ಕ್ಷಯರೋಗದ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಕಾರ್ಯಾಗಾರ 2025ಕ್ಕೆ ಕ್ಷಯಮುಕ್ತ ಭಾರತ:ಕೈಜೋಡಿಸಿ

0
99

ಬಳ್ಳಾರಿ,ಮಾ.22 ಕ್ಷಯರೋಗ ಮುಕ್ತ ಭಾರತವನ್ನಾಗಿ ಮಾಡಲು ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಪಣತೊಟ್ಟಿದ್ದು,ಇದಕ್ಕೆ ಸಾರ್ವಜನಿಕರು ಮತ್ತು ಮಾಧ್ಯಮದವರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ.ಇಂದ್ರಾಣಿ ಅವರು ಹೇಳಿದರು.
ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ಪ್ರತಿನಿಧಿಗಳಿಗಾಗಿ ಏರ್ಪಡಿಸಿದ್ದ ಕ್ಷಯರೋಗ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕ್ಷಯರೋಗ ಮುಕ್ತ ಭಾರತದಂತೆ ಕ್ಷಯರೋಗ ಮುಕ್ತ ಬಳ್ಳಾರಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಸೂಕ್ತವಾದ ಕಾರ್ಯಯೋಜನೆಯನ್ನು ರೂಪಿಸಿ ಬಲಪಡಿಸಲು ಉದ್ದೇಶಿಸಲಾಗಿದ್ದು,ಇದಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯವಾಗಿದೆ ಎಂದು ಹೇಳಿದ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಇಂದ್ರಾಣಿ ಅವರು ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿ ಕ್ಷಯರೋಗದ ಹರಡುವಿಕೆ ತಡೆಗಟ್ಟುವ ಹಾಗೂ ಆರೋಗ್ಯ ಇಲಾಖೆಯ ಸೇವಾ ಸೌಲಭ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುವ ಮಾಧ್ಯಮ ಪ್ರತಿನಿಧಿಗಳಿಗೆ ಇದಕ್ಕೆ ಬಗ್ಗೆ ಅರಿವು ಮೂಡಿಸಿ ಕ್ಷಯರೋಗ ಮುಕ್ತ ನಾಡನ್ನಾಗಿ ಮಾಡಲು ಸಂಕಲ್ಪಿಸಲಾಗಿದ್ದು,ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಕ್ಷಯರೋಗಿಗಳು ಹೆಚ್ಚಿರುವ ಜಿಲ್ಲೆಗಳಲ್ಲಿ ರಾಯಚೂರು,ಕೊಪ್ಪಳದ ನಂತರ ಮೂರನೇ ಸ್ಥಾನ ಬಳ್ಳಾರಿಯದ್ದಾಗಿದೆ;ಇಲ್ಲಿನ ಕಲುಷಿತ ಮಾಲಿನ್ಯ ಮತ್ತು ರೋಗಿಗಳು ಆಸ್ಪತ್ರೆಗೆ ತಡವಾಗಿ ಬರುವುದು ಕೂಡ ಕ್ಷಯರೋಗಿಗಳ ಸಂಖ್ಯೆ ಹೆಚ್ಚಳವಾಗಿರಲು ಕಾರಣ ಎಂದು ವಿವರಿಸಿದರು.
2 ವಾರಕ್ಕಿಂತ ಹೆಚ್ಚು ಕೆಮ್ಮು, ಸಂಜೆ ವೇಳೆ ಜ್ವರ, ರಾತ್ರಿ ವೇಳೆ ಬೆವರುವುದು,ತೂಕ ಕಡಿಮೆಯಾಗುವುದು,ಹಸಿವಾಗದಿರುವುದು,ಮೈ ನಡುಕ, ಕೆಮ್ಮಿದಾಗ ರಕ್ತ ಬಿಳುವುದು,ಎದೆನೋವು,ನಿಶ್ಯಕ್ತಿ ಕ್ಷಯರೋಗದ ಲಕ್ಷಣಗಳಾಗಿವೆ ಎಂದು ಅವರು ತಿಳಿಸಿದರು.
