ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ಜಿಲ್ಲೆಯನ್ನು ಕೋರೋನಾ ಮುಕ್ತಗೊಳಿಸೋಣ : ಜಿಲ್ಲಾಧಿಕಾರಿ ನಿತೇಶ ಪಾಟೀಲ

0
135

ಧಾರವಾಡ : ಜಿಲ್ಲೆಯಲ್ಲಿ ಕೋವಿಡ್-19ರ ಎರಡನೇಯ ಅಲೆಯ ಸೋಂಕು ವ್ಯಾಪಕವಾಗಿ ಹರಡುತ್ತಿರುವದರಿಂದ ಮತ್ತು ಎಲ್ಲರ ಸಹಕಾರದಿಂದ ಈಗ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಆರಂಭದಲ್ಲಿ ಶೇ.15ರಷ್ಟು ಪ್ರಕರಣಗಳು ಗ್ರಾಮೀಣ ಭಾಗದಲ್ಲಿದ್ದವು. ಆದರೆ ಸೆಮಿ ಲಾಕ್‍ಡೌನ್, ಇತರ ಜಿಲ್ಲೆಗಳ ವಲಸಿಗರು, ಮದುವೆ ಕಾರ್ಯಗಳಿಂದಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಮಾನ್ಯ ಪ್ರಧಾನಮಂತ್ರಿಗಳ ಸಲಹೆ ಮೇರೆಗೆ ಜಿಲ್ಲೆಯಲ್ಲಿ ಕೋರೋನಾ ಮುಕ್ತ ಗ್ರಾಮಗಳನ್ನು ರೂಪಿಸಲು ಅಭಿಯಾನ ಆರಂಭಿಸಲಾಗಿದೆ. ಈ ಅಭಿಯಾನವನ್ನು ಗ್ರಾಮದಲ್ಲಿರುವ ಪಂಚಾಯತ ಸದಸ್ಯರು ಮತ್ತು ಗ್ರಾಮಸ್ಥರ ಸಹಕಾರದಲ್ಲಿ ಯಶಸ್ವಿಗೊಳ್ಳಿಸುವುದು ಕೋವಿಡ್ ಕಾರ್ಯಪಡೆಯ ಸದಸ್ಯರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಅವರು ಇಂದು ಸಂಜೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯದರ್ಶಿ ಡಾ. ಬಿ.ಸುಶಿಲಾ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ತಹಶೀಲ್ದಾರ, ತಾಲೂಕಾ ಪಂಚಾಯತ ಇಓ, ಪಿಡಿಓ, ಕಂದಾಯ ನಿರೀಕ್ಷಕರು, ಗ್ರಾಮಲೇಕ್ಕಾಧಿಕಾರಿಗಳೊಂದಿಗೆ ಜರುಗಿದ ವಿಡಿಯೋ ಸಂವಾದದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಗ್ರಾಮ ಪಂಚಾಯತ ಮತ್ತು ಗ್ರಾಮಸ್ಥರ ಸಹಕಾರದಿಂದ ಗ್ರಾಮಗಳನ್ನು ಕೋರೋನಾದಿಂದ ಕಾಪಾಡಬೇಕಿದೆ. ಜಿಲ್ಲಾಡಳಿತವು ಕಾಲಕಾಲಕ್ಕೆ ಸಕಾರ್ರವು ನೀಡುವ ಕೋವಿಡ್ ಮಾರ್ಗಸೂಚಿಗಳನ್ನು, ನಿಯಮಾವಳಿಗಳನ್ನು ಜಿಲ್ಲೆಯಾದ್ಯಂತ ಜಾರಿಗೊಳಿಸಿ, ಜನ ಜಾಗೃತಿಗೊಳಿಸಲು ಕ್ರಮಕೈಗೊಂಡಿದೆ.
