ಆ ಮಹಾದುರಂತ ದೇವೇಗೌಡರ ಹುಟ್ಟಿಗೆ ಮೂಲವಾಯಿತು

0
200

೧೯೨೮

ಆ ವರ್ಷ ಹರದನಹಳ್ಳಿಯ ರೈತ ದೊಡ್ಡೇಗೌಡರ ಬದುಕಿನಲ್ಲಿ ಮಹಾವಿಪ್ಲವ ಎದುರಾಗುತ್ತದೆ.೧೯೧೮-೧೯ ರಲ್ಲಿ ನಾಡನ್ನು ಕಾಡಿದ ಸಾಂಕ್ರಾಮಿಕ ಜ್ವರ ಹತ್ತು ವರ್ಷದ ನಂತರ ದೊಡ್ಡೇಗೌಡರ ಮನೆಯನ್ನು ಪ್ರವೇಶಿಸುತ್ತದೆ.ಹೀಗೆ ಪ್ರವೇಶಿಸಿದ ಜ್ವರ ಅವರ ಪತ್ನಿ ಈರಮ್ಮ ಮತ್ತು ಮೂವರು ಗಂಡು ಮಕ್ಕಳನ್ನು ಸಾವಿನ ಮನೆಗೆ ಕರೆದೊಯ್ಯುತ್ತದೆ.
ಹೀಗೆ ಪತ್ನಿ ಮತ್ತು ಮಕ್ಕಳನ್ನು ಕಳೆದುಕೊಂಡ ದೊಡ್ಡೇಗೌಡರು ಕಂಗಾಲಾಗುತ್ತಾರೆ.ಕಂಗಾಲಾಗಿ ಕುಳಿತ ಅವರ ಬದುಕು ಪುನ: ಹಳಿಯ ಮೇಲೆ ಬರಬೇಕಲ್ಲ?ಹೀಗಾಗಿ ತಂದೆ ಅಪ್ಪೇಗೌಡರು ಮತ್ತು ಸೋದರ ಮಾವ ಪುಟ್ಟೇಗೌಡರು,ದೊಡ್ಡೇಗೌಡರನ್ನು ಮರು ಮದುವೆಗೆ ಒತ್ತಾಯಿಸುತ್ತಾರೆ.
ಆದರೆ ಒಂದೇ ಏಟಿಗೆ ತಮ್ಮ ಸಂಸಾರವನ್ನು ಕಳೆದುಕೊಂಡ ದೊಡ್ಡೇಗೌಡರಿಗೆ ಮರು ಮದುವೆ ಎಂದರೆ ನಿರಾಸಕ್ತಿ.ಆದರೂ ಪುಟ್ಟೇಗೌಡರ ಸತತ ಒತ್ತಡ ಅವರು ಮರು ಮದುವೆಯಾಗಲು ಒಪ್ಪುವಂತೆ ಮಾಡುತ್ತದೆ.ಆಗ ಅವರು ಲಕ್ಷ್ಮೀದೇವಮ್ಮ ಅವರ ಕೈ ಹಿಡಿಯುತ್ತಾರೆ.
ಸಾವಿನ ನೆರಳನ್ನು ಕಂಡು ಹೆದರಿಕೊಂಡಿದ್ದ ದೊಡ್ಡೇಗೌಡರಿಗೆ ಮುಂದೆ ಈ ನೆರಳು ಸದಾ ಕಾಲ ಕಾಡುತ್ತದೆ.ಇಷ್ಟೆಲ್ಲದರ ಮಧ್ಯೆ ಈಶ್ವರ ದೇವಸ್ಥಾನಕ್ಕೆ ಸಲ್ಲಿಸುವ ಸೇವೆಯಿಂದ ಹಿಡಿದು ದೈವದ ಮೊರೆ ಹೋಗುವ ದಂಪತಿಗಳಿಗೆ ೧೯೩೩ ರ ಮೇ ೧೮ ರಂದು ಗಂಡು ಮಗು ಜನಿಸುತ್ತದೆ.ಈ ಮಗುವಿನ ಹೆಸರು_
ಹೆಚ್.ಡಿ.ದೇವೇಗೌಡ
ಒಂದು ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸುವ ಹೆಚ್.ಡಿ.ದೇವೇಗೌಡರು ಅಂಬೆಗಾಲಿಡುತ್ತಾ,ಎದ್ದು ಬಿದ್ದು ನಡೆಯುತ್ತಾ,ತಮ್ಮ ಹೆಜ್ಜೆಗಳನ್ನು ನೆಲಕ್ಕೆ ಬಲವಾಗಿ ಊರುತ್ತಾ ಬೆಳೆದು ನಿಲ್ಲುವ ಮತ್ತು ಶಾಸಕರಾಗಿ,ಪ್ರತಿಪಕ್ಷ ನಾಯಕರಾಗಿ,ಸಚಿವರಾಗಿ,ಮುಖ್ಯಮಂತ್ರಿಯಾಗಿ ಅಂತಿಮವಾಗಿ ದೇಶದ ಪ್ರಧಾನಮಂತ್ರಿ ಗದ್ದುಗೆಗೇರುವ ರೀತಿ ಇದೆಯಲ್ಲ?ಇದು ನಿಜಕ್ಕೂ ಅದ್ಭುತ ಮತ್ತು ಚರಿತ್ರಾರ್ಹ.
ಇಂತಹ ದೇವೇಗೌಡರ ಬದುಕನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಹಿರಿಯ ಪತ್ರಕರ್ತರಾದ ಸುಗತ ಶ್ರೀನಿವಾಸರಾಜು ಅವರು ಇಂಗ್ಲೀಷ್ ನಲ್ಲಿ ಫರೋಸ್ ಇನ್ ಎ ಫೀಲ್ಡ್ ಎಂಬ ಅದ್ಭುತ ಪುಸ್ತಕ ಬರೆದಿದ್ದಾರೆ.ಫರೋಸ್ ಇನ್ ಎ ಫೀಲ್ಡ್ ಎಂದರೆ ಹೊಲದಲ್ಲಿ ಕಾಣುವ ನೇಗಿಲ ಗೆರೆಗಳು ಎಂದರ್ಥ.ಹೀಗೆ ಸುಗತ ಶ್ರೀನಿವಾಸರಾಜು ಅವರು ಬರೆದ ಈ ಪುಸ್ತಕ ಇದೀಗ ಕನ್ನಡಕ್ಕೆ ತರ್ಜುಮೆಯಾಗಿದೆ.ರೋಜಿ ಡಿಸೋಜಾ ಅವರು ತರ್ಜುಮೆ ಮಾಡಿರುವ ರೀತಿ ಕೂಡಾ ಅನನ್ಯವಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಈ ಪುಸ್ತಕ ಹೆಚ್.ಡಿ.ದೇವೇಗೌಡರಿಗೆ ನ್ಯಾಯ ಒದಗಿಸಿದೆ.ಯಾಕೆಂದರೆ ಒಬ್ಬ ವ್ಯಕ್ತಿಯ ಬದುಕಿನಲ್ಲಿ ಅಪವಾದಗಳು ಸಹಜ.ಆದರೆ ದೇವೇಗೌಡರು ಬದುಕಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಅಪವಾದಗಳನ್ನು ಹೊತ್ತಿದ್ದಾರೆ.
೧೯೯೬ ರಲ್ಲಿ ಅವರು ಭಾರತದ ಪ್ರಧಾನಿಯಾದಾಗ ಒಂದು ಕುಹಕ ವಿಷಗಾಳಿಯಂತೆ ಹಬ್ಬಿತ್ತು.ದೇವೇಗೌಡರೇ ಪ್ರಧಾನಿಯಾದ ಮೇಲೆ ಈ ದೇಶದಲ್ಲಿ ಯಾರು ಬೇಕಾದರೂ ಪ್ರಧಾನಿಯಾಗಬಹುದು ಎಂಬುದು ಈ ಕುಹಕ.ದೇವೇಗೌಡರ ಬದುಕಿಗೆ ಅಪಾರ ಶ್ರಮ,ಜ್ಞಾನ,ಛಲ ಬಿಡದ ಹೋರಾಟದ ಕವಚವಿತ್ತು ಎಂಬುದನ್ನು ಗಮನಿಸಿದ್ದರೆ ಇಂತಹ ಕ್ರೌರ್ಯದ ಮಾತುಗಳು ಕೇಳಿ ಬರುತ್ತಿರಲಿಲ್ಲ.ಆದರೆ ಗೌಡರನ್ನು ಉದ್ದೇಶಪೂರ್ವಕವಾಗಿ ಹಣಿಯಲು ಬಯಸಿದ್ದ ಕುತ್ಸಿತ ಮನಸ್ಸುಗಳು ಇಂತಹ ಮಾತು ವಿಷಗಾಳಿಯಂತೆ ಹಬ್ಬಲು ಕಾರಣವಾದವು.
ಇಂತಹ ಅಪವಾದವನ್ನು ಒಂದು ಮಟ್ಟಿಗೆ ಕಡಿಮೆ ಮಾಡಲು ಈ ಪುಸ್ತಕ ನೆರವಾಗಿದೆ ಎಂಬುದೇ ಪತ್ರಕರ್ತರಾದ ಸುಗತ ಶ್ರೀನಿವಾಸರಾಜು ಅವರ ಹೆಗ್ಗಳಿಕೆ.ಜೀವನದುದ್ದ ಅಪವಾದಗಳ ಅಗ್ನಿಕುಂಡದಲ್ಲಿ ಮಿಂದ ದೇವೇಗೌಡರ ಮನಸ್ಸು ತಂಪಾಗಲು ಅವರು ಕಾರಣರಾಗಿದ್ದಾರೆ.ಅದೇ ಕಾಲಕ್ಕೆ ಅಪಾರ ಪರಿಶ್ರಮ,ಜ್ಞಾನ,ಹೋರಾಟದ ಛಲ ಮತ್ತು ಗುರಿಗಳಿದ್ದರೆ ವ್ಯಕ್ತಿ ಪ್ರಧಾನಮಂತ್ರಿಯಂತಹ ಉನ್ನತ ಹುದ್ದೆಯ ತನಕ ನಡೆದು ಹೋಗಲು ಸಾಧ್ಯ ಎಂಬುದನ್ನು ನಿರೂಪಿಸಿದ್ದಾರೆ.ಅದಕ್ಕಾಗಿ ಅವರಿಗೆ ಅಭಿನಂದನೆಗಳು ಸಲ್ಲಬೇಕು.

