ಮಂತ್ರಿ ಎಂ. ಬಿ. ಪಾಟೀಲ್ ಅವರಿಗೇಕೆ ಸಿಟ್ಟು ಬಂತು?

0
226

ಕಳೆದ ವಾರ ಸಿಂಗಾಪುರಕ್ಕೆ ಹೋಗಿದ್ದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರಿಗೆ ಅಚ್ಚರಿಯ ಸಂದೇಶ ಕಾದಿತ್ತಂತೆ.
ತಮ್ಮ ಇಲಾಖೆಯ ವ್ಯಾಪ್ತಿಗೆ ಬರುವ ಕೆಎಐಡಿಬಿಗೆ ಮುಖ್ಯಮಂತ್ರಿಗಳು ಮಹೇಶ್ ಎಂಬ ಅಧಿಕಾರಿಯನ್ನು ತಂದು ಕೂರಿಸಿದ್ದಾರೆ ಎಂಬುದು ಈ ಸಂದೇಶ.
ಅಂದ ಹಾಗೆ ಕೆಎಐಡಿಬಿಗೆ ತುಮಕೂರು ಜಿಲ್ಲಾಧಿಕಾರಿಯಾಗಿದ್ದ ವೈ.ಎಸ್.ಪಾಟೀಲರನ್ನು ಕರೆಸಿಕೊಳ್ಳಬೇಕು ಎಂಬ ಇಚ್ಚೆ ಎಂ.ಬಿ.ಪಾಟೀಲ್ ಅವರಿಗಿತ್ತು.ಹಾಗಂತ ಮಂತ್ರಿಯಾದ ಶುರುವಿನಲ್ಲೇ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹೇಳಿಕೊಂಡಿದ್ದರು.
ಆದರೆ ತಾವು ಸಿಂಗಾಪುರಕ್ಕೆ ಬಂದ ಟೈಮು ನೋಡಿ ಮಹೇಶ್ ಎಂಬ ಅಧಿಕಾರಿಯನ್ನು ತಂದುಕೂರಿಸಿದ ಬೆಳವಣಿಗೆ ಎಂ.ಬಿ.ಪಾಟೀಲರ ಆಕ್ರೋಶಕ್ಕೆ ಕಾರಣವಾಗಿದೆ.ಹಾಗಂತಲೇ ಅವರು ವಿಚಾರಿಸಿ ನೋಡಿದರೆ,ಇದರ ಹಿಂದೆ ಸಿದ್ಧರಾಮಯ್ಯ ಅವರ ಕಿಚನ್ ಕ್ಯಾಬಿನೆಟ್ ಕೈವಾಡವಿರುವುದು ಅವರ ಗಮನಕ್ಕೆ ಬಂದಿದೆ.
ಹೀಗಾಗಿ ಕೆರಳಿರುವ ಎಂ.ಬಿ.ಪಾಟೀಲ್ ಸಿಂಗಾಪೂರದಿಂದಲೇ ಫೋನಾಯಿಸಿ,ಯಾವ ಕಾರಣಕ್ಕೂ ಚಾರ್ಜ್ ತೆಗೆದುಕೊಳ್ಳಬೇಡಿ ಎಂದು ಮಹೇಶ್ ಅವರಿಗೆ ಹೇಳಿದರಂತೆ.
ಕುತೂಹಲದ ಸಂಗತಿ ಎಂದರೆ ಕೆಎಐಡಿಬಿಯಲ್ಲಿ ತಮಗೆ ಬೇಕಾದ ಅಧಿಕಾರಿಗಳೇ ಇರಬೇಕು ಎಂಬ ತೀರ್ಮಾನಕ್ಕೆ ಬಂದಿದ್ದ ಎಂ.ಬಿ.ಪಾಟೀಲ್ ಕೆಲ ದಿನಗಳ ಹಿಂದೆ ಅಲ್ಲಿದ್ದ ಗಂಗಾಧರಯ್ಯ ಅವರನ್ನು ಎತ್ತಂಗಡಿ ಮಾಡಿ ದೊಡ್ಡಬಸವರಾಜು ಎಂಬುವವರನ್ನು ತರಲು ಬಯಸಿದರು.