ಆದರೆ ಗ್ರಾಮೀಣ ಭಾಗದಲ್ಲಿ ಜನರು ನಿಯಮ ಪಾಲನೆಯಲ್ಲಿ ನಿರ್ಲಕ್ಷ್ಯ ಹಾಗೂ ಕೋವಿಡ್ ಸೋಂಕು ಹರಡುವ ಕುರಿತು ಉದಾಸೀನತೆ ತೋರಿ ವರ್ತಿಸುತ್ತಿರುವುದು ಕಂಡುಬರುತ್ತಿದೆ. ಜಿಲ್ಲಾ ಪಂಚಾಯತಿಯಿಂದ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಮಟ್ಟದ ಕೋವಿಡ್ ಕಾರ್ಯಪಡೆಗಳನ್ನು ರಚಿಸಿ ಜನಜಾಗೃತಿ, ಕೋರೋನಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಗ್ರಾಮಗಳ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಿಸಲು ಈಗಾಗಲೇ ಜಾರಿ ಇರುವ ನಿಯಮಗಳೊಂದಿಗೆ ಇನ್ನು ಕಠಿಣವಾದ ನಿರ್ಣಯಗಳನ್ನು ಕೈಗೊಳ್ಳಲು ಅಧಿಕಾರ ನೀಡುವ ಮತ್ತು ಕೋವಿಡ್ ಕಾರ್ಯಪಡೆಗಳು ಇನ್ನಷ್ಟು ಕ್ರೀಯಾಶೀಲವಾಗಿ ತೊಡಗಿಸಿಕೊಳಲು ಅನುವಾಗುವಂತೆ ನಿಯಮಗಳನ್ನು ಜಾರಿ ಮಾಡಿ, ಕೋರೋನಾ ಮುಕ್ತ ಗ್ರಾಮ ಅಭಿಯಾನವನ್ನು ಹಮ್ಮಿಕೊಳಲಾಗಿದೆ. ಗ್ರಾಮ ಮಟ್ಟದ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರಿಗಳು ಈ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳ್ಳಿಸಬೇಕು ಎಂದು ಅವರು ಹೇಳಿದರು.
ಗ್ರಾಮ ಪಂಚಾಯತ ಮಟ್ಟದಲ್ಲಿ ಕೋವಿಡ್ ನಿಯಂತ್ರಿಸಲು ಗ್ರಾಮಪಂಚಾಯತಿಗಳು ಗ್ರಾಮಸಭೆ ಜರುಗಿಸಿ, ಠರಾವು ಪಾಸ್ ಮಾಡುವ ಮೂಲಕ ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ನಿರ್ಣಯಗಳನ್ನು ಜಾರಿ ಮಾಡಬಹುದು. ಗ್ರಾಮ ಮಟ್ಟದಲ್ಲಿ ಅಗತ್ಯವಿರುವ ಔಷಧಿ, ಆರೋಗ್ಯ ಸಿಬ್ಬಂಧಿ, ಪೊಲೀಸ್ ನೇರವು, ಗ್ರಾಮಸ್ಥರಿಗೆ ಕೋವಿಡ್ ಕಾಳಜಿ ಕೆಂದ್ರ ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯವಿದ್ದಲ್ಲಿ ಜಿಲ್ಲಾ ಪಂಚಾಯತ ಸಹಕಾರದಲ್ಲಿ ಜಿಲ್ಲಾಡಳಿತ ಎಲ್ಲ ನೇರವು ನೀಡಲಿದೆ.
ಗ್ರಾಮಗಳಲ್ಲಿ ಕೋವಿಡ್ ಬರದಂತೆ ಹಾಗೂ ಬಂದಿರುವ ಕೋವಿಡ್ ಪ್ರಕರಣಗಳನ್ನು ವ್ಯವಸ್ಥಿತವಾಗಿ ನಿಭಾಯಿಸಿ ಕೋವಿಡ್ ಶೂನ್ಯ ಮಟ್ಟಕ್ಕೆ ತರಲು ಗ್ರಾಮ ಮಟ್ಟದ ಲಾಕ್‍ಡೌನ್, ಸಿಲ್‍ಡೌನ್, ಕಂಟೋನ್ಮೇಂಟ್ ಝೋನ್ ಮಾಡಲು ಕ್ರಮ ವಹಿಸಬಹುದು. ಇದಕ್ಕೆ ಅಗತ್ಯವಿರುವ ಸಹಕಾರ ನೀಡಲಾಗುವುದೆಂದು ಅವರು ಹೇಳಿದರು.
