ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕೆ ರೋಗದ ನಿರ್ವಹಣೆ

0
87

ಶಿವಮೊಗ್ಗ : ಅಕ್ಟೋಬರ್ 01: ಅಡಿಕೆ ಬೆಳೆಯಲ್ಲಿ ಕಾಣಿಸಿಕೊಂಡಿರುವ ಎಲೆಚುಕ್ಕೆ ರೋಗದ ಲಕ್ಷಣಗಳು, ಕಾರಣವಾದ ಅಂಶಗಳು ಹಾಗೂ ಹತೋಟಿ ಕ್ರಮಗಳ ಬಗ್ಗೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ. ನಾಗರಾಜಪ್ಪ ಅಡಿವಪ್ಪರ್‍ರವರು ವಿವರಣೆಯನ್ನು ನೀಡಿದ್ದಾರೆ.

ರೋಗದ ಲಕ್ಷಣಗಳು: ಎಲೆ ಚುಕ್ಕೆಗೆ ಬಾಧಿತ ಮರಗಳ ಕೆಳಗಿನ ಸೋಗೆಗಳ ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು ಬಣ್ಣದ ಚುಕ್ಕೆಗಳು ಕಾಣಿಸುತ್ತವೆ. ಮುಂದುವರೆದು ಈ ಚುಕ್ಕೆಗಳು ಶೀಘ್ರವಾಗಿ ಒಂದಕ್ಕೊಂದು ಕೂಡಿಕೊಂಡು ಪೂರ್ತಿ ಹೆಡೆಗಳನ್ನು ಆವರಿಸುತ್ತವೆ, ನಂತರ ಹೆಡೆಗಳು ಒಣಗಲಾರಂಭಿಸುತ್ತವೆ. ಇಂತಹ ಒಣಗಿದ ಎಲ್ಲಾ ಹೆಡೆಗಳು ಜೋತು ಬಿದ್ದು ಮರ ಶಕ್ತಿಕಳೆದುಕೊಂಡು ಇಳುವರಿ ಕುಂಠಿತಗೊಳ್ಳುತ್ತದೆ.
ರೋಗಕ್ಕೆ ಕಾರಣವಾದ ಅಂಶಗಳು: ಈ ಎಲೆಚುಕ್ಕೆ ರೋಗವು ಕೊಲ್ಲೆಟೋಟ್ರೈಕಮ್ ಗ್ಲೀಯೋಸ್ಪೊರೈಡ್ಸ್ ಮತ್ತು ಫಿಲ್ಲೊಸ್ಟಿಕ್ಟ ಅರಕೆ ಎಂಬ ಎರಡು ಶಿಲೀಂದ್ರಗಳಿಂದ ಉಂಟಾಗುತ್ತದೆ. ಶಿಲೀಂದ್ರವು ಬಿದ್ದ ಗರಿಗಳಲ್ಲಿ ವಾಸಿಸುವುದು, ಮಳೆಹನಿಗಳು ಚಿಮ್ಮುವುವಿಕೆಯಿಂದ ಶಿಲೀಂದ್ರದ ಕಣಗಳು ಗಾಳಿಯಲ್ಲಿ ಸೇರಿ ಗರಿಗಳನ್ನು ತಲುಪುತ್ತವೆ. ಹಾಗೆಯೇ ತೇವಭರಿತ ಬಿಸಿಲಿನ ವಾತಾವರಣ, ಕಡಿಮೆ ಉಷ್ಣಾಂಶ (180 ರಿಂದ 240 ಸೆ) ಮತ್ತು ಹೆಚ್ಚಿನ ಆಧ್ರತೆ (80 ರಿಂದ 90%) ಈ ರೋಗದ ತೀವ್ರತೆ ಮತ್ತು ಹರಡುವಿಕೆಗೆ ಪೂರಕವಾದ ಅಂಶಗಳಾಗಿರುತ್ತವೆ. ರೋಗವು ವರ್ಷ ಪೂರ್ತಿ ಕಂಡುಬಂದರೂ ಸಹ ಮಾರ್ಚ್ ನಿಂದ ಸೆಪ್ಟಂಬರ್ ತಿಂಗಳ ವರೆಗೂ ಹೆಚ್ಚಾಗಿ ಬಾಧೆಯನ್ನು ಉಂಟುಮಾಡುತ್ತದೆ.
ನಿರ್ವಹಣೆ: ರೋಗ ಬಾಧಿತ ಒಣಗಿದ ಗರಿಗಳನ್ನು ಕತ್ತರಿಸಿ ತೆಗೆದು ನಾಶಪಡಿಸುವುದರಿಂದ ರೋಗ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದು. ಬಿಸಿಲು ಬೀಳುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು. ರೋಗ ಲಕ್ಷಣದ ಪ್ರಾರಂಭದಲ್ಲಿ ಮುಂಜಾಗ್ರತವಾಗಿ ಶಿಲೀಂಧ್ರನಾಶಕಗಳಾದ ಮ್ಯಾಂಕೋಜೆಬ್ (2.5 ಗ್ರಾಂ) ಅಥವಾ ಸಾಫ್ (ಮ್ಯಾಂಕೋಜೆóóಬ್63%+ ಕಾರ್ಬೆನ್‍ಡೈಜೀಮ್12%) 2 ಗ್ರಾಂ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಅಥವಾ ಹೆಕ್ಸಕೊನಜೋಲ್ 5% ಎಸ್.ಸಿ ಅಥವಾ ಪ್ರೊಪಿಕೊನಜೋಲ್ 25% ಇ.ಸಿ ಅಂತರವ್ಯಾಪಿ ಶಿಲೀಂಧ್ರನಾಶಕಗಳನ್ನು 1ಮಿ.ಲೀ. ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಅಂಟು ದ್ರಾವಣದ (1 ಮಿ.ಲೀ) ಜೊತೆಗೆ ಸಿಂಪಡಿಸಬೇಕು.

LEAVE A REPLY

Please enter your comment!
Please enter your name here