ಆದರೆ ಅಷ್ಟರಲ್ಲಾಗಲೇ ಸಿಎಂ ಆಪ್ತರೊಬ್ಬರು ಗಂಗಾಧರಯ್ಯ ಕೆಎಐಡಿಬಿಯಲ್ಲೇ ಇರಲಿ,ಇದು ಸಿಎಂ ಸೂಚನೆ ಎಂದರಂತೆ.ಈ ವಿಷಯ ಗೊತ್ತಾದ ನಂತರ ವಿಸ್ಮಿತರಾದ ಎಂ.ಬಿ.ಪಾಟೀಲ್ ವಿಚಾರಿಸಿ ನೋಡಿದರೆ,ಸಿಎಂ ಅಂತಹ ಸೂಚನೆ ನೀಡಿಲ್ಲ ಎಂಬುದು ಗಮನಕ್ಕೆ ಬಂದಿದೆ.ಹೀಗಾಗಿ ಅಲರ್ಟ್ ಆದ ಅವರು ತಮ್ಮಿಚ್ಚೆಯಂತೆ ದೊಡ್ಡ ಬಸವರಾಜು ಅವರನ್ನು ತಂದು ಕೂರಿಸಿದ್ದಾರೆ.
ಹೀಗೆ ಖಾತೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕಿಂತ ಮುಂಚೆ ಸಿಎಂ ಎಸ್ಟಾಬ್ಲಿಷ್ ಮೆಂಟಿನಿಂದ ಬರುತ್ತಿರುವ ಅಡ್ಡಿ ಸಹಜವಾಗಿಯೇ ಪಾಟೀಲರ ಇರುಸುಮುರಿಸಿಗೆ ಕಾರಣವಾಗಿದೆ.

ಡಿಕೆಶಿ ಸಿಟ್ಟಾಗಿದ್ದು ಏಕೆ?

ಇದೇ ರೀತಿ ಬೆಂಗಳೂರು ನಗರಾಬಿವೃದ್ಧಿಯ ವ್ಯಾಪ್ತಿಗೆ ಬರುವ ಬಿಡಿಎಗೆ ಖಾನುಂ ಎಂಬ ಅಧಿಕಾರಿಯನ್ನು ಸೆಕ್ರೆಟರಿಯಾಗಿ ನೇಮಿಸಿ ಸಿಎಂ ಸಿದ್ಧರಾಮಯ್ಯ ಆದೇಶ ಹೊರಡಿಸಿದ್ದರಂತೆ.
ಆದರೆ ತಮ್ಮ ನಿಯಂತ್ರಣದಲ್ಲಿರುವ ಇಲಾಖೆಯಲ್ಲಿ ಸಿಎಂ ಕೈ ಹಾಕಿದ ಬೆಳವಣಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕೆರಳಿಸಿದೆ.
ಇದು ಹೇಗೆ ಸಾಧ್ಯವಾಯಿತು ಅಂತ ಅವರು ಚೆಕ್ ಮಾಡಿ ನೋಡಿದರೆ ಇದರ ಹಿಂದೆ ಸಿದ್ಧರಾಮಯ್ಯ ಅವರ ಆಪ್ತ,ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮುಖ ಕಾಣಿಸಿದೆ.
ಇನ್ನೂ ಸ್ವಲ್ಪ ಆಳಕ್ಕಿಳಿದು ನೋಡಿದರೆ ಬಿಡಿಎ ಸೆಕ್ರೆಟರಿ ಹುದ್ದೆಗೆ ನೇಮಕವಾಗಿರುವ ಖಾನುಂ ಅವರು ಮಾಜಿ ಸಚಿವ ರೋಷನ್ ಬೇಗ್ ಅವರ ಸಹೋದರನ ಸೊಸೆ ಎಂಬ ಮಾಹಿತಿ ಸಿಕ್ಕಿತಂತೆ.
