ಅಧಿಕಾರಿಗಳು ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲ; ಪ್ರವಾಹ, ಮಳೆಹಾನಿಗೆ ತಕ್ಷಣ ಸ್ಪಂದಿಸಲು ಅಗತ್ಯ ಸಿದ್ಧತೆ ಇರಲಿ: ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ

0
94

ಧಾರವಾಡ. ಜೂ:19: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಆಗುತ್ತಿದ್ದು, ಎಲ್ಲ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಜಿಲ್ಲಾಡಳಿತದ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲ. ಸ್ಥಳಿಯವಾಗಿ ಸಾರ್ವಜನಿಕರಿಗೆ ಲಭ್ಯವಿದ್ದು, ಪ್ರವಾಹ, ಮಳೆಹಾನಿ ಸಂಭವಿಸಿದಲ್ಲಿ ತಕ್ಷಣ ಸ್ಪಂದಿಸಿ ನೆರವಾಗಬೇಕು. ಮತ್ತು ಈ ಕುರಿತು ವಿಳಂಬವಿಲ್ಲದೆ ತಮಗೆ ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಧಿಕಾರಿಗಳಿಗೆ ಆದೇಶಿಸಿದರು.
ಅವರು ಇಂದು ಮಧ್ಯಾಹ್ನ ಕಚೇರಿ ಸಭಾಂಗಣದಲ್ಲಿ ಜರುಗಿದ “ಪ್ರವಾಹ, ಮಳೆಹಾನಿ ತೆಡೆಯಲು ಕೈಗೊಂಡ ಪೂರ್ವಸಿದ್ದತೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಜರುಗಿದ ಸಂವಾದ”ದ ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ಮಳೆಯ ಅಬ್ಬರ ಇನ್ನೂ ಹೆಚ್ಚಾದರೆ 8 ತಾಲೂಕುಗಳ ಪೈಕಿ 78 ಗ್ರಾಮಗಳನ್ನು ಪ್ರವಾಹಕ್ಕೆ ಒಳಗಾಗಬಹುದಾದ ಸಂಭವನೀಯ ಗ್ರಾಮಗಳೆಂದು ಗುರುತಿಸಲಾಗಿದ್ದು, ಪ್ರವಾಹಕ್ಕೆ ತುತ್ತಾಗಬಹುದಾದ ಪ್ರತಿ ಗ್ರಾಮಕ್ಕೆ ಒಬ್ಬ ಅಧಿಕಾರಿಯನ್ನು ನೊಡಲ್ ಅಧಿಕಾರಿ ಎಂದು ನೇಮಿಸಿ, ಆದೇಶಿಸಿಲಾಗಿದೆ ಎಂದು ಅವರು ಹೇಳಿದರು.
ಪ್ರತಿ ತಾಲೂಕಿನಲ್ಲಿ ಗುರುತಿಸಿರುವ ಪ್ರವಾಹ ಪೀಡಿತವಾಗಬಹುದಾದ ಗ್ರಾಮಕ್ಕೆ ಆಯಾ ನೋಡೆಲ್ ಅಧಿಕಾರಿ, ತಹಶಿಲ್ದಾರ ಮತ್ತು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಜಂಟಿಯಾಗಿ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಬೇಕು. ಅಗತ್ಯವಿದ್ದಲ್ಲಿ ಆಯಾ ಗ್ರಾಮ ಅಥವಾ ಗ್ರಾಮ ಸಮೀಪದ ಶಾಲೆ, ಸಮುದಾಯ ಭವನ ಅಥವಾ ಕಲ್ಯಾಣಮಂಟಪಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಕಾಳಜಿ ಕೇಂದ್ರ ತೆರೆಯುವ ಕಟ್ಟಡದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವಸತಿ ಕುರಿತು ಸರಿಯಾದ ಸಿದ್ಧತೆ ಮಾಡಿಕೊಳ್ಳಬೇಕು. ಗ್ರಾಮ ಭೇಟಿ ನಂತರ ಆಯಾ ತಹಸಿಲ್ದಾರರು ತಾಲೂಕಾ ಮಟ್ಟದಲ್ಲಿ ಎಲ್ಲ ನೋಡೆಲ್ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ, ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕೋವಿಡ್ ಕಾಳಜಿ ಕೇಂದ್ರಗಳಿಗಾಗಿ ತಂದಿರುವ ಸುಮಾರು 2,200 ಬೆಡ್ ಮತ್ತು ಕಾಟ್‍ಗಳಿವೆ. ಇವುಗಳಲ್ಲಿ ಸ್ವಲ್ಪ ಮಾತ್ರ ಬಳಕೆಯಾಗಿದ್ದು, ಉಳಿದವು ಹಾಗೆ ಇವೆ. ಅಗತ್ಯವಿದ್ದಲ್ಲಿ ಬಾಕಿ ಉಳಿದಿರುವ ಬೆಡ್ ಮತ್ತು ಕಾಟ್‍ಗಳನ್ನು ಕಾಳಜಿ ಕೇಂದ್ರಗಳಲ್ಲಿ ಬಳಸಲು ಪೂರ್ವಸಿದ್ಧತೆ ಮಾಡಿಕೊಳ್ಳಬೇಕೆಂದು ಅವರು ನಿರ್ದೇಶಿಸಿದರು.
