ಮತದಾನ ಪ್ರಮಾಣ ಹೆಚ್ಚಿಸಲು ಮನೆ ಸಮೀಕ್ಷೆ ನಡೆಸಿ: ಸ್ವೀಪ್ ನೋಡೆಲ್ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ

0
16

ಬಳ್ಳಾರಿ,ಮಾ.28: ಕಳೆದ ಬಾರಿ 91-ಕಂಪ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಅತೀ ಕಡಿಮೆ ಮತದಾನವಾದ ಮತಗಟ್ಟೆಗಳಲ್ಲಿ, ಮತದಾನದ ಪ್ರಮಾಣವನ್ನು ಹೆಚ್ಚಿಸಲು ಮನೆ ಸಮೀಕ್ಷೆ ನಡೆಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಸೂಚನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಆಡಳಿತ ಕುರುಗೋಡು, ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಇಂದು ಕುರುಗೋಡು ತಾಲ್ಲೂಕಿನ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯ ಅಂಗವಾಗಿ ಮತದಾರರಿಗೆ ಮತದಾನದ ಜಾಗೃತಿ ಮೂಡಿಸುವ ಕುರಿತು 91-ಕಂಪ್ಲಿ ವಿಧಾನಸಭೆ ಕ್ಷೇತ್ರದ ಬೂತ್ ಮಟ್ಟದ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಣ ಮತ್ತು ಜಾಗೃತಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಡಿಮೆ ಮತದಾನವಾಗಲು ಕಾರಣವಾಗಿರುವ ಅಂಶಗಳನ್ನು ಕಂಡುಕೊಂಡು ಪಟ್ಟಿ ಮಾಡಬೇಕು. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಶೇಕಡವಾರು ಮತದಾನ ಹೆಚ್ಚಿಸಲು ಶ್ರಮವಹಿಸುವಂತೆ ತಿಳಿಸಿದರು.
ಗ್ರಾಮ ಪಂಚಾಯತ್‍ವಾರು ಗುಳೆ ಹೋದವರ ಕುರಿತು ಮಾಹಿತಿ ಸಂಗ್ರಹಿಸಿ, ಅವರಿಗೆ ಕರೆಮಾಡಿ, ನರೇಗಾ ಯೋಜನೆಯಡಿ ನಿಮಗೆ ನಿಮ್ಮ ಊರಿನಲ್ಲೇ ಕೆಲಸ ಕೊಡಲಾಗುವುದು ಎಂದು ತಿಳಿಸಬೇಕು. ನರೇಗಾ ಯೋಜನೆಯ ಕುರಿತು ವ್ಯಾಪಕ ಪ್ರಚಾರ ನೀಡಬೇಕು ಎಂದು ತಿಳಿಸಿದರು.

ಕೆಲಸ ಮಾಡುವ ಸಮಯದಲ್ಲಿ 06 ತಿಂಗಳಿನಿಂದ 03 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಶಿಶುಪಾಲನಾ ಕೇಂದ್ರ ಪ್ರಾರಂಭ ಮಾಡಲಾಗಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಲು ಎಲ್ಲಾ ಬೂತ್ ಮಟ್ಟದ ಅಧಿಕಾರಿಗಳಿಗೆ ತಿಳಿಸಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ತಹಶೀಲ್ದಾರ ರೇಣುಕಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಿರ್ಮಲಾ ಸೇರಿದಂತೆ ಕುರುಗೋಡು, ಕಂಪ್ಲಿ ಹಾಗೂ ವಿಧಾನಸಭಾ ವ್ಯಾಪ್ತಿಯ ಬಿಎಲ್‍ಓ, ಸೆಕ್ಟರ್ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here