ಕೋವಿಡ್ ಅಪ್ರೋಪ್ರಿಯೆಟ್ ಬಿಹೇವಿಯರ್ (Covid Appropriate behavior) ಪಾಲಿಸದೆ ಕೆಲವು ಮದ್ಯದ ಅಂಗಡಿಗಳ ಮುಂದೆ ಜನಜಂಗುಳಿ ಸೇರುತ್ತಿರುವ ಕುರಿತು ದೂರುಗಳು ಬಂದಿವೆ. ಇಂತಹ ಘಟನೆಗಳ ಕುರಿತು ಫೋಟೋ ಅಥವಾ ವಿಡಿಯೋ ಸಮೇತ ದೂರು ನೀಡಿದರೆ ಲಿಕ್ಕರ್ ಅಂಗಡಿಯನ್ನು ಸಿಜ್ ಮಾಡಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಹೆಳಿದರು.
ಈಗಾಗಲೇ ಗ್ರಾಮ ಮಟ್ಟದಲ್ಲಿ ಕೋವಿಡ್ ಸೋಂಕಿತ ಮೃತರ ಶವಸಂಸ್ಕಾರವನ್ನು ಉಚಿತವಾಗಿ ಮಾಡಲು ಸೂಚಿಸಲಾಗಿದೆ. ಮತ್ತು ಗ್ರಾಮಗಳಲ್ಲಿ ಸಿಲ್‍ಡೌನ್, ಲಾಕ್‍ಡೌನ್ ಮಾಡಲು ಬ್ಯಾರಿಕೆಡಿಂಗ್ ಮಾಡಲು ಅಗತ್ಯವಿದ್ದಲ್ಲಿ ಎಸ್.ಡಿ.ಆರ್.ಎಫ್. ನಿಧಿಯಲ್ಲಿ ಆರ್ಥಿಕ ನೇರವು ನೀಡಲಾಗುವುದು. ಈಗಾಗಲೇ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸುಮಾರು 126 ಸ್ಥಳಗಳಲ್ಲಿ ಬ್ಯಾರಿಕೇಟ್ ಅಳವಳಿಸಿ, ಜನ ಹಾಗೂ ವಾಹನ ಸಂಚಾರವನ್ನು ನಿಯಂತ್ರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಗ್ರಾಮದಲ್ಲಿ ಹೋಮ್ ಐಸೋಲೆಷನ್ ಆಗಿರುವವರು ಸಿಬ್ಬಂದಿಗಳ ಹಾಗೂ ನೇರೆ ಮನೆಯವರ ಕಣ್ಣುತಪ್ಪಿಸಿ ಮನೆಯಿಂದ ಹೊರಗೆ ಬಂದು ಸಾರ್ವಜನಿಕವಾಗಿ ಬೆರೆಯುತ್ತಿದ್ದಾರೆ ಎಂದು ಕೆಲವು ಅಧಿಕಾರಿಗಳು ತಿಳಿಸಿದಾಗ, ಗ್ರಾಮ ಪಂಚಾಯತಿಗಳಲ್ಲಿ ಠರಾವು ಪಾಸ್ ಮಾಡುವ ಮೂಲಕ ಅಂತಹ ವ್ಯಕ್ತಿಗಳ ಕೈಗೆ ಟ್ಯಾಗ್ ಅಥವಾ ಸಿಲ್ ಹಾಕಲು ತಿರ್ಮಾನಿಸಬಹುದು. ಅಂತಹ ಠರಾವುಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿ, ಅನುಮತಿ ಪಡೆಯಬಹುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕೋರೋನಾ ಮುಕ್ತ ಗ್ರಾಮ ಅಭಿಯಾನವನ್ನು ಯಶಸ್ವಿಗೊಳಿಸಿ, ಕೋವಿಡ್ ಮುಕ್ತ ಗ್ರಾಮಗಳನ್ನು ರೂಪಿಸುವ ಗ್ರಾಮ ಪಂಚಾಯತಿಗಳಿಗೆ ಪ್ರಶಂಸನಾ ಪತ್ರ ಹಾಗೂ ಬಹುಮಾನವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು. ಕೋವಿಡ್ ಗ್ರಾಮಗಳಿಂದ ಹೊಗಲಾಡಿಸಲು ಶ್ರಮಿಸುವ ಅಧಿಕಾರಿ ಮತ್ತು ಪಂಚಾಯತ ಸದಸ್ಯರಿಗೆ ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾಡಳಿತದಿಂದ ಗೌರವಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸುಶಿಲಾ ಅವರು ಮಾತನಾಡಿ, ಕೋವಿಡ್ ಎರಡನೆ ಅಲೆ ಆರಂಭವಾದಾಗ ಜಿಲ್ಲೆಯ ನಗರ ಪ್ರದೇಶದಲ್ಲಿ ಶೇ.85 ರಷ್ಟು ಹಾಗೂ ಗ್ರಾಮೀಣ ಭಾಗದಲ್ಲಿ ಶೇ.15ರಷ್ಟಿತ್ತು. ಆದರೆ ಸೆಮಿಲಾಕ್‍ಡೌನ್ ಘೋಷಣೆ ಹಾಗೂ ಮದುವೆ, ಇತರೆ ಕಾರಣಗಳಿಂದಾಗಿ ಗ್ರಾಮೀಣ ಭಾಗದಲ್ಲಿ ಈಗ ಶೇ. 20 ಕ್ಕಿಂತಲೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ.
ಜಿಲ್ಲೆಯ 144 ಗ್ರಾಮ ಪಂಚಾಯತಿಗಳಲ್ಲಿ ಕೋವಿಡ್ ಕಾರ್ಯಪಡೆಗಳನ್ನು ರಚಿಸಿ, ಕ್ರೀಯಾಶೀಲಗೊಳ್ಳಿಸಲಾಗಿದೆ. ಪಂಚಾಯತ ಸಿಬ್ಬಂದಿಗಳು ಪಂಚಾಯತ ಸದಸ್ಯರೊಂದಿಗೆ ಪ್ರತಿ ಓಣಿಗಳಿಗೆ ಸಂಚರಿಸಿ ಜನಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾಮದಲ್ಲಿ ಉಚಿತವಾಗಿ ಮಾಸ್ಕ್, ಸ್ಯಾನಿಟೈಜರ್ ವಿತರಣೆ ಹಾಗೂ ಓಣಿಗಳಲ್ಲಿ ರೋಗ ನಿರೋಧಕ ದ್ರಾವಣ ಸಿಂಪರಣೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯತಿಗಳಲ್ಲಿ ಸಹಾಯವಾಣಿಗಳನ್ನು ಆರಂಭಿಸಿ, ಕೋವಿಡ್ ಚಿಕಿತ್ಸೆ ಹಾಗೂ ಅಗತ್ಯವಿರುವ ಮಾಹಿತಿಯನ್ನು ನೀಡಲಾಗುತ್ತಿದೆ. ಸರ್ಕಾರದ ನಿರ್ದೇಶನದಂತೆ ನರೇಗಾ ಕಾಮಗಾರಿಗಳನ್ನು ಆರಂಭಿಸಿ, ಜನರಿಗೆ ಉದ್ಯೋಗ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಮಾನ್ಯ ಪ್ರಧಾನ ಮಂತ್ರಿಗಳ ಸಲಹೆ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಜಿಲ್ಲೆಯಲ್ಲಿ ಕೋರೋನಾ ಮುಕ್ತ ಗ್ರಾಮ ಅಭಿಯಾನವನ್ನು ಜಾರಿಗೊಳ್ಳಿಸಲಾಗುತ್ತಿದೆ. ಇಂದು ಬೆಳಿಗ್ಗೆ ಇಂದ ವಿವಿಧ ಗ್ರಾಮ ಪಂಚಾಯತ ಪಿಡಿಓಗಳೊಂದಿಗೆ ಸಭೆ ಜರುಗಿಸಲಾಗಿದ್ದು, ಧಾರವಾಡ ಜಿಲ್ಲೆಯ ಹಳ್ಳಿಗೇರಿ ಗ್ರಾಮ ಪಂಚಾಯತಿಯ ಹಳ್ಳಿಗೇರಿ ಗ್ರಾಮ, ಕನಕೂರ ಗ್ರಾಮ ಪಂಚಾಯತಿಯ ಕವಲಗೇರಿ ಗ್ರಾಮ ಹಾಗೂ ಕಲಘಟಗಿ ತಾಲೂಕಿನ ಗಂಜಿಗಟ್ಟಿ, ಸೂಳಿಕಟ್ಟಿ, ಸಂಗಮೇಶ್ವರ ಗ್ರಾಮಗಳಲ್ಲಿ ಇಂದಿನಿಂದಲೇ ಸ್ವಯಂ ಲಾಕ್‍ಡೌನ್ ಹಾಗೂ ಕಂಟೋನ್ಮೇಂಟ್ ಝೋನ್‍ಗಳನ್ನು ಜಾರಿಗೊಳ್ಳಿಸಿ ಗ್ರಾಮ ಪಂಚಾಯತಿಗಳು ಠರಾವು ಪಾಸ್ ಮಾಡಿವೆ ಎಂದು ಅವರ ಹೇಳಿದರು.
ಜಿಲ್ಲಾ ನಗರಾಭಿವೃದ್ಧಿಕೋಶದ ನಿರ್ದೇಶಕ ರುದ್ರೇಶ ಅವರು ಮಾತನಾಡಿ, ಕೋರೋನಾ ಮುಕ್ತ ಗ್ರಾಮ ಅಭಿಯಾನದಂತೆ ಜಿಲ್ಲೆಯ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಕೋವಿಡ್ ಮುಕ್ತ ವಾರ್ಡ್ ಮತ್ತು ಕೋವಿಡ್ ಮುಕ್ತ ನಗರ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ. ಈ ಕುರಿತು ನಗರ ಸಭೆ ಹಾಗೂ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಸ್ಥಳೀಯ ವಾರ್ಡ್ ಸದಸ್ಯರೊಂದಿಗೆ ಸಭೆ ಜರುಗಿಸಿ, ಠರಾವುಗಳನ್ನು ಪಾಸ್ ಮಾಡುತ್ತಾರೆ. ಅದರನ್ವಯ ನಗರ ಪ್ರದೇಶದ ಜನಪ್ರತಿನಿಧಿಗಳ, ವಾರ್ಡ್ ಸದಸ್ಯರ ಮತ್ತು ನಗರ ವಾಸಿಗಳ ಸಹಕಾರದಲ್ಲಿ ಕೋವಿಡ್ ಮುಕ್ತ ನಗರಗಳನ್ನಾಗಿ ರೂಪಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ.ಬಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಶವಂತ ಮದಿನಕರ, ತಹಶೀಲ್ದಾರರಾದ ಸಂತೋಷ ಬಿರಾದಾರ, ಅಮರೇಶ ಪಮ್ಮಾರ, ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ಅಶೋಕ ಶಿಗ್ಗಾಂವಿ, ಕೋಟ್ರೇಶ್ ಗಾಳಿ, ನವೀನ ಹುಲ್ಲೂರ ಸೇರಿದಂತೆ ವಿವಿಧ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸಭೆ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಲೇಕ್ಕಾಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here