ಗಜಲ್ ಹೆತ್ತವರ ಒಂದೆರಡು ಮಾತು ಕೇಳಲು ಇಂದು ಯಾರಿಗೂ ಸಮಯವಿಲ್ಲ

0
164

ಮನೆಯ ವೃದ್ಧರು ಏಕೆ ಇಷ್ಟು ಅಸಡ್ಡೆಗೊಳಗಾದರು ತಿಳಿಯಲಿಲ್ಲ
ಆಧಾರಸ್ತಂಭಗಳು ಕಾಲಾಂತರದಲಿ ಅದುರುವಂತಾದುದು ಕಾಣಲಿಲ್ಲ

ಹೊಲಸು ಮಾಡಿಕೊಂಡ ಮಗುವನು ಅಮ್ಮತೊರೆಯಲಾರಳು ಹೇಸಿಕೊಂಡು
ಅಮ್ಮಅಪ್ಪನ ಶಕ್ತಿಹೀನ ದಿನಚರಿಯ ಮಕ್ಕಳು ಚೂರು ಸಹಿಸಲಿಲ್ಲ

ಮಾತೊಂದ ಹಲವು ಬಾರಿ ತೊದಲಲು ಸಂಭ್ರಮಪಡುವವರು ಅವರು
ಹೆತ್ತವರ ಒಂದೆರಡು ಮಾತು ಕೇಳಲು ಇಂದು ಯಾರಿಗೂ ಸಮಯವಿಲ್ಲ

ಸಿಸ್ತಾಗಿರದ ತಾಯ್ತಂದೆಯರ ತೊರೆದು ಹೋಗಲು ನಾವು ತಡಮಾಡಲಿಲ್ಲ
ಅಸಿಸ್ತಿನ ಮಗುವನು ಒಪ್ಪ ಮಾಡದೆ ಹಾಗೆ ಅವರೆಂದೂ ಬಿಡುವದಿಲ್ಲ

ಸಂಸ್ಕಾರ ಮಕ್ಕಳಿಗೆ ಬೋಧಿಸಿ ತಿಳಿಸಬಹುದಾದ ಪಾಠವಲ್ಲ ಜ್ಯೋತಿ
‌ನಾವೇ ಖುದ್ದಾಗಿ ನಡೆದು ತೋರಿಸಬೇಕಾದ ಹಾದಿಯದು ನಡೆಯಲಿಲ್ಲ.

ಜ್ಯೋತಿ ಬಿ ದೇವಣಗಾವ್

LEAVE A REPLY

Please enter your comment!
Please enter your name here