ನೇತ್ರದಾನದ ಮೂಲಕ ಅಂದರಿಗೆ ಬೆಳಕಾಗಲು ಕರೆ

0
138

ಹಾಸನ ಸೆ.08:- ನೇತ್ರದಾನ ಮಾಡುವುದರ ಮೂಲಕ ದೃಷ್ಠಿ ರಹಿತರ ಬಾಳಿಗೆ ಬೆಳಕಾಗಬೇಕು ಎಂದು ಹಿಮ್ಸ್ ನಿರ್ದೇಶಕರಾದ ಡಾ|| ರವಿಕುಮಾರ್ ಅವರು ಕರೆ ನೀಡಿದ್ದಾರೆ.

ನಗರದ ಹಿಮ್ಸ್ ಆಸ್ಪತ್ರೆಯಲ್ಲಿಂದು 36 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲಿ ಸುಮಾರು 25 ಲಕ್ಷ ಜನರು ಕಾರ್ನಿಯಾವಿಲ್ಲದೆ ಬಳಲುತ್ತಿದ್ದು, ಪ್ರತಿಯೊಬ್ಬರು ನೋಂದಣಿ ಮಾಡಿಸುವ ಮೂಲಕ ಮರಣದ ನಂತರ ತಮ್ಮ ಕಣ್ಣುಗಳನ್ನ ದಾನ ಮಾಡಿ ದೃಷ್ಠಿಹೀನರು ಜಗತ್ತನ್ನು ನೋಡುವ ಪುಣ್ಯದ ಕೆಲಸದಲ್ಲಿ ಭಾಗಿಯಾಗಬೇಕು ಎಂದು ಅವರು ಹೇಳಿದರು.

ಮರಣದ ನಂತರ ಮಣ್ಣಲ್ಲಿ ಮಣ್ಣಾಗುವ ಮೊದಲು ಕಣ್ಣನ್ನು ದಾನ ಮಾಡಲು ಕುಟುಂಬದವರು ಮುಂದಾಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಸತೀಶ್ ಅವರು ನೇತ್ರದಾನದ ಬಗ್ಗೆ ಸಾರ್ವಜನಿಕರು ಹಾಗೂ ಸಮುದಾಯದವರಲ್ಲಿ ಅರಿವು ಮೂಡಿಸಿ ನೇತ್ರದಾನದಂತಹ ಮಹತ್ಕಾರ್ಯದಲ್ಲಿ ಹೆಚ್ಚಿನ ಜನರು ಕೈಜೋಡಿಸಬೇಕು ಎಂದರು.

ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ ಅವರು ಮಾತನಾಡಿ ದೇಶದಲ್ಲಿ ಸಾಕಷ್ಟು ಜನರು ಅಂದತ್ವದಿಂದ ಬಳಲುತ್ತಿದ್ದು, ಅವರಿಗೆ ಕಣ್ಣುಗಳನ್ನು ದೊರಕಿಸುವ ನಿಟ್ಟಿನಲ್ಲಿ ನೇತ್ರದಾನ ಕಾರ್ಯದಲ್ಲಿ ತೊಡಗಬೇಕು ಎಂದ ಅವರು ಕಣ್ಣನ್ನು ತೆಗೆದುಕೊಳ್ಳುವ ವೇಳೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದರು.

ಹಿಮ್ಸ್ ಆಡಳಿತಾಧಿಕಾರಿ ಗಿರೀಶ್ ನಂದನ್ ಅವರು ಮಾತನಾಡಿ ಮನುಷ್ಯ ಮರಣ ಹೊಂದಿದ 6 ಗಂಟೆಯೊಳಗೆ ಕಣ್ಣನ್ನು ದಾನ ಮಾಡಬೇಕು. ಕಣ್ಣಿನ ದಾನ ಮಾಡಿದರೆ ಮತ್ತೊಬ್ಬರನ್ನು ಅಂಧತ್ವದಿಂದ ಹೊರತರಬಹುದು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೇತ್ರದಾನ ಕುರಿತು ಜಾಗೃತಿ ಮೂಡಿಸಿ ಸಾರ್ವಜನಿಕರು ಕಣ್ಣುಗಳನ್ನು ಸ್ವ-ಇಚ್ಛೆಯಿಂದ ದಾನ ಮಾಡಲು ಮುಂದಾಗುತ್ತಾರೆ ಎಂದರು.

ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ|| ವೇಣುಗೋಪಾಲ್ ಅವರು ಮಾತನಾಡಿ ಪ್ರತಿಯೊಂದು ಆಸ್ಪತ್ರೆಗಳಲ್ಲಿ ನೇತ್ರ ತಜ್ಞರಿದ್ದು ನೇತ್ರ ದಾನಿಗಳು ಕರೆ ಮಾಡಿದಾಗ ಕಣ್ಣನ್ನು ಪಡೆಯಲು ಸಕಾಲದಲ್ಲಿ ಆಗಮಿಸುವರು ಎಂದ ಅವರು ಇಂತಹ ಕಾರ್ಯಕ್ರಮಗಳು ಪ್ರಾಥಮಿಕ ಹಾಗೂ ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ ಇದರ ಸದುಪಯೋಗವನ್ನೂ ಎಲ್ಲರೂ ಪಡೆದುಕೊಳ್ಳುವಂತಗಾಬೇಕು ಎಂದು ಅವರು ಹೇಳಿದರು.

ನೇತ್ರ ತಜ್ಞರಾದ ಡಾ|| ಶ್ರೀಧರ್ ಅವರು ಮಾತನಾಡಿ ಆನ್‍ಲೈನ್ ಮುಖಾಂತರ ನೇತ್ರದಾನಕ್ಕೆ ನೋಂದಣಿಯಾಗುವುದು ಹಾಗೂ ನೇತ್ರದಾನದ ಮಹತ್ವ, ಕಾರ್ನಿಯಾಗೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿಯನ್ನು ತಿಳಿಸಿಕೊಟ್ಟರು, ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9900860044 ಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಇದೇ ವೇಳೆ:- ನೇತ್ರದಾನ ಮಾಡುವವರಿಗೆ ಪ್ರಮಾಣ ಪತ್ರಗಳನ್ನ ನೀಡುವ ಪ್ರಮಾಣ ಪತ್ರಗಳನ್ನು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಹಿಮ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ|| ನಾಗೇಶ್, ನೇತ್ರಾ ವಿಭಾಗ ಮುಖ್ಯಸ್ಥರಾದ ಡಾ|| ಕವಿತಾ ವಿ.ಸಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ|| ಹರೀಶ್ ಎಂ. ಕೆ. ಹಾಗೂ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here