ಅರ್ಥಾತ್,ರೋಷನ್ ಬೇಗ್ ಅವರು ಜಮೀರ್ ಅವರಿಗೆ ಹೇಳಿ,ಆ ಮೂಲಕ ಸಿದ್ಧರಾಮಯ್ಯ ಅವರ ಕಿಚನ್ ಕ್ಯಾಬಿನೆಟ್ಟಿನ ಮೇಲೆ ಪ್ರಭಾವ ಬೀರಿದ ಕಾರಣಕ್ಕಾಗಿ ಸಿಎಂ ಈ ಆದೇಶ ಮಾಡಿದ್ದಾರೆ ಎಂಬ ತೀರ್ಮಾನಕ್ಕೆ ಬಂದರಂತೆ ಡಿಕೆಶಿ.ಅಷ್ಟೇ ಅಲ್ಲ,ಸಂಬಂಧ ಪಟ್ಟ ಅಧಿಕಾರಿಗೆ ಚಾರ್ಜ್ ತೆಗೆದುಕೊಳ್ಳಬೇಡಿ ಎಂದು ಕಟ್ಟು ನಿಟ್ಟಾಗಿ ಹೇಳಿದರಂತೆ.

ಪರಮೇಶ್ವರ್ ಅವರಿಗೆ ಸಮಾಧಾನವಿಲ್ಲ

ಇನ್ನು ಸಿದ್ಧರಾಮಯ್ಯ ಅವರ ಸಂಪುಟದಲ್ಲಿ ಗೃಹ ಸಚಿವರಾಗಿರುವ ಡಾ.ಪರಮೇಶ್ವರ್ ಅವರಿಗೆ ಸಮಾಧಾನ ಇಲ್ಲದಂತಾಗಿದೆ.
ಹಾಗೆ ನೋಡಿದರೆ ಅವರಿಗೆ ಈ ಸಲ ಗೃಹ ಖಾತೆ ಪಡೆಯುವ ಬಗ್ಗೆ ಇಷ್ಟವಿರಲಿಲ್ಲ.ಹೀಗಾಗಿ ಕಂದಾಯ,ಬೆಂಗಳೂರು ನಗರಾಭಿವೃದ್ದಿ ಸೇರಿದಂತೆ ಬೇರೆ ಯಾವುದಾದರೂ ಪ್ರಮುಖ ಖಾತೆ ಪಡೆಯುವ ನಿರೀಕ್ಷೆ ಅವರಲ್ಲಿತ್ತು.
ಆದರೆ ಈ ಖಾತೆಗೆ ನಿಮ್ಮಂತಹ ಹಿರಿಯರೇ ಸೂಟಬಲ್ಲು ಡಾಕ್ಟ್ರೇ ಅಂತ ಸಿದ್ಧರಾಮಯ್ಯ ಅವರ ಮನ ಒಲಿಸಿದ್ದರು.
ಆದರೆ ಖಾತೆ ಪಡೆದು ಒಂದು ತಿಂಗಳು ಕಳೆಯುವ ಮುನ್ನವೇ ಪರಮೇಶ್ವರ್ ಅಸಮಾಧಾನಗೊಂಡಿದ್ದಾರೆ.
ಕಾರಣ?ಗೃಹ ಇಲಾಖೆಯ ಪ್ರಮುಖ ವರ್ಗಾವಣೆಗಳ ವಿಷಯದಲ್ಲಿ ಮುಖ್ಯಮಂತ್ರಿಗಳು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿಲ್ಲ.
