222 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ;42989ವಿದ್ಯಾರ್ಥಿಗಳಿಗೆ ‘ಪರೀಕ್ಷೆ’ ಪರೀಕ್ಷೆಗೆ ಅಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಡಿಸಿ ಮಾಲಪಾಟಿ ಸೂಚನೆ

0
83

ಬಳ್ಳಾರಿ,ಜೂ.28 : ಎಸ್ಸೆಸ್ಸೆಲ್ಸಿ ಪರೀಕ್ಷೆಯು ಜುಲೈ 3ನೇ ವಾರದಲ್ಲಿ ನಡೆಸಲು ಸರಕಾರ ನಿರ್ಧರಿಸಿದ್ದು, ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಜಿಲ್ಲೆಯಲ್ಲಿ ಸುರಕ್ಷಿತ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಅಗತ್ಯವಿರುವ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರೊಂದಿಗಿನ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಸಿದ್ಧತೆ ಕುರಿತ ವೀಡಿಯೋ ಸಂವಾದದ ನಂತರ ಆರೋಗ್ಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಒಟ್ಟು 222 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಪ್ರತಿ ಕೊಠಡಿಗೆ 12 ಜನ ವಿದ್ಯಾರ್ಥಿಗಳ ಅನುಸಾರ 4038 ಕೊಠಡಿಗಳು ಮೀಸಲಿಡಲಾಗಿದೆ. 42989 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಈ ಪರೀಕ್ಷಾ ಕಾರ್ಯಕ್ಕೆ ತಲಾ 222 ಮುಖ್ಯ ಅಧೀಕ್ಷಕರು,ಸ್ಥಾನಿಕ ಜಾಗೃತಿದಳದ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. 59 ಮಾರ್ಗಗಳನ್ನು ಗುರುತುಪಡಿಸಲಾಗಿದೆ ಎಂದರು.
239 ಥರ್ಮಲ್ ಸ್ಕ್ಯಾನರ್‍ಗಳು ಲಭ್ಯವಿದ್ದು, 42127 ಡೆಸ್ಕ್‍ಗಳ ಸಿದ್ಧತೆ ಮಾಡಿಟ್ಟುಕೊಳ್ಳಲಾಗಿದೆ. ಸೊಂಕಿತ ಲಕ್ಷಣವಿರುವ ಮಕ್ಕಳಿಗಾಗಿ ಪರೀಕ್ಷೆ ಬರೆಯಲು 222 ವಿಶೇಷ ಕೊಠಡಿಗಳ ಸಿದ್ಧತೆ ಮಾಡಿಟ್ಟುಕೊಳ್ಳಲಾಗಿದೆ. ಅವಳಿ ಜಿಲ್ಲೆಗಳಲ್ಲಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ 11 ಕೇಂದ್ರಗಳಿದ್ದು,ಅಲ್ಲಿ ಯಾವುದೇ ರೀತಿಯ ಅವಘಡಗಳಾಗದಂತೆ ಕ್ರಮಕೈಗೊಳ್ಳಲು ಡಿಸಿ ಮಾಲಪಾಟಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರೀಕ್ಷಾ ಕರ್ತವ್ಯ ನಿರ್ವಹಿಸುವ ಎಲ್ಲ ಶಿಕ್ಷಕರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಲಸಿಕೆ ನೀಡಬೇಕು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪರೀಕ್ಷಿಸಬೇಕು. ಮತ್ತು ಅಗತ್ಯವಿದ್ದಲ್ಲಿ ಪಲ್ಸ್ ಆಕ್ಸಿಮೀಟರ್ ಸಹ ಬಳಸಬೇಕೆಂದು ಅವರು ಹೇಳಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವ ಕುರಿತು ಸರ್ಕಾರ ನೀಡಿರುವ ಎಸ್‍ಓಪಿಯಲ್ಲಿ ತಿಳಿಸಿರುವ ಮಾರ್ಗಸೂಚಿಗಳನ್ನು ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿಕೊಂಡು ಯಶಸ್ವಿಗೊಳಿಸಬೇಕು. ಪ್ರತಿ ವಿದ್ಯಾರ್ಥಿ ಮಾಸ್ಕ್ ಧರಿಸಿಯೇ ಪರೀಕ್ಷಾ ಕೇಂದ್ರಕ್ಕೆ ಬರಬೇಕು. ಮತ್ತು ಪರೀಕ್ಷಾ ಕರ್ತವ್ಯ ನಿರ್ವಹಿಸುವ ಅಧಿಕಾರಿ, ಶಿಕ್ಷಕರು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಎನ್-95 ಮಾಸ್ಕ್ ಧರಿಸಬೇಕು. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಮಾಸ್ಕ್ ಮರೆತು ಬಂದಿದ್ದರೆ ಅವರಿಗೆ ಇಲಾಖೆಯಿಂದ ಮಾಸ್ಕ್ ನೀಡಬೇಕೆಂದು ಅವರು ತಿಳಿಸಿದರು.
ಪ್ರತಿ ಪರೀಕ್ಷಾ ಕೇಂದ್ರವನ್ನು ಪರೀಕ್ಷೆಯ ದಿನದಂದು ಪರೀಕ್ಷೆಗೆ ಮೊದಲು ಮತ್ತು ಪರೀಕ್ಷೆಯ ನಂತರ ಸ್ಯಾನಿಟೈಸ್ ಮಾಡಬೇಕು. ಪರೀಕ್ಷಾ ಕೇಂದ್ರದ ಒಳಬರುವ ಮತ್ತು ಹೊರಹೋಗುವ ಎಲ್ಲರ ಕೈಗಳಿಗೂ ಸ್ಯಾನಿಟೈಸ್ ನೀಡಬೇಕೆಂದು ಮತ್ತು ಈ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಡಿಸಿ ಮಾಲಪಾಟಿ ಸೂಚಿಸಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್,ಡಿಡಿಪಿಐ ರಾಮಪ್ಪ ಮತ್ತು ಇತರೆ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here