ಟಿಬಿಯು ಶ್ವಾಸಕೋಶಗಳಿಗಲ್ಲದೇ ದೇಹದ ಇನ್ನೀತರ ಭಾಗಗಳಿಗೂ ಹರಡಬಹುದು.ಅಪೂರ್ಣ ಚಿಕಿತ್ಸೆಯು ಹೆಚ್ಚಿನ ತೊಂದರೆಗಳಿಗೆ ಕಾರಣವಾಗಬಹುದು.ನಿರಂತರ ಚಿಕಿತ್ಸೆಯಿಂದ ಕ್ಷಯರೋಗವನ್ನು ಗುಣಪಡಿಸಬಹುದಾಗಿದೆ. ಕ್ಷಯರೋಗ ಖಚಿತಗೊಂಡ ರೋಗಿಗಳಿಗೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲೆಯ 29 ಡಿಎಂಸಿ,3ಸಿಬಿಎನ್‍ಎಎಟಿ ಮತ್ತು 5 ಟ್ರೂನಾಟ್ ಕೇಂದ್ರಗಳಲ್ಲಿ ಕಫ ಪರೀಕ್ಷೆ ಮಾಡಲಾಗುತ್ತಿದೆ. ಕ್ಷಯರೋಗ ಖಚಿತಗೊಂಡ ರೋಗಿಗಳಿಗೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಪಡೆಯುತ್ತಿರುವ ಕ್ಷಯರೋಗಿಗಳಿಗೆ ಚಿಕಿತ್ಸೆ ಅವಧಿಯಲ್ಲಿ ನಿಕ್ಷಯ ಪೋಷಣ ಯೋಜನೆ ಅಡಿ ಪ್ರತಿ ರೋಗಿಗೆ ಅರ್ಥಿಕ ದೃಷ್ಟಿಯಿಂದ ರೂ.500 ನೀಡಲಾಗುತ್ತಿದೆ ಎಂದರು.
ಕ್ಷಯರೋಗದ ಲಕ್ಷಣಗಳು ಕೋವಿಡ್ ನಂತೆಯೇ ಇವೆ ಮತ್ತು ಇದು ಕೂಡ ಶ್ವಾಸಕೋಶಕ್ಕೆ ದಾಳಿ ಮಾಡುತ್ತದೆ. ಜಿಲ್ಲೆಯಲ್ಲಿ ಯಾವ್ಯಾವ ಪ್ರದೇಶಗಳಲ್ಲಿ ಕ್ಷಯರೋಗಿಗಳ ಪ್ರಮಾಣ ಅಧಿಕವಿತ್ತೋ ಆ ಕಡೆಯಲ್ಲಾ ಕೋವಿಡ್ ಪ್ರಮಾಣಗಳು ಹೆಚ್ಚಾಗಿರುವುದನ್ನು ಗಮನಿಸಬಹುದಾಗಿದೆ ಎಂದು ವಿವರಿಸಿದ ಅವರು ಕಳೆದ ವರ್ಷ ಕ್ಷಯರೋಗದಿಂದ ಮರಣವನ್ನಪ್ಪುವವರ ಪ್ರಮಾಣ ಶೇ.9ರಷ್ಟಿತ್ತು. ಕೋವಿಡ್‍ನಿಂದ ಶೇ.12ಕ್ಕೇರಿದೆ ಎಂದರು.
ಜನರೇ ಮನಃಪೂರ್ವಕವಾಗಿ ಬಂದು ಕ್ಷಯರೋಗ ಸಂಬಂಧಿತ ಲಕ್ಷಣಗಳಿದ್ದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು;ಒತ್ತಾಯಪೂರ್ವಕವಾಗಿ ಕರೆದುಕೊಂಡು ಬಂದ್ರೇ ಯಶಸ್ವಿಯಾಗಲ್ಲ;ಇದಕ್ಕೆ ನಮ್ಮ ಜಿಲ್ಲೆಯಲ್ಲಿರುವ ಶೇಕಡವಾರು ಪ್ರಮಾಣವೇ ಸಾಕ್ಷಿ ಎಂದರು.
