ಪತ್ರಕರ್ತರು ಅಸಂಘಟಿತ ಮಾನಸೀಕತೆ ಹೊಂದಿದವರು ಗೊತ್ತೆ..? ಇಂದು ಮತ್ತೊಮ್ಮೆ ಸಾಬೀತಾಗಿದೆ.

0
154

ಪತ್ರಕರ್ತರು ನಾವು ಸ್ವಾಮಿ, ಯಾರಿಗೇನು ಕಮ್ಮಿಯೂ ಇಲ್ಲ, ಕೆಮ್ಮಿದರೆ ಡಿಲವರಿ ಆಗುವ ತನಕವು ಬಿಡೋದು ಇಲ್ಲ, ಸಂಘಟಿತರು ಎಂದು ತೊರಿಸಿಕೊಳ್ಳುತ್ತೇವೆ ಧೇಟ್… ಕನ್ನಡಿ ತರವೇ…! ಅದರ ಮುಂದಡಿ ನಿಂದು ಮುಖಕ್ಕೆ ಫೇಷಿಯಲ್ ಲೇಪನಗಳನ್ನು ಲೇಪಿಸಿಕೊಂಡು ಫಳ-ಫಳ ಹೊಳೆವ ಮುಖವನ್ನ ಮಾಡಿಕೊಳ್ಳುತ್ತೇವೆಯೇ ಹೊರತು ಆಂತರಿಕವಾದ ಕೊಳಕುಗಳನ್ನು ಎಂದಿಗೂ ತೊಳೆದು ಹೊಳಪಿಸಿ ಬೆಳಕಾಗಿಸಿಕೊಳ್ಳುವುದಕ್ಕೆ ಮುಂದಾಗುವುದೇ ಇಲ್ಲ,

ಕಾರಣವೇನೆಂದರೆ ಆ ಹೊಳಪಿದ ಬೆಳಕಲ್ಲಿ ಯಾವನಾದ್ರೂ ಉದ್ದಾರವಾಗಿ ಬಿಟ್ರೇ.. ಎನ್ನುವ ಜಿಜ್ಞಾಸೆ, ಸ್ವಾರ್ಥದಿ ಗೂಡು ಮಾಡಿಕೊಂಡಿರುತ್ತೇವೆ ಅಲ್ಲವೇ..?
ಎಲ್ಲವಕ್ಕೂ ಮೂಲ ಕಾರಣ ಪತ್ರಕರ್ತರಲ್ಲಿ ಇರುವ ಅಸಹಿಸುವಿಕೆ, ತನ್ನ ಕದಂಬ ಬಾಹುವಿನ ಕರಾಳದಡಿಯಲ್ಲಿಯೇ ಹಾದು ಹೋಗಬೇಕು, ಯಾವನಾದ್ರೂ ಓವರ್ ಟೇಕ್ ಮಾಡಿದ್ದಾನೆಂದರೆ ಆತನ ವಿರುದ್ದ ಷಡ್ಯಂತ್ರವೇ ರೂಪಿಸಿ ಆ ಪತ್ರಿಕಾ ಬದುಕನ್ನು ಕೊಲೆ ಮಾಡಿಬಿಡುವುದು, ಇಂತಹ ಅಸಲಿ ಕಾರಣ, ವಾಸ್ತವಗಳ ನಡುವೆ ಪತ್ರಕರ್ತರು ಸಂಘಟಿತರೆಂದು ತೋರಿಸಿಕೊಳ್ಳಬಹುದಷ್ಟೆ, ಬಹುತೇಕ ಕಡೆಗಳಲ್ಲಿ ಅಸಂಘಟಿತರಾಗಿಯೇ ಉಳಿದಿರುತ್ತಾರೆ.