ಹೀಗೆ ಹೆಗಲಿಗೊಂದು ಖಾತೆ ಕಟ್ಟಿ,ಅದರ ವ್ಯವಹಾರವನ್ನು ನೋಡಿಕೊಳ್ಳುವ ಸ್ವಾತಂತ್ರ್ಯ ಇಲ್ಲದಿದ್ದರೆ ಅದಕ್ಕೇನು ಅರ್ಥ?ಎಂಬುದು ಪರಮೇಶ್ವರ್ ಅವರ ನೋವು.
ಅಂದ ಹಾಗೆ ಗೃಹ ಇಲಾಖೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ವಿಷಯದಲ್ಲಿ ಪರಮೇಶ್ವರ್ ಅವರಿಗೆ ತಮ್ಮದೇ ಕನಸುಗಳಿದ್ದವು.ಈ ಪೈಕಿ ಐಪಿಎಸ್ ಅಧಿಕಾರಿ ಅರುಣ್ ಚಕ್ರವರ್ತಿ ಅವರನ್ನು ಬೆಂಗಳೂರು ಪೋಲೀಸ್ ಕಮೀಷ್ನರ್ ಹುದ್ದೆಗೆ ತರಬೇಕು ಎಂಬುದೂ ಒಂದು.
ಬೆಂಗಳೂರಿನಲ್ಲಿ ದಲಿತ ಅಧಿಕಾರಿಗಳು ಪೋಲೀಸ್ ಕಮೀಷ್ನರ್ ಆಗಿದ್ದಾರಾದರೂ ಅವರಲ್ಲಿ ಆಂಧ್ರ ಕೇಡರಿನವರೇ ಜಾಸ್ತಿ.ಕರ್ನಾಟಕ ಕೇಡರಿನ ಮರಿಸ್ವಾಮಿ ಅವರು ಕಮೀಷ್ನರ್ ಆಗಿದ್ದರಾದರೂ ತದನಂತರದ ದಿನಗಳಲ್ಲಿ ಕರ್ನಾಟಕ ಕೇಡರಿನ ದಲಿತ ಅಧಿಕಾರಿಗಳು ಕಮೀಷ್ನರ್ ಆಗಿಲ್ಲ.
ಹೀಗಾಗಿ ಈ ಸಲ ಅರುಣ್ ಚಕ್ರವರ್ತಿ ಅವರನ್ನು ಬೆಂಗಳೂರು ಪೋಲೀಸ್ ಕಮೀಷ್ನರ್ ಹುದ್ದೆಗೆ ತರುವ ಮೂಲಕ ಆ ಕೊರತೆಯನ್ನು ನೀಗಿಕೊಳ್ಳುವುದು ಪರಮೇಶ್ವರ್ ಅವರ ಲೆಕ್ಕಾಚಾರವಾಗಿತ್ತು.
ಆದರೆ ಈ ಕುರಿತಂತೆ ಅವರು ಹೆಜ್ಜೆ ಇಡುವ ಮುನ್ನವೇ ಸಿದ್ಧರಾಮಯ್ಯ ಅವರ ಕಿಚನ್ ಕ್ಯಾಬಿನೆಟ್ಟಿನ ಕೈ ಚಳಕದಿಂದ ಬೇರೊಬ್ಬರು ಬಂದು ಆ ಹುದ್ದೆಯಲ್ಲಿ ಕುಳಿತರು.
ವಿಪರ್ಯಾಸವೆಂದರೆ,ಈ ಹುದ್ದೆಗೆ ಇಂತವರನ್ನು ತರುತ್ತೇವೆ ಅಂತ ಆದೇಶ ಹೊರಡಿಸುವ ಮುನ್ನ ಸಿದ್ಧರಾಮಯ್ಯ ನೆಪಮಾತ್ರಕ್ಕೂ ಪರಮೇಶ್ವರ್ ಅವರ ಜತೆ ಚರ್ಚಿಸಿರಲಿಲ್ಲವಂತೆ.