ಮೇಷ್ಟ್ರಾಗಿದ್ದ ಗೌಡ್ರು ಮಾಸ್ಟರ್ ಆಗಿದ್ದು

ಅಂದ ಹಾಗೆ ದೊಡ್ಡೇಗೌಡ-ಲಕ್ಷ್ಮಿದೇವಮ್ಮ ಅವರ ಮಗನಾಗಿ ಜನಿಸುವ ದೇವೇಗೌಡರು ಹಂತ ಹಂತವಾಗಿ ಬೆಳೆದು ನಿಲ್ಲುವ ಪರಿ ಅನನ್ಯವಾಗಿದೆ.ತಮ್ಮ ಹದಿನೇಳನೆ ವರ್ಷಕ್ಕೆ ಎಸ್.ಎಸ್.ಎಲ್.ಸಿ ಮುಗಿಸುವ ದೇವೇಗೌಡರು ಹೊಳೆನರಸೀಪುರದ ಜೋಡಿಗುಬ್ಬಿ ಗ್ರಾಮದ ಮಾಧ್ಯಮಿಕ ಶಾಲೆಯ ಶಿಕ್ಷಕರಾಗುತ್ತಾರೆ.
ಆದರೆ ನಾಲ್ಕೇ ತಿಂಗಳಲ್ಲಿ ಈ ಶಿಕ್ಷಕ ವೃತ್ತಿ ಅವರಿಗೆ ಬೇಸರ ತರಿಸುತ್ತದೆ.ಹಾಗಂತಲೇ ಹಾಸನದ ಲಕ್ಷ್ಮಮ್ಮ ವೆಂಕಟಸ್ವಾಮಿ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡಲು ಮುಂದಾಗುತ್ತಾರೆ.ಈ ಸಂದರ್ಭದಲ್ಲಿ ನಡೆದ ಒಂದು ಘಟನೆ ಅವರು ರಾಜಕೀಯ ಪ್ರವೇಶ ಮಾಡಲು ಪ್ರೇರೇಪಣೆ ನೀಡುತ್ತದೆ.
ಒಂದು ದಿನ ಹಾಕಿ ಆಡಿ ತೆರಳುತ್ತಿದ್ದ ದೇವೇಗೌಡರಿಗೆ ಒಂದು ಮಾತು ಕಿವಿಗೆ ಬೀಳುತ್ತದೆ.ಆ ಮಾತು ಆಡುವುದು ನೀಲಕಂಠರಾವ್ ಎಂಬ ವಿದ್ಯಾರ್ಥಿ.ನನ್ನ ವಿರುದ್ಧ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವ…ಮಗನಿಗೂ ದಮ್ಮಿಲ್ಲ ಎಂದು ಆತ ಆಡುವ ಮಾತು ದೇವೇಗೌಡರ ಕೋಪಕ್ಕೆ ಕಾರಣವಾಗುತ್ತದೆ.ಹಾಗಂತಲೇ ಸಿಟ್ಟಿನಿಂದ ತಮ್ಮ ಕೈಲಿದ್ದ ಹಾಕಿ ಸ್ಪಿಕ್ ಅನ್ನು ಅವರು ನೀಲಕಂಠರಾವ್ ಮೇಲೆ ಬೀಸುತ್ತಾರೆ.ಅವರು ಬೀಸಿದ ರಭಸ ಹೇಗಿರುತ್ತದೆಂದರೆ ಆ ಹಾಕಿ ಸ್ಪಿಕ್ ಮುರಿದೇ ಹೋಗುತ್ತದೆ.
ಈ ಘಟನೆ ತುಂಬ ವಿಕೋಪಕ್ಕೆ ಹೋಗದಿದ್ದರೂ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ದೇವೇಗೌಡರು ಸಕ್ರಿಯರಾಗಲು ಕಾರಣವಾಗುತ್ತದೆ.ಮತ್ತು ಬ್ರಾಹ್ಮಣೇತರ ಹುಡುಗರ ಮಧ್ಯೆ ಅವರು ಹೀರೋ ಆಗಲು ಕಾರಣವಾಗುತ್ತದೆ.ಈ ಪ್ರಭಾವಳಿಯ ನಡುವೆ ಚುನಾವಣೆಗೆ ನಿಲ್ಲುವ ಗೌಡರು ಸಹಜವಾಗಿ ಅದ್ದೂರಿ ಗೆಲುವು ಸಾಧಿಸುತ್ತಾರೆ.
ಈ ಕಾಲಘಟ್ಟದಲ್ಲಿ ವಿದ್ಯಾರ್ಥಿ ಸಂಘದ ಕಾರ್ಯಕ್ರಮಕ್ಕೆ ಅವರು ಆಹ್ವಾನಿಸುವ ಗಣ್ಯ ಅತಿಥಿಗಳ ಪೈಕಿ ಒಬ್ಬರು ಎ.ಜಿ.ರಾಮಚಂದ್ರರಾವ್.ಸಚಿವರೂ ಆಗಿದ್ದ ಅವರು ಹೊಳೆನರಸೀಪುರದ ಶಾಸಕರು ಕೂಡಾ ಆಗಿರುತ್ತಾರೆ.ಬ್ರಾಹ್ಮಣ ಸಮುದಾಯದ ರಾಮಚಂದ್ರರಾವ್ ಅವರು ಮುಂದೆ ಗೌಡರ ಮಾರ್ಗದರ್ಶಕರಾಗಿ ಮಹತ್ವದ ಪಾತ್ರ ವಹಿಸುವುದು ಅನನ್ಯವಾಗಿದೆ.
ಸರಿ,ಡಿಪ್ಲೊಮಾ ವ್ಯಾಸಂಗ ಮುಗಿಸಿದ ದೇವೇಗೌಡರು ಪಶ್ಚಿಮ ರೈಲ್ವೆಯಲ್ಲಿ ಕೆಲಸಕ್ಕೆ ಅರ್ಜಿ ಹಾಕುತ್ತಾರೆ.ಈ ಉದ್ಯೋಗಕ್ಕೆ ಆಯ್ಕೆಯೂ ಆಗುತ್ತಾರೆ.ಆದರೆ ಕೆಲಸಕ್ಕೆಂದು ಮಗ ದೂರದ ಗುಜರಾತ್‌ಗೆ ಹೊರಟು ನಿಂತಾಗ ತಂದೆ ದೊಡ್ಡೇಗೌಡರು ವಿರೋಧಿಸುತ್ತಾರೆ.ಮಗ ಇರುವ ಜಮೀನನ್ನು ನೋಡಿಕೊಂಡರೆ ಸಾಕು ಎಂಬುದು ಅವರ ಯೋಚನೆ.
ಹಾಗಂತಲೇ ಮಗ ಹೊರಟು ನಿಂತಾಗ ಮನೆಯ ಹೊಸ್ತಿಲಿಗೆ ಅಡ್ಡಲಾಗಿ ಮಲಗುವ ದೊಡ್ಡೇಗೌಡರು,ನನ್ನನ್ನು ದಾಟಿಕೊಂಡು ನೀನು ಕೆಲಸಕ್ಕೆ ಹೋಗು ಎನ್ನುತ್ತಾರೆ.ತಂದೆಯ ವಿರೋಧ ಮಗನನ್ನು ಬೆಚ್ಚಿ ಬೀಳಿಸುತ್ತದೆ ಮತ್ತು ಅನಿವಾರ್ಯವಾಗಿ ಗುಜರಾತ್ ತಟ ತಲುಪದಂತೆ ಮಾಡುತ್ತದೆ.
ಹೀಗಾಗಿ ದೇವೇಗೌಡರು ಸಿವಿಲ್ ಎಂಜಿನಿಯರ್ ಆಗಿ ಕೆಲಸ ಆರಂಭಿಸುತ್ತಾರೆ.ಸಣ್ಣ ಪುಟ್ಟ ಸಿವಿಲ್ ಕಾಮಗಾರಿಗಳನ್ನು ಹಿಡಿದುಕೊಂಡು ಜೀವನದ ರಥಕ್ಕೆ ಹೊಳಪು ನೀಡುವ ಪ್ರಯತ್ನ ಮಾಡುತ್ತಾರೆ.ಈ ಮಧ್ಯೆ ಗೌಡರ ಬದುಕಿಗೆ ಅನಿರೀಕ್ಷಿತ ತಿರುವು ನೀಡುವ ಘಟನೆಗಳು ನಡೆಯತೊಡಗುತ್ತವೆ.
ಇದಕ್ಕೆ ಮೂಲವಾಗುವುದು ೧೯೫೭ ರ ವಿಧಾನಸಭಾ ಚುನಾವಣೆ.ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದೇವೇಗೌಡರ ರಾಜಕೀಯ ಗುರು ಎ.ಜಿ.ರಾಮಚಂದ್ರರಾಯರು ಸೋಲುತ್ತಾರೆ.ಆ ಸಂದರ್ಭದಲ್ಲಿ ಗೆಲ್ಲುವವರು ಪ್ರಜಾಸೋಷಲಿಸ್ಟ್ ಪಾರ್ಟಿಯ ವೈ.ವೀರಪ್ಪ.