ಅಂದರೆ ಇದನ್ನು ಪತ್ರಕರ್ತರೇ ಪತ್ರಕರ್ತರನ್ನು ಶೋಷಣೆ ಮಾಡುವುದು ಎನ್ನುತ್ತಾರೆ, ಮುಂದುವರೆದಂತೆ “ಮುದ್ರಣ ಮಾಧ್ಯಮ” “ದೃಶ್ಯ ಮಾಧ್ಯಮ” ಪತ್ರಿಕಾ ಛಾಯಗ್ರಾಹಕರು, ಪತ್ರಿಕಾ ಹಂಚಿಕೆದಾರರು, ವರದಿಗಾರರು, ಸಂಪಾದಕರು, ಎನ್ನುವ ವಿಂಗಡಣೆಗಳು ಗುಂಪು-ಗುಂಪಾಗಿಸಿಕೊಂಡಿವೆ, ವಿಭಿನ್ನ ಅಭಿಪ್ರಾಯಗಳು, ಧೋರಣೆಗಳು, ನಿಲುವುಗಳು, ಪಂಥಿಯ ವಾದಗಳು, ಬೆಂಬಲಿತ ವಿದ್ಯಮಾನಗಳಿಂದಾಗಿ ನಾವು ಎಂದಿಗೂ ಸಂಘಟಿತವಾಗಿ ಏಕ ಮಾನಸೀಕತೆಗಳಲ್ಲಿ ಬರದಿದ್ದರೂ ಏಕತೆಯ ಸಂಘಟಿತ ನೆಲಗಟ್ಟಿನಲ್ಲಿ ಪತ್ರಕರ್ತರು ಒಂದಾಗಬಹುದು ಆದರೂ ಇದು ಸಾಧ್ಯವಾ..?

ವಿಪರೀತವಾದ ಮಾನಸೀಕತೆಗಳು ಲಾಭಾದಾಯಕವಾಗಿರುವಾಗ ಕೆಲವರಿಗೇಕೆ.. ಸಂಘಟಿತ ವಲಯದಲ್ಲಿ ಸಮಚಿತ್ತ ವಾದವನ್ನು ತಳೆಯಬೇಕು ಎನ್ನುವ ನಿರ್ಧಾರಗಳ ಕೊಂಡಿಗೆ ಬೆಸೆದುಕೊಂಡಿರುವುದರಿಂದಲೇ ಪತ್ರಕರ್ತರು ಸಂಘಟಿತ ಮುಖವಾಡ ತೊಟ್ಟು ಅಸಂಘಟಿತರಾಗಿಯೇ ಬಸವಳಿಯುತ್ತಿದ್ದಾರೆ, ಇದು ಬರ-ಬರುತ್ತಾ ಸೂತಕದ ಛಾಯೇ ಯಂತೆ ವ್ಯಾಪಿಸಿಕೊಳ್ಳುತ್ತಿದೆ,

ಇಂತಹ ವಿಷಮ ಪರಿಸ್ಥಿತಿಯ ದುರ್ಬಲತೆಗಳನ್ನು ಗಮನಿಸಿಯೇ ಒಂದಿಷ್ಟು ವೈಟ್ ಕಾಲರ್ ಗಳು ನಡುವೆ ನುಸುಳಿ ಕೆಟ್ಟ ರಾಜಕೀಯ ಪ್ರಭಾವ ಬಿತ್ತರಿಸಿಕೊಂಡು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದು ಅಥವಾ ಕಾವಿಟ್ಟುಕೊಳ್ಳುವುದು ಶುರುವಿಟ್ಟುಕೊಳ್ಳುತ್ತಾರೆ. ಇದನ್ನು ನಿತ್ಯದ ಬೆಳವಣಿಗೆಯಲ್ಲಿ ಕಾಣಬಹುದಾಗಿದೆ.