ಇದೇ ರೀತಿ ಡಿ.ಜಿ ಇನ್ ಚಾರ್ಜ್ ಆಗಿ ಅಲೋಕ್ ಮೋಹನ್ ಅವರನ್ನು,ಕಾನೂನು ಸುವ್ಯವಸ್ಥೆಯ ಎಡಿಜಿಪಿಯನ್ನಾಗಿ ಹಿತೇಂದ್ರ ಅವರನ್ನು ತಂದು ಕೂರಿಸುವ ಮುನ್ನವೂ ಪರಮೇಶ್ವರ್ ಅವರ ಜತೆ ಚರ್ಚಿಸಿರಲಿಲ್ಲವಂತೆ.
ಹೀಗೆ ಗೃಹ ಇಲಾಖೆಯ ಆಯಕಟ್ಟಿನ ಹುದ್ದೆಗಳಿಗೆ ನೇಮಕ‌ ಮಾಡುವಾಗ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ,ನಾನ್ಯಾವ ವಿಶ್ವಾಸದಿಂದ ಗೃಹ ಖಾತೆ ನಿಭಾಯಿಸಲಿ ಅಂತ ಪರಮೇಶ್ವರ್ ಆಪ್ತರಲ್ಲಿ ನೋವು ತೋಡಿಕೊಳ್ಳುತ್ತಿದ್ದಾರೆ.

ನೋ ನೋ ಎಂದರಂತೆ ಜಾರ್ಜ್

ಈ ಮಧ್ಯೆ ಮೈಸೂರಿನ ಚಾಮುಂಡೇಶ್ವರಿ ಎಲೆಕ್ಟ್ರಿಕ್ ಕಂಪನಿಯ (ಚಸ್ಕಾಂ)ಎಂ.ಡಿ ಹುದ್ದೆಗೆ ಇಂಜಿನಿಯರ್ ಒಬ್ಬರನ್ನು ತಂದು ಕೂರಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಯಸಿದ್ದರಂತೆ.
ಆದರೆ ಐಎಎಸ್ ಅಲ್ಲದವರೊಬ್ಬರನ್ನು ಚಸ್ಕಾಂನ ಎಂ.ಡಿ ಹುದ್ದೆಗೆ ತಂದು ಕೂರಿಸಲು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ನಿರಾಕರಿಸಿದ್ದಾರೆ.
ಆದರೆ,ಇವರು ಚುನಾವಣೆ ಟೈಮಿನಲ್ಲಿ ನಮಗೆ ಹೆಲ್ಪು ಮಾಡಿದವರು.ಏನಾದ್ರೂ ಮಾಡಿ ಅಕಾಮಡೇಟ್ ಮಾಡಲು ಸಾಧ್ಯವಾ ನೋಡಿ ಅಂತ ಸಿದ್ದರಾಮಯ್ಯ ಕೇಳಿದರಂತೆ.
ಆದರೆ ಸಚಿವ ಜಾರ್ಜ್ ಮತ್ತು ಅಲ್ಲಿದ್ದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು,ಸಾರ್,ಇವತ್ತು ಎಂಡಿ ಪೋಸ್ಟಿಗೆ ಎಂಜಿನಿಯರ್ ಒಬ್ಬರನ್ನು ತಂದು ಕೂರಿಸಿದರೆ ನಾಳೆ ಅದೇ ಒಂದು ಪರಿಪಾಠವಾಗಿ ಎಂಜಿನಿಯರುಗಳೇ ಇಂತಹ ಜಾಗ ಹಿಡಿಯುವಂತಾಗುತ್ತದೆ.ಸಾಮಾನ್ಯವಾಗಿ ಈ ಜಾಗಕ್ಕೆ ಐಎಎಸ್ ಅಧಿಕಾರಿಗಳೇ ಬರಬೇಕು ಎಂದಿದ್ದಾರೆ.