ಹೀಗೆ ಗೆದ್ದು ಬರುವ ವೈ.ವೀರಪ್ಪನವರು ಕೆಲವೇ ಕಾಲದಲ್ಲಿ ಎ.ಜಿ.ರಾಮಚಂದ್ರರಾಯರ ಅನುಯಾಯಿಗಳ ವಿರುದ್ಧ ತಿರುಗಿ ಬೀಳುತ್ತಾರೆ.ಒಂದು ಅನಾಮಧೇಯ ಪತ್ರವನ್ನು ಮುಂದಿಟ್ಟುಕೊಂಡು ಸಿವಿಲ್ ಕಾಮಗಾರಿ ನಡೆಸುತ್ತಿದ್ದ ದೇವೇಗೌಡರನ್ನು ಆರೋಪದ ಕೂಪಕ್ಕೆ ಬೀಳಿಸಲು ಮುಂದಾಗುತ್ತಾರೆ.ಪ್ರಕರಣ ಭ್ರಷ್ಟಾಚಾರ ನಿಗ್ರಹ ದಳದ ತೆಕ್ಕೆಗೆ ಹೋಗುತ್ತದೆ.
ಹೀಗೆ ಕಷ್ಟಕ್ಕೆ ಸಿಲುಕುವ ದೇವೇಗೌಡರ ಪರವಾಗಿ ನಿಲ್ಲಲು ಅವತ್ತು ವಿಧಾನಪರಿಷತ್ ಸದಸ್ಯರಾಗಿದ್ದ ಸೂರ್ಯ ನಾರಾಯಣ ಶೆಟ್ಟಿ ಮುಂದಾಗುತ್ತಾರೆ.ಆ ಸಂದರ್ಭದಲ್ಲಿ ಗೌಡರನ್ನು ಕರೆದುಕೊಂಡು ಬೆಂಗಳೂರಿಗೆ ಹೋಗುವ ಅವರು,ಅವತ್ತು ನಿಜಲಿಂಗಪ್ಪ ಅವರ ಸರ್ಕಾರದಲ್ಲಿ ಲೊಕೋಪಯೋಗಿ ಸಚಿವರಾಗಿದ್ದ ಹೆಚ್.ಎಂ.ಚನ್ನಬಸಪ್ಪ ಅವರ ಬಳಿ ಕರೆದುಕೊಂಡು ಹೋಗುತ್ತಾರೆ.
ಹೀಗೆ ಹೋದಾಗ ಚನ್ನಬಸಪ್ಪನವರ ಬಳಿ ದೇವೇಗೌಡರ ಪರವಾಗಿ ಮಾತನಾಡುವ ಸೂರ್ಯನಾರಾಯಣ ಶೆಟ್ಟಿಯವರು,ಉದ್ದೇಶಪೂರ್ವಕವಾಗಿ ಗೌಡರನ್ನು ಸುಳ್ಳು ಬಿಲ್ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎನ್ನುತ್ತಾರೆ.ಆದರೆ ಅವರ ಮಾತು ಕೇಳಿದ ಚನ್ನಬಸಪ್ಪನವರು ವ್ಯಂಗ್ಯವಾಗಿ:ನಿಜಲಿಂಗಪ್ಪ ಅವರ ಸರ್ಕಾರದಲ್ಲಿ ಖಾದಿ ಹಾಕಿಕೊಂಡು ಬರುವವರೆಲ್ಲ ಸುಳ್ಳು ಬಿಲ್ ಕೊಡುವುದರಲ್ಲಿ ಸಮರ್ಥರು ಎನ್ನುತ್ತಾರೆ.
ಚನ್ನಬಸಪ್ಪನವರ ಮಾತಿನಿಂದ ಕೋಪೋದ್ರಿಕ್ರರಾಗುವ ದೇವೇಗೌಡರು:ಒಂದು ವೇಳೆ ನಾನು ಖಾದಿ ಧರಿಸಿ ಬರುವ ಬದಲು ಕಾವಿ ಧರಿಸಿ ಬಂದಿದ್ದರೆ ಇನ್ನೂ ಹೆಚ್ಚು ಮರ್ಯಾದೆ ಕೊಡುತ್ತಿದ್ದಿರೇನೋ ಎನ್ನುತ್ತಾರೆ.ಆಗ ಮತ್ತಷ್ಟು ಕುಪಿತರಾಗುವ ಚನ್ನಬಸಪ್ಪ ಅಲ್ಲಿದ್ದ ಖುರ್ಚಿಯನ್ನು ಜೋರಾಗಿ ತಳ್ಳಿ,ನಿನ್ನ ಕತ್ತು ಹಿಡಿದು ಹೊರಗೆ ತಳ್ಳುತ್ತೇನೆ ನೋಡು ಎನ್ನುತ್ತಾರೆ.
ಆದರೆ ಬೆದರದ ಗೌಡರು:ನನ್ನ ಕತ್ತು ಹಿಡಿದು ತಳ್ಳಲು ಇದೇನು ನಿಮ್ಮ ಸ್ವಂತ ಮನೆಯಲ್ಲ.ಇದು ಜನರ ಮನೆ,ಚುನಾವಣೆ ಬರಲಿ,ಜನರೇ ನಿಮ್ಮನ್ನು ಓಡಿಸುತ್ತಾರೆ ಎಂದು ಹೇಳಿ ಹೊರನಡೆಯುತ್ತಾರೆ.
ಮುಂದೆ ೧೯೬೦ ರಲ್ಲಿ ತಾಲ್ಲೂಕು ಬೋರ್ಡ್ ಸದಸ್ಯರಾಗುವ ದೇವೇಗೌಡರು ಹೊಳೆನರಸೀಪುರ ತಾಲ್ಲೂಕಿನಲ್ಲಿ ಕ್ರಮೇಣವಾಗಿ ಬೆಳೆಯತೊಡಗುತ್ತಾರೆ.೧೯೬೨ ರ ವಿಧಾನಸಭಾ ಚುನಾವಣೆ ಎದುರಾದಾಗ ಒಂದು ಅನಿರೀಕ್ಷಿತ ಘಟನೆ ದೇವೇಗೌಡರನ್ನು ಮುಂದೆ ತಳ್ಳುತ್ತದೆ.ಅದೆಂದರೆ,ಈ ಚುನಾವಣೆಯಲ್ಲಿ ಸ್ಪರ್ಧಿಸಲು ಶಾಸಕರಾಗಿದ್ದ ಎ.ಜಿ.ರಾಮಚಂದ್ರರಾಯರು ವಯಸ್ಸಿನ ಕಾರಣದಿಂದ ಹಿಂದೇಟು ಹೊಡೆಯುತ್ತಾರೆ.
ಪರಿಣಾಮವಾಗಿ ದೇವೇಗೌಡರು ಚುನಾವಣೆಯ ಕಣಕ್ಕಿಳಿಯುವುದು ಅನಿವಾರ್ಯವಾಗುತ್ತದೆ.ರಾಮಚಂದ್ರರಾಯರು ಕೂಡಾ ತಮ್ಮ ಶಿಷ್ಯನಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸಲು ಬಯಸುತ್ತಾರೆ.ಮುಂದೆ ತಾಲ್ಲೂಕು,ಜಿಲ್ಲಾ ಮಟ್ಟದಿಂದ ಕಾಂಗ್ರೆಸ್ ಟಿಕೆಟ್‌ಗೆ ದೇವೇಗೌಡರ ಹೆಸರು ಶಿಫಾರಸ್ಸಾಗುತ್ತದೆ.ಬೆಂಗಳೂರು ತಲುಪುತ್ತದೆ.ಕೊನೆಗೆ ಅಲ್ಲಿಂದಲೂ ಅವಿರೋಧವಾಗಿ ದಿಲ್ಲಿಗೆ ಶಿಫಾರಸ್ಸಾಗುತ್ತದೆ.
ಆದರೆ ಈ ರೀತಿ ದಿಲ್ಲಿಗೆ ಹೋದ ದೇವೇಗೌಡರ ಹೆಸರು ಅಂತಿಮಪಟ್ಟಿಯಲ್ಲಿ ಇರುವುದಿಲ್ಲ.ಬದಲಿಗೆ ಹೊಳೆನರಸೀಪುರದಿಂದ ಕಾಂಗ್ರೆಸ್ ಪಕ್ಷದ ಟಿಕೇಟನ್ನು ದೊಡ್ಡೇಗೌಡ (ದೇವೇಗೌಡರ ತಂದೆಯಲ್ಲ)ಎಂಬುವವರಿಗೆ ಕೊಡಲಾಗಿರುತ್ತದೆ.ಅಂದ ಹಾಗೆ ತಮಗೆ ಟಿಕೆಟ್ ತಪ್ಪಲು ನಿಜಲಿಂಗಪ್ಪನವರು ಕಾರಣ ಎಂಬುದು ದೇವೇಗೌಡರ ಅನುಮಾನ.