ಮಹಾನಗರ ವ್ಯಾಪ್ತಿಯಲ್ಲಿ ಮ್ಯಾನ್‍ಹೋಲ್‍ಗಳ ಸಮೀಕ್ಷೆ ಮಾಡಿ, ಮುಚ್ಚುವಂತೆ ಮತ್ತು ಮಳೆ ನೀರು ಸರಾಗವಾಗಿ ಹರಿದು ಹೊಗಲು ಒಳಚರಂಡಿ, ನಾಲಾ ಮತ್ತು ರಾಜಕಾಲುವೆಗಳನ್ನು ಸ್ವಚ್ಚವಾಗಿ ಇಡುವಂತೆ ಮತ್ತು ಕಳೆದ ಸಾಲಿನ ಅನುಭವದ ಮೇಲೆ ಮಹಾನಗರ ವ್ಯಾಪ್ತಿಯ ನೆರೆ ಪ್ರದೇಶಗಳನ್ನು ಗುರುತಿಸಿ, ಅಲ್ಲಿನ ಜನರಿಗೆ ಸುರಕ್ಷತೆ ಕುರಿತು ಮಾಹಿತಿ ನೀಡಬೇಕು. ಅಗತ್ಯವಿರುವಲ್ಲಿ ಕಾಳಜಿ ಕೇಂದ್ರ ತೆರಯಲು ಸಿದ್ಧತೆ ಮಾಡಿಕೊಳ್ಳಬೇಕೆಂದು ಪಾಲಿಕೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಜಿಲ್ಲೆಯ ಜಾನುವಾರುಗಳಿಗೆ ಅಗತ್ಯವಿರುವ ಮೇವು ಸಾರ್ವಜನಿಕಲರಿಗೆ ಬೇಕಾಗುವ ಔಷಧಿಗಳನ್ನು ಅಗತ್ಯವಿದ್ದಲ್ಲಿ ತಕ್ಷಣದಲ್ಲಿ ಬಳಸಿಕೊಳ್ಳಲು ದಾಸ್ತಾನು ಇಡುವಂತೆ ಜಿಲ್ಲಾಧಿಕಾರಿಗಳು ಪಶುಪಾಲನೆ ಇಲಾಖೆ ಮತ್ತು ಆರೋಗ್ಯ ಇಲಾಖೆಗೆ ನಿರ್ದೇಶಿಸಿದರು.
ಸಂಭನೀಯ ಪ್ರವಾಹ ಪೀಡಿತ ಗ್ರಾಮಗಳು: ಜಿಲ್ಲಾಡಳಿತವು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಪಡುವ ಪ್ರವಾಹ ಪೀಡಿತ ಸಂಭವನೀಯ ಗ್ರಾಮಗಳನ್ನು ಗುರುತಿಸಿದ್ದು, ಧಾರವಾಡ ತಾಲೂಕಿನ 09, ಅಳ್ನಾವರ ತಾಲೂಕಿನ 03, ಹುಬ್ಬಳ್ಳಿ ತಾಲೂಕಿನ 13, ಹುಬ್ಬಳ್ಳಿ ನಗರ ತಾಲೂಕಿನ 04, ಕಲಘಟಗಿ ತಾಲೂಕಿನ 05, ನವಲಗುಂದ ತಾಲೂಕಿನ 26, ಅಣ್ಣಿಗೇರಿ ತಾಲೂಕಿನ 01, ಕುಂದಗೋಳ ತಾಲೂಕಿನ 17 ಸೇರಿ ಒಟ್ಟು ಜಿಲ್ಲೆಯಲ್ಲಿ 78 ಗ್ರಾಮಗಳು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಪಡುವ ಗ್ರಾಮಗಳಾಗಿವೆ. ಮುಂಜಾಗೃತೆ ಕ್ರಮ ಕೈಗೊಳ್ಳಲು ಆಯಾ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ 1ನೇ ಜೂನ್ ದಿಂದ 18 ನೇ ಜೂನ್ ವರೆಗೆ ಮಳೆಯಿಂದ ಹಾನಿಗೋಳಗಾದ ಮನೆಗಳು: ಜೂನ್ 1 ರಿಂದ 18 ವರೆಗೆ ಮಳೆಯಿಂದ ಜಿಲ್ಲೆಯಲ್ಲಿ 124 ಮನೆಗಳು ಭಾಗಶಃ ಹಾನಿಯಾಗಿವೆ. ಧಾರವಾಡ – 22, ಅಳ್ನಾವರ – 1, ಹುಬ್ಬಳ್ಳಿ – 14, ಹುಬ್ಬಳ್ಳಿ ನಗರ – 5, ಕಲಘಟಗಿ – 10, ಕುಂದಗೋಳ – 13, ಅಣ್ಣಿಗೇರಿ – 17, ನವಲಗುಂದ – 42 ಸೇರಿ ಜಿಲ್ಲೆಯ 8 ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 124 ಮನೆಗಳು ಭಾಗಶಃ ಹಾನಿಯಾಗಿವೆ ಹಾಗೂ ನವಲಗುಂದದಲ್ಲಿ 03 