4,500 ಕೋಟಿ ರೂ. ಗುರಿಯ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ

0
114

ಮಡಿಕೇರಿ ಮಾ.17 :-ಜಿಲ್ಲಾ ಅಗ್ರಣೀ (ಲೀಡ್) ಬ್ಯಾಂಕ್‍ನ 2021-22 ನೇ ಸಾಲಿಗೆ 4,500 ಕೋಟಿ ರೂ. ಗುರಿಯ ಕೊಡಗು ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಬುಧವಾರ ಬಿಡುಗಡೆ ಮಾಡಿದರು.
ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವಿಶೇಷ ಸಮನ್ವಯ ಸಮಿತಿ ಸಭೆಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಲಾಕ್‍ಡೌನ್‍ನಿಂದಾಗಿ ಜನ ಸಾಮಾನ್ಯರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದ್ದು, ಈ ಸಂದರ್ಭದಲ್ಲಿ ಕೃಷಿಕರಿಗೆ ಸಾಲ ವಿತರಿಸುವ ಮೂಲಕ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸುವಂತೆ ಸಲಹೆ ಮಾಡಿದರು.
ಕೃಷಿಕರು ಉತ್ಪಾದಿಸಿದ ಉತ್ಪನ್ನದಿಂದ ರೈತರಿಗೆ ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ಒತ್ತು ನೀಡಬೇಕಿದೆ. ಆ ನಿಟ್ಟಿನಲ್ಲಿ ಕೃಷಿಕರಿಗೆ ಸಾಲ ಸೌಲಭ್ಯವನ್ನು ಕಲ್ಪಿಸಬೇಕಿದೆ ಎಂದರು.
ಭಾರತೀಯ ಯೂನಿಯನ್ ಬ್ಯಾಂಕ್ ಮೈಸೂರು ವಲಯ ಸಹಾಯಕ ಮಹಾ ಪ್ರಬಂಧಕರಾದ ರವಿಚಂದರ್ ಅವರು ಮಾತನಾಡಿ 2021-22 ನೇ ಸಾಲಿಗೆ ಜಿಲ್ಲಾ ವಾರ್ಷಿಕ ಸಾಲ ಯೋಜನೆಯಡಿ 4,500 ಕೋಟಿ ರೂ. ಗುರಿ ನಿಗಧಿಪಡಿಸಲಾಗಿದ್ದು, ಅದರಲ್ಲಿ 87 ಪ್ರತಿಶತ 3,900 ಕೋಟಿ ರೂ. ಆದ್ಯತಾ ವಲಯಕ್ಕೆ ಮೀಸಲಿಡಲಾಗಿದೆ. ಅದರಲ್ಲಿ ಕೃಷಿ ಚಟುವಟಿಕೆಗೆ 2,600 ಕೋಟಿ ರೂ., ಕಿರು ಮತ್ತು ಮಧ್ಯಮ ಕ್ಷೇತ್ರಕ್ಕೆ 700 ಕೋಟಿ ರೂ. ಹಾಗೂ ಇತರೆ ಆದ್ಯತಾ ವಲಯಕ್ಕೆ 600 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಎಲ್ಲಾ ಬ್ಯಾಂಕ್‍ಗಳು ಸಾಲ ವಿತರಿಸುವುದರ ಮೂಲಕ ನಿಗದಿಪಡಿಸಿರುವ ಗುರಿಯ ಪ್ರಗತಿ ಸಾಧಿಸಬೇಕು. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕು ಎಂದರು.
ಲೀಡ್ ಬ್ಯಾಂಕ್ ಮುಖ್ಯಸ್ಥರಾದ ಆರ್.ಕೆ.ಬಾಲಚಂದ್ರ ಅವರು ಮಾತನಾಡಿ ಪ್ರತೀ ವರ್ಷದಂತೆ ಈ ವರ್ಷವೂ ಲೀಡ್ ಬ್ಯಾಂಕ್ ವತಿಯಿಂದ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಮಾಡಲಾಗಿದ್ದು, ಈ ಕ್ರಿಯಾ ಯೋಜನೆಯು ನಬಾರ್ಡ್ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ಸಾಮಥ್ರ್ಯ ಆಧಾರಿತ ಸಾಲ ಯೋಜನೆಯ ನೆರವನ್ನು ಪಡೆದು ಬ್ಯಾಂಕ್‍ಗಳ ವಲಯವಾರು ಹಂಚಿಕೆಗೆ ಅನುಸಾರವಾಗಿ ವಾರ್ಷಿಕ ಸಾಲ ಯೋಜನೆ ಗುರಿ ಸಿದ್ದಪಡಿಸಲಾಗಿದೆ ಎಂದು ತಿಳಿಸಿದರು.
ಹಾಗೆಯೇ ಹಿಂದಿನ ವರ್ಷದ ಆಯಾಯ ಬ್ಯಾಂಕ್‍ಗಳ ಸಾಧನೆ ಗಮನಿಸಿ ವಾರ್ಷಿಕ ಸಾಲ ಯೋಜನೆ ಗುರಿ ಸಿದ್ದಪಡಿಸಲಾಗಿದೆ ಎಂದರು. ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿರುವುದರಿಂದ ಕೃಷಿ ಮತ್ತು ಆದ್ಯತಾ ವಲಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಸಭೆಯಲ್ಲಿ ಲೀಡ್ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕರಾದ ರಾಮಚಂದ್ರ ನಾಯಕ್, ಕೆನರಾ ಬ್ಯಾಂಕಿನ ಪ್ರಬಂಧಕರಾದ ಜಿ.ಸಿ.ಪ್ರಕಾಶ್, ಎಸ್‍ಬಿಐ ನ ಮುಖ್ಯ ಪ್ರಬಂಧಕರಾದ ದಿನೇಶ್ ಪೈ, ಕಾವೇರಿ ಗ್ರಾಮೀಣ ಬ್ಯಾಂಕಿನ ವಲಯ ಪ್ರಬಂಧಕರಾದ ಅಶೋಕ, ನಬಾರ್ಡ್ ಅಧಿಕಾರಿ ಶ್ರೀನಿವಾಸ್ ಇತರರು ಇದ್ದರು.

LEAVE A REPLY

Please enter your comment!
Please enter your name here