ಯಾಕೆಂದರೆ ಅಷ್ಟೊತ್ತಿಗಾಗಲೇ ರಾಜ್ಯ ಕಾಂಗ್ರೆಸ್ ನಲ್ಲಿ ಎರಡು ಗುಂಪುಗಳು ಮೇಲೆದ್ದಿರುತ್ತವೆ.ಒಂದು ಗುಂಪಿಗೆ ನಿಜಲಿಂಗಪ್ಪ ನಾಯಕರು.ಮತ್ತೊಂದು ಗುಂಪಿಗೆ ಬಿ.ಡಿ.ಜತ್ತಿ ನಾಯಕರು.ದೇವೇಗೌಡರ ಗುರುಗಳಾದ ಎ.ಜಿ.ರಾಮಚಂದ್ರರಾಯರು ಬಿ.ಡಿ.ಜತ್ತಿ ಅವರ ಕ್ಯಾಂಪಿನವರು.ಹೀಗಾಗಿ ಜತ್ತಿ ಕ್ಯಾಂಪಿನ ತಮಗೆ ಟಿಕೆಟ್ ತಪ್ಪಲು ನಿಜಲಿಂಗಪ್ಪನವರು ಕಾರಣ ಎಂದು ದೇವೇಗೌಡರು ಆಕ್ರೋಶಗೊಳ್ಳುತ್ತಾರೆ.
ಹೀಗಾಗಿ ಕಾಂಗ್ರೆಸ್ ಟಿಕೆಟ್ ಸಿಗದೆ ಇದ್ದರೂ ಪಕ್ಷೇತರರಾಗಿ ಸ್ಪರ್ಧಿಸಲು ಅವರು ನಿರ್ಧರಿಸಿದಾಗ ಅವರಿಗೆ ರಾಮಚಂದ್ರರಾಯರ ಆಶೀರ್ವಾದ ಸಿಗುತ್ತದೆ.ಅಂದ ಹಾಗೆ ರಾಮಚಂದ್ರರಾಯರು ಬಹಿರಂಗವಾಗಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ದ ಪ್ರಚಾರ ಮಾಡಲಾರರು.ಆದರೆ ಪ್ರಚಾರ ಮಾಡದಿದ್ದರೂ ಅವರಿಗೆ ಶಿಷ್ಯ ದೇವೇಗೌಡರ ಬಗ್ಗೆ ಒಲವು.ಈ ಬೆಳವಣಿಗೆ ಕೂಡಾ ಹೊಳೆನರಸೀಪುರದಲ್ಲಿ ದೊಡ್ಡ ಸುದ್ದಿಯಾಗುತ್ತದೆ.ಮತ್ತು ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ.ದೊಡ್ಡೇಗೌಡರ ಪರ ಒಲವು ಇಲ್ಲ ಎಂಬ ಸಂದೇಶ ರವಾನೆಯಾಗುತ್ತದೆ.
ಮುಂದೆ ಚುನಾವಣೆ ನಡೆದಾಗ ದೇವೇಗೌಡರು ಹನ್ನೆರಡು ಸಾವಿರಕ್ಕಿಂತ ಅಧಿಕ ಮತ ಪಡೆದು ಗೆದ್ದರೆ,ಅವರ ಎದುರಾಳಿ ಪ್ರಜಾಸೋಷಲಿಸ್ಟ್ ಪಾರ್ಟಿಯ ವೈ.ವೀರಪ್ಪನವರು ಆರು ಸಾವಿರ ಚಿಲ್ಲರೆ ಮತಗಳನ್ನು ಪಡೆದು ಸೋಲು ಅನುಭವಿಸುತ್ತಾರೆ.
ಹೀಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸುವ ದೇವೇಗೌಡರು ಮುಂದೆ ೧೯೬೯ ರ ಸುಮಾರಿಗೆ ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ವಿಭಜನೆಯಾದಾಗ ನಿಜಲಿಂಗಪ್ಪ ಅವರ ನೇತೃತ್ವದ ಸಂಸ್ಥಾ ಕಾಂಗ್ರೆಸ್ ಸೇರುತ್ತಾರೆ.೧೯೭೨ ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಿಜಲಿಂಗಪ್ಪ ಅವರ ಶಿಷ್ಯರಾದ ರಾಮಕೃಷ್ಣ ಹೆಗಡೆ ಮತ್ತು ವೀರೇಂದ್ರಪಾಟೀಲರು ಸ್ಪರ್ಧಿಸದ ಪರಿಣಾಮವಾಗಿ ಪಕ್ಷದ ಶಾಸಕಾಂಗ ನಾಯಕರಾಗಿ ದೇವರಾಜ ಅರಸರಂತಹ ಬಲಾಢ್ಯ ಮುಖ್ಯಮಂತ್ರಿಯ ಎದುರು ವಿರೋಧ ಪಕ್ಷದ ನಾಯಕರಾಗಿ ಕೂರುವ ಅವಕಾಶ ಪಡೆಯುತ್ತಾರೆ.
ಹೀಗೆ ವಿರೋಧ ಪಕ್ಷದ ನಾಯಕರಾದ ದೇವೇಗೌಡರು ಹೆಜ್ಜೆ ಹೆಜ್ಜೆಗೂ ಅರಸರ ವಿರುದ್ಧ ಮುಗಿಬೀಳುವ ರೀತಿ ಇಡೀ ರಾಜ್ಯದ ಗಮನ ಸೆಳೆಯುತ್ತದೆ.ಅಷ್ಟೇ ಅಲ್ಲ,ಮುಂದೆ ಸಂಸ್ಥಾ ಕಾಂಗ್ರೆಸ್ ಜನತಾ ಪಕ್ಷದ ರೂಪು ಪಡೆದು,೧೯೭೮ ರಲ್ಲಿ ದೇವೇಗೌಡರು ಅದರ ರಾಜ್ಯಾಧ್ಯಕ್ಷರಾದಾಗ ಇನ್ನೇನು ಗೌಡರು ಮುಖ್ಯಮಂತ್ರಿ ಹುದ್ದೆಗೇರುವ ಘಳಿಗೆ ಸನ್ನಿಹಿತವಾಯಿತು ಎಂಬ ಭಾವನೆ ವ್ಯಾಪಕವಾಗುತ್ತದೆ.
ಆದರೆ ೧೯೭೮ ರ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ಪರವಾಗಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಸಿದ್ಧ ಮಾಡಿ ದಿಲ್ಲಿಗೆ ಕಳಿಸಿದ ನಂತರ ಆಟ ನಡೆಯುತ್ತದೆ.ಆಗ ದಿಲ್ಲಿಯಲ್ಲಿ ಪ್ರಭಾವಿಯಾಗಿದ್ದ ರಾಮಕೃಷ್ಣ ಹೆಗಡೆಯವರ ಕೈವಾಡದಿಂದ ದಿಲ್ಲಿಗೆ ರವಾನೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಲವರ ಹೆಸರುಗಳು ಕಾಣೆಯಾಗುತ್ತವೆ.ಹೀಗೆ ತಾವು ಕಳಿಸಿದ ಪಟ್ಟಿ ಬದಲಾಗಿದ್ದಕ್ಕೆ ಕಾರಣವೇನು ಅನ್ನುವುದು ಗೊತ್ತಿದ್ದರೂ ಅದನ್ನು ಧ್ವನಿ ಎತ್ತಿ ಹೇಳುವ ಪರಿಸ್ಥಿತಿಯಲ್ಲಿ ದೇವೇಗೌಡರು ಇರುವುದಿಲ್ಲ.
ಮುಂದೆ ಚುನಾವಣೆ ನಡೆದು ಫಲಿತಾಂಶ ಬಂದಾಗ ಅರಸರ ನೇತೃತ್ವದ ಕಾಂಗ್ರೆಸ್ ಗೆದ್ದು,ಜನತಾ ಪಕ್ಷ ಸೋಲು ಅನುಭವಿಸುತ್ತದೆ.ಈ ಬೆಳವಣಿಗೆ ದೇವೇಗೌಡರನ್ನು ಖಿನ್ನರಾಗಿಸುವುದಷ್ಟೇ ಅಲ್ಲ,ರಾಜಕಾರಣದ ಬಗ್ಗೆ ಆಸಕ್ತಿ ಕಳೆದುಕೊಂಡು ಊರಲ್ಲಿದ್ದ ಹೊಲಗದ್ದೆ ನೋಡಿಕೊಳ್ಳುವ ಮನ:ಸ್ಥಿತಿಗೆ ತಳ್ಳುತ್ತದೆ.