ಅಷ್ಟೇ ಅಲ್ಲ,ಎಂಡಿ ಜಾಗಕ್ಕೆ ಐಎಎಸ್ ಅಧಿಕಾರಿಗಳ ಬದಲು ಎಂಜಿನಿಯರುಗಳನ್ನು ತಂದು ಕೂರಿಸುವುದು ವಿಶ್ವಬ್ಯಾಂಕ್ ನಿಯಮಾವಳಿಗಳಿಗೆ ವಿರುದ್ಧ.ಹೀಗಾಗಿ ನಾವು ಒಂದು ಹೆಜ್ಜೆ ಮುಂದಿಟ್ಟರೂ ತನ್ನ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಅಂತ ವಿಶ್ವಬ್ಯಾಂಕ್ ಭಾವಿಸಬಹುದು ಎಂದಿದ್ದಾರೆ.
ಅವರ ಮಾತು ಕೇಳಿ ಸಿದ್ಧರಾಮಯ್ಯ ಅವರು ಮೌನವಾದಾಗ ಜಾರ್ಜ್ ಅವರೇ ಮುಂದಾಗಿ,ಈ ಅಧಿಕಾರಿ ನಮಗೆ ಬೇಕಾದವರು ಎನ್ನುತ್ತೀರಿ.ಅವರಿಗೆ ಸೂಟ್ ಆಗುವ ಮತ್ತೊಂದು ಜಾಗ ನೋಡಿದರಾಯಿತು ಸಾರ್ ಎಂದರಂತೆ.

ಪ್ರಿಯಾಂಕ್ ಅವರಿಗಿದು ಪ್ರಿಯವಲ್ಲದ ಕೆಲಸ

ಈ ಮಧ್ಯೆ ಕರ್ನಾಟಕದ ಸಿಂಗಂ ಎಂಬ ಖ್ಯಾತಿಗೆ ಪಾತ್ರರಾಗಿರುವ ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ್ ಎಪಿಸೋಡು ಸಿದ್ಧರಾಮಯ್ಯ ಅವರ ಕಿಚನ್ ಕ್ಯಾಬಿನೆಟ್ಟಿಗೆ ಕಿಚಿಪಿಚಿ ಉಂಟು ಮಾಡಿದೆ.
ಅಂದ ಹಾಗೆ ಆರು ತಿಂಗಳ ಹಿಂದಷ್ಟೇ ರವಿ ಚನ್ನಣ್ಣವರ್ ಅವರು ಕಿಯೋನಿಕ್ಸ್ ಎಂಡಿಯಾಗಿ ನೇಮಕಗೊಂಡಿದ್ದರು.
ಆದರೆ ಅವರನ್ನು ಮೊನ್ನೆ ಇದ್ದಕ್ಕಿದ್ದಂತೆ ಆಂತರಿಕ ಭದ್ರತೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಹೀಗೆ ಅವರನ್ನು ಆಂತರಿಕ ಭದ್ರತಾ ವಿಭಾಗದ ಡಿಐಜಿ ಹುದ್ದೆಗೆ ವರ್ಗಾವಣೆ ಮಾಡಿ,ಅವರ ಜಾಗಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಮೆಂಬರ್ ಸೆಕ್ರೆಟರಿ ಆಗಿದ್ದ ಗಿರೀಶ್ ಅವರನ್ನು ತಂದು ಕೂರಿಸಲಾಗಿದೆ.
ಹೀಗೆ ಗಿರೀಶ್ ಅವರನ್ನು ಇಲ್ಲಿಗೆ ತಂದು ಕೂರಿಸುವುದರ ಹಿಂದೆ ಮತ್ತೊಂದು ಟ್ವಿಸ್ಟು ಇದೆ.ಅದೆಂದರೆ ಗಿರೀಶ್ ಅವರು ಇದುವರೆಗೆ ಕುಳಿತಿದ್ದ ಮಾಲಿನ್ಯ ನಿಯಂತ್ರಣ ಮಂಡಳಿಯ ಮೆಂಬರ್ ಸೆಕ್ರೆಟರಿ ಹುದ್ದೆಗೆ ಸೂರಿ ಪಾಯಲ್ ಎಂಬುವವರನ್ನು ತಂದು ಕೂರಿಸುವುದು ಸಿದ್ದರಾಮಯ್ಯ ಕಿಚನ್ ಕ್ಯಾಬಿನೆಟ್ಟಿನ ಲೆಕ್ಕಾಚಾರ.
