ಸರ್ಕಾರ ನಿಗದಿಪಡಿಸಿ, ಮುದ್ರಿಸಿರುವ ದರಕ್ಕಿಂತ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುವುದು ಅಪರಾಧ ; ನಿಯಮ ಉಲ್ಲಂಘಿಸಿದರೆ ಅಗತ್ಯ ವಸ್ತು ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು : ಜಿಲ್ಲಾಧಿಕಾರಿ ನಿತೇಶ ಪಾಟೀಲ

0
126

ಧಾರವಾಡ : ಸಹಕಾರ ಸಂಘಗಳ ಮೂಲಕ ಜಿಲ್ಲೆಯಾದ್ಯಂತ ರೈತರಿಗೆ ರಸಗೊಬ್ಬರಗಳನ್ನು ಪೂರೈಸಲಾಗುತ್ತಿದೆ. ಪೂರೈಕೆಯಾಗುತ್ತಿರುವ ವಿವಿಧ ಗ್ರೆಡ್‍ಗಳ ರಸಗೊಬ್ಬರಗಳನ್ನು ಸರಕಾರವು ನಿಗದಿಪಡಿಸಿದ ದರಕ್ಕೆ ಮಾತ್ರ ರೈತರಿಗೆ ಖಾಸಗಿ ಮಾರಾಟಗಾರರು ಹಾಗೂ ಸಹಕಾರ ಸಂಘಗಳು ಮಾರಾಟ ಮಾಡುವುದು ಕಡ್ಡಾಯವಾಗಿದೆ. ಸರ್ಕಾರ ನಿಗದಿಪಡಿಸಿ, ಮುದ್ರಿಸಿರುವ ದರಕ್ಕಿಂತ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುವುದು ಅಪರಾಧ; ನಿಯಮ ಉಲ್ಲಂಘಿಸಿ, ಹೆಚ್ಚಿನದರಕ್ಕೆ ಮಾರಾಟ ಮಾಡುವವರ ವಿರುದ್ಧ ಅಗತ್ಯ ವಸ್ತು ಕಾಯ್ದೆಯಡಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಸಗೊಬ್ಬರಗಳ ಚೀಲಗಳ ಮೇಲೆ ಸರ್ಕಾರವು ನಿಗದಿಪಡಿಸಿ, ಮುದ್ರಿತವಾದ ಗರಿಷ್ಠ ಚಿಲ್ಲರೆ ಮಾರಾಟ ದರಕ್ಕಿಂತ ಹೆಚ್ಚಿಗೆ ದರ ವಿಧಿಸಿ ಸಹಕಾರ ಸಂಘಗಳಾಗಲಿ ಅಥವಾ ಖಾಸಗಿ ಮಾರಟಗಾರರಾಗಲಿ ರೈತರಿಗೆ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುವುದು ಅಪರಾಧವಾಗಿದ್ದು, ಮುದ್ರಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಸರ್ಕಾರಿ ಆದೇಶದ ಉಲ್ಲಂಘನೆಯಾಗುತ್ತದೆ. ಅಂತಹ ಪ್ರಕರಣ ಕಂಡುಬಂದಲ್ಲಿ ಸಹಕಾರಿ ಸಂಘ ಅಥವಾ ಖಾಸಗಿ ಮಾರಾಟಗಾರರ ಮೇಲೆ ಪ್ರಕರಣವನ್ನು ದಾಖಲಿಸಿ, ಕಾನೂನಾತ್ಮಕ ದಂಡನೆಗೆ ಒಳಪಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೆಲವೊಂದು ಸಹಕಾರ ಸಂಘಗಳ ಮಾರಾಟಗಾರರು ಮತ್ತು ಖಾಸಗಿ ಮಾರಾಟಗಾರರು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆಂದು ಜನಪ್ರತಿನಿಧಿಗಳಿಂದ ಹಾಗೂ ರೈತರಿಂದ ದೂರುಗಳು ಕೇಳಿಬರುತ್ತಿರುವ ಹಿನ್ನೇಲೆಯಲ್ಲಿ ಜಿಲ್ಲೆಯ ಎಲ್ಲ ರಸಗೊಬ್ಬರ ಮಾರಾಟಗಾರರಿಗೆ ಈ ಮೂಲಕ ಎಚ್ಚರಿಕೆ ಸಂದೇಶ ನೀಡುತ್ತಿದ್ದು, ಯಾವುದೇ ಪ್ರಕರಣಗಳು ಕಂಡುಬಂದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಹೆಚ್ಚುವರಿ ಬಾಡಿಗೆ, ಹಮಾಲಿ ಅಥವಾ ಇತರೇ ರೂಪದಲ್ಲಿ ಹೆಚ್ಚಿನ ಹಣವನ್ನು ರೈತರಿಂದ ಆಕರಣೆ ಮಾಡಿದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೃಷಿ ಸಚಿವರು ಇಂದು (ಜೂ.7) ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆದೇಶ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಲಭ್ಯವಿರುವ ವಿವಿಧ ಗ್ರೇಡ್‍ಗಳ ರಸಗೊಬ್ಬರಗಳ ಗರಿಷ್ಟ ಚಿಲ್ಲರೇ ಮಾರಾಟ ದರಗಳನ್ನು ಸರ್ಕಾರವು ನಿಗದಿಪಡಿಸಿ ಪ್ರಕಟಿಸಿದೆ. ಗರಿಷ್ಟ ಚಿಲ್ಲರೇ ಮಾರಾಟ ದರಗಳಿಗಿಂತ ಹೆಚ್ಚಿನ ದರಗಳಿಗೆ ರಸಗೊಬ್ಬರಗಳ ಮಾರಾಟ ಮಾಡುತ್ತಿರುವ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿತ ತಾಲೂಕಿನ ಕೃಷಿ ನಿರ್ದೇಶಕರುಗಳಿಗೆ ಮೌಖಿಕವಾಗಿ ಅಥವಾ ಫೋನ್ ಮುಖಾಂತರವಾಗಲಿ ಅಥವಾ ಲಿಖಿತವಾಗಿ ದೂರನ್ನು ತಲುಪಿಸಲು ರೈತರಲ್ಲಿ ವಿನಂತಿಸಿದೆ. ಈ ಸಂಬಂಧಿತ ದೂರುಗಳಿದ್ದಲ್ಲಿ ಸಹಾಯಕ ಕೃಷಿ ನಿರ್ದೇಶಕರು, ಧಾರವಾಡ-8277931285. ಸಹಾಯಕ ಕೃಷಿ ನಿರ್ದೇಶಕರು, ಹುಬ್ಬಳ್ಳಿ-8277931288, ಸಹಾಯಕ ಕೃಷಿ ನಿರ್ದೇಶಕರು, ಕಲಘಟಗಿ-8277931291, ಸಹಾಯಕ ಕೃಷಿ ನಿರ್ದೇಶಕರು, ಕುಂದಗೋಳ-8277931294, ಸಹಾಯಕ ಕೃಷಿ ನಿರ್ದೇಶಕರು, ನವಲಗುಂದ-8277931295, ಸಹಾಯಕ ಕೃಷಿ ನಿರ್ದೇಶಕರು, ಜಾರಿದಳ, ಜಕೃನಿ ಕಛೇರಿ-8277931274, 8277931376, ಉಪ ಕೃಷಿ ನಿರ್ದೇಶಕರು, ಧಾರವಾಡ-8277931271, ಉಪ ಕೃಷಿ ನಿರ್ದೇಶಕರು, ಹುಬ್ಬಳ್ಳಿ-8277931272 ಇವರಿಗೆ ಸಂಪರ್ಕಿಸಬಹುದು.