ಹೆಗಡೆ ಮುಖ್ಯಮಂತ್ರಿಯಾದ ಕತೆ

ಮುಂದೆ ೧೯೮೩ ರ ವಿಧಾನಸಭಾ ಚುನಾವಣೆಯಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಪಕ್ಷ ಸೋಲು ಅನುಭವಿಸಿ ಜನತಾ ಪಕ್ಷದ ನೇತೃತ್ವದಲ್ಲಿ ಕ್ರಾಂತಿರಂಗ ಮತ್ತಿತರ ಶಕ್ತಿಗಳ ಬೆಂಬಲದೊಂದಿಗೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವುದು ಖಚಿತವಾದಾಗ ಸಹಜವಾಗಿಯೇ ಮೂರು ಮಂದಿ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿರುತ್ತಾರೆ.
ಈ ಪೈಕಿ ದೇವೇಗೌಡರು ಒಬ್ಬರಾದರೆ,ಮತ್ತೊಬ್ಬರು ಎಸ್.ಆರ್.ಬೊಮ್ಮಾಯಿ.ಇನ್ನೊಬ್ಬರು ಕ್ರಾಂತಿರಂಗದ ನಾಯಕರಾದ ಎಸ್.ಬಂಗಾರಪ್ಪ.ಆದರೆ ಈ ಸಂದರ್ಭದಲ್ಲಿ ಯಂಗ್ ಟರ್ಕ್ ಖ್ಯಾತಿಯ ಚಂದ್ರಶೇಖರ್ ಅವರು ದೇವೇಗೌಡರಿಗೆ ಒಂದು ನಿರ್ದೇಶನ ನೀಡಿ,ರಾಮಕೃಷ್ಣ ಹೆಗಡೆ ಅವರಿಗೆ ಮುಖ್ಯಮಂತ್ರಿ ಹುದ್ದೆ ದಕ್ಕಲು ಕಾರಣರಾಗುತ್ತಾರೆ.
ಸಹಜವಾಗಿ ದೇವೇಗೌಡರಿಗೆ ನಿರಾಶೆಯಾದರೂ,ಚಂದ್ರಶೇಖರ್ ಅವರೆಂದರೆ ಅವರಿಗೆ ತುಂಬು ಗೌರವ.ಹೀಗಾಗಿ ತಾವೇ ಮುಂದಾಗಿ ಹೆಗಡೆ ಅವರ ಮನೆಗೆ ಹೋಗಿ ಮುಖ್ಯಮಂತ್ರಿ ಹುದ್ದೆಯ ರೇಸಿಗೆ ಅಣಿಯಾಗಲು ಹೇಳುತ್ತಾರೆ.ಅಷ್ಟೇ ಅಲ್ಲ,ಮುಂದೆ ಮುಖ್ಯಮಂತ್ರಿಯಾಗುವ ಹೆಗಡೆ ಅವರಿಗೆ ಕ್ಷೇತ್ರ ಇಲ್ಲದೆ ಇರುವುದರಿಂದ ಪಿ.ಜಿ.ಆರ್.ಸಿಂಧಿಯಾ ಅವರ ಸಹಕಾರ ಪಡೆದು,ಕನಕಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲುವಂತೆಯೂ ಮಾಡುತ್ತಾರೆ.
೧೯೮೩ ರಲ್ಲಿ ಹೆಗಡೆ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಜನತಾ ಸರ್ಕಾರ ಅತ್ಯುತ್ತಮ ಸರ್ಕಾರ.೧೯೮೫ ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಅದು ಮರು ಆಯ್ಕೆಯಾಗಿ ಅಧಿಕಾರ ಹಿಡಿದಿದ್ದಕ್ಕೆ ಅದಕ್ಕಿದ್ದ ಒಳ್ಳೆಯ ಹೆಸರೇ ಕಾರಣ.ಆದರೆ ಇಂತಹ ಸರ್ಕಾರದಲ್ಲಿ ಒಡಕಿನ ಬೀಜಗಳು ಬೀಳುತ್ತವೆ.ಹೆಗಡೆ ಮತ್ತು ದೇವೇಗೌಡರ ನಡುವೆ ಅಪನಂಬಿಕೆ ಕೆಲಸ ಮಾಡುತ್ತಾ ತಾರಕಕ್ಕೇರುತ್ತದೆ.
ಈ ಕಚ್ಚಾಟದಲ್ಲಿ ದೇವೇಗೌಡರೂ ನರಕ ಅನುಭವಿಸುತ್ತಾರೆ.ಟೆಲಿಫೋನ್ ಕದ್ದಾಲಿಕೆಯ ಪ್ರಕರಣಕ್ಕೆ ಸಿಲುಕಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಹುದ್ದೆಯನ್ನೇ ಕಳೆದುಕೊಳ್ಳುತ್ತಾರೆ.ಪರಿಣಾಮ?ಹೆಗಡೆ ರಾಜೀನಾಮೆಯ ನಂತರ ಮುಖ್ಯಮಂತ್ರಿಯಾದ ಎಸ್.ಆರ್.ಬೊಮ್ಮಾಯಿ ಬಹುಕಾಲ ಗದ್ದುಗೆಯ ಮೇಲೆ ಉಳಿಯುವುದಿಲ್ಲ.
ಹೀಗೆ ಸರ್ಕಾರ ಉರುಳಿದ ನಂತರ ೧೯೮೯ ರಲ್ಲಿ ನಡೆಯುವ ಚುನಾವಣೆಯಲ್ಲಿ ದೇವೇಗೌಡರು ಸೋಲುತ್ತಾರೆ.ಆನಂತರದ ಎರಡು ವರ್ಷ ಲಿಟರಲಿ,ದೇವೇಗೌಡರದು ಅಜ್ಞಾತ ವಾಸ.ಕುಟುಂಬದವರಿಂದಲೂ ದೂರವಾಗಿ ಬೆಂಗಳೂರಿನ ಲೋಯರ್ ಆರ್ಚರ್ಡ್ ಪ್ಯಾಲೇಸ್ ಬಳಿ ಒಂದು ಸಣ್ಣ ಮನೆ ಮಾಡುವ ಗೌಡರು ಅಕ್ಷರಶ: ಏಕಾಂಗಿ.
ಈ ಸಂದರ್ಭದಲ್ಲಿ ಅವರಿಗೆ ಅಲ್ಲಿದ್ದ ಮಹಾಲಕ್ಷ್ಮಿ ದೇವಾಲಯವೇ ನೆಮ್ಮದಿಯ ತಾಣ.ದಿನವೂ ಹೋಗಿ ತಾಯಿಯ ಸಮ್ಮುಖದಲ್ಲಿ ಕೂರುವ,ಸಮಯ ಕಳೆಯುವ ದೇವೇಗೌಡರಿಗೆ ಒಂದು ದಿನ ಉದ್ಯಮಿಯೊಬ್ಬರು ಭೇಟಿಯಾಗುತ್ತಾರೆ.ಅಧಿಕಾರದಲ್ಲಿದ್ದಾಗ ದೇವೇಗೌಡರು ಮಾಡಿದ ಒಂದು ಸಹಾಯವನ್ನು ನೆನಪಿಸಿಕೊಂಡು ಬರುವ ಅವರು,೧೯೮೯ ರಲ್ಲಿ ಜನತಾದಳ ಒಡೆದಾಗ ದೇವೇಗೌಡರು ಕಟ್ಟಿದ ಪಕ್ಷವನ್ನು ಪುನರುಜ್ಜೀವನಗೊಳಿಸಲು ತಿಂಗಳಿಗೆ ಇಂತಿಷ್ಟು ನೆರವು ನೀಡುವುದಾಗಿ ಹೇಳುತ್ತಾರೆ.
ಹೀಗೆ ನೆರವಿನ ಹಸ್ತಗಳು ಕೈ ಮುಂದು ಮಾಡಿದ ಕಾರಣದಿಂದ ದೇವೇಗೌಡರು ಪುನ: ಎದ್ದು ನಿಲ್ಲುತ್ತಾರೆ.೧೯೯೧ ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಲೋಕಸಭೆ ಪ್ರವೇಶಿಸುತ್ತಾರೆ.ಅಲ್ಲಿಂದ ಮುಂದಿನ ಆರು ವರ್ಷಗಳ ಕಾಲ ದೇವೇಗೌಡರ ಬದುಕಿನಲ್ಲಿ ಒಂದಕ್ಕಿಂತ ಒಂದು ವಿಸ್ಮಯಗಳು ನಡೆಯುತ್ತವೆ.

ಮುಖ್ಯಮಂತ್ರಿ ಹುದ್ದೆ ಮತ್ತು ಪ್ರಧಾನಿ ಗದ್ದುಗೆ

ಈ ಮಧ್ಯೆ ಹೆಗಡೆ-ದೇವೇಗೌಡರು ದೂರವಾದ ಬೆಳವಣಿಗೆಯಿಂದ ಜನತಾದಳ ಅಧಿಕಾರ ಕಳೆದುಕೊಂಡಿತು ಎಂಬ ಭಾವನೆ ಅವರಿಬ್ಬರನ್ನು ಸೇರಿಸುವ ಪ್ರಯತ್ನವಾಗಿ ಪರಿವರ್ತನೆಯಾಗುತ್ತದೆ.ಜೀವರಾಜ್ ಆಳ್ವ,ಬಿ.ಎಲ್.ಶಂಕರ್ ಸೇರಿದಂತೆ ಹಲವರ ಪ್ರಯತ್ನ ಯಶಸ್ವಿಯೂ ಆಗಿ ಹೆಗಡೆ-ದೇವೇಗೌಡರು ಒಂದಾಗುತ್ತಾರೆ.
ಇದರ ಫಲವಾಗಿ ೧೯೯೪ ರಲ್ಲಿ ಜನತಾದಳ ಪುನ: ಅಧಿಕಾರಕ್ಕೆ ಬರುತ್ತದೆ.ಈ ಸಂದರ್ಭದಲ್ಲಿ ಸಹಜವಾಗಿ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಹುದ್ದೆಗೆ ಸಹಜ ಆಯ್ಕೆಯಾದರೂ ರಾಮಕೃಷ್ಣ ಹೆಗಡೆ ಹೊಸ ಆಟ ಹಾಕುತ್ತಾರೆ.ಶಾಸಕಾಂಗ ಪಕ್ಷದಲ್ಲಿ ಬಹುಮತ ಇರುವವರು ಮುಖ್ಯಮಂತ್ರಿಯಾಗಬೇಕು ಎಂಬುದು ಅವರ ವರಸೆ.
ಆದರೆ ಶಾಸಕಾಂಗ ಪಕ್ಷದಲ್ಲಿ ಹೆಚ್ಚಿನ ಶಾಸಕರು ದೇವೇಗೌಡರಿಗೆ ಬೆಂಬಲ ನೀಡುತ್ತಾರೆ.ಈ ಸಂದರ್ಭದಲ್ಲಿ ಶಾಸಕಾಂಗ ಸಭೆ ನಡೆಯುತ್ತಿದ್ದ ವಿಧಾನಸೌಧದ ಸುತ್ತ ಭಾರೀ ಗದ್ದಲ ಶುರುವಾಗುವುದರಿಂದ ದೇವೇಗೌಡರು ತರಾತುರಿಯಲ್ಲಿ ರಾಜಭವನಕ್ಕೆ ಹೋಗಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಳ್ಳಬೇಕಾಗುತ್ತದೆ.
ಅರ್ಥಾತ್,ಜನತಾದಳ ಅಧಿಕಾರಕ್ಕೆ ಬಂದರೂ ಹೆಗಡೆ-ದೇವೇಗೌಡರ ನಡುವಣ ವೈಮನಸ್ಯ ಮುಂದುವರಿಯುತ್ತದೆ.ಆದರೆ ಮುಖ್ಯಮಂತ್ರಿಯಾದ ನಂತರ ದೇವೇಗೌಡರು ಸುಭದ್ರ ಹಿಡಿತ ಸಾಧಿಸುವುದರಿಂದ ಅವರ ಸರ್ಕಾರ ಸುಗಮವಾಗಿ ಮುನ್ನಡೆಯುತ್ತದೆ.
ಈ ಕಾಲಘಟ್ಟದಲ್ಲಿ ದೇವೇಗೌಡರಿಗಿದ್ದ ಆಸೆ ಒಂದೇ.ಅದೆಂದರೆ ದೇಶದಲ್ಲಿ ಅತಿ ಸುಧೀರ್ಘ ಕಾಲ ಮುಖ್ಯಮಂತ್ರಿಯಾಗಿದ್ದ ಖ್ಯಾತಿಯ ಪಶ್ಚಿಮ ಬಂಗಾಳದ ಜ್ಯೋತಿಬಸು ಅವರ ರೀತಿಯಲ್ಲೇ ಮುನ್ನಡೆಯುವುದು ಗೌಡರ ಕನಸು.ಆದರೆ ಗೌಡರ ಎಣಿಕೆ ಒಂದಾದರೆ,ವಿಧಿಯ ಎಣಿಕೆ ಮತ್ತೊಂದಾಗಿತ್ತು.
೧೯೯೬ ರಲ್ಲಿ ಲೋಕಸಭೆ ಚುನಾವಣೆಗಳು ನಡೆದಾಗ ದೇವೇಗೌಡರ ನೇತೃತ್ವದ ಜನತಾದಳ ಕರ್ನಾಟಕದಲ್ಲಿ ಹದಿನಾರು ಸೀಟುಗಳನ್ನು ಗೆದ್ದುಕೊಂಡಿತ್ತು.ಜನತಾದಳ ರಾಷ್ಟ್ರಮಟ್ಟದಲ್ಲಿ ಯುನೈಟೆಡ್ ಫ್ರಂಟ್ ಭಾಗ.ಆ ಸಂದರ್ಭದಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಲೋಕಸಭೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರಿಂದ ರಾಷ್ಟ್ರಪತಿಗಳು ಅವರನ್ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಕರೆಯುತ್ತಾರೆ.
ಆ ಸಂದರ್ಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೂ ವಾಜಪೇಯಿ ಅವರಿಗೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ.ಹೀಗಾಗಿ ಹದಿಮೂರು ದಿನಗಳ ಬಿಜೆಪಿ ಸರ್ಕಾರ ಪತನವಾದ ನಂತರ ಯುನೈಟೆಡ್ ಪ್ರಂಟ್‌ಗೆ ಸರ್ಕಾರ ರಚಿಸುವ ಅವಕಾಶ ಲಭ್ಯವಾಗುತ್ತದೆ.
ಈ ಮಧ್ಯೆ ನಡೆಯುವ ಒಂದು ಘಟನೆ ದೇವೇಗೌಡರನ್ನು ಪ್ರಧಾನಿ ಹುದ್ದೆಯ ತನಕ ಕರೆದುಕೊಂಡು ಹೋಗುತ್ತದೆ.ಹಾಗೆ ನೋಡಿದರೆ ಯುನೈಟೆಡ್ ಫ್ರಂಟ್‌ನ ನಾಯಕರಾಗಿ,ಪ್ರಧಾನಿಯಾಗಲು ಮೊದಲ ಅವಕಾಶ ಹೋಗುವುದು ವಿ.ಪಿ.ಸಿಂಗ್ ಅವರ ಬಳಿ.ಈ ಹಿಂದೆ ಪ್ರಧಾನಿಯಾಗಿದ್ದ ವಿ.ಪಿ.ಸಿಂಗ್ ಅವರ ಮನವೊಲಿಸಲು ಹೋಗುವ ತಂಡದಲ್ಲಿ ದೇವೇಗೌಡರೂ ಇರುತ್ತಾರೆ.
ಆದರೆ ಮನೆಗೆ ಹೋದ ನಿಯೋಗ ನಿರಾಸೆಯಿಂದ ಹಿಂದೆ ಬರಬೇಕಾಗುತ್ತದೆ.ಕಾರಣ?ಅದಾಗಲೇ ಎರಡು ದಿನಕ್ಕೊಮ್ಮೆ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ ವಿ.ಪಿ.ಸಿಂಗ್ ಅವರಿಗೆ ಪ್ರಧಾನಿ ಹುದ್ದೆಯನನು ಒಪ್ಪಿಕೊಳ್ಳುವ ಮನಸ್ಸಿರುವುದಿಲ್ಲ.ಹೀಗಾಗಿ ನಿಯೋಗದ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಾರೆ.
ಇದಾದ ನಂತರ ಪ್ರಧಾನಿ ಹುದ್ದೆಯ ಅವಕಾಶ ರೆಕ್ಕೆ ಅಲುಗಾಡಿಸುತ್ತಾ ಕಮ್ಯೂನಿಸ್ಟ್ ನಾಯಕ ಜ್ಯೋತಿ ಬಸು ಬಳಿ ಹೋಗುತ್ತದೆ.ಆದರೆ ಬಸು ಪ್ರಧಾನಿಯಾಗಲು ಪಕ್ಷದ ಪಾಲಿಟ್ ಬ್ಯೂರೋ ಒಪ್ಪುವುದಿಲ್ಲ.ಈ ಹಂತದಲ್ಲಿ ಬಸು ಅವರು:ಪ್ರಧಾನಿ ಹುದ್ದೆಯ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಾಗಿ ಎಂದು ದೇವೇಗೌಡರಿಗೆ ಹೇಳುತ್ತಾರೆ.
ಬಸು ಅವರ ಮಾತಿನಿಂದ ಧಿಗ್ಭ್ರಮೆಗೊಳ್ಳುವ ದೇವೇಗೌಡರು:
ನಾನು ನಿಮ್ಮಂತೆ ಸುಧೀರ್ಘ ಕಾಲ ಮುಖ್ಯಮಂತ್ರಿಯಾಗಲು ಬಯಸಿದ್ದೇನೆ.ದಯವಿಟ್ಟು ಈ ಹೊಣೆಗಾರಿಕೆ ನನಗೆ ಬೇಡ ಎಂದು ಪರಿಪರಿಯಾಗಿ ಹೇಳುತ್ತಾರೆ.ಆದರೆ ಜ್ಯೋತಿ ಬಸು ಇದನ್ನು ಒಪ್ಪುವುದಿಲ್ಲ.ಬದಲಿಗೆ,ನಾವು ವಾಜಪೇಯಿ ಅವರಿಗೆ ಪರ್ಯಾಯವಾದ ಒಬ್ಬ ನಾಯಕ ಯುನೈಟೆಡ್ ಫ್ರಂಟ್ ನಲ್ಲಿಲ್ಲ ಎಂದು ಹೊರಗೆ ಹೋಗಿ ಹೇಳೋಣವಾ?ಎಂದು ಪ್ರಶ್ನಿಸುತ್ತಾರೆ.
ಹೀಗೆ ಹಲವು ಬೆಳವಣಿಗೆಗಳು ನಡೆದು ಅಂತಿಮವಾಗಿ ದೇವೇಗೌಡರು ಪ್ರಧಾನಿಯಾಗಲು ಒಪ್ಪಬೇಕಾಗುತ್ತದೆ.
ಇದಾದ ನಂತರ ಒಂದರ ಹಿಂದೊಂದರಂತೆ ನಡೆದ ಬೆಳವಣಿಗೆಗಳ ನಂತರ 1996 ರ ಜೂನ್ 1 ರಂದು ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದೇವೇಗೌಡರು ತಮ್ಮ ಪ್ರಾಮಾಣಿಕ ಆಡಳಿತದಿಂದ ದೇಶದ ಗಮನ ಸೆಳೆಯುತ್ತಾರೆ.
ತಮ್ಮ ಸುತ್ತ ಟಿ.ಆರ್.ಸತೀಶ್ ಚಂದ್ರನ್,ಮೀನಾಕ್ಷಿ ಸುಂದರಂ,ಬಿ.ಎಸ್.ಯುಗಂಧರ್ ಸೇರಿದಂತೆ ಅತ್ಯಂತ ದಕ್ಷ ಅಧಿಕಾರಿಗಳ ಪಡೆಯನ್ನು ಇರಿಸಿಕೊಳ್ಳುವ ಗೌಡರು ಅದೇ ಕಾಲಕ್ಕೆ ಮಿತ್ರಪಕ್ಷಗಳ ಸಹಕಾರದಿಂದ ದಕ್ಷ ಸಚಿವ ಸಂಪುಟವನ್ನು ನೇಮಕ ಮಾಡಿಕೊಳ್ಲುತ್ತಾರೆ.
ಅಲ್ಪವೇ ಕಾಲ ಅಧಿಕಾರದಲ್ಲಿದ್ದರೂ ಕಾಶ್ಮೀರದ ಬಿಕ್ಕಟ್ಟನ್ನು ತಹಬಂದಿಗೆ ತರಲು ಯತ್ನಿಸುತ್ತಾರೆ.ಈಶಾನ್ಯ ರಾಜ್ಯಗಳ ಜನರಲ್ಲಿ ವಿಶ್ವಾಸ ಮೂಡಿಸುತ್ತಾರೆ.ಬಾಂಗ್ಲಾ ಜತೆಗಿದ್ದ ಬಿಕ್ಕಟ್ಟಿಗೆ ಪರಿಹಾರ ಹುಡುಕುತ್ತಾರೆ.
ಆದರೆ ಇಷ್ಟೆಲ್ಲದರ ನಡುವೆಯೂ ದೇವೇಗೌಡರ ಸುತ್ತ ಅಪನಂಬಿಕೆಯ ಸುಳಿ ಸುತ್ತತೊಡಗುತ್ತದೆ.ಅಂತಿಮವಾಗಿ ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿಯವರು ಗೌಡರ ಸರ್ಕಾರಕ್ಕೆ ಕೊಟ್ಟ ಬೆಂಬಲವನ್ನು ಹಿಂಪಡೆಯುತ್ತಾರೆ.
ಹೀಗೆ ರಾಜಕೀಯ ಸುಳಿಯ ನಡುವೆ ದೇಶದ ಪ್ರಧಾನಮಂತ್ರಿ ಗದ್ದುಗೆಗೇರಿದ ಸಾಮಾನ್ಯ ರೈತನ ಮಗ ದೇವೇಗೌಡರು ಅಲ್ಲಿಂದ ಕೆಳಗಿಳಿಯುವ ಸನ್ನಿವೇಶ ಮನ ಕಲಕುತ್ತದೆ.
ಹೀಗೆ ಹಳ್ಳಿಗಾಡಿನ ಸಾಮಾನ್ಯ ರೈತನ ಮಗ ದೇವೇಗೌಡರು ದೇಶದ ಅತ್ಯುನ್ನತ ಸ್ಥಾನಕ್ಕೇರುವ ಇತಿಹಾಸವನ್ನು ದಾಖಲಿಸಿರುವ ಸುಗತ ಶ್ರೀನಿವಾಸರಾಜು ಅವರು,ಅದೇ ಕಾಲಕ್ಕೆ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಸ್ವರೂಪವನ್ನೂ ಬಿಚ್ಚಿಡುತ್ತಾ ವಿಸ್ಮಯ ಮೂಡಿಸುತ್ತಾರೆ.
ಆ ದೃಷ್ಟಿಯಿಂದ ‘ನೇಗಿಲ ಗೆರೆಗಳು’ ಪ್ರತಿಯೊಬ್ಬರೂ ಓದಲೇ ಬೇಕಾದ ಮಹತ್ವದ ಕೃತಿ.

ಗೌಡರು ಕೆಳಗಿಳಿಯಲು ಏನು ಕಾರಣ?

ದೇವೇಗೌಡರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲು ಕಾರಣವಾದ ಹಲವು ಸಂಗತಿಗಳನ್ನು ಕೃತಿಯಲ್ಲಿ ರೋಚಕವಾಗಿ ಬಣ್ಣಿಸಲಾಗಿದೆ.
ಅದರ ಪ್ರಕಾರ ದೇವೇಗೌಡರ ಬಗ್ಗೆ ಕೆಲವರಲ್ಲಿ ಮೂಡುವ ಅಪನಂಬಿಕೆಗಳು ಕಾರಣ,ಈ ಪೈಕಿ ಆರ್.ಜೆ.ಡಿ ಪಕ್ಷದ ನಾಯಕ ಲಾಲೂ ಪ್ರಸಾದ್ ಯಾದವ್ ಒಬ್ಬರು.950 ಕೋಟಿ ರೂಪಾಯಿಗಳ ಮೇವು ಹಗರಣದ ತನಿಖೆ ನ್ಯಾಯಾಲಯದ ಕಣ್ಣಳತೆಯಲ್ಲಿದ್ದರೂ,ಈ ಪ್ರಕರಣದಲ್ಲಿ ದೇವೇಗೌಡರು ನನಗೆ ಸಹಾಯ ಮಾಡಬೇಕಿತ್ತು ಅಂತ ಲಾಲೂ ಬಯಸುತ್ತಾರೆ.ಒಂದು ದಿನ ಮಧ್ಯ ರಾತ್ರಿ ದೇವೇಗೌಡರ ಮನೆಗೆ ಬಂದು ಇದನ್ನು ಹೇಳುತ್ತಾರೆ.ಆದರೆ ಈ ವಿಷಯದಲ್ಲಿ ಹೆಚ್ಚೇನನ್ನೂ ಮಾಡಲಾಗದ ತಮ್ಮ ಸ್ಥಿತಿಯ ಬಗ್ಗೆ ದೇವೇಗೌಡರು ವಿವರಿಸುತ್ತಾರೆ.
ಮುಂದೆ ಇದೇ ಕಾರಣಕ್ಕಾಗಿ ದೇವೇಗೌಡರ ವಿರುದ್ಧ‌ ಕುದಿಯುವ ಲಾಲೂ ಪ್ತಸಾದ್ ಯಾದವ್,ಇವರು ರೈತರ ಮಗನಲ್ಲ,ಕರಿಯ ಸರ್ಪ ಅಂತ ಕಾರತೊಡಗುತ್ತಾರೆ.
ಇದೇ ರೀತಿ ಕಾಂಗ್ರೆಸ್ ನ ಸೀತಾರಾಂ ಕೇಸರಿ ಹಂಗಾಮಿ ಅಧ್ಯಕ್ಷರಾಗಿದ್ದುದರಿಂದ ಪಕ್ಷದ ಅಧ್ಯಕ್ಷರಾಗಲು ಹಲವು ನಾಯಕರ ಪೈಪೋಟಿ ನಡೆದಿರುತ್ತದೆ.ಆ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ರಾಜೇಶ್ ಪೈಲಟ್ ಅವರು ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಕೇಸರಿಯವರ ವಿರುದ್ಧ ಒಂದು ಮಾಹಿತಿ ಕೊಡುತ್ತಾರೆ.ಈ ಪ್ರಕರಣವನ್ನು ತನಿಖೆಗೊಪ್ಪಿಸಿ ಎಂದು ಕೋರುತ್ತಾರೆ.
ಆದರೆ ಅವರಿಂದ ಪತ್ರ ಸ್ವೀಕರಿಸುವ ಗೌಡರು ಸುಮ್ಮನಿದ್ದು ಬಿಡುತ್ತಾರೆ.
ಆದರೆ ಮುಂದೆ ಕೆಲವೇ ದಿನಗಳಲ್ಲಿ ಆಂಗ್ಲ ಪತ್ರಿಕೆಯೊಂದು ಕೇಸರಿಯವರ ವಿರುದ್ಧದ ಪ್ರಕರಣವನ್ನು ಮರುತನಿಖೆಗೆ ಒಪ್ಪಿಸಲು ಸರ್ಕಾರ ಮುಂದಾಗಿದೆ ಎಂಬಂತಹ ವರದಿ ಪ್ರಕಟವಾಗುತ್ತದೆ.
ಈ ವರದಿ ಪ್ರಕಟವಾದ ತಕ್ಷಣ ಪೋಲೀಸರು ಈ ಕುರಿತು ವಿಚಾರಣೆಗಿಳಿಯುತ್ತಾರೆ.ಇದರಿಂದ ಸೀತಾರಾಂ ಕೇಸರಿ ಎಷ್ಟು ಗಾಬರಿಯಾಗುತ್ತಾರೆ ಎಂದರೆ ಯಾವ ಕ್ಷಣದಲ್ಲಾದರೂ ತಮ್ಮ ಬಂಧನವಾಗಬಹುದು ಎಂಬ ನಿರ್ಧಾರಕ್ಕೆ ಬರುತ್ತಾರೆ.
ಅಂದ ಹಾಗೆ ಕೇಸರಿ ಅವರ ವಿರುದ್ಧದ ಪ್ರಕರಣಕ್ಕೆ ಅವರ ಆಪ್ತ ವೈದ್ಯರೊಬ್ಬರ ಕೊಲೆಯಾಗಿದ್ದು ಮೂಲ.ಈ ಪ್ರಕರಣ ತಮ್ಮ ಬುಡಕ್ಕೆ ಬರುತ್ತಿದೆ ಅನ್ನಿಸಿದಾಗ ಕೇಸರಿಯವರು ಗೌಡರ ಸರ್ಕಾರಕ್ಕೆ ತಮ್ಮ ಪಕ್ಷ ನೀಡಿದ ಬೆಂಬಲವನ್ನು ವಾಪಸ್ ಪಡೆಯಲು ತೀರ್ಮಾನಿಸುತ್ತಾರೆ.
ಅಂದ ಹಾಗೆ ಇಲ್ಲೊಂದು ಟ್ವಿಸ್ಟ್ ಇದೆ.ಅದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಮಾಲೀಕರಾದ ಅಶೋಕ್ ಜೈನ್ ಪ್ರಕರಣಕ್ಕೆ ಸಂಬಂಧಿಸಿದ್ದು.
ಕೆಲ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಆರ್ಥಿಕ ಜಾರಿ ನಿರ್ದೇಶನಾಲಯ ಅಶೋಕ್ ಜೈನ್ ಅವರ ಬೆನ್ನು ಬೀಳುತ್ತದೆ.ಅವರು ಅಮೇರಿಕಕ್ಕೆ ಹೊರಟಾಗ ತಡೆಯುತ್ತದೆ.ಈ ಹಂತದಲ್ಲಿ ದೇವೇಗೌಡರು ತಮಗರಿವಿಲ್ಲದೆ ಜೈನ್ ಅವರ ಪರ ಮಾತನಾಡಿದರೂ,ನಂತರ ಹಿಂದೆ ಸರಿಯುತ್ತಾರೆ.
ಈ ಪ್ರಕರಣ ಅಶೋಕ್ ಜೈನ್ ಅವರನ್ನು ಕೆರಳಿಸುತ್ತದೆ.ಅಂದ ಹಾಗೆ ಕಾಂಗ್ರೆಸ್ ಅಧ್ಯಕ್ಷರಾದ ಸೀತಾರಾಂ ಕೇಸರಿ ಒಂದು ಕಾಲದಲ್ಲಿ ಅಶೋಕ್ ಜೈನ್ ಅವರ ಒಡೆತನದ ಸಂಸ್ಥೆಗೆ ಸೇವೆ ಸಲ್ಲಿಸಿದವರು.ಅವರ ಮಗ ಕೂಡಾ ಅಲ್ಲಿ ಕೆಲಸಕ್ಕಿದ್ದವರು.
ಸಹಜವಾಗಿಯೇ ಜೈನ್ ಅವರ ಅಸಮಾಧಾನಕ್ಕೆ ಸೀತಾರಾಂ ಕೇಸರಿಯವರ ಅಸಮಾಧಾನ ಸೇರುತ್ತದೆ.

ಪತನದ ಹಿಂದೆ ಅಮೇರಿಕದ ಕೈವಾಡ?

ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವ ವಿಷಯದಲ್ಲಿ ಅಮೇರಿಕದ ಕೈವಾಡ ಇತ್ತೇ?
ಹಾಗೆಂಬುದೊಂದು ಕುತೂಹಲದ ಪ್ರಶ್ನೆ ನೇಗಿಲ ಗೆರೆಗಳು ಪುಸ್ತಕ ಓದಿದವರನ್ನು ಕಾಡುತ್ತದೆ.
ಅಂದ ಹಾಗೆ ಆ ಸಂದರ್ಭದಲ್ಲಿ ದೇವೇಗೌಡರು ರಷ್ಯಾದ ಮಾಸ್ಕೋಗೆ ತೆರಳುತ್ತಾರೆ.ಅಲ್ಲಿಯವರೆಗೆ ಅವರ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯುವ ಯಾವ ಸೂಚನೆಯೂ ಇರುವುದಿಲ್ಲ.ಆದರೆ ಯಾವಾಗ ಗೌಡರು ಮಾಸ್ಕೋಗೆ ತೆರಳುತ್ತಾರೋ?ಆಗ ಭಾರತದಲ್ಲಿ ಅಮೇರಿಕದ ರಾಯಭಾರಿಯಾಗಿದ್ದ ಫ್ರಾಂಕ್ ವಿಸ್ನರ್ ಅವರು ಒಂದೇ ದಿನದಲ್ಲಿ ಮೂರು ಬಾರಿ ಕಾಂಗ್ರೆಸ್ ಅಧ್ಯಕ್ಷರಾದ ಸೀತಾರಾಂ ಕೇಸರಿಯವರನ್ನು ಭೇಟಿ ಮಾಡುತ್ತಾರೆ.
ವಿಸ್ನರ್ ಮತ್ತು ಕೇಸರಿಯವರ ಭೇಟಿಯ ಹಿಂದೆ ಇದ್ದ ಕಾರಣಗಳೇನು?ಗೌಡರ ಮಾಸ್ಕೋ ಭೇಟಿಗೆ ಏನಾದರೂ ರಹಸ್ಯ ಅಜೆಂಡಾ ಇತ್ತೇ?ಎಂಬ ಅನುಮಾನ ಪುಸ್ತಕದಲ್ಲಿ ಗಟ್ಟಿಯಾಗಿ ವ್ಯಕ್ತವಾಗದಿದ್ದರೂ ,ಅಲ್ಲಿರುವ ಅಂಶಗಳು ಓದುಗರ ತಲೆಯಲ್ಲಿ ಇಂತಹ ಅನುಮಾನಗಳು ಮೊಳೆಯುವಂತೆ ಮಾಡುತ್ತವೆ.
ಯಾಕೆಂದರೆ ಅಮೇರಿಕ ಮತ್ತು ರಷ್ಯಾ ನಡುವಣ ವೈರತ್ವ ಜಗತ್ತಿಗೇ ಗೊತ್ತು.ಹೀಗಾಗಿ ಕಮ್ಯುನಿಸ್ಟರ ಪ್ರಬಲ ಇಚ್ಚೆಯಿಂದ ಪ್ರಧಾನಿ ಹುದ್ದೆಗೇರಿದ್ದ ದೇವೇಗೌಡರನ್ನು ಕೆಳಗಿಳಿಸಲು ಅಮೇರಿಕ ಬಯಸಿತೇ?ಎಂಬ ಅನುಮಾನಗಳೂ ಓದುಗರನ್ನು ಕಾಡುತ್ತವೆ.

