ಕೋವಿಡ್ ಕಾರ್ಯಕ್ಕೆ ಅವಶ್ಯವಿರುವ ಸಿಬ್ಬಂದಿಗಳನ್ನು ಬೇರೆ ಇಲಾಖೆಗಳಿಂದ ಪಡೆದುಕೊಳ್ಳಿ: ಜಿಪಂ ಸಿಇಒ ಕೆ.ಆರ್.ನಂದಿನಿ

0
112

ಬಳ್ಳಾರಿ,ಏ.28 : ಜಿಲ್ಲೆಯಲ್ಲಿ ಕೋವಿಡ್ ಸೊಂಕು ದಿನೇದಿನೇ ವ್ಯಾಪಕವಾಗುತ್ತಿದ್ದು,ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕೋವಿಡ್ ಕಾರ್ಯಕ್ಕೆ ಅವಶ್ಯವಿರುವ ಸಿಬ್ಬಂದಿಗಳನ್ನು ಬೇರೆ ಇಲಾಖೆಗಳಿಂದ ಪಡೆದುಕೊಂಡು ಕಾರ್ಯನಿರ್ವಹಿಸುವಂತೆ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ತಹಸೀಲ್ದಾರರಿಗೆ ಸೂಚನೆ ನೀಡಿದರು.
ಉಪಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಕಾನ್ಪರೆನ್ಸ್ ನಂತರ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್‍ನಿಂದ ತಹಸೀಲ್ದಾರರೊಂದಿಗೆ ವಿಡಿಯೋ ಕಾನ್ಪರೆನ್ಸ್ ನಡೆಸಿ ಅವರು ಮಾತನಾಡಿದರು.
ಈಗಾಗಲೇ ಲಾಕ್‍ಡೌನ್ ಘೋಷಿಸಿರುವುದರಿಂದ ಕೆಲ ಇಲಾಖೆಗಳು ಮಾತ್ರ ಕೆಲಸ ನಿರ್ವಹಿಸುತ್ತಿವೆ;ಇನ್ನೂ ಕೆಲ ಇಲಾಖೆಗಳು ಕಾರ್ಯನಿರ್ವಹಿಸುತ್ತಿಲ್ಲ.ಅಲ್ಲಿರುವ ಸಿಬ್ಬಂದಿಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಿ;ನಂತರ ಕಾರ್ಯನಿರ್ವಹಿಸುತ್ತಿರುವ ಇಲಾಖೆಗಳ ಶೇ.50ರಷ್ಟು ಸಿಬ್ಬಂದಿಯನ್ನು ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳುವಂತೆ ಅವರು ಸೂಚಿಸಿದರು.
ಬೇರೆ ಬೇರೆ ನಗರಗಳಿಂದ ಗ್ರಾಮಗಳಿಗೆ ಬರುವವರ ಮೇಲೆ ನಿಗಾವಹಿಸಿ,ಅವರನ್ನು ತಪಾಸಣೆ ಮಾಡಿ ಪಾಟಿಟಿವ್ ಬಂದಲ್ಲಿ ಹೋಂ ಐಸೋಲೇಷನ್‍ಗೆ ಒಳಪಡಿಸಿ. ಹಳ್ಳಿಯ ಜನರಿಗೆ ತಮ್ಮ ವ್ಯಾಪ್ತಿಯಲ್ಲಿಯೇ ಮನರೇಗಾ ಯೋಜನೆಯ ಕೆಲಸ ನೀಡಿ ಎಂದರು.
ಹೋಂಐಸೋಲೇಶನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಆರ್‍ಆರ್‍ಟಿ ತಂಡದ ಸದಸ್ಯರು ಕಡ್ಡಾಯವಾಗಿ ಭೇಟಿಯಾಗಿ ಅವರ ಆರೋಗ್ಯ ತಪಾಸಣೆ ನಡೆಸಬೇಕು;ಅದರ ವಿವರವನ್ನು ಪುಸ್ತಕದಲ್ಲಿ ನಮೂದಿಸಬೇಕು. ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸವಾದಲ್ಲಿ ತಕ್ಷಣ ಶಿಫಾರಸ್ಸು ಮಾಡಬೇಕು ಎಂದು ಹೇಳಿದ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಸಾವಿನ ಪ್ರಮಾಣ ಕಡಿಮೆ ಮಾಡುವ ಮತ್ತು ಶೀಘ್ರ ಗುಣಮುಖರಾಗುವಂತೆ ನೋಡಿಕೊಳ್ಳುವ ಕೆಲಸ ನಮ್ಮಿಂದ ಆಗಬೇಕು ಎಂದರು.
ಪ್ರತಿ ತಾಲೂಕಿನಲ್ಲಿ ಆರ್‍ಆರ್‍ಟಿ ಹಗೂ ಹೋಂಐಸೋಲೇಶನ್ ತಂಡದ ನೋಡೆಲ್ ಅಧಿಕಾರಿಗಳಿದ್ದು,ಈಗ ಯಾವ ರೀತಿ ಈ ಕಾರ್ಯ ನಡೆಯುತ್ತಿದೆ ಎಂಬುದರ ಸಂಪೂರ್ಣ ವರದಿ ಒದಗಿಸುವಂತೆ ಸೂಚಿಸಿದ ಜಿಪಂ ಸಿಇಒ ಅವರು ಈ ತಂಡಗಳಿಗೆ ಬೇಕಾಗುವ ಅವಶ್ಯಕ ಪರಿಕರಗಳ ವಿವರ ಕೂಡ ಒದಗಿಸುವಂತೆ ತಿಳಿಸಿದರು.
ಲಕ್ಷಣ ಇರುವವರಿಗೆ ಫೀವರ್ ಕ್ಲಿನಿಕ್‍ನಲ್ಲಿ ತಪಾಸಣೆ ನಡೆಸಬೇಕು ಎಂದು ಸೂಚಿಸಿದರು.ಇನ್ನೂ ಕೋವಿಡ್ ಕೇರ್ ಸೆಂಟರ್‍ಗಳ ಯಾವ್ಯಾವ ಕಡೆ ಅಗತ್ಯ ಇದೆ ಎಂಬುದರ ವಿವರ ಕೂಡ ಅವರು ಇದೇ ಸಂದರ್ಭದಲ್ಲಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ರಮೇಶ್ ಕೋನರೆಡ್ಡಿ, ಎಎಸ್ಪಿ ಬಿ.ಎನ್.ಲಾವಣ್ಯ, ವಿಮ್ಸ್ ನಿರ್ದೇಶಕರಾದ ಗಂಗಾಧರ ಗೌಡ,ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಬಸರೆಡ್ಡಿ, ಜಿಲ್ಲಾ ಕ್ಷಯರೋಗ ನಿಯಂತ್ರಾಣಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಆರ್.ಅನಿಲ್‍ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here