ಆದರೆ ವಾಸ್ತವದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಮೆಂಬರ್ ಸೆಕ್ರೆಟರಿ ಆಗುವವರು ಐ.ಎಫ್.ಎಸ್ ಅಧಿಕಾರಿ ಆಗಿರಬೇಕು.ಆದರೆ ಸದರಿ ಪಾಯಲ್ ಐ.ಎಫ್.ಎಸ್ ಅಧಿಕಾರಿಯಲ್ಲ.
ಆದರೂ ಅವರನ್ನು ಮೆಂಬರ್ ಸೆಕ್ರೆಟರಿ ಮಾಡಲು ನಡೆದಿರುವ ಒಳಲೆಕ್ಕಾಚಾರಗಳು ಹಲವರ ಆಕ್ರೋಶಕ್ಕೆ ಕಾರಣವಾಗಿದೆಯಲ್ಲದೆ,ಇದರ ಬಗ್ಗೆ ಹಾಹಾಕಾರ ಏಳುವಂತೆ ಮಾಡಿದೆ.
ಹೀಗೆ ಪಾಯಲ್ ಅವರಿಗಾಗಿ ಗಿರೀಶ್ ಅವರು ಕಿಯೋನಿಕ್ಸ್ ಗೆ ವರ್ಗಾವಣೆಯಾಗಿ,ಕಿಯೋನಿಕ್ಸ್ ನಿಂದ ತಾವು ಎತ್ತಂಗಡಿಯಾದ ಬೆಳವಣಿಗೆಯಿಂದ ರವಿ ಚನ್ನಣ್ಣವರ್ ಮುನಿಸಿಕೊಂಡಿದ್ದಾರೆ.ಅಷ್ಟೇ ಅಲ್ಲ,ನೇರವಾಗಿ ಸಿ.ಎ.ಟಿ ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ.
ಈ ಬೆಳವಣಿಗೆ ಸಹಜವಾಗಿಯೇ ಐಟಿ-ಬಿಟಿ ಖಾತೆ ನೋಡಿಕೊಳ್ಳುವ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಇರುಸುಮುರಿಸುಂಟು ಮಾಡಿದೆಯಂತೆ.
ಅಂದ ಹಾಗೆ ಈ ಹಿಂದೆ 2013 ರಿಂದ 2018
ತನಕ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರಲ್ಲ?ಆಗೆಲ್ಲ ಅವರು ಆಡಿದ್ದೇ ವೇದ ವಾಕ್ಯ,ಮಾಡಿದ್ದೇ ಬ್ರಹ್ಮ ಲಿಖಿತ ಎಂಬಂತಿತ್ತು.ಹೀಗಾಗಿ ಅವರೇನೇ ಮಾಡಿದರೂ ಚಕಾರ ಎತ್ತುವವರು ಇರಲಿಲ್ಲ.
ಆದರೆ ಈಗ ಪರಿಸ್ಥಿತಿ ಬದಲಾಗಿದೆ.ಅವರು ಯಾವ ಮಂತ್ರಿಗಳ ಇಲಾಖೆಗೇ ಕೈ ಹಾಕಲಿ,ಅಲ್ಲಿಂದ ಅಸಮಾಧಾನ,ಸಿಟ್ಟು,ನಸನಸೆ ಹೊರಹೊಮ್ಮುತ್ತಿದೆ.
ಇದು ಸರಳ ಸಂಗತಿಯಂತೂ ಅಲ್ಲ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here