ಇನ್ನೂ ಅಭಿವ್ಯಕ್ತಿ ಎನ್ನುವುದು ಹಾಸ್ಯಾಸ್ಪದವಾದಂತಿದೆ, ಅಭಿವ್ಯಕ್ತಿಗೆ ಸರಿಯಾದ ವ್ಯಾಖ್ಯಾನಗಳೇ ಸಾಕಷ್ಟು ಪತ್ರಕರ್ತರಿಗೆ ಗೊತ್ತಿಲ್ಲವೇನೋ..? ಎನ್ನುವ ತರ್ಕಗಳಿವೆ, ಅಭಿವ್ಯಕ್ತಿಗಳು ಎಂದಿಗೂ ಆಡಳಿತದ ಪರವಾಗಿ ಇರಬಾರದು ಅದು ವಿರೋದಪಕ್ಷದ ರೀತಿಯಲ್ಲಿಯೇ ಕಾರ್ಯವನ್ನು ನಡೆಸಬೇಕು, ಪ್ರಶ್ನಿಸಬೇಕು, ಎಚ್ಚರಿಸಬೇಕು.. ಆಡಳಿತ ಯಂತ್ರ ತುಕ್ಕು ಹಿಡಿದಿದ್ದರೆ, ಅದರ ಕುರಿತಾಗಿ ಬಹಿರಂಗಗೊಳಿಸಿ ಸರಿಪಡಿಸುವತ್ತ ಮುಂದಾಗುವ ಸುದ್ದಿಗಳು ನಮ್ಮದಾಗಬೇಕೆ..? ಹೊರತು ಪತ್ರಿಕಾ ಸಮುದಾಯದಲ್ಲೇ ಅತೃಪ್ತರಂತೆ ವರ್ತಿಸುವುದಲ್ಲ, ಒಳಜಗಳ-ಆಂತರಿಕ ಬೇಗುದಿಯಿಂದ ಬೇಯುವುದಲ್ಲ, ಸಲ್ಲದ ಪತ್ರಕರ್ತರ ಮೇಲೆ ಶೋಷಣೆಗೈಯುವುದಕ್ಕೆ ತರಾತುರಿಯಂತೆ ಕುತಂತ್ರ ಮಾಡುವುದಲ್ಲ, ಎನ್ನುವುದನ್ನು ಒಂದಿಷ್ಟು ಪತ್ರಕರ್ತರುಗಳೇ ಸಮಚಿತ್ತ ಭಾವದಡಿ ಚಿಂತನೆ ನಡೆಸಿಕೊಳ್ಳಬೇಕಾದ ಜರೂರತ್ತಿದೆ.

ಹೀಗೆ ರಾಜ್ಯದೆಲ್ಲೆಡೆ ಮೂರು-ಮೂರು ಪತ್ರಿಕಾ ಸಂಘಟನೆಗಳಿವೆ, ಒಡೆದ ಸುದ್ದಿಮನೆಗಳಾಗಿ ಪರಿವರ್ತನೆಗೊಂಡಿವೆ, ತಾನೇ ಶ್ರೇಷ್ಠ ಎನ್ನುವವರು ಒಂದೆಜ್ಜೆ ಹಿಂದೆ ಸರಿಯುವ ಮಾತೇ ಇಲ್ಲ, ಅವನಿಗಿಂತಲೂ ನಾನೇನು ಕಡಿಮೆಯಿಲ್ಲ ಎನ್ನುವವರು ಕೂಡ ಒಂದೆಜ್ಜೆ ಹಿಂದಿಕ್ಕಿ ಪರಸ್ಪರ ಭಾವನಾತ್ಮಕವಾಗಿ ಅಪ್ಪುಗೆಯ ಸ್ವಾದ ಅನುಭವಿಸುವುದಕ್ಕೆ ಮುಂದಡಿಯಾಗುವುದು ಇಲ್ಲ, ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ ಎನ್ನುವಂತೆ ಈ ಭಾವ ಪತ್ರಿಕಾ ಸಂಘಟಿತ ವಲಯದಲ್ಲಿ ನಿರರ್ಥಕವಾಗಿದೆ.

ಸ್ವೀಕರಿಸುವ ಮನೋಭಾವ ಎಲ್ಲಿಯವರೆಗೆ ವಿಸ್ತಾರಗೊಳ್ಳುವುದಿಲ್ಲವೋ… ಅಲ್ಲಿಯವರೆಗೆ ಇಂತಹ ಅಸಂಘಟಿತವಾದ ಧ್ವಂದ್ವತೆ ಇದ್ದೆ ಇರುತ್ತದೆ, ಇಂತಹ ಸಾಲುಗಳು ಇಲ್ಲಿ ಹೇಳುವುದಕ್ಕೆ ಕಾರಣವಿದೆ, ಸ್ಥಳೀಯ ಪತ್ರಕರ್ತರೇ ಆಗಲಿ, ಕಾರ್ಪೋರೆಟ್ ವಲಯದ ವರದಿಗಾರರೇ ಆಗಲಿ, ಎಲ್ಲರಿಗೂ ಇಂತಹ ಅನುಭವಗಳು ಕಟ್ಟಿಟ್ಟ ಬುತ್ತಿಯಾಗಿದ್ದರೂ ಆಡಳಿತ ವ್ಯವಸ್ಥೆಗಳ ಆಟಾಟೋಪಗಳನ್ನು ಸಹಿಸಿಕೊಂಡೇ ಮುಂದೆ ಹೋಗಬೇಕಾಗಿರುವ ಸಂಗತಿಗಳಿವೆ.