ಗುಜ್ರಾಲ್ ಬಂದು ಕುಂತಿದ್ದು
ಹೀಗೆ

ಯುನೈಟೆಡ್ ಫ್ರಂಟ್ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆಯಲು ಕಾಂಗ್ರೆಸ್ ದಾಳ ಉರುಳಿಸಿದಾಗ ಒಂದು ಬೆಳವಣಿಗೆ ನಡೆಯುತ್ತದೆ.
ಆ ಸಂದರ್ಭದಲ್ಲಿ ಯುನೈಟೆಡ್ ಫ್ರಂಟ್ ನ ಭಾಗವಾಗಿದ್ದ ಪಕ್ಷಗಳು ಒಂದು ನಿರ್ಧಾರಕ್ಕೆ ಬಂದು,ಲೋಕಸಭೆಯನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋಗುವುದು ಸೂಕ್ತ ಎಂದು ಭಾವಿಸುತ್ತವೆ.
ಇವತ್ತು ಲೋಕಸಭೆ ವಿಸರ್ಜಿಸಿ ಚುನಾವಣೆಗೆ ಹೋದರೆ ಯುನೈಟೆಡ್ ಫ್ರಂಟ್ ನ ಅಂಗ ಪಕ್ಷಗಳಿಗೆ ಹೆಚ್ಚು ಸ್ಥಾನ ಲಭಿಸುತ್ತದೆ ಎಂಬ ಸಮೀಕ್ಷೆ ಬಂದಿದೆ ಎಂಬುದು ಅವುಗಳ ಯೋಚನೆ.
ಆ ಪಕ್ಷಗಳ ಈ ನಿರ್ಧಾರ ಏಪ್ರಿಲ್ 9 ರವರೆಗೂ ಅಚಲವಾಗಿರುತ್ತದೆ.
ಆದರೆ ಏಪ್ರಿಲ್ 10 ರಂದು ಯುನೈಟೆಡ್ ಫ್ರಂಟ್ ನಾಯಕರಾದ ಚಂದ್ರಬಾಬು ನಾಯ್ಡು,ಕರುಣಾನಿಧಿ ಸೇರಿದಂತೆ ಮತ್ತಿತರರ ಬಳಿ ಬರುವ ವಿ.ಪಿ.ಸಿಂಗ್ ಒಂದು ಪ್ರಸ್ತಾಪವನ್ನಿಡುತ್ತಾರೆ.
ಈಗ ಲೋಕಸಭೆಯನ್ನು ವಿಸರ್ಜಿಸುವ ಬದಲು ದೇವೇಗೌಡರ ರಾಜೀನಾಮೆಯಿಂದ ತೆರವಾಗುವ ಪ್ರಧಾನಿ ಹುದ್ದೆಗೆ ಐ.ಕೆ.ಗುಜ್ರಾಲ್ ಅವರನ್ನು ತರೋಣ ಎಂಬುದು ಈ ಪ್ರಸ್ತಾಪ.
96 ರಲ್ಲಿ ಪ್ರಧಾನಿ ಹುದ್ದೆ ಸ್ವೀಕರಿಸಲು ಒಪ್ಪದೆ ಹೋಗಿದ್ದ ಸಿಂಗ್ ಹೀಗೆ ಏಕಾಏಕಿಯಾಗಿ ಬಂದು ಯುನೈಟೆಡ್ ಫ್ರಂಟ್ ನ ನಾಯಕರ ಎದುರು ಈ ಪ್ರಸ್ತಾಪ ಮಂಡಿಸುವುದು ಕುತೂಹಲಕಾರಿ.ಆದರೆ ಅವರ ಈ ಪ್ರಸ್ತಾಪ ಯುನೈಟೆಡ್ ಫ್ರಂಟ್ ಸಂಚಾಲಕರಾದ ಆಂಧ್ರದ ಚಂದ್ರಬಾಬು ನಾಯ್ಡು ಅವರಿಗೆ ಒಪ್ಪಿತವಾಗಿ,ಅವರು ಅಂಗ ಪಕ್ಷಗಳ ಬಹುತೇಕರನ್ನು ಒಪ್ಪಿಸುತ್ತಾರೆ.
ಐ.ಕೆ.ಗುಜ್ರಾಲ್ ಅವರು ಪ್ರಧಾನಿ ಹುದ್ದೆಯ ಕಡೆ ನಡೆದುಕೊಂಡು ಬರುವುದು ಹೀಗೆ.ಅಂದ ಹಾಗೆ ಹುಜ್ರಾಲ್ ಆಯ್ಕೆಯ ಹಿಂದೆ ಕೆಲಸ ಮಾಡಿದ ಸಂಗತಿಗಳು ಯಾವುವು ಎಂಬ ಬಗ್ಗೆ ಹಿರಿಯ ನಾಯಕ ಜಾರ್ಜ್ ಫರ್ನಾಂಡಿಸ್ ಹೇಳುವುದು ಕುತೂಹಲಕಾರಿಯಾಗಿದೆ.ಅವರ ಪ್ರಕಾರ ಅಶೋಕ್ ಜೈನ್ ಅವರ ಕುಟುಂಬದ ಮಗಳನ್ನು ಮತ್ತು ಗುಜ್ರಾಲ್ ಅವರ ಸಹೋದರಿಯ ಮಗನಿಗೆ ಕೊಟ್ಟು ಮದುವೆ ಮಾಡಿರಲಾಗುತ್ತದೆ.

ಗೌಡರಿಗೆ ರಾಷ್ಟ್ರಪತಿ ಹುದ್ದೆ ತಪ್ಪಿತು

ಯುನೈಟೆಡ್ ಫ್ರಂಟ್ ನಾಯಕರು ಬಯಸಿದ ಆ ಬೆಳವಣಿಗೆ ನಡೆದಿದ್ದರೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರೂ ದೇವೇಗೌಡರು ರಾಷ್ಟ್ರಪತಿಯಾಗುತ್ತಿದ್ದರು.
ಅಂದರೆ?ದೇವೇಗೌಡರ ನೇತೃತ್ವದ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆಯುವ ಸೀತಾರಾಂ ಕೇಸರಿ ಅವರ ನಿರ್ಧಾರ ಕಾಂಗ್ರೆಸ್ ಪಕ್ಷದ ಬಹುತೇಕ ಸಂಸದರಿಗೆ ಇಷ್ಟವಾಗಿರಲಿಲ್ಲ.
ನಾಳೆ ಸರ್ಕಾರ ಬಿದ್ದು ಲೋಕಸಭೆಗೆ ಚುನಾವಣೆ ನಡೆದರೆ ಎಂಬ ಅತಂಕ ಅವರನ್ನು ಕಾಡುತ್ತಿತ್ತು.ಈ ಸಂದರ್ಭದಲ್ಲಿ ಅಂತಹ ನೂರಕ್ಕೂ ಹೆಚ್ಚು ಮಂದಿ ಸಂಸದರು ಮಹಾರಾಷ್ಟ್ರದ ನಾಯಕ ಶರದ್ ಪವಾರ್ ಅವರ ಜತೆಗಿದ್ದರು.
ಹೀಗಾಗಿ ದೇವೇಗೌಡರ ರಾಜೀನಾಮೆಯಿಂದ ತೆರವಾಗುವ ಜಾಗಕ್ಕೆ ಶರದ್ ಪವಾರ್ ಅವರನ್ನು ತಂದು ಕೂರಿಸುವ ಯೋಜನೆ ಯುನೈಟೆಡ್ ಫ್ರಂಟ್ ನ ನಾಯಕರಿಂದ ತಯಾರಾಯಿತು.
ಒಂದು ವೇಳೆ ಇದನ್ನು ಒಪ್ಪಿ ಪವಾರ್ ಅವರು ಕಾಂಗ್ರೆಸ್ ಸಂಸದರೊಂದಿಗೆ ಬಂದಿದ್ದರೆ ಅವರು ಪ್ರಧಾನಿಯಾಗುತ್ತಿದ್ದರು.ಮುಂದೆ ಕೆಲವೇ ಕಾಲದಲ್ಲಿ ನಡೆಯಲಿದ್ದ ರಾಷ್ಟ್ರಪತಿ-ಉಪರಾಷ್ಟ್ರಪತಿ ಚುನಾವಣೆಯಲ್ಲಿ ದೇವೇಗೌಡರು ಸ್ಪರ್ಧಿಸಿ ರಾಷ್ಟ್ರಪತಿ ಇಲ್ಲವೇ ಉಪರಾಷ್ಟ್ರಪತಿ ಆಗಬೇಕು ಎಂದು ಈ ನಾಯಕರು ಯೋಚಿಸಿದ್ಧರು.
ಆದರೆ ಶರದ್ ಪವಾರ್ ಅವರು ಈ ಪ್ರಸ್ತಾಪವನ್ನು ಒಪ್ಪಲು ಹಿಂಜರಿದುಬಿಟ್ಟರು.ಒಂದು ವೇಳೆ ಅವರೇನಾದರೂ ಒಪ್ಪಿದ್ದರೆ ಗೌಡರು ರಾಷ್ಟ್ರಪತಿ ಇಲ್ಲವೇ ಉಪರಾಷ್ಟ್ರಪತಿಯಾಗುತ್ತಿದ್ದರು.

ಆರ್.ಟಿ.ವಿಠ್ಠಲಮೂರ್ತಿ

(ಮೇ 18 ದೇವೇಗೌಡರ ಹುಟ್ಟು ಹಬ್ಬ)

LEAVE A REPLY

Please enter your comment!
Please enter your name here