ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21 ರಂದು; ಅರ್ಥಪೂರ್ಣ ಆಚರಣೆಗೆ ನಿರ್ಧಾರ

0
99

ಬಳ್ಳಾರಿ,ಜೂ.15: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಪತಂಜಲಿ ಯೋಗ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇದೇ ಜೂನ್ 21 ರಂದು ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಗುರುವಾರ ನಡೆಸಿದ ಪೂರ್ವಸಿದ್ದತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಜೂ.21 ರಂದು ಬಳ್ಳಾರಿ ನಗರದ ಶೆಟ್ಟರ ಗುರುಶಾಂತಪ್ಪ ವಿದ್ಯಾಸಂಸ್ಥೆಯ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಸಲು ನಿರ್ಧರಿಸಲಾಗಿದ್ದು, ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳಿಗೆ ವಹಿಸಲಾದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಎಡಿಸಿ ಮೊಹಮ್ಮದ್ ಝುಬೇರಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜೂ.21 ರಂದು ಬೆಳಗ್ಗೆ 6:15 ಕ್ಕೆ ಯೋಗ ಕಾರ್ಯಕ್ರಮಗಳು ಆರಂಭವಾಗಲಿದ್ದು, 6:45 ರವರೆಗೆ ಯೋಗ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, 6:45 ರ ನಂತರ ಯೋಗಾಸನ ಕಾರ್ಯಕ್ರಮ ಆರಂಭವಾಗಲಿದೆ ಎಂದರು.
ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ ಕಾರ್ಯಕ್ರಮವು ಕನಿಷ್ಠ 2 ಸಾವಿರ ಜನರು ಸೇರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು; ಪತಂಜಲಿ ಯೋಗ ಕೇಂದ್ರ, ಆರ್ಟ್ ಆಫ್ ಲಿವಿಂಗ್ ಸೇರಿದಂತೆ ಯೋಗ ಕೇಂದ್ರಗಳು ಅಗತ್ಯವಾಗಿ ಸಹಕಾರ ನೀಡಬೇಕು ಎಂದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಹಾಸ್ಟೆಲ್‍ಗಳಲ್ಲಿರುವ ವಿದ್ಯಾರ್ಥಿಗಳು ಯೋಗಾಸನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಕ್ರಮವಹಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಲಘು ಉಪಹಾರ ಮತ್ತು ನೀರಿನ ವ್ಯವಸ್ಥೆ, ಯೋಗಾಸನ ಮಾಡಲು ಗ್ರೀನ್ ಮ್ಯಾಟ್ ವ್ಯವಸ್ಥೆ ಮತ್ತು ವೇದಿಕೆ ಹಾಗೂ ಧ್ವನಿವರ್ಧಕ ವ್ಯವಸ್ಥೆ ಹಾಗೂ ಆವರಣದೊಳಗೆ ಸಂಪೂರ್ಣ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಯೋಗಾಸನ ಮಾಡುವ ಪ್ರತಿಯೊಬ್ಬರಿಗೂ ಟೀ ಶರ್ಟ್ ಮತ್ತು ಕ್ಯಾಪ್‍ಗಳ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.

ಆರೋಗ್ಯ ಇಲಾಖೆಯಿಂದ ಅಗತ್ಯ ಚಿಕಿತ್ಸಾ ವ್ಯವಸ್ಥೆ ಸೇರಿದಂತೆ ಇನ್ನಿತರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ನುರಿತ ಯೋಗ ಶಿಕ್ಷಕರನ್ನು ನಿಯೋಜಿಸಬೇಕು. ಕಾರ್ಯಕ್ರಮಕ್ಕೆ ಶಿಷ್ಟಾಚಾರ ಪಾಲಿಸಿ ಅತಿಥಿ ಗಣ್ಯರನ್ನು ಆಹ್ವಾನಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಒಟ್ಟಾರೆ ಕಾರ್ಯಕ್ರಮ ಶಿಸ್ತುಬದ್ದವಾಗಿ ಯಾವುದೇ ಲೋಪ ಆಗದಂತೆ ನೋಡಿಕೊಳ್ಳಬೇಕೆಂದರು.
ಆಯಾ ತಾಲ್ಲೂಕುಗಳಲ್ಲಿಯೂ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಚರಿಸಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಯೋಗ ದಿನಾಚರಣೆ ಅಂಗವಾಗಿ ಯೋಗದ ಮಹತ್ವ ಸಾರುವ ಉದ್ದೇಶದಿಂದ ಬಳ್ಳಾರಿಯಲ್ಲಿ ಪೂರ್ವಭಾವಿ ಯೋಗಜಾಥಾ ನಡೆಸಬೇಕು ಎಂದು ಹೇಳಿದರು.

ನಂತರದಲ್ಲಿ ನೊಂದಣಿ ಮಾಡಿಕೊಂಡ ಎಲ್ಲಾರಿಗೂ ಸಸಿ ವಿತರಿಸಲಾಗುವುದು. ಮತ್ತು ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಘೋಷವಾಕ್ಯವು “ಯೋಗ ಫಾರ್ ವಸುದೈವ ಕುಟುಂಬಕಂ” ಹಾಗೂ “ಹರ್ ಆಂಗನ್ ಯೋಗ” ಎಂಬುದಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತಾ ಪಾಟೀಲ್, ಜಿಲ್ಲಾ ಪಂಚಾಯತ್‍ನ ಮುಖ್ಯ ಯೋಜನಾ ನಿರ್ದೇಶಕ ಪ್ರಮೋದ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸಕೀನಾ, ಯೋಗ ಕೇಂದ್ರದ ಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here