ಅನೇಕ ಸಂಗತಿಗಳಲ್ಲಿ ಪತ್ರಿಕಾ ವಲಯವನ್ನು ತಾತ್ಸಾರಗೊಳಿಸಿದ್ದೆ ಹೆಚ್ಚು, ಎಲ್ಲದಕ್ಕೂ ಮನವಿ ನೀಡಿ ಸೌಲಭ್ಯಕ್ಕಾಗಿ ಅಂಗಲಾಚುವ ದಟ್ಟ ದರಿದ್ರ ಸ್ಥಿತಿಗಳು ಇನ್ನೂ ಜೀವಂತವಾಗಿದೆ, ಕೊಟ್ಟ ಮನವಿಗೆ ಶೀಘ್ರ ಸ್ಪಂದನೆ ಆಗುವುದೇ..? ಆಗುವುದಿಲ್ಲ, ಬೇಡಿಕೆಗಳನ್ನು ಕೂಡ ಪರೀಶಿಲಿಸಿ ಸಮಾನವಾಗಿ ಆದೇಶಿಸಲು ಮುಂದಾಗುವುದು ಕನಸಿನ ಮಾತು, ನಿಯೋಗ ಹೋದ್ವಿ, ಮನವಿ ನೀಡಿದ್ವಿ, ಗೋಗರೆದು ಕೇಳಿದ್ವಿ, ಹೈ-ಪ್ರೋಪೈಲ್ ಶೋಕಿಗಾಗಿ ವಿಧಾನನಸೌದದ ಕಟ್ಟಡದ ಮೆಟ್ಟಿಲು ಹತ್ತಿದ್ವಿ, ಎಂದು ನಾಲ್ಕು ಕಾಲಂ ಸುದ್ದಿ ಮಾಡಿಕೊಂಡು ಆಯಾ ಸಂಘಟನೆಯ ನಡಾವಳಿಯಲ್ಲಿ ದಾಖಲಿಸಿ ಸಂಭ್ರಮಿಸುವುದರ ಗೋಜು ಫೀಕಲಾಟ ಪತ್ರಿಕಾ ಸಂಘಟನೆಗಳಿಗೆ ಅಗತ್ಯವಿದಿಯಾ..?

ಒಮ್ಮೆಲೆ ಎಲ್ಲರೂ ಒಕ್ಕರೊಲಿನಿಂದ ಪ್ರಶ್ನಿಸಿದರೆ, ಅದನ್ನು ಸುದ್ದಿರೂಪಗೊಳಿಸಿದರೆ ನಿಜಕ್ಕೂ ಎಂತಹ ತುಕ್ಕು ಹಿಡಿದ ಆಡಳಿತಾತ್ಮಕತೆಗಳಿದ್ದರೂ ಸರಿ ಶೀಘ್ರ ಪರಿಹಾರಕ್ಕೆ ಮುಂದಾಗುತ್ತದೆ, ಪತ್ರಿಕಾ ಸಂಘಟನೆಗಳು ಅಂಗಲಾಚುವ ಅನಿವಾರ್ಯತೆಯಿಲ್ಲ, ಇಂತಹದೊಂದು ಬಲಿಷ್ಠ ಅಭಿವ್ಯಕ್ತಿಯೇ ಪತ್ರಕರ್ತರಿಗೆ ಅಸ್ತ್ರವಾಗಿರುವ ಅರಿವು ಇರಬೇಕಷ್ಠೆ.