ಕ್ಷಯರೋಗ ಖಚಿತಪಡಿಸಿಕೊಂಡವರು ತಮಗೆ ರೋಗವಿದೆ ಎಂದು ಘೋಷಿಸಿಕೊಳ್ಳಬೇಕು;ಅದನ್ನು ಗೌಪ್ಯವಾಗಿರಿಸುವುದು ಅಪರಾಧವಾಗಿದ್ದು,ಅದಕ್ಕೆ ಐಪಿಸಿ 269 ಮತ್ತು 270 ಅಡಿ ಶಿಕ್ಷೆ ಪ್ರಕರಣ ದಾಖಲಿಸಿ ಶಿಕ್ಷೆ ವಿಧಿಸಲಾಗುತ್ತದೆ. ಜಿಲ್ಲೆಯಲ್ಲಿ 93 ಕೈಗಾರಿಕೆಗಳಿದ್ದು, ಈ ಎಲ್ಲ ಕೈಗಾರಿಕೆಗಳಿಗೆ ಪರಿಸರ ಶುದ್ಧವಿಟ್ಟುಕೊಳ್ಳುವುದಕ್ಕೆ ಸೂಚನೆ ನೀಡುವುದರ ಜತೆಗೆ ತಮ್ಮ ಕಾರ್ಮಿಕರಿಗೆ ಮೂರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಿ ಅಗತ್ಯ ಚಿಕಿತ್ಸೆಯನ್ನು ಸಿಎಸ್‍ಆರ್ ನಿಧಿ ಅಡಿ ನೀಡುವಂತೆ ಸರಕಾರದ ಸುತ್ತೋಲೆ ಅನ್ವಯ ತಿಳಿಸಲಾಗಿದ್ದು,ಪಾಲಿಸುವುದಾಗಿ ಒಪ್ಪಿಕೊಂಡಿದ್ದಾರೆ ಎಂದರು.
ಬಳ್ಳಾರಿಯಲ್ಲಿ ಶೇ.24ರಷ್ಟು ಗಂಭೀರ ಸ್ವರೂಪದ ಕ್ಷಯರೋಗಿಗಳಿದ್ದು,ಅಂತವರಿಗೆ 15 ದಿನಗಳ ಕಾಲ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹಾಸಿಗೆ ನಿಗದಿಪಡಿಸಿ ಚಿಕಿತ್ಸೆ ನೀಡಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದ ಅವರು ಇದೇ ಮಾ.24ರಂದು ಬಳ್ಳಾರಿಯ ಬಿಡಿಎಎ ಫುಟ್ಬಾಲ್ ಮೈದಾನದಲ್ಲಿ ಕ್ಷಯರೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಜಾಗೃತಿ ಜಾಥಾ ಮತ್ತು ವೇದಿಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕ್ಷಯರೋಗ ನಿಯಂತ್ರಣಕ್ಕೆ ಶ್ರಮಿಸಿದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಟಿಬಿ ಫೋರಂ ಕಮಿಟಿ ಸದಸ್ಯರು ಹಾಗೂ ಹಿರಿಯ ಪತ್ರಕರ್ತರಾದ ವೀರಭದ್ರಗೌಡ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ಮೇಲ್ವಿಚಾರಕ ಸಣ್ಣಕೇಶವ ಹಾಗೂ ಕೇಂದ್ರದ ಪಂಪಾಪತಿ,ಹೊನ್ನೂರಪ್ಪ,ಉದಯಕುಮಾರ್,ದಿನೇಶ ಮಂಜು ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here