ಸರ್ಕಾರ ನಿಗದಿಪಡಿಸಿರುವ ವಿವಿಧ ರಸಗೊಬ್ಬರಗಳ ಗರಿಷ್ಟ ಚಿಲ್ಲರೆ ಮಾರಾಟ ದರಗಳ ವಿವರ:

1) ಯುರಿಯಾ-266/- (45 ಕೆ.ಜಿ),2) ಡಿ.ಎ.ಪಿ. 1200/-, 3)ಪೋಟ್ಯಾಷ-850 ರಿಂದ 1000/-, 4)10:26:26-1175/- ಇಪ್ಕೋ, ಜಿ.ಎಸ್.ಎಫ್.ಸಿ, 1300/- ಕ್ರಿಬ್ಕೋ, ಕೊರಮಂಡಲ, 1375/- ಜುವಾರಿ, ಎಮ್.ಸಿ.ಎಫ್, 5) 12:32:16-1185/- ಇಪ್ಕೋ, ಜಿ.ಎಸ್.ಎಫ್.ಸಿ, 1310/- ಜುವಾರಿ, ಎಮ್.ಸಿ.ಎಫ್. ಪಿ.ಪಿ.ಎಲ್., 1280/- ಡಿ.ಎಫ.ಪಿ.ಸಿ.ಎಲ್., 6) 20:20:0:13-975/- ಇಪ್ಕೋ, ಜಿ.ಎಸ್.ಎಫ್.ಸಿ, ಆರ್.ಸಿ.ಎಫ್., 1125/- ಪ್ಯಾಕ್ಟ, 1090/- ಎಮ್.ಸಿ.ಎಫ್., 1050/- ಐ.ಪಿ.ಎಲ್., ಕ್ರಿಬ್ಕೋ, ಕೊರಮಂಡಲ, 1075/- ಗ್ರೀನ್ ಸ್ಟಾರ್, 7) 15:15:15 – 1025/- ಇಪ್ಕೋ, 1180/- ಆರ್.ಸಿ.ಎಫ್., 8 ) 19:19:19 – 1575/- ಜುವಾರಿ, 9) 17:17:17 – 1250/- ಮದ್ರಾಸ್ ಪರ್ಟಿಲೈಜರ್ಸ್.

ಈ ರೀತಿಯಾಗಿ ಸರ್ಕಾರವು ರಸಗೊಬ್ಬರಗಳ ಪ್ರತಿ ಚೀಲಕ್ಕೆ ದರ ನಿಗದಿಪಡಿಸಿ, ಮುದ್ರಿಸಿದೆ. ಮುದ್ರಿತ ದರಕ್ಕಿಂತ ಹೆಚ್ಚಿಗೆ ಹಣವನ್ನು ರೈತರು ನೀಡಬಾರದು ಮತ್ತು ಈ ಕುರಿತು ಯಾವುದೇ ಮಾರಾಟ ಮಳಿಗೆಯವರು ನಿಯಮ ಉಲ್ಲಂಘಿಸಿ ಹೆಚ್ಚಿನ ದರ ಆಕರಣೆ ಮಾಡಿದರೆ ತಕ್ಷಣ ಕೃಷಿ ಇಲಾಖೆಗೆ ರೈತರು ದೂರು ನೀಡಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here