನಾ ಹಂತದಲ್ಲಿದೆ. ಅಂತಿಮಗೊಳಿಸಿ ಶೀಘ್ರದಲ್ಲಿ ನೂತನ ಗಣಿ ನೀತಿ ಜಾರಿಗೊಳಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ ನಿರಾಣಿ ಹೇಳಿದರು.

ಅವರು ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಹಾಗೂ ಸ್ಟೋನ್‍ಕ್ರಶರ್ ಮತ್ತು ಕಲ್ಲು ಗಣಿಗಾರಿಕೆ ಸಂಘದ ಪದಾಧಿಕಾರಿಗಳ ಸಭೆ ಜರುಗಿಸಿ ಮಾತನಾಡಿದರು.

ಹೊಸ ಮೈನಿಂಗ್ ನೀತಿಯಲ್ಲಿ ಲೈಸನ್ಸ್ ಸರಳೀಕರಣಕ್ಕೆ ಆದ್ಯತೆ ನೀಡಲಾಗಿದೆ ಮತ್ತು ಕ್ರಶರ್ ಮಾಲೀಕರ ಬೇಡಿಕೆಗಳಿಗೆ ಸ್ಪಂದಿಸಲಾಗಿದೆ. ಪಟ್ಟಾ ಭೂಮಿ ಹಾಗೂ ಸರಕಾರಿ ಭೂಮಿಗಳಲ್ಲಿ ನಡೆಯುವ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದ ರಾಜಧನ (ರಾಯಲಿಟಿ) ಮೊತ್ತವನ್ನು ಬೇರೆ ಬೇರೆಯಾಗಿ ನಿಗದಿಗೊಳಿಸಲಾಗುವುದು ಎಂದು ಅವರು ಹೇಳಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ‘ಏಕಗವಾಕ್ಷಿ ಯೋಜನೆ’ ಜಾರಿ ಮೂಲಕ ಉಧ್ಯಮಿಗಳಿಗೆ ತ್ವರೀತವಾಗಿ ಸ್ಪಂದಿಸಲು ಕ್ರಮವಹಿಸಲಾಗುತ್ತಿದೆ. ಸಧ್ಯದಲ್ಲಿ ರಾಜ್ಯದ ಎಲ್ಲ ಕಂದಾಯ ವಿಭಾಗ ಮತ್ತು ಎಲ್ಲ ಜಿಲ್ಲೆಗಳಲ್ಲಿ ಮೈನಿಂಗ್ ಅದಾಲತ್ ಆಯೋಜಿಸಲಾಗುತ್ತಿದೆ. ಅದಾಲತ್ ನಡೆಯುವ ಸ್ಥಳದಲ್ಲಿಯೇ ಗಣಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಧಾರವಾಡ ಜಿಲ್ಲೆಯಲ್ಲಿ 62 ಸ್ಟೋನ್ ಕ್ರಶರ್ ಮತ್ತು 136 ಕಲ್ಲು ಗಣಿಗಾರಿಕೆಗಳಿವೆ. ನಿಯಮ ಉಲ್ಲಂಘಿಸಿ ಗಣಿಗಾರಿಕೆ ಹಾಗೂ ಸ್ಟೊನ್‍ಕ್ರಶರ್ ನಡೆಯುತ್ತಿದ್ದರೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಲಿದ್ದಾರೆ ಎಂದು ಅವರು ತಿಳಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಹಾಗೂ ಸ್ಟೊನ್‍ಕ್ರಶರ್, ಕಲ್ಲು ಗಣಿಗಾರಿಕೆ ನಡೆಸುವ ಉದ್ಯಮಗಳಿಗೆ ಸೂಕ್ತ ತರಬೇತಿ ನೀಡಲು ಸ್ಕೂಲ್ ಆಫ್ ಮೈನಿಂಗ್ ಆರಂಭಿಸಲು ಸರಕಾರ ಸಿದ್ಧತೆ ನಡೆಸಿದೆ ಎಂದು ಸಚಿವ ಮುರಗೇಶ ನಿರಾಣಿ ಹೇಳಿದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಪ್ರತಿ ತಿಂಗಳು ಜಿಲ್ಲಾ ಟಾಸ್ಕ್‍ಪೊರ್ಸ್ ಸಭೆ ಜರುಗಿಸಿ ನಿಯಮಾನುಸಾರ ಲೈಸೆನ್ಸ್ ನೀಡಲಾಗುತ್ತಿದೆ. ಪ್ರತಿ ಗಣಿಕಾರಿಕೆ ಹಾಗೂ ಸ್ಟೊನ್‍ಕ್ರಶರ್ ಸ್ಥಳದಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಅನುಮತಿಗೆ ವಿಧಿಸಿದ ನಿಯಮಗಳ ಪಾಲನೆ ಕುರಿತು ಅಧಿಕಾರಿಗಳಿಂದ ವರದಿ ಪಡೆಯಲಾಗುತ್ತಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಡಿಸಿಪಿ ರಾಮರಾಜನ್, ಪರಿಸರ ಅಧಿಕಾರಿ ಶೋಭಾ ಪೋಳ ಹಾಗೂ ಧಾರವಾಡ ಜಿಲ್ಲಾ ಸ್ಟೋನ್‍ಕ್ರಶರ್ ಮತ್ತು ಕಲ್ಲು ಗಣಿಗಾರಿಕೆ ಸಂಘಗಳ ಅಧ್ಯಕ್ಷ ಕಲ್ಲಪ್ಪ ಹಟ್ಟಿಯವರ, ಉಪಾಧ್ಯಕ್ಷ ವಿ.ಎಸ್. ಪಾಟೀಲ ಮಾತನಾಡಿದರು.

ಹಿರಿಯ ಭೂ ವಿಜ್ಞಾನಿ ಚಂದ್ರಶೇಖರ ಸ್ವಾಗತಿಸಿ ಸಭೆ ನಿರ್ವಹಿಸಿದರು. ಸಭೆಯಲ್ಲಿ ರೇಷ್ಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಡಿವೈಎಸ್‍ಪಿ ಎಂ.ಬಿ. ಸಂಕದ ಸೇರಿದಂತೆ ವಿವಿಧ ಅಧಿಕಾರಿಗಳು, ಕ್ರಶರ್ ಮತ್ತು ಕಲ್ಲುಗಣಿಗಾರಿಕೆಗಳ ಮಾಲೀಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here