ಸಂಡೂರು ಕ್ಷೇತ್ರಕ್ಕೆ ಶಾಸಕ ತುಕರಾಂ ಕೊಟ್ಟ ‘ದಸರಾ ಉಡುಗೊರೆ’ ಏನೀರಬಹುದು !?

0
23

ಸಂಡೂರು, ಅ,24 ಕ್ಷೇತ್ರದ ಶಾಸಕರಾದ ಈ.ತುಕರಾಂ ಅವರು ಈ ಸಲದ ದಸರಾ ಹಬ್ಬಕ್ಕೆ ಸಂಡೂರಿನ ಜನತೆಗೆ ಅತ್ಯಾಧುನಿಕ ಸೂಪರ್ ಸ್ಪೇಷಲಿಟಿ ಆಸ್ಪತ್ರೆ ಸೌಲಭ್ಯ ಹಾಗೂ ಹೈಟೆಕ್ ಬಸ್ ನಿಲ್ದಾಣದ ಸೌಕರ್ಯಗಳ ಗಿಫ್ಟ್ ನ್ನು ಶನಿವಾರ ಅನೌನ್ಸ್ ಮಾಡಿದ್ದಾರೆ.

ಪಟ್ಟಣದಲ್ಲಿರುವ ಶಾಸಕರ ಸಾರ್ವಜನಿಕ ಸಂಪರ್ಕ ಕಚೇರಿ ಆವರಣದಲ್ಲಿ ಶನಿವಾರ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ದಿಂದ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಮಂಜೂರಾದ ಕೃಷಿ ಪಂಪ್ ಸೆಟ್ ಪರಿಕರಗಳನ್ನು ಫಲಾನುಭವಿಗಳಿಗೆ ವಿತರಣಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಆರೋಗ್ಯ ಮತ್ತು ಸಾರಿಗೆ ಕ್ಷೇತ್ರಗಳ ಸೌಲಭ್ಯಗಳನ್ನು ಶಾಸಕರು ಘೋಷಣೆ ಮಾಡಿದರು.

ಕೆಎಂಆರ್ ಸಿ ಅಡಿಯಲ್ಲಿ 180 ಕೋಟಿ ರೂಪಾಯಿ ವೆಚ್ಚದಲ್ಲಿ ಪಟ್ಟಣದಲ್ಲಿ ಸೂಪರ್ ಸ್ಪೇಷಲಿಟಿ ಸೌಕರ್ಯಗಳ 200 ಹಾಸಿಗೆ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ಡಿಸೆಂಬರ್ ತಿಂಗಳೊಳಗೇನೆ ಭೂಮಿಪೂಜೆ ನೇರವೇರಿಸಲಾಗುವುದು ಎಂದು ಸಂಡೂರು ಕ್ಷೇತ್ರದ ಶಾಸಕರು ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿಗಳು ಆದ ಈ.ತುಕರಾಂ ಹೇಳಿದರು.

ಕ್ಷೇತ್ರದಲ್ಲಿ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಮೊದಲ ಅದ್ಯತೆ ಕೊಟ್ಟು ಕಾರ್ಯನಿರ್ವಹಿಸುತ್ತ ಬಂದಿದ್ದೇನೆ. ನಮ್ಮ ಜನತೆಗೆ ಸೂಪರ್ ಸ್ಪೇಷಲಿಟಿ ಸೌಲಭ್ಯದ ಆಸ್ಪತ್ರೆಯ ಸೇವೆಯನ್ನು ಲೋಕಲ್ ಆಗಿ ಕಲ್ಪಿಸಬೇಕೆನ್ನುವುದು ಬಹು ದಿನಗಳ ಕನಸು, ಈಗಾದು ಕಾರ್ಯರೂಪಕ್ಕೆ ಬರುವುದು ಕ್ಷೇತ್ರದ ಆರೋಗ್ಯ ದೃಷ್ಟಿಯಿಂದ ನೆಮ್ಮದಿಯ ವಿಚಾರ ಎಂದರು.

ಉದ್ದೇಶಿತ ಆಸ್ಪತ್ರೆ ನಿರ್ಮಾಣ ಕಾರ್ಯ ಸಂಪೂರ್ಣಗೊಂಡ ಬಳಿಕ ಉನ್ನತ ಚಿಕಿತ್ಸೆ ಪಡೆದುಕೊಳ್ಳಲು ಸಂಡೂರಿನ ಜನತೆ ದೂರದ ನಗರಗಳಿಗೆ ಅಲೆದಾಡುವಂತಹ ಪರಿಸ್ಥಿತಿ ಉದ್ಭವಿಸದು ಎಂದು ಶಾಸಕ ತುಕರಾಂ ವಿಶ್ವಾಸ ವ್ಯಕ್ತ ಪಡಿಸಿದರು.

ಇತ್ತ ನಮ್ಮ ಸಂಡೂರು ಪಟ್ಟಣದ ಬೆಳವಣಿಗೆಯ ವೇಗ ಸಾಕಷ್ಟು ವೃದ್ಧಿಸಿದೆ. ನಾಗರೀಕರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ಸಂಕಲ್ಪ ಮಾಡಿದ್ದು. ಪಟ್ಟಣದಲ್ಲಿ ಒಂದೂವರೆ ಎಕರೆ ಪ್ರದೇಶವನ್ನು ಗುರುತಿಸಿದ್ದು ಅಲ್ಲಿ 32 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದರು.

ಅಸ್ತಿತ್ವಕ್ಕೆ ಬರಲಿರುವ ಬಸ್ ನಿಲ್ದಾಣದಲ್ಲಿ ಬಹು ಉಪಯೋಗಿ ಹೈಟೆಕ್ ಕಾಂಪ್ಲೆಕ್ಸ್ ವ್ಯವಸ್ಥೆ ಸಹ ಇರಲಿದೆ. ಈಗಾಗಲೇ ನಿಲ್ದಾಣ ನಿರ್ಮಾಣದ ಸ್ಥಳವನ್ನು ಪರಿಶೀಲನೆ ಮಾಡಲಾಗಿದೆ. ಬೆಂಗಳೂರಿನ ವಿನ್ಯಾಸಕರ ಬಳಿ ಚರ್ಚಿಸಿದ್ದು ಅವರು ಬ್ಲೂ ಪ್ರಿಂಟ್ ಸಿದ್ದ ಪಡಿಸಿದ್ದಾರೆ ನೂತನ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿಗೂ ಶೀಘ್ರವಾಗಿಯೇ ಚಾಲನೆ ನೀಡಲಾಗುವುದೆಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಏಕಾಂಬ್ರೇಶ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಆಶಾಲತಾ ಸೋಮಪ್ಪ, ಮುಖಂಡರಾದ ಜಯರಾಂ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here