ಜಾನುವಾರುಗಳ ಪ್ರಾಣ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ್ ಮಾತನಾಡಿ, ಅವಳಿನಗರ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳ ಮಾಹಿತಿ ನೀಡಿದಲ್ಲಿ, ಆಯಾ ಪೊಲೀಸ್ ಠಾಣೆಗಳ ಮುಖಾಂತರ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಸಾರ್ವಜನಿಕರ ಸುರಕ್ಷತೆಗೆ ಕ್ರಮವಹಿಸಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವಾರ್ಹಕ ಅಧಿಖಾರಿ ಡಾ.ಬಿ.ಸುಶೀಲಾ ಅವರು ಮಾತನಾಡಿ, ನೆರೆಹಾವಳಿ ಉಂಟಾಗಬಹುದಾದ ಗ್ರಾಮಗಳ ವ್ಯಾಪ್ತಿಯಲ್ಲಿ ಜನಜಾಗೃತಿ ಮೂಡಿಸಲಾಗಿದೆ. ಗ್ರಾಮ ವ್ಯಾಪ್ತಿಯ ಒಳಚರಂಡಿ, ನಾಲಾ, ಸ್ವಚ್ಚಗೊಳಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಿ, ಜನ-ಜಾನುವಾರು ಸುರಕ್ಷತೆಗೆ ಕ್ರಮಕೈಗೊಳ್ಳಲಾಗಿದೆ. ಗ್ರಾಮಗಳಲ್ಲಿರುವ ಕೆರೆ, ಹೊಂಡಗಳು ತುಂಬಿ ಹಾನಿ ಆಗದಂತೆ ಮುಂಜಾಗೃತೆ ವಹಿಸಲು ನಿಗಾ ತಂಡಗಳನ್ನು ರಚಿಸಲಾಗಿದ್ದು, ಯಾವುದೇ ಸಮಸ್ಯೆ ಉಂಟಾದಲ್ಲಿ ಕಂದಾಯ, ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಜಂಟಿ ಕಾರ್ಯಚರಣೆ ಕೈಗೊಳ್ಳಲು ಎಲ್ಲ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಮಾತನಾಡಿ, ಎಲ್ಲ ಪೊಲೀಸ್ ಠಾಣೆಗಳಿಗೆ ನೆರೆ ಪರಿಹಾರ ಕಾರ್ಯಗಳಲ್ಲಿ ತಕ್ಷಣ ಭಾಗವಹಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗಲು ತಿಳಿಸಲಾಗಿದೆ. ಅಗ್ನಿಶಾಮಕ ಇಲಾಖೆ ಸಿಬ್ಬಂದಿಯೊಂದಿಗೆ ತಕ್ಷಣ ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ.ಬಿ., ಅಪರ ಜಿಲ್ಲಾಧಿಕಾರಿ ಶಿವಾಂನಂದ ಕರಾಳೆ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜನೀಯರ ಎಸ್.ಬಿ.ಚೌಡನ್ನವರ ಮಾತನಾಡಿದರು.
ಸಭೆಯಲ್ಲಿ ಪ್ರೋಬೆಷನರಿ ಐಎಎಸ್ ಅಧಿಕಾರಿ ಮಾಧವ ಗಿತ್ತೆ, ತಹಶೀಲ್ದಾರರಾದ ಡಾ. ಸಂತೋಷ ಬಿರಾದಾರ, ಪ್ರಕಾಶ ಸಾಶಿ, ಶಶಿಧರ ಮಾಡ್ಯಾಳ, ಅಶೋಕ ಶಿಗ್ಗಾಂವಿ, ಕೊಟ್ರೇಶ ಗಾಳಿ, ನವೀನ ಹುಲ್ಲೂರ, ಅಮರೇಶ ಪಮ್ಮಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಅಭಿಯಂತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here