ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಯುವಜನತೆಯನ್ನು ಸರಿದಾರಿಗೆ ತರುವಲ್ಲಿ ಪೊಲೀಸ್ ಇಲಾಖೆ ಪಾತ್ರ ಪ್ರಮುಖ: ನ್ಯಾ.ಪುಷ್ಪಾಂಜಲಿದೇವಿ

0
141

ಬಳ್ಳಾರಿ, ಮಾ.26 : ಇಂದಿನ ಯುವಜನತೆ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗಿ, ಅವರ ಭವಿಷ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿಕೊಳ್ಳುತ್ತಿದ್ದಾರೆ. ಯುವಜನತೆಗೆ ಕಾನೂನಿನ ಅರಿವು ಮತ್ತು ಜಾಗೃತಿ ಮೂಡಿಸಿ; ಕಾನೂನಿನ ಮುಖಾಂತರ ಸರಿದಾರಿಗೆ ತರುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಪೊಲೀಸ್ ಇಲಾಖೆಯು ಈ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಎಸ್.ಹೆಚ್.ಪುಷ್ಪಾಂಜಲಿದೇವಿ ಅವರು ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಳ್ಳಾರಿ ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಇವರ ಸಹಯೋಗದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ)ತಿದ್ದುಪಡಿ ಕಾಯ್ದೆ-1986 ಹಾಗೂ ಕೋಟ್ಟಾ ಕಾಯ್ದೆ-2003ರ ಕುರಿತು ಶುಕ್ರವಾರ ನಡೆದ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಮೇರಿಕಾದ ಒಂದು ಸಂಸ್ಥೆಯ ಸಂಶೋಧನೆಯ ಪ್ರಕಾರ ಭಾರತ ದೇಶದಲ್ಲಿ ಶೇ.30 ರಷ್ಟು ಜನ ಕ್ಯಾನ್ಸರ್‍ಗೆ ತುತ್ತಾಗುತ್ತಿದ್ದಾರೆ. ಇದನ್ನು ತಡೆಯಲು ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕಿದೆ. ಸಮಾಜದಲ್ಲಿ ನಡೆಯುವ ಅನೇಕ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಸರ್ಕಾರ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದೆ; ಅದರ ಕುರಿತು ಸಾರ್ವಜನಿಕರಲ್ಲಿ ಅರಿವಿನ ಕೊರತೆಯಿದ್ದು, ಕಾನೂನುಗಳ ಬಗ್ಗೆ ಜನರಲ್ಲಿ ತಿಳಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿದೆ ಎಂದರು.
ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ತಿದ್ದುಪಡಿ ಕಾಯ್ದೆಯು ಅನುಷ್ಠಾನಕ್ಕೆ ಬಂದರೂ ಅನೇಕ ಮಕ್ಕಳು ಇಂದಿಗೂ ದುಡಿಯಲು ಹೋಗುತ್ತಿದ್ದಾರೆ. ರೈಲ್ವೆ, ಬಸ್ ನಿಲ್ದಾಣಗಳು ಮತ್ತು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೆಲಸಕ್ಕೆ ಮಕ್ಕಳು ಹೋಗುತ್ತಿರುವುನ್ನು ದಿನನಿತ್ಯ ನೋಡುತ್ತಿದ್ದೇವೆ; ಇಂತಹ ಘಟನೆಗಳು ಕಂಡು ಬಂದರೆ ಅಂತವರನ್ನು ಗುರುತಿಸಿ ಪ್ರಕರಣ ದಾಖಲಿಸುವ ಮೂಲಕ ಇತರರಿಗೆ ಈ ಕಾಯ್ದೆಯ ಬಗ್ಗೆ ಅರಿವು ಮೂಡಿಸಿ. ಈ ಎರಡು ಕಾಯ್ದೆಗಳಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯದ ಗಮನಕ್ಕೆ ತನ್ನಿ, ಅವರಿಗೆ ಕಾನೂನು ಮುಖಾಂತರ ಶಿಕ್ಷೆ ನೀಡಿದರೆ ಇತರರಿಗೆ ಕಾನೂನು ಪಾಠ ಮಾಡಿದಂತೆ ಆಗುತ್ತದೆ ಎಂದು ಅವರು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರಾದ ಮೌನೇಶ್ ಅವರು ಮಾತನಾಡಿ 1012 ಜನ ಮಕ್ಕಳನ್ನು ಪುನರ್ವಸತಿ ಯೋಜನೆಯಡಿಯಲ್ಲಿ ಪಡೆದುಕೊಂಡು ಅವರಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಇದರಲ್ಲಿ 150 ಜನರು ಇಂದು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ದತಿ ನಿಷೇಧಿಸಲು ಇಲಾಖೆಯ ಅಧಿಕಾರಿಗಳಿಗೆ ಬಾಲ ಕಾರ್ಮಿಕ ನಿಷೇಧ ಕಾಯ್ದೆಯ ಬಗ್ಗೆ ತಿಳಿಸುವ ಸಲುವಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಬಾಲ ಕಾರ್ಮಿಕ ಪದ್ದತಿ ನಿಷೇಧ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯದ ಎಲ್ಲಾ ಇಲಾಖೆಯ ಅಧಿಕಾರಿಗಳ ನೆರವು ಅಗತ್ಯ ಎಂದರು.
ಯುನಿಸೆಪ್ ಪ್ರಾದೇಶಿಕ ಸಂಯೋಜಕ ರಾಘವೇಂದ್ರಭಟ್ ಅವರು ಮಾತನಾಡಿ ಬಾಲ ಕಾರ್ಮಿಕ ಪದ್ದತಿ ನಿಷೇಧ ಕಾಯ್ದೆಯು ಅನುಷ್ಠಾನಕ್ಕೆ ಬಂದರೂ ಮಕ್ಕಳು ಕೂಲಿ ಕೆಲಸಕ್ಕೆ ಹೋಗುವುದು ನಿಲ್ಲುತ್ತಿಲ್ಲ. ಇದನ್ನು ತಡೆಯುವ ಉದ್ದೇಶದಿಂದ ಒಂದು ಟಾಸ್ಕ್‍ಫೋರ್ಸ್ ಕಮಿಟಿ ರಚಿಸಿ, ಯಾವ ಮಗುವೂ ಕೂಡ ಶಾಲೆಯಿಂದ ಹೊರಗಡೆ ಉಳಿಯದಂತೆ ನೋಡಿಕೊಳ್ಳುವ ಕೆಲಸ ಮಾಡಿ. ಶಾಲೆ ಅವರ ಬದುಕಿಗೆ ಬೇಕಾದ ರಕ್ಷಣೆÉ, ಅಭಿವೃದ್ಧಿ, ಜೀವನ ವಿಧಾನವನ್ನು ಕಲಿಸಿಕೊಡುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ರಮೇಶ್ ಕುಮಾರ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಮೈದೂರ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರ ದುರುಗೇಶ್ ಮಾಚನೂರ್ ಅವರು ಮಾತನಾಡಿದರು.
ಲ್ಯಾಪ್‍ಟ್ಯಾಪ್ ವಿತರಣೆ; ಬಾಲ ಕಾರ್ಮಿಕರ ಪುನರ್‍ವಸತಿ ಯೋಜನೆಯಡಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 80 ಜನ ವಿದ್ಯಾರ್ಥಿಗಳಿಗೆ ಡಿಎಂಎಫ್ ಯೋಜನೆಯಡಿಯಲ್ಲಿ ಲ್ಯಾಪ್‍ಟ್ಯಾಪ್‍ಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಸದಸ್ಯ ಹೆಚ್.ಸಿ. ರಾಘವೇಂದ್ರ, ಕಾರ್ಮಿಕ ಅಧಿಕಾರಿ ಕಮಲ್ ಅಲ್ತಾಫ್ ಅಹಮ್ಮದ್, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here