ಪ್ರಸ್ತುತ ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಕೋವಿಡ್ ಪ್ಯಾಕೇಜ್-2021ನ್ನು ಇಂದು ಘೋಷಿಸಿದ್ದಾರೆ ಇದಕ್ಕಾಗಿ 1250 ಕೋಟಿ ಯೋಜನೆ ಬಿಡುಗಡೆಗೊಳಿಸಿದ್ದಾರೆ. ಈ ಪ್ಯಾಕೇಜ್ ನಿಂದ ಪತ್ರಕರ್ತರನ್ನು ದೂರ ಇಟ್ಟಿರುವುದು ಸಮಂಜಸವಾದುದ್ದಲ್ಲ,

ಪತ್ರಕರ್ತರಿಗಾಗಿಯೇ ವಿಶೇಷ ಪ್ಯಾಕೇಜ್ ಮಾಡುತ್ತಾರೆ ಎನ್ನುವ ಪುಟಾಲು ಭರವಸೆಗಳು ಕಳೆದ 2020 ಕೋವಿಡ್ ಪರಿಸ್ಥಿತಿಯಿಂದಲೂ ಅನುಭವಿಸಿದ್ದೇವೆ,ಇದೀಗಲು ಮೂಗಿಗೆ ತುಪ್ಪ ಸವರುವ ಕೆಲಸ ಆಗಿದೆ. ಇಂತಹ ಅತೀವ ನಿರ್ಲಕ್ಷ್ಯತನಕ್ಕೆ ಪತ್ರಕರ್ತರೊಳಗಿನ ಅಸಂಘಟಿತ ಮಾನಸೀಕತೆಯೇ ಕಾರಣವಾಗಿದೆ.

ಪತ್ರಕರ್ತರು ಎಲ್ಲಿಯವರೆಗೂ ತಮ್ಮೊಳಗಿನ ಆಂತರಿಕ ಯುಧ್ದ ಪೀಡನೆಗಳನ್ನು ತೊಲಗಿಸಿ ಅಸಂಘಟಿತ ಮನೋಭಾವದಿಂದ ಹೊರಬಂದು ಸಂಘಟಿತವಾಗಿ ನಡೆದುಕೊಂಡರೆ ಮಾತ್ರ ನಿಜದ ಅಭಿವ್ಯಕ್ತಿಯನ್ನು ಉಳಿಸಬಹುದು, ಪತ್ರಿಕಾ ಸಂಘಟನೆಯನ್ನು ಬಲವರ್ಧಿಸಿಕೊಳ್ಳಬಹುದು, ಈ ನಿಟ್ಟಿನಲ್ಲಿ ಸಮಸ್ತ ಪತ್ರಿಕಾ ಮನಸುಗಳು ಚಿಂತನೆ ನಡೆಸಬೇಕಾದ ಜರೂರತ್ತಿದೆ.

ಈ ಚಿಂತನೆಗಳು ನಡೆಸಿದ್ದಾದರೆ ನಿಜಕ್ಕೂ ಪತ್ರಕರ್ತರು ಯಾವ ತುಕ್ಕು ಹಿಡಿದ ಆಡಳಿತಾತ್ಮಕತೆಗಳ ಮುಂದಡಿ ಬೆಗ್ ಮಾಡುವ ಅಗತ್ಯತೆ ಸೃಷ್ಠಿಯಾಗುವುದೇ ಇಲ್ಲ, ಮುಂದಾದರೂ ಪತ್ರಕರ್ತರು ಅಸೆಡ್ಡೆಗಳಿಗೆ ಒಳಗಾಗುವುದೇ ಇರಲಿ, ಅಪಮಾನಿಸಿಕೊಳ್ಳದಿರಲಿ, ಬವಣೆಗಳ ಕೂಪಕ್ಕೆ ಸಿಲುಕದಿರಲಿ, ಮೂಲಭೂತ ಸೌಲಭ್ಯಗಳಿಂದ ವಂಚಿತವಾಗದಿರಲಿ, ಅಭಿವ್ಯಕ್ತಿಯ ಸಾರದಲ್ಲಿ ಎಲ್ಲವನ್ನು ತೊಳೆದು ಸ್ವತಂತ್ರವಾಗಿರಲಿ ಎನ್ನುವುದೇ ನನ್ನಯ ಅಂಭೋಣವಾಗಿದೆ.

-ಗಾರಾ.ಶ್ರೀನಿವಾಸ್

LEAVE A REPLY

Please enter your comment!
Please enter your name here