ಫಲಾನುಭವಿಗಳ ನಿಖರ ಪತ್ತೆಗೆ ಪತ್ರ ಬರೆದು ಅಂಚೆ ಅಣ್ಣನ ಸಹಾಯ ನಿರೀಕ್ಷಿಸಿದ ಗ್ರಾಮಲೆಕ್ಕಾಧಿಕಾರಿ

0
122

ಧಾರವಾಡ.ಮಾ. 25: ಸರ್ಕಾರದಿಂದ ವಿವಿಧ ಪಿಂಚಣಿ ಹಾಗೂ ಸೌಲಭ್ಯಗಳ ದುರುಪಯೊಗ ತಡೆಯಲು ಮತ್ತು ಪಿಂಚಣಿ ಪಡೆಯುತ್ತಿರುವ ಪಲಾನುಭವಿಗಳ ಮದ್ಯವರ್ತಿಗಳ ತೊಂದರೆ ಇಲ್ಲದೇ ನೇರವಾಗಿ ಅವರ ಖಾತೆಗೆ ಪಿಂಚಣಿ ಜಮೆ ಮಾಡುವುದಕ್ಕಾಗಿ ಆಧಾರ್ ಜೋಡಣೆ (ಸೀಡಿಂಗ್) ಮಾಡಲು ಜಿಲ್ಲೆಯ ಎಲ್ಲ ಗ್ರಾಮಲೆಕ್ಕಾಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಆದೇಶ ನೀಡಿದ್ದು, ತಹಶೀಲ್ದಾರ ಡಾ.ಸಂತೋಷ ಬಿರಾದಾರ ಅವರು ಪ್ರತಿದಿನ ಕಾರ್ಯಗಳ ಪ್ರಗತಿ ಪರಿಶೀಲನೆ ಮಾಡುತ್ತಿದ್ದಾರೆ.

ಧಾರವಾಡ ನಗರದ ಸಪ್ತಾಪೂರ ಹಾಗೂ ಅತ್ತಿಕೊಳ್ಳ ಪ್ರದೇಶದ ಗ್ರಾಮಲೆಕ್ಕಾಧಿಕಾರಿ ವೆಂಕಟೇಶ ಹಟ್ಟಿಯವರ ಅವರು, ತನ್ನ ಕಾರ್ಯ ವ್ಯಾಪ್ತಿಯ ಪ್ರದೇಶಗಳಲ್ಲಿ ವಿವಿಧ ಪಿಂಚಣಿ ಪಡೆಯುತ್ತಿರುವ ಸುಮಾರು 3,000 ಫಲಾನುಭವಿಗಳನ್ನು ಹೊಂದಿದ್ದಾರೆ. ಬಹುವ್ಯಾಪ್ತಿ ಹೊಂದಿರುವ ಈ ಪ್ರದೇಶಗಳಲ್ಲಿನ ಫಲಾನುಭವಿಗಳ ಆಧಾರ್ ಸೀಡಿಂಗ್ ಕಾರ್ಯವನ್ನು ಕಾಲಮಿತಿಯಲ್ಲಿ ಮಾಡಲು ಅಗತ್ಯ ದಾಖಲೆ, ಮಾಹಿತಿ ನೀಡುವಂತೆ ತಿಳಿಸಿ ಫಲಾನುಭವಿಗಳಿಗೆ ಪತ್ರ ಬರೆದಿದ್ದಾರೆ.

ಪಿಂಚಣಿ ಸೌಲಭ್ಯವನ್ನು ಈ ಹಿಂದೆ ಫಲಾನುಭವಿಗಳು ಅಂಚೆಯ ಮೂಲಕ ಪಡೆಯುತ್ತಿದ್ದರು. ಅಂಚೆಯ ಅಣ್ಣನೇ (ಪೋಸ್ಟ್‍ಮ್ಯಾನ್) ಫಲಾನುಭವಿಗಳ ಮನೆಗೆ ತೆರಳಿ ಪಿಂಚಣಿ ಹಣ ನೀಡುತ್ತಿದ್ದನು. ಇದನ್ನು ಗಮನಿಸಿರುವ ಈ ಗ್ರಾಮ ಲೆಕ್ಕಾಧಿಕಾರಿ ತನ್ನ ಪ್ರದೇಶ ವ್ಯಾಪ್ತಿಯ ಪ್ರತಿಯೊಬ್ಬ ಪಿಂಚಣಿ ಫಲಾನುಭವಿಯ ನಿಖರ ವಿಳಾಸ, ಪತ್ತೆ ಹಾಗೂ ದಾಖಲೆ ಪಡೆಯಲು ಆರಂಭಿಕವಾಗಿ ಇಂದು ಸುಮಾರು 180 ಜನರಿಗೆ ಪತ್ರ ಬರೆದು ಅಂಚೆಯ ಮೂಲಕ ಕಳುಹಿಸಿದ್ದಾರೆ. ಇದರಿಂದಾಗಿ ಫಲಾನುಭವಿ ವಲಸೆ ಹೋಗಿದ್ದರೆ, ನಿಧನವಾಗಿದ್ದರೆ ಮತ್ತು ವಿಳಾಸ ಬದಲಾಗಿದ್ದರೆ ಸರಳವಾಗಿ ಮತ್ತು ಖಚಿತವಾಗಿ ತಿಳಿದುಬರುತ್ತದೆ.

ರಾಜ್ಯ ಸರಕಾರದ ಪ್ರಮುಖ ಯೋಜನೆಗಳ ರಾಯಭಾರಿಗಳಾಗಿ ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸುವ ಗ್ರಾಮಲೆಕ್ಕಾಧಿಕಾರಿಗಳಿಗೆ ವಿವಿಧ ಯೋಜನೆ, ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯಗಳನ್ನು ವಹಿಸಲಾಗುತ್ತಿದೆ.

ನಿಗದಿತ ಗುರಿ ಸಾಧಿಸುವ ಉದ್ದೇಶದಿಂದ ಪತ್ರ ಮೂಲಕ ಫಲಾನುಭವಿಗಳ ಸಂಪರ್ಕ ಸಾಧಿಸಲು ಈ ಗ್ರಾಮಲೆಕ್ಕಾಧಿಕಾರಿ ಹೊಸ ಮಾರ್ಗ ಹುಡುಕಿದ್ದು ಇತರರಿಗೆ ಮಾದರಿಯಾಗಿದೆ.

LEAVE A REPLY

Please enter your